ADVERTISEMENT

ಸಂಗತ: ಬಿಡುಗಡೆಯ ಹಾದಿಗೆ ಸೃಜನಶೀಲ ಸಾಹಿತ್ಯ

ಡಾ.ಕಿರಣ್ ಎಂ ಗಾಜನೂರು ಶಿವಮೊಗ್ಗ
Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
   

ಕುಂ.ವೀರಭದ್ರಪ್ಪ ಅವರ ‘ದೇವರ ಹೆಣ’ ಎಂಬ ಕಥೆಯು ಪ್ರಬಲ ಜಾತಿಯ ಪ್ರಜ್ಞೆ ಹೇಗೆ ದಲಿತ ಸಮುದಾಯದ ಹಸಿವನ್ನು ಅಪಮಾನಕ್ಕೆ ಒಡ್ಡುತ್ತದೆ ಎಂಬುದನ್ನು ವಿಶ್ಲೇಷಿಸುತ್ತದೆ. ಈ ಮೂಲಕ ‘ದಲಿತರ ಸಮಸ್ಯೆ ಹಸಿವಷ್ಟೇ ಅಲ್ಲ ಅಪಮಾನವೂ ಹೌದು’ ಎಂಬ ಅರಿವನ್ನು ನನಗೆ ಕಟ್ಟಿಕೊಟ್ಟ ಕಥೆ ಇದು. ಅದಾದ ನಂತರ ಪದವಿಯಲ್ಲಿ ಲಕ್ಷ್ಮಣ ಗಾಯಕವಾಡ ಅವರ ‘ಉಚಲ್ಯಾ’ ಆತ್ಮಕಥೆಯ ಓದು, ನಮ್ಮ ಸಮಾಜದಲ್ಲಿನ ಜಾತಿ ಆಧರಿಸಿದ ನಡವಳಿಕೆ ಕುರಿತು ನನ್ನಲ್ಲಿ ಹೇವರಿಕೆ ಹುಟ್ಟಿಸಿತ್ತು. ನಂತರ ಓದಿದ ಶಿವರಾಮ ಕಾರಂತರ ‘ಚೋಮನ ದುಡಿ’ ಜಾತಿ ಅಸಮಾನತೆ ಕುರಿತ ನನ್ನ ಆಲೋಚನೆಗಳನ್ನು ಮತ್ತೊಂದು ಹಂತಕ್ಕೆ ವಿಸ್ತರಿಸಿತ್ತು.

ಅಲ್ಲಿಯತನಕ, ಹಳ್ಳಿಯಲ್ಲಿ ದಲಿತರಿಗೆ ಪ್ರತ್ಯೇಕ ಕೇರಿ, ಅವರನ್ನು ಮನೆಗೆ ಸೇರಿಸದಿರುವಂತಹ ಸಂಗತಿಗಳು ಸಹಜವಾಗಿ ಕಾಣುತ್ತಿದ್ದ ನನಗೆ, ಈ ಸೃಜನಶೀಲ ಬರಹಗಳು ಕಣ್ಣು ತೆರೆಸಿದ್ದವು. ನನ್ನದೇ ಊರಿನಲ್ಲಿನ ಈ ಪ್ರತ್ಯೇಕತೆಯ ಹಿಂದಿರುವ ರೋಗಗ್ರಸ್ತ ಮನಃಸ್ಥಿತಿಯನ್ನು ವಿರೋಧಿಸುವ ಹುಚ್ಚುಧೈರ್ಯವನ್ನು ತುಂಬಿದ್ದವು.

ಇಂಥ ತಾರತಮ್ಯವನ್ನು ಹೋಗಲಾಡಿಸಬೇಕೆಂಬ ತೀವ್ರ ಉಮೇದಿನಲ್ಲಿ, ನಾಲ್ಕಾರು ಹುಡುಗರನ್ನು ಸೇರಿಸಿಕೊಂಡು, ದಲಿತರ ಕೇರಿಯಲ್ಲಿ ಗಣಪತಿ ಕೂರಿಸಿಬಿಟ್ಟಿದ್ದೆ! ಏನಾಗುತ್ತಿದೆ ಎಂದು ಆರಂಭದಲ್ಲಿ ಯಾರಿಗೂ ಅರ್ಥವಾಗಲಿಲ್ಲ. ಆದರೆ ಸಂಜೆಯ ಹೊತ್ತಿಗೆ ಇಡೀ ಊರು ನನ್ನನ್ನು ವಿರೋಧಿಸಿತ್ತು, ಹೊಡೆಯುವುದೊಂದು ಬಾಕಿ. ಆಮೇಲೆ ದೊಡ್ಡವರ (?) ಮಧ್ಯಪ್ರವೇಶದಿಂದ ‘ಊರಿಗೆ ಒಂದೇ ಗಣಪತಿ ಇಡಬೇಕು, ಅದೂ ದೇವಸ್ಥಾನದಲ್ಲಿ ಇರಬೇಕು’ ಎಂದು ಸಬೂಬು ಹೇಳಿ, ನಮ್ಮ ಗಣಪತಿಯನ್ನು ರಾತ್ರೋರಾತ್ರಿ ಎತ್ತಿಕೊಂಡು ಹೋಗಿದ್ದರು.

ADVERTISEMENT

ನಮ್ಮ ಶಾಲಾ ಕಾಲೇಜು ಪಠ್ಯಗಳ ಭಾಗವಾಗಿರುತ್ತಿದ್ದ ಸೃಜನಶೀಲ ಸಾಹಿತ್ಯ ಬರಹಗಳು ನಮ್ಮ ಸಮಾಜದಲ್ಲಿ ಜಾತಿ ಸಮಸ್ಯೆಯನ್ನು, ಅದು ಸೃಷ್ಟಿಸುವ ಸಾಮಾಜಿಕ ಅಸಮಾನತೆಯನ್ನು ಪರಿಣಾಮಕಾರಿಯಾಗಿ ನಮಗೆ ದಾಟಿಸುತ್ತಿದ್ದವು. ಅವುಗಳನ್ನು ಓದುತ್ತಿದ್ದ ನಮಗೆ ನಮ್ಮ ಸಮಾಜವನ್ನು ಅರ್ಥಮಾಡಿಕೊಳ್ಳುವ, ಸಾಮಾಜಿಕ ಸಂಬಂಧಗಳ ನಡುವಿನ ಬೇಲಿಗಳನ್ನು ಮೀರುವ ಹೊಸ ಅರಿವೊಂದು ದಕ್ಕುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ. ಸೃಜಲಶೀಲ ಸಾಹಿತ್ಯದ ಜಾಗದಲ್ಲಿ ಜಾತಿವಾದಿ, ಕೋಮುವಾದಿ ನಿರೂಪಣೆಗಳುಳ್ಳ ಬರಹಗಳು ಡಿಜಿಟಲ್ ಮಾಧ್ಯಮದ ಮೂಲಕ ಜನಸಮುದಾಯವನ್ನು ತಲುಪುತ್ತಿವೆ. ಸಾಮಾಜಿಕ ಜಾಲತಾಣಗಳು ಯಾವ ಅಡೆತಡೆಯೂ ಇಲ್ಲದೆ ಜಾತಿ, ಧರ್ಮಗಳ ಕುರಿತ ಹಿಂಸಾತ್ಮಕ ಬರಹಗಳನ್ನು ಪ್ರಕಟಿಸುತ್ತಿವೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು 2016ರಲ್ಲಿ ಪ್ರಕಟಿಸಿದ ‘ಜಾತಿ ಆಧಾರಿತ ತಾರತಮ್ಯ’ ಕುರಿತ ವರದಿಯು ‘ಜಾತಿ ಎಂಬ ರೋಗ ಇಂದು ವಿಶ್ವವ್ಯಾಪಿಯಾಗುತ್ತಿದೆ’ ಎಂಬ ಸಂಗತಿಯನ್ನು ಹೊರಹಾಕಿದೆ. ವಿಶ್ವಸಂಸ್ಥೆಯ ಮತ್ತೊಂದು ವರದಿಯು, ಭಾರತದಲ್ಲಿ ಕೋಟ್ಯಂತರ ಜನರ ಮೇಲೆ ನಡೆಸಲಾಗುತ್ತಿರುವ ಅಮಾನವೀಯ, ಅನಾಗರಿಕ ನಡವಳಿಕೆಗಳನ್ನು ಜಾತಿಯ ಆಧಾರದಲ್ಲಿ ಸಮರ್ಥಿಸಲಾಗುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ಪ್ರಸ್ತಾಪಿಸುತ್ತದೆ.

ಈ ಎಲ್ಲಾ ಸಂಗತಿಗಳನ್ನು ಮುಂದಿಟ್ಟುಕೊಂಡು, ಈಗ ಮಧ್ಯಪ್ರದೇಶದಲ್ಲಿ ಪ್ರವೇಶ್ ಶುಕ್ಲಾ ಎಂಬ ಜಾತಿವಾದಿಯು ಬುಡಕಟ್ಟು ಯುವಕನೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಕ್ರೌರ್ಯವನ್ನು, ನಮ್ಮದೇ ಕರ್ನಾಟಕದ ಕೋಲಾರ ಮತ್ತು ಬಳ್ಳಾರಿಯಲ್ಲಿ ಸ್ವಂತ ಕುಟುಂಬದವರೇ ಇತ್ತೀಚೆಗೆ ನಡೆಸಿದ ಮರ್ಯಾದೆಗೇಡು ಹತ್ಯೆಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಜೊತೆಗೆ ಇವರಿಗೆ ಇಷ್ಟು ಧೈರ್ಯ ಎಲ್ಲಿಂದ ಬಂತು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಇದಕ್ಕೆ ಉತ್ತರವಾಗಿ ಮೊದಲು ಜಾತಿಯ ಹಿಂಸೆಯನ್ನು ‘ವ್ಯಕ್ತಿಗತ ಹಿಂಸೆ’ ಎಂದು ವಿಶ್ಲೇಷಿಸುವ ಕ್ರಮವನ್ನು ಬಿಡಬೇಕಿದೆ.

2012ರಲ್ಲಿ ಪ್ರಕಟವಾದ ಜೆಫ್ರಿ ಸಿ. ಅಲೆಕ್ಸಾಂಡರ್‌ ಅವರ ‘ಟ್ರಾಮ: ಎ ಸೋಷಿಯಲ್‌ ಥಿಯರಿ’ ಎಂಬ ಪುಸ್ತಕದಲ್ಲಿ, ಹೇಗೆ ನಿರ್ದಿಷ್ಟ ಜಾತಿಗಳಿಗೆ ಸೇರಿದ ಬಿಡಿ ಬಿಡಿ ವ್ಯಕ್ತಿಗಳ ಮೇಲೆ ನಡೆಯುವ ದಾಳಿಗಳು ಆಳದಲ್ಲಿ ಆ ಒಟ್ಟು ಸಮುದಾಯದ ಮೇಲಿನ ದಾಳಿಗಳಾಗಿರುತ್ತವೆ ಎಂಬುದನ್ನು ವಿಶ್ಲೇಷಿಸಲಾಗಿದೆ.

ಭಾರತದಲ್ಲಿ ಕುದುರೆ ಓಡಿಸಿದ್ದಕ್ಕೆ, ಮೀಸೆ ಬಿಟ್ಟಿದ್ದಕ್ಕೆ, ದೇವಸ್ಥಾನ ಪ್ರವೇಶಿಸಿದ್ದಕ್ಕೆ, ಕೊನೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಹಾಡಿನ ರಿಂಗ್ ಟೋನ್ ಇಟ್ಟುಕೊಂಡ ಕಾರಣಕ್ಕೆ ದಲಿತ ಸಮುದಾಯದ ಹುಡುಗರ ಮೇಲೆ ಹೇಗೆ ಭೀಕರ ದಾಳಿಗಳಾಗುತ್ತವೆ, ಕೊಲೆಗಳಾಗುತ್ತವೆ ಎಂಬ ಅಂಶವನ್ನು ಪ್ರಶಾಂತ್ ಭವರೇ ವಿಶ್ಲೇಷಿಸಿದ್ದಾರೆ.

ಈ ಸಮಸ್ಯೆಯನ್ನು ಮೀರುವ ಹಾದಿ ಯಾವುದು ಎಂಬುದಕ್ಕೆ ಅಂಬೇಡ್ಕರ್ ಅವರೇ ಉತ್ತರವಾಗುತ್ತಾರೆ. ಅವರ ಪ್ರಕಾರ, ಇಂದು ಎಲ್ಲ ನಾಗರಿಕರಿಗೆ ಸಾಂವಿಧಾನಿಕ ಹಕ್ಕುಗಳಿದ್ದರೂ ಅವುಗಳನ್ನು ಸಂರಕ್ಷಿಸಿಕೊಳ್ಳಲು ನಮಗೆ ಸಾಧ್ಯವಾಗಿದೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಉತ್ತರ ‘ಇಲ್ಲ’ ಎಂಬುದಾಗಿದೆ. ಏಕೆಂದರೆ ಬರೀ ಕಾನೂನುಗಳ ಮೂಲಕವೇ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ನಾವು ರೂಪಿಸಿಕೊಳ್ಳುವ ಸಾಮಾಜಿಕ ಪ್ರಜ್ಞೆ ಮತ್ತು ನೈತಿಕತೆಯು ಸಾಂವಿಧಾನಿಕ ಹಕ್ಕುಗಳನ್ನು ಗುರುತಿಸಿದಾಗ ಅವುಗಳ ರಕ್ಷಣೆ ಸಾಧ್ಯ’ ಎಂಬ ವಾದವನ್ನು ಮುಂದಿಡುತ್ತಾರೆ.

ಈ ಅರ್ಥದಲ್ಲಿ ಸೃಜನಶೀಲ ಸಾಹಿತ್ಯವನ್ನು ಶಿಕ್ಷಣದ ಮೂಲಕ ಹೆಚ್ಚು ಹೆಚ್ಚು ಒಳಗೊಳ್ಳುವುದು ಬಿಡುಗಡೆಯ ಒಂದು ಹಾದಿ ಆಗಬಹುದು ಅನ್ನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.