ADVERTISEMENT

ಸಂಗತ: ಶಾಲಾಬ್ಯಾಗ್‌ ಭಾರ– ಇರಲಿ ಕಾಳಜಿ

ಡಾ .ಕೆ.ಎಸ್.ಚೈತ್ರಾ
Published 22 ಜೂನ್ 2023, 23:31 IST
Last Updated 22 ಜೂನ್ 2023, 23:31 IST
   

ಪುಟ್ಟ ಮಕ್ಕಳು ಬಸ್ ಹತ್ತಲು ಸಾಲಾಗಿ ಕಾಯುತ್ತಾ ನಿಂತಿದ್ದರು. ಬಸ್ ಬಂದದ್ದೇ ಗಡಿಬಿಡಿ ಶುರುವಾಯಿತು. ಹತ್ತಲು ಕಷ್ಟಪಡುತ್ತಿದ್ದ ಪುಟಾಣಿಗೆ ಸಹಾಯ ಮಾಡೋಣ ಎಂದು ಸ್ಕೂಲ್ ಬ್ಯಾಗನ್ನು ಎತ್ತಿಕೊಡಲು ಹೋದೆ. ಎತ್ತಲಾಗಲಿಲ್ಲ. ಕನಿಷ್ಠ ಐದರಿಂದ ಆರು ಕೆ.ಜಿ ತೂಕವಿತ್ತು. ಪುಟಾಣಿ, ‘ಆಗಲ್ವಾ ಆಂಟಿ’ ಅಂತ ನಕ್ಕಿತು!

ಹಾಗೆ ನೋಡಿದರೆ, ಶಾಲೆಗೆ ಹೋಗುವ ಎಲ್ಲ ಮಕ್ಕಳು ಬೆನ್ನ ಮೇಲೆ ಭಾರ ಹೊತ್ತು ಪರ್ವತಾರೋಹಿಗಳಂತೆ ಕಾಣುವುದು ವಾಸ್ತವದ ಸಂಗತಿ. ಈ ರೀತಿಯ ಹೊರೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಹೀಗಿರುವಾಗ ಶಿಕ್ಷಣ ಇಲಾಖೆ ಇದೀಗ ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಶಾಲಾಬ್ಯಾಗ್ ತೂಕ ನಿಗದಿ ಮಾಡಿ ಶಾಲೆಗಳಿಗೆ ಸೂಚನೆ ನೀಡಿರುವುದು ನಿಜಕ್ಕೂ ಒಳ್ಳೆಯ ಕ್ರಮ.

ಶಿಕ್ಷಣ ನೀಡುವ ಶಾಲೆಯಲ್ಲಿ ಓದು- ಬರಹ ಕಡ್ಡಾಯ. ಓದಲು ಪಠ್ಯಪುಸ್ತಕಗಳು, ಬರೆಯಲು ನೋಟ್‌ಬುಕ್‌ಗಳನ್ನು ತೆಗೆದುಕೊಂಡು ಹೋಗಲೇಬೇಕು. ಹಾಗೆಯೇ ಪೆನ್, ಪೆನ್ಸಿಲ್, ರಬ್ಬರ್, ಸ್ಕೇಲ್ ಮತ್ತಿತರ ಸಾಮಗ್ರಿಗಳೂ ಅಗತ್ಯವೇ. ಏನೇ ಆದರೂ, ಸ್ಕೂಲ್ ಬ್ಯಾಗ್‌ನ ತೂಕ, ಮಗುವಿನ ತೂಕದ ಶೇಕಡ 10ರಷ್ಟು ಮಾತ್ರ ಇರಬೇಕು. ಅಂದರೆ 20 ಕೆ.ಜಿ. ತೂಕದ ಮಗು ಹೊರುವ ಬ್ಯಾಗ್‌ನ ಭಾರ ಎರಡು ಕೆ.ಜಿ. ಮೀರಬಾರದು. ಆದರೆ ಈಗ ಹೊರತ್ತಿರುವ ಭಾರ ಆರು ಕೆ.ಜಿಗಳಷ್ಟು. ಅಂದರೆ ಮೂರು ಪಟ್ಟು ಹೆಚ್ಚು. ಒಂದರಿಂದ ಹತ್ತನೇ ತರಗತಿಯವರೆಗೆ ಈ ರೀತಿಯ ಭಾರವನ್ನು ಹೊತ್ತ ಮಕ್ಕಳ ಗತಿ ಏನಾಗಬೇಕು?

ADVERTISEMENT

ಶಾಲೆಗೆ ಹೋಗುವ ಮಕ್ಕಳ ಮೂಳೆಗಳು ಸಂಪೂರ್ಣವಾಗಿ ಬೆಳೆದಿರುವುದಿಲ್ಲ. ಹಾಗೆಯೇ ಮಾಂಸಖಂಡಗಳು ಕೂಡ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಹೀಗಿರುವಾಗ ಮಿತಿಮೀರಿ ಭಾರವನ್ನು ಬೆನ್ನ ಮೇಲೆ ಹಾಕಿದಾಗ ಮಾಂಸಖಂಡಗಳಿಗೆ ದಣಿವಾಗುತ್ತದೆ. ಇದೇ ಕಾರಣಕ್ಕೆ ಶಾಲೆಗೆ ಹೋಗುವ ಮಕ್ಕಳು ಕೆಲವೊಮ್ಮೆ ರಾತ್ರಿಯ ವೇಳೆ ಬೆನ್ನುನೋವು ಎಂದು ಅಳುತ್ತವೆ, ಆಗಾಗ್ಗೆ ಶಾಲೆ ತಪ್ಪಿಸುತ್ತವೆ. ಇದರೊಂದಿಗೆ ಸಹಜವಾಗಿ ‘ಎಸ್’ ಆಕಾರದಲ್ಲಿರುವ ಬೆನ್ನು ಮೂಳೆಯ ಮೇಲೆ ಒತ್ತಡ ಹೆಚ್ಚಾಗಿ ಅದು ಸರಿಯಾಗಿ ಬೆಳೆಯದೆ ವಕ್ರವಾಗುವ ಸಾಧ್ಯತೆಯೂ ಇದೆ. 

ಭಾರವಾದ ಬ್ಯಾಗನ್ನು ಒಂದು ಭುಜಕ್ಕೆ ಹಾಕಿ ಕಾಲನ್ನು ಎಳೆಯುತ್ತಾ ಮಕ್ಕಳು ಶಾಲೆಗೆ ಹೋಗುವುದು ಎಲ್ಲೆಡೆ ಕಾಣುವ ದೃಶ್ಯ. ಬ್ಯಾಗಿನ ತೂಕ ಹೆಚ್ಚಿದಂತೆಲ್ಲ ಅದನ್ನು ಹೊತ್ತಿರುವ ಭುಜ ಕೆಳಗೆ ಮತ್ತು ಮುಂದಕ್ಕೆ ಬರುವುದು ಸಹಜ. ಇನ್ನೊಂದು ಭುಜ ಇದ್ದಲ್ಲೇ ಇರುತ್ತದೆ . ದಿನವೂ ಅದೇ ಭುಜದ ಮೇಲೆ ಭಾರ ಬೀಳುತ್ತಲೇ ಇದ್ದಾಗ ಭುಜದ ಜತೆ ಕತ್ತು ಮತ್ತು ಬೆನ್ನಿನ ಮಾಂಸಖಂಡಗಳು ದುರ್ಬಲವಾಗಿ ಅಲ್ಲಿಯೂ ಸಮಸ್ಯೆ ಶುರುವಾಗುತ್ತದೆ. ನಮ್ಮ ದೇಹದ ಭಾರವನ್ನು ಹೊರುವ ಮುಖ್ಯ ಅಂಗಗಳೆಂದರೆ ಕಾಲುಗಳು. ಬೆನ್ನಿನ ಮೇಲೆ ಭಾರ ಹೆಚ್ಚಾದಾಗ ದೇಹ ಮುಂದೆ ಬಾಗುತ್ತದೆ. ಕಾಲಿನ ಮೇಲೆ ವಿಪರೀತ ಒತ್ತಡ ಹೆಚ್ಚುತ್ತದೆ. ಇದೆಲ್ಲದರ ಪರಿಣಾಮವಾಗಿ ಮಕ್ಕಳಲ್ಲಿ ಮಂಡಿ ನೋವು, ಕತ್ತಿನ ಸೆಳೆತ, ಕೈಗಳಲ್ಲಿ ಮರಗಟ್ಟುವಿಕೆ, ತಲೆ ಸುತ್ತು ಆಗಾಗ್ಗೆ ಕಾಣಿಸಿಕೊಳ್ಳಬಹುದು. ಭಾರವಾದ ಶಾಲಾಬ್ಯಾಗ್‌ಗಳನ್ನು ಹೊರುವ ಮಕ್ಕಳಲ್ಲಿ ಈ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ಇದಕ್ಕೆ ‘ಸ್ಕೂಲ್ ಬ್ಯಾಗ್ ಸಿಂಡ್ರೋಮ್’ ಎಂದೇ ಕರೆಯಲಾಗುತ್ತದೆ. ಇದು ಮುಂದುವರಿದಲ್ಲಿ ದೇಹದ ಸಮತೋಲನದಲ್ಲಿಯೇ ವ್ಯತ್ಯಾಸ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಹಾಗಾದರೆ ಮಕ್ಕಳ ಈ ಭಾರ ತಗ್ಗಿಸಲು ಪರಿಹಾರವೇನು? ತಜ್ಞರ ಪ್ರಕಾರ ಒಂದೇ ಭುಜದ ಮೇಲೆ ಧರಿಸುವ ಕಿರಿದಾದ ಪಟ್ಟಿ ಇರುವ ಬ್ಯಾಗ್‌ಗಳು ಮಕ್ಕಳಿಗೆ ಸೂಕ್ತವಲ್ಲ. ಬದಲಿಗೆ ಬೆನ್ನಿನ ಮೇಲೆ ಧರಿಸುವಂತಹ ಎರಡು ಪಟ್ಟಿಗಳಿರುವ ಬ್ಯಾಕ್‌ಪ್ಯಾಕ್‌ಗಳು ಉತ್ತಮ ಆಯ್ಕೆ. ಇದರಿಂದ ಭಾರ ಸಮಾನವಾಗಿ ಹಂಚಿಕೆಯಾಗುತ್ತದೆ. ಹಗುರವಾದ, ಒಳ್ಳೆಯ ಗುಣಮಟ್ಟದ ವಸ್ತುವಿನಿಂದ ಮಾಡಿದ ಮತ್ತು ಪಟ್ಟಿಗಳು ಅಗಲವಾಗಿರುವ ಬ್ಯಾಗ್ ಆರಿಸಬೇಕು. ಬ್ಯಾಗಿನಲ್ಲಿ ಪುಸ್ತಕ, ಊಟದ ಡಬ್ಬಿ, ಪೆನ್ಸಿಲ್ ಬಾಕ್ಸ್, ಇವುಗಳನ್ನು ಇಡಲು ಪ್ರತ್ಯೇಕ ಭಾಗಗಳು ಇದ್ದರೆ ಒಳ್ಳೆಯದು.

ಮಕ್ಕಳು ಬ್ಯಾಗ್‌ನಲ್ಲಿ ಬೇಕಾದ ವಸ್ತುಗಳನ್ನು ಸರಿಯಾಗಿ ಜೋಡಿಸಿಟ್ಟುಕೊಳ್ಳುವುದೂ ಮುಖ್ಯ. ಹಿಂದಿನ ದಿನವೇ ವೇಳಾಪಟ್ಟಿಯ ಪ್ರಕಾರ ಬೇಕಾದ ಪುಸ್ತಕ, ಪೆನ್ಸಿಲ್ ಬಾಕ್ಸ್ ಮುಂತಾದವುಗಳನ್ನು ಸರಿಯಾದ ಜಾಗದಲ್ಲಿ ಇಟ್ಟಾಗ ಭಾರ ಎಲ್ಲ ಕಡೆ ಹರಡುತ್ತದೆ. ಹಿಂದಿನ ದಿನದ ಹತ್ತು ನಿಮಿಷದ ಪೂರ್ವ ತಯಾರಿ ಅದೆಷ್ಟೋ ಭಾರ ತಗ್ಗಿಸುತ್ತದೆ, ಶಿಸ್ತನ್ನೂ ಕಲಿಸುತ್ತದೆ. ಸ್ಕೂಲ್ ಬ್ಯಾಗ್‌ಗಳನ್ನು ಎತ್ತಿಕೊಂಡು ಹೋಗುವಾಗ ದೇಹದ ಭಂಗಿ ಮತ್ತು ಹೊರುವ ರೀತಿಯೂ ಮುಖ್ಯ. ಸೊಂಟಕ್ಕಿಂತ ಕೆಳಗೆ ನಾಲ್ಕು ಇಂಚಿನ ಒಳಗೆ ಬ್ಯಾಗ್ ಇರಬೇಕು. ಬ್ಯಾಗ್‌ಗಳನ್ನು ಎತ್ತಿಕೊಂಡು ಹೋಗುವಾಗ ಹಿಂದೆ ಅಥವಾ ಮುಂದೆ ಬಾಗುವುದರ ಬದಲು ಬೆನ್ನನ್ನು ನೇರವಾಗಿಟ್ಟು ನಡೆಯುವುದನ್ನು ರೂಢಿಸಿಕೊಳ್ಳಬೇಕು.

ಮಕ್ಕಳಿಗೆ ಪಠ್ಯಕ್ರಮ ಏನೇ ಇದ್ದರೂ ಅಟ್ಲಾಸ್, ಶಬ್ದಕೋಶ, ಗ್ರಾಫ್‌ಬುಕ್, ಗ್ರಾಮರ್‌ಬುಕ್ ಇವೆಲ್ಲವೂ ದಿನವೂ ಬೇಕಾಗುತ್ತದೆ. ಇವುಗಳನ್ನು ಇಟ್ಟುಕೊಳ್ಳಲು ಶಾಲೆಯಲ್ಲಿ ಸಾಧ್ಯವಾದಲ್ಲಿ ಲಾಕರ್ ವ್ಯವಸ್ಥೆಯನ್ನು ನೀಡುವುದು ಸೂಕ್ತ. ಇಲ್ಲದಿದ್ದಲ್ಲಿ ಇಂತಹ ಅವಶ್ಯ ವಸ್ತುಗಳನ್ನು ಎಲ್ಲರಿಗೂ ಅನುಕೂಲವಾಗುವ ಹಾಗೆ ಶಾಲೆಗಳಲ್ಲಿಯೇ ಇಡುವ ವ್ಯವಸ್ಥೆ ಕಲ್ಪಿಸಬಹುದು. ಹಾಗೆಯೇ ಬೆಳಗಿನಿಂದ ಸಂಜೆಯವರೆಗೆ ಶಾಲೆಯಲ್ಲಿ ಇರುವ ಮಕ್ಕಳಿಗೆ ಕುಡಿಯಲು ಸಾಕಷ್ಟು ನೀರು ಬೇಕು. ಅದಕ್ಕಾಗಿ ಇಟ್ಟುಕೊಳ್ಳುವ ದೊಡ್ಡ ನೀರಿನ ಬಾಟಲ್ ಬ್ಯಾಗಿನಲ್ಲಿ ಸಾಕಷ್ಟು ಜಾಗ ಆಕ್ರಮಿಸುವುದಲ್ಲದೆ ಭಾರವನ್ನೂ ಹೆಚ್ಚಿಸುತ್ತದೆ. ಶಾಲೆಯಲ್ಲಿಯೇ ಶುದ್ಧ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ ಮಾಡಿದಲ್ಲಿ ಈ ಹೊರೆಯನ್ನು ತಗ್ಗಿಸಲು ಖಂಡಿತವಾಗಿ ಸಾಧ್ಯವಿದೆ.

ಒಟ್ಟಿನಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುತ್ತಾ, ಬ್ಯಾಗಿನ ಭಾರ ತಗ್ಗಿಸುವುದೂ ಪೋಷಕರು, ಶಿಕ್ಷಕರು ಮತ್ತು ಸರ್ಕಾರದ ಹೊಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.