ADVERTISEMENT

ಸಂಗತ: ಒಕ್ಕಲಿನ ವಾಸ, ನೆಮ್ಮದಿಗಿಲ್ಲ ಉಪವಾಸ

ನಮ್ಮನ್ನು ಮನೆಯಲ್ಲಿ ಬಂಧಿಸಿರುವ ಕೊರೊನಾದ ಈ ಕಾಲಘಟ್ಟವು, ಕುಟುಂಬದ ಮೌಲಿಕತೆ ಮತ್ತು ಘನತೆಯನ್ನು ಎತ್ತಿಹಿಡಿಯುವ ಪುನರ್‌ಸಂಕಲ್ಪಕ್ಕೆ ದಾರಿಯಾಗಲಿ

ಯೋಗಾನಂದ
Published 14 ಮೇ 2021, 19:31 IST
Last Updated 14 ಮೇ 2021, 19:31 IST
   

ಮೇ 15, ಅಂತರರಾಷ್ಟ್ರೀಯ ಕುಟುಂಬ ದಿನ. ಪತಿ, ಪತ್ನಿ ಮತ್ತು ಮಕ್ಕಳು- ಇದು ಮನುಷ್ಯ ನಿರ್ಮಿಸಿಕೊಂಡ ಅತ್ಯಂತ ಪ್ರಾಚೀನ ಸೌಹಾರ್ದ ಸಹಕಾರ ಸಂಸ್ಥೆಯಾದ ಕುಟುಂಬ ಎನ್ನುವುದರ ವ್ಯಾಖ್ಯೆ. ಅಜ್ಜ, ಅಜ್ಜಿ ಇವರೊಂದಿಗೆ ಇರಬಹುದು. ಆದರೆ ಈ ರೂಢಿ ಬಹುತೇಕ ಗತಕ್ಕೆ ಸರಿದಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಅಪರೂಪಕ್ಕೆ, ನಗರಗಳಲ್ಲಿ ಅತ್ಯಪರೂಪಕ್ಕೆ ಮಾತ್ರ ಅವಿಭಕ್ತ ಕುಟುಂಬಗಳು ಕಂಡುಬರುತ್ತವೆ. ಗಂಡ, ಹೆಂಡತಿ ತಮ್ಮ ಮಕ್ಕಳೊಂದಿಗೆ ಯಾವುದೇ ಕಲಹ, ವ್ಯಾಜ್ಯ ಇಲ್ಲದೆ ಜೊತೆಗಿದ್ದರೆ ಅದೇ ಅವಿಭಕ್ತ ಕುಟುಂಬ ಎನ್ನುವಂತಾಗಿದೆ!

ಕೆಲವು ಆರ್ಥಿಕ, ಸಾಮಾಜಿಕ ಕಾರಣಗಳಿಂದ ಒಂದೇ ಸೂರಿನಡಿಯ ಒಕ್ಕಲು ವಿಭಜನೆಗೊಳ್ಳಬಹುದು. ಅವಿಭಕ್ತ ಕುಟುಂಬದಲ್ಲಿ ಎದುರಾಗಬಹುದಾದ ಬೆರಳೆಣಿಕೆಯಷ್ಟು ನ್ಯೂನತೆಗಳನ್ನು ಬದಿಗಿರಿಸೋಣ. ಒಂದೇ ಸೂರಿನಡಿ ಒಕ್ಕಲಿನ ವಾಸದಿಂದ ಆಗುವ ಪ್ರಯೋಜನಗಳು ಎಲ್ಲರಿಗೂ ತಿಳಿದಿದ್ದೆ. ಬೆಳೆಯುವ ಮಗುವಿಗೆ ಒಂದೇ ಸೂರಿನಲ್ಲಿ ಅಪ್ಪ, ಅಮ್ಮನ ಜೊತೆಗೆ ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ದೊರೆತರೆ ಅದಕ್ಕಿಂತ ಸೌಭಾಗ್ಯವೇನಿದೆ?

ADVERTISEMENT

ಒಂದೊಂದು ಕುಟುಂಬವೂ ನೆಮ್ಮದಿಯಿಂದಿದ್ದರೆ ಊರೇ ನೆಮ್ಮದಿಯಿಂದ ಇರುತ್ತದೆ. ಕುಟುಂಬದಲ್ಲಿ ವಾತ್ಸಲ್ಯ, ಪ್ರೀತಿ, ಸೌಹಾರ್ದವಿಲ್ಲದಿದ್ದರೆ ಒಡ್ಡು ಕುಸಿದ ಕೆರೆಯಿಂದ ನೀರು ಹೊರಹೋಗುವಂತೆ ಶಾಂತಿ, ಸಮೃದ್ಧಿ ದೂರ ಸರಿಯುತ್ತವೆ. ಹಾಗಾಗಿ ಮಾದರಿ ಕುಟುಂಬ ಸಮಾಜದ ಅಡಿಗಲ್ಲು. ಅಮೆರಿಕದ ಬ್ಯಾಸ್ಕೆಟ್‌ಬಾಲ್ ಆಟಗಾರ ಹಾಗೂ ತರಬೇತುದಾರ ರಾಗಿದ್ದ ಜಾನ್ ವೋಡೆನ್‍ರ ‘ಜಗತ್ತಿನಲ್ಲಿ ಅತ್ಯಂತ ಪ್ರಮುಖವಾದುದು ಕುಟುಂಬ ಮತ್ತು ಪ್ರೀತಿ’ ಎಂಬ ನುಡಿ ಸಾರ್ವಕಾಲಿಕ, ಮೌಲಿಕ.

ಸಾಮರಸ್ಯ, ಅನ್ಯೋನ್ಯ ಆಶ್ರಯ, ಪರರಲ್ಲಿ ಕಾಳಜಿ- ಇವು ಭಾರತೀಯ ಒಕ್ಕಲಿನ ಮೂಲ ವಿಶೇಷಗಳು ಎಂದು, ಹಾಂಗ್‌ಕಾಂಗ್ ವಿಶ್ವವಿದ್ಯಾಲಯದ ಮನೋ ವಿಜ್ಞಾನದ ಪ್ರಾಧ್ಯಾಪಕ ಸಿ.ಹ್ಯಾರಿ ಹುಯಿ ಮತ್ತು ಹ್ಯಾರಿ ಸಿ. ಅವರು 1986ರಲ್ಲಿ ಕೈಗೊಂಡ ಅಧ್ಯಯನ ಯಾತ್ರೆಯ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಮತ, ಧರ್ಮಗಳಿಗೆ ಸಂಬಂಧಿಸಿದ ಸೈದ್ಧಾಂತಿಕ ಭಿನ್ನತೆಗಳ ನಡುವೆಯೂ ಭಾರತೀಯ ಕುಟುಂಬವ್ಯವಸ್ಥೆ ಸಕಾರಾತ್ಮಕವಾದ ಅನನ್ಯತೆ ಉಳಿಸಿಕೊಂಡಿದೆ. ಅಸಹಾಯಕರಿಗೆ ನೆರವು, ಒಬ್ಬರ ತಪ್ಪನ್ನು ಇನ್ನೊಬ್ಬರು ತಿದ್ದುವುದು, ಅದರಿಂದ ಇತರರು ಪಾಠ ಕಲಿಯುವುದು, ವೃದ್ಧರನ್ನು ಆದರದಿಂದ ಕಾಣುವುದಕ್ಕೆ ಭಾರತೀಯ ಕುಟುಂಬ ಇಡೀ ಜಗತ್ತಿಗೆ ಮಾದರಿ.

‘ಉದಾರಚರಿತಾನಾಂತು ವಸುಧೈವ ಕುಟುಂಬಕಂ’- ಉದಾರ ಸ್ವಭಾವವುಳ್ಳವರಿಗೆ ಇಡೀ ಜಗತ್ತೇ ಒಂದು ಸಂಸಾರ ಎಂಬ ನುಡಿ, ಭಾರತೀಯ ಪರಂಪರೆಯಲ್ಲಿನ ಕುಟುಂಬ ಸಿದ್ಧಾಂತಕ್ಕೆ ಹಿಡಿದ ಕನ್ನಡಿ. ಕನ್ನಡದ ‘ರತ್ನ’ ಜಿ.ಪಿ.ರಾಜರತ್ನಂ ‘ತಲೆ ಮ್ಯಾಗೆ ಒಂದ್ಸೂರು, ಮಲ್ಗಾಕೆ ಭೂಮ್ತಾಯಿ ಮಂಚ, ಕೈಹಿಡ್ದೋಳ್‌ ಪುಟ್ನಂಜಿ, ನೆಗನೆಗ್ತ ಉಪ್ಗಂಜಿ, ಕೊಟ್ರಾಯ್ತು ರತ್ನನ್‌ ಪರ್ಪಂಚ...’ ಎಂದು ಕೌಟುಂಬಿಕ ನೆಮ್ಮದಿಯನ್ನು ನಿರ್ವಚಿಸಿದ್ದಾರೆ.

ನೈರೋಬಿಯಾದಲ್ಲಿ ನಾನು ‘ವಿಶ್ವಕನ್ನಡ ಸಂಸ್ಕೃತಿ’ ಸಮಾವೇಶವೊಂದರಲ್ಲಿ ಭಾಗಿಯಾಗಿದ್ದಾಗಿನ ಪ್ರಸಂಗ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಮ್ಮ ತಂಡ ಉಪಾಹಾರ ಸೇವಿಸುವಾಗ ಅಲ್ಲಿನ ನಿವಾಸಿಯೊಬ್ಬರು ನಮ್ಮತ್ತ ಬಂದು ‘ನೀವು ಭಾರತೀಯರು ಕುಟುಂಬಪ್ರಿಯರು. ಅದು ಹೇಗೆ ನಿಮ್ಮ ಮೊಮ್ಮಕ್ಕಳನ್ನು ಬಿಟ್ಟು ತಿಂಡಿ, ಚಾ ಸೇವಿಸುತ್ತಿದ್ದೀರಿ?’ ಎಂದಾಗ ನಾವು ಒಳಗಾದ ಆರ್ದ್ರತೆ ಅಷ್ಟಿಷ್ಟಲ್ಲ.

ವಿದೇಶಗಳಿಗೆ ಭೇಟಿ ನೀಡುವಾಗ ಆಗುವ ಅನುಭವವಿದು. ವಿಮಾನದಿಂದಿಳಿದು ದಾಖಲೆ ತಪಾ ಸಣೆಗೆ ಸರತಿಯಲ್ಲಿ ನಿಲ್ಲುತ್ತೇವೆ. ಅಲ್ಲಿನ ಅಧಿಕಾರಿ ‘ಸರಿ, ನೀವಿಲ್ಲಿ ಎಷ್ಟು ದಿನ ಇರುವಿರಿ? ಮರು ಪ್ರಯಾಣದ ಟಿಕೆಟ್ ತೋರಿಸಿ’ ಎನ್ನುತ್ತಾರೆ. ಇದು ಸಹಜ ಪ್ರಕ್ರಿಯೆಯೇ ಹೌದು. ಆದರೆ ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಉಕ್ತಿ ಥಟ್ಟನೆ ನೆನಪಾಗುವುದಂತೂ ದಿಟ. ಕ್ರಿ.ಪೂ. 5ನೇ ಶತಮಾನದ ಚೀನಾದ ತತ್ವಜ್ಞಾನಿ ಕನ್‍ಫ್ಯೂಷಿಯಸ್, ಒಂದು ದೇಶದ ಶಕ್ತಿ ಅಲ್ಲಿನ ಮನೆ ಮನೆಗಳ ಒಗ್ಗಟ್ಟನ್ನೇ ಅವಲಂಬಿಸಿದೆ ಎಂದ.

ಸುಖೀ ಕುಟುಂಬ ನಾಗರಿಕತೆಯ ತಿರುಳು. ‘ಮದುವೆಯಾದ ಮೇಲೆ ಬೇರೆ ಮನೆ ಮಾಡುತ್ತೀರ ತಾನೆ?’ ಎನ್ನುವುದು ಆಕೆ ಆತನಿಂದ ಬಯಸುವ ಸಮಜಾಯಿಷಿ. ಇದಕ್ಕೆ ಸಂವಾದಿಯಾಗಿ ಆತನೂ ತಾನು ಮನೆಯಳಿಯನಾಗಲು ಆಗದೆನ್ನಬಹುದು. ಅವಿಭಕ್ತ ಕುಟುಂಬದಲ್ಲಿದ್ದರೆ ಅಜ್ಜ, ಅಜ್ಜಿಗೆ ಮನೆಯೇ ವೃದ್ಧಾಶ್ರಮ. ಮಕ್ಕಳಿಗೂ ಮನೆಯೇ ಬೇಬಿ ಸಿಟ್ಟಿಂಗ್ ಆಗುತ್ತದೆ. ಇದು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆ ದಂತೆ. ದಂಪತಿಯಿಬ್ಬರೂ ನೌಕರಿಗೆ ಹೋಗುವ ದಿನ ಮಾನಗಳು ಬಂದು ದಶಕಗಳೇ ಸಂದಿವೆ. ಅವರು ಮನೆಗೆ ಹಿಂದಿರುಗುವತನಕ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ತಮ್ಮ ತಂದೆ, ತಾಯಿ ಅಥವಾ ಮಾವ, ಅತ್ತೆಯವರಿಗಿಂತಲೂ ಮತ್ಯಾರ ಮೇಲೆ ತಾನೇ ನಂಬಿಕೆ, ವಿಶ್ವಾಸವಿಡಬಹುದು? ‘ಅಜ್ಜಿ ಮಾತಾಡಿದರೆ ರೋಗ ವಾಸಿಯಾಗುತ್ತದೆ’ ಎನ್ನುವುದು ಅಮೆರಿಕದ ಮೂಲನಿವಾಸಿಗಳ ಆಡುಮಾತು.

ಈಗಂತೂ ನಮ್ಮನ್ನು ಮನೆಯಲ್ಲಿ ಬಂಧಿಸಿರುವ ಕೊರೊನಾ, ಕೌಟುಂಬಿಕ ಮೌಲ್ಯಗಳ ಪುನರ್‌ ಅವಲೋಕನಕ್ಕೆ ಅನುವು ಮಾಡಿಕೊಟ್ಟಿರುವ ‘ಮಾರು ವೇಷದ ಮಾಯಕಾರ’! ಈ ಸಂದರ್ಭವು ಕುಟುಂಬದ ಮೌಲಿಕತೆ ಮತ್ತು ಘನತೆಯನ್ನು ಎತ್ತಿಹಿಡಿಯುವ
ಪುನರ್‌ಸಂಕಲ್ಪಕ್ಕೆ ದಾರಿಯಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.