ನಾಡಿನ ಸುದ್ದಿಮಾಧ್ಯಮಗಳಲ್ಲಿ ಇತ್ತೀಚೆಗೆ ನವೀನ್ ಸೋಲಂಕಿ ಎಂಬ 36 ವರ್ಷದ ತರುಣ ಹಾಗೂ ಬೋರೇಗೌಡ ಎಂಬ 65ರ ನಿವೃತ್ತ ಶಿಕ್ಷಕರ ಬಗ್ಗೆ ಸಣ್ಣ ಸುದ್ದಿಗಳು ಹರಿದಾಡಿ ಗಮನ ಸೆಳೆದಿದ್ದವು. ಮೈಸೂರಿನವರಾದ ನವೀನ್ ಜಮ್ಮು ಕಾಶ್ಮೀರದ ಶ್ರೀನಗರದಿಂದ, ತಮಿಳುನಾಡಿನ ಕನ್ಯಾಕುಮಾರಿಯವರೆಗಿನ 3,758 ಕಿ.ಮೀ. ದಾರಿಯನ್ನು ಸೈಕಲ್‌ನಲ್ಲಿ 255 ಗಂಟೆಗಳಲ್ಲಿ (10 ದಿನ 15 ಗಂಟೆ) ಕ್ರಮಿಸಿ, ಸೈಕಲ್ ರೇಸ್‌ನಲ್ಲಿ ಐದನೇ ಸ್ಥಾನ ಗಳಿಸಿದರು. ಪ್ರತಿದಿನ 18ರಿಂದ 20 ಗಂಟೆಗಳ ಸೈಕಲ್ ಸವಾರಿ ಹಾಗೂ ಬರೀ ನಾಲ್ಕು ಗಂಟೆ ನಿದ್ರೆ ಮಾಡಿ, ದೇಶದ ಉದ್ದನೆಯ ಸೈಕಲ್ ರೇಸ್‌ನಲ್ಲಿ ಪಾಲ್ಗೊಂಡಿದ್ದರು. ಮಂಡ್ಯ ಭಾಗದ ನಿವೃತ್ತ ಪ್ರೊಫೆಸರ್ ಬೋರೇಗೌಡ, ನಿವೃತ್ತಿಯ ನಂತರ ತಮ್ಮ ಹಳ್ಳಿಯಲ್ಲಿ 2.10 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಕೈಗೊಂಡು, ಸತತ ಪರಿಶ್ರಮದಿಂದ ತರಹೇವಾರಿ ಬೆಳೆ ಬೆಳೆದು ಯುವಕರಿಗೆ ಹೊಸ ಮಾದರಿಯಾಗಿ ನಿಂತಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಇಂದು ತಾಂತ್ರಿಕ ಶಿಕ್ಷಣ ಸೇರಿದಂತೆ ಸಾಂಪ್ರದಾಯಿಕ ಶಿಕ್ಷಣದ ನೆರಳಿನಲ್ಲಿರುವ ಮಕ್ಕಳಿಗೆ ಈ ಮೇಲಿನ ಸಂಗತಿಗಳು ಒಂದು ಮಾರ್ಗದರ್ಶನದಂತೆ ಇವೆ. ಸಾಧನೆ ಎಂಬುದು ಮಹಾನ್ ವ್ಯಕ್ತಿಗಳಿಗಷ್ಟೇ ಸೀಮಿತವಾದದ್ದು ಎಂಬುದು ಬರೀ ಭ್ರಮೆ. ಅಂದರೆ ಅವರು ಅಸಾಮಾನ್ಯರಾದ್ದರಿಂದ ವಿಶೇಷ ಶಕ್ತಿ ಅವರಿಗೆ ಒಲಿದಿದೆ ಎಂಬ ಭಾವನೆಯನ್ನು ಇಂದಿನ ಮಕ್ಕಳಿಗೆ ತಪ್ಪಾಗಿ ತಿಳಿಸಲಾಗಿದೆ. ಹೀಗಾಗಿ, ವಿಚಾರವನ್ನು ಬದಿಗೊತ್ತಿ ಬರಿಯ ಆಚಾರವನ್ನಷ್ಟೇ ಆಲಿಂಗಿಸಿಕೊಳ್ಳುವ ಭಾರತದಲ್ಲಿ, ಗಾಂಧೀಜಿ, ಬಸವಣ್ಣ, ವಿವೇಕಾನಂದ, ಲೋಹಿಯಾ, ಅಂಬೇಡ್ಕರ್ ಅವರಂತಹ ದಾರ್ಶನಿಕರು ಒಂದೋ ಉಪಾಸನೆಗೆ ಒಳಗಾಗುತ್ತಾರೆ ಇಲ್ಲವೇ ಉಪೇಕ್ಷೆಗೆ ಈಡಾಗುತ್ತಾರೆ.
ಅವರೂ ನಮ್ಮಂತೆಯೇ ಸಾಮಾನ್ಯ ಮನುಷ್ಯರಾಗಿದ್ದವರು, ಆದರೆ ತಮ್ಮ ಶಕ್ತಿಯನ್ನು ಒಂದು ಕಡೆ ಕಟ್ಟಿಹಾಕಿ ಶಕ್ತಿಯ ಸಂಚಯ ಮಾಡಿದರು. ಸಮಾಜದ ಜೀವನ ಕೃಷಿಗೆ ಸಂಜೀವಿನಿಯಾದರು ಅಷ್ಟೇ. ಅದು ಸಾಧ್ಯವಾಗಿದ್ದು ಅವರ ನಿರಂತರ ಪರಿಶ್ರಮ ಹಾಗೂ ಸಾಧನೆಯಿಂದ. ಆದರೆ ನಾವು ಅವರಂತೆ ಮೇಲೇರುವುದಕ್ಕೆ ಹಂಬಲಿಸದೆ ಅದಕ್ಕೆ ದೈವಿಕತೆಯ ಪಟ್ಟ ತೊಡಿಸಿ, ನಮಗದು ಸಾಧ್ಯವಿಲ್ಲವೇನೋ ಎಂದು ಸಮಾಧಾನ ಪಟ್ಟುಕೊಳ್ಳುವ ಹುಂಬತನ ತೋರಿಸುತ್ತಿದ್ದೇವೆ. ಹಾಗಾಗಿ, ಬೆಪ್ಪಾಗಿ ಕಾಣುತ್ತಿದ್ದ ಅಂಧಶ್ರದ್ಧೆ ಹಾಗೂ ಅವಿವೇಕ ಇಂದು ಜಾಣಪೆದ್ದರಂತೆ ನಮ್ಮ ವ್ಯವಸ್ಥೆಯ ಸರಪಳಿಯಲ್ಲಿ ಸುಳಿದಾಡುತ್ತಿವೆ. ಈ ಸಂದರ್ಭದಲ್ಲಿ, ವಿಶ್ವದ ಎಲ್ಲ ಅತ್ಯುತ್ತಮ ವಿಚಾರಗಳ ಸಂಗಮದಂತಿದ್ದ ಸ್ವಾಮಿ ವಿವೇಕಾನಂದರ ನುಡಿ ಮಹನೀಯವಾಗಿ ಕಾಣುತ್ತದೆ: ‘ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ. ಹಾಗಾಗಿ, ದೌರ್ಬಲ್ಯವನ್ನು ತ್ಯಜಿಸಿ’.
ಇಂದು ಶಾಲಾ-ಕಾಲೇಜುಗಳ ಶಿಕ್ಷಕರ ಮುಂದೆ ಒಂದು ಬಹುದೊಡ್ಡ ಸವಾಲಿದೆ. ಮೊಬೈಲ್ ಫೋನ್ ಹಾಗೂ ಸಾಮಾಜಿಕ ಮಾಧ್ಯಮಗಳ ಹಾವಳಿ ಇಂದು ತರಗತಿಯ ಒಳಗೂ ಬಂದಿದೆ. ಕ್ರಿಯಾಶೀಲತೆಯ ಕತ್ತು ಹಿಸುಕುತ್ತಿದೆ. ನಮ್ಮ ಮಕ್ಕಳು ತೇಜಸ್ಸಿಲ್ಲದ ಶರೀರದಂತೆ ಆಗಿದ್ದಾರೆ. ಇದರಿಂದ ಹೊರತಂದು ಅವರನ್ನು ಗುರಿ ಸಾಧಿಸುವವರೆಗೆ ಜಾಗೃತಗೊಳಿಸುವವರಾರು? ಎಲ್ಲಾ ಕಡೆ ‘ಉತ್ತಮರಾಗಿ’ ಎಂಬ ಬೋಧನೆಯನ್ನು ನಿತ್ಯ ಮಾಡುತ್ತೇವೆ. ಕಳಬೇಡ, ಹುಸಿಯ ನುಡಿಯಬೇಡ ಎಂಬುದನ್ನು ಮಕ್ಕಳಿಗೆ ಹೇಳುತ್ತೇವೆ. ಆದರೆ ಅದನ್ನು ಜೀವನದಲ್ಲಿ ಹೇಗೆ ಸಾಧಿಸಬೇಕು ಎಂಬುದನ್ನು ಮಾತ್ರ ನಾವ್ಯಾರೂ ಹೇಳುತ್ತಿಲ್ಲ. ಬರೀ ಆದರ್ಶದ ಮಾತುಗಳು ಅವರಿಗೆ ಸಹಾಯ ಮಾಡಲಾರವು. ಏತಕ್ಕೆ ಕಳ್ಳನಾಗಬಾರದು? ಕದಿಯದೇ ಇರುವುದು ಹೇಗೆ ಎಂಬುದನ್ನು ನಾವು ಮಕ್ಕಳಿಗೆ ಕಲಿಸುವುದಿಲ್ಲ. ತನ್ನ ಮನಸ್ಸನ್ನು ನಿಗ್ರಹಿಸುವುದು ಹೇಗೆ, ಅದನ್ನು ಶಕ್ತಿಯಾಗಿ ಜೀವನದಲ್ಲಿ ಪ್ರವಹಿಸುವ ಬಗೆ ಹೇಗೆ ಎಂಬುದನ್ನು ಕಲಿಸಿದಾಗ ಮಾತ್ರ ಅವರಿಗೆ ನಾವು ನೆರವಾದಂತೆ.
ಮಕ್ಕಳ ಕೆಟ್ಟ ಅಭ್ಯಾಸಕ್ಕೆ ಚಿಕಿತ್ಸೆ ಎಂದರೆ ಅದಕ್ಕೆ ವಿರುದ್ಧವಾದ ಒಳ್ಳೆಯ ಅಭ್ಯಾಸವನ್ನು ರೂಢಿಸುವುದು. ಎಲ್ಲಾ ಕೆಟ್ಟ ಅಭ್ಯಾಸಗಳನ್ನು ಒಳ್ಳೆಯ ಅಭ್ಯಾಸದ ಬಲದಿಂದ ನಿಗ್ರಹಿಸುವ ಕಾರ್ಯತಂತ್ರ ನಮ್ಮ ಶಿಕ್ಷಣದ ನೀತಿಯಲ್ಲೇ ಇದೆ. ನಿರಂತರವಾಗಿ ಒಳ್ಳೆಯದನ್ನು ಮಾಡುತ್ತಾ ಹೋಗಬೇಕು, ಒಳ್ಳೆಯದನ್ನು ಆಲೋಚಿಸಲು ತಿಳಿಸಬೇಕು. ಇದು ನಮ್ಮಲ್ಲಿ ಇರಬಹುದಾದ ಕೆಟ್ಟ ಸ್ವಭಾವವನ್ನು ದಮನ ಮಾಡುವುದಕ್ಕೆ ಇರುವ ಏಕೈಕ ಮಾರ್ಗವಾಗಿದೆ. ಶಾಲಾ ಕಾಲೇಜುಗಳಲ್ಲಿ ಎನ್‌ಸಿಸಿ, ಎನ್‌ಎಸ್ಎಸ್ ಜೊತೆಗೆ ಇತ್ತೀಚೆಗೆ ಶಿಕ್ಷಣ ಇಲಾಖೆ ಆರಂಭಿಸಿರುವ ‘ನಾವು ಮನುಜರು’ ಕಾರ್ಯಕ್ರಮ ಈ ದಿಸೆಯಲ್ಲಿ ಸಹಾಯಕ.
‘ದೇವರಲ್ಲಿ ನಂಬಿಕೆ ಇಡದವನನ್ನು ನಾಸ್ತಿಕ ಎಂದು ಹಳೆಯ ಧರ್ಮ ಹೇಳಿತು, ಆದರೆ ತನ್ನಲ್ಲಿ ನಂಬಿಕೆ ಇಡದವನು ನಾಸ್ತಿಕ ಎಂದು ಹೊಸ ಧರ್ಮ ಕರೆಯುತ್ತದೆ’ ಎಂಬ ಸ್ವಾಮಿ ವಿವೇಕಾನಂದರ ನುಡಿ ನಮ್ಮ ಮಕ್ಕಳ ಬೆಳಕಾಗಬೇಕು. ಅವರಲ್ಲಿ ಅಡಗಿರುವ ಶಕ್ತಿಯ ಪರಿಚಯವನ್ನು ದರ್ಶನ ಮಾಡಿಸಬೇಕು. ‘ನಮಗೆ ಇಷ್ಟೊಂದು ಶಕ್ತಿ ಇದೆಯೇ?!’ ಎಂದು ಅಚ್ಚರಿ ಮೂಡಿಸಿ, ಅದು ನಿಜಕ್ಕೂ ಸತ್ಯ ಎಂಬುದನ್ನು ನಿತ್ಯ ಸಂಗತಿಗಳ ಮೂಲಕ ತಿಳಿಸಬೇಕು. ಆಗಮಾತ್ರ ಜಡ ವಿದ್ಯಾರ್ಥಿಯೂ ಚೈತನ್ಯದ ಚಿಲುಮೆ ಆಗುತ್ತಾನೆ. ಗಾಳಿ ತುಂಬಿದ ಚೆಂಡಿನಂತೆ, ಒಣಗಿದ ಭೂಮಿಗೆ ಮಳೆ ಬಿದ್ದಂತೆ, ಜೀವನಪ್ರೀತಿ, ವಾಸ್ತವದ ಅರಿವು ಮೂಡಿ ಶಕ್ತಿವಂತನಾಗುತ್ತಾನೆ, ಅಜೇಯನಾಗುತ್ತಾನೆ, ಸಿಡಿಲಮರಿಯಾಗುತ್ತಾನೆ. ಸಮಾಜದ ನೆರವಿಗೆ ಮಿಂಚುಹುಳವೂ ಆಗುತ್ತಾನೆ, ಮತ್ತೊಂದು ಮಾದರಿಗೆ ಚೈತನ್ಯ ತಾನೇ ಆಗುತ್ತಾನೆ.
ಲೇಖಕ: ಮುಖ್ಯ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಮುದಗಂದೂರು, ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.