ADVERTISEMENT

ಸಂಗತ ‌| ಬೆಂಬಲ ಬೆಲೆ: ಬೇಕು ಖಾತರಿ

ಕೃಷಿ ಉತ್ಪನ್ನಕ್ಕೆ ಲಾಭದಾಯಕ ಧಾರಣೆಯನ್ನು ಖಾತರಿಗೊಳಿಸಬೇಕೆನ್ನುವ ರೈತರ ಬೇಡಿಕೆಯನ್ನು ಈಡೇರಿಸುವುದು ಒಂದು ನೈತಿಕ ಹೊಣೆಗಾರಿಕೆಯಾಗಿದೆ

ಡಾ.ಟಿ.ಎನ್.ಪ್ರಕಾಶ ಕಮ್ಮರಡಿ
Published 19 ಮಾರ್ಚ್ 2024, 23:34 IST
Last Updated 19 ಮಾರ್ಚ್ 2024, 23:34 IST
   

ವರ್ಷಗಳಿಂದ ಮುಂದಿಡುತ್ತಿದ್ದ ಬೇಡಿಕೆಗಳ ಜೊತೆಗೆ ಕೃಷಿ ಉತ್ಪನ್ನಕ್ಕೆ ಲಾಭದಾಯಕ ಧಾರಣೆಯನ್ನು ಖಾತರಿ ಗೊಳಿಸಬೇಕೆನ್ನುವ ರೈತರ ಹೊಸ ಹಕ್ಕೊತ್ತಾಯ ಇಂದು ಬಲವಾಗಿ ಕೇಳಿಬರುತ್ತಿದೆ. ಇದನ್ನು ಜಾರಿಗೊಳಿಸುವ ಆಶ್ವಾಸನೆಯನ್ನು ರಾಜ್ಯ ಸರ್ಕಾರ ನೀಡಿದೆ. ನೋಂದಾಯಿಸಿದ ರೈತರಿಂದ ಬೆಂಬಲ ಬೆಲೆಯಲ್ಲಿ ದ್ವಿದಳ ಧಾನ್ಯ, ಜೋಳ, ಹತ್ತಿ ಬೆಳೆಗಳನ್ನು ಕೊಳ್ಳಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಆಹಾರಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬನೆ ಕಾಪಾಡಿಕೊಳ್ಳುವುದರ ಜೊತೆಗೆ ಇನ್ನೂ ಮುಕ್ತವಾಗದ ಹಸಿವು, ಅಪೌಷ್ಟಿಕತೆಯನ್ನು ಹೊಡೆದೋಡಿಸಬೇಕಾದ ಜವಾಬ್ದಾರಿ ಮುಂದಿರುವಾಗ, ರೈತರ ಈ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವುದು ಒಂದು ನೈತಿಕ ಹೊಣೆಗಾರಿಕೆಯಾಗಿದೆ.

ಕೇಂದ್ರ ಸರ್ಕಾರ ಪ್ರತಿವರ್ಷ ಹಿಂಗಾರು ಮತ್ತು ಮುಂಗಾರು ಎರಡೂ ಹಂಗಾಮಿನಲ್ಲಿ ನಾಟಿಗಿಂತ ಮೊದಲು 23 ಬೆಳೆಗಳಿಗೆ ‘ಕನಿಷ್ಠ ಬೆಂಬಲ ಬೆಲೆ’ ಅಥವಾ ಎಂಎಸ್‌ಪಿ ಘೋಷಿಸುತ್ತದೆ. ಇವುಗಳಲ್ಲಿ ಬಹುತೇಕ ಏಕದಳ ಮತ್ತು ದ್ವಿದಳ ಧಾನ್ಯಗಳು, ಎಣ್ಣೆಕಾಳಿನಂತಹ ಜೀವನಾವಶ್ಯಕ ಉತ್ಪನ್ನಗಳಾಗಿವೆ. ಕೃಷಿ ವಲಯದ ವಿಶಿಷ್ಟ ಪರಿಸ್ಥಿತಿಯಲ್ಲಿ ರೈತ ತನ್ನ ಉತ್ಪನ್ನಕ್ಕೆ ಸ್ವತಃ ಧಾರಣೆ ನಿರ್ಧರಿಸಲಾರದಷ್ಟು ದುರ್ಬಲನಾಗಿದ್ದಾನೆ. ಈ ‘ಮಾರುಕಟ್ಟೆ ವೈಫಲ್ಯ’ಕ್ಕೆ ಪರಿಹಾರವಾಗಿ ರೈತ ನಿಶ್ಚಿಂತೆಯಿಂದ ಕೃಷಿ ಕಾರ್ಯ ಕೈಗೊಳ್ಳಲು ಎಂಎಸ್‌ಪಿ ಒಂದು ಪೂರ್ವಭಾವಿ ಭರವಸೆ ಎನ್ನ ಬಹುದು. ಹಾಗಿದ್ದರೂ ಈ ಬೆಂಬಲ ಬೆಲೆ ನೀತಿಯಿಂದ ರೈತಾಪಿ ವರ್ಗಕ್ಕೆ ಅಷ್ಟೇನೂ ಉಪಯೋಗವಾಗಿಲ್ಲ ಎನ್ನುವುದು ಕಟು ವಾಸ್ತವ.

ಕನಿಷ್ಠ ಬೆಂಬಲ ಬೆಲೆ ನೀತಿಯ ಅನುಕೂಲ ದೇಶದ ಶೇಕಡ 6ರಷ್ಟು ಮಂದಿಗೆ, ಅದರಲ್ಲೂ ಭತ್ತ ಮತ್ತು ಗೋಧಿ ಬೆಳೆಯುವ ಪಂಜಾಬ್, ಹರಿಯಾಣದಂಥ ರಾಜ್ಯಗಳ ರೈತರಿಗೆ ಮಾತ್ರ ಸಿಗುತ್ತಿದೆ. ಹಿಂದಿನ ಸಾಲಿನಲ್ಲಿ ರಾಜ್ಯದ ರೈತರು ಒಟ್ಟಾರೆಯಾಗಿ ಮಾರಾಟ ಮಾಡಿರುವ ಭತ್ತ, ರಾಗಿ, ಜೋಳದಂತಹ ಧಾನ್ಯಗಳಲ್ಲಿ ಶೇಕಡ 10ರಷ್ಟಕ್ಕೆ ಮಾತ್ರ ಬೆಂಬಲ ಬೆಲೆಗಿಂತ ಅಧಿಕ ಧಾರಣೆ ದೊರೆತಿದೆ. ಕನಿಷ್ಠ ಬೆಂಬಲ ಬೆಲೆ ಕೂಡ ಸಿಗದ ಕಾರಣ ನಮ್ಮ ಬಹುತೇಕ ಆಹಾರ ಬೆಳೆಗಳ ಕೃಷಿ ಇಂದು ನಷ್ಟದ ಕಸುಬಾಗಿದೆ. ಸಿದ್ಧ ವಸ್ತುಗಳನ್ನು ಕೊಳ್ಳುವ ಗ್ರಾಹಕರಿಗೆ ಶಾಸನಾತ್ಮಕವಾಗಿ ‘ಗರಿಷ್ಠ ಚಿಲ್ಲರೆ ದರ’ದ (ಎಂಆರ್‌ಪಿ) ನೆರವು ಇರುವಾಗ ಎಂಎಸ್‌ಪಿಗೂ ಈ ರೀತಿಯ ಕಾನೂನಿನ ರಕ್ಷಣೆ ಬೇಕೆಂದು ರೈತರು ಇಂದು ಪಟ್ಟು ಹಿಡಿದಿರುವುದು ನ್ಯಾಯಯುತ ಮಾತ್ರವಲ್ಲ ತರ್ಕಬದ್ಧವೂ ಆಗಿದೆ.

ADVERTISEMENT

ಕಬ್ಬಿಗೆ ಈಗಾಗಲೇ ‘ಶಾಸನಬದ್ಧ ಬೆಂಬಲ ಬೆಲೆ’ (ಎಫ್‌ಆರ್‌ಪಿ) ಇದ್ದು, ಇದಕ್ಕಿಂತ ಕಡಿಮೆ ಧಾರಣೆಯಲ್ಲಿ ಖರೀದಿಸುವ ಪ್ರಶ್ನೆಯೇ ಇಲ್ಲ. ಕರ್ನಾಟಕ ಕೃಷಿ ಬೆಲೆ ಆಯೋಗವು ಬೆಂಬಲ ಬೆಲೆಯನ್ನು ಖಾತರಿಪಡಿಸುವ ದಿಸೆಯಲ್ಲಿ ಅಧ್ಯಯನ ನಡೆಸಿ 2018ರಲ್ಲೇ ವಿಸ್ತೃತವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಕೇಂದ್ರ ಸರ್ಕಾರ ಘೋಷಿಸುವ ಎಂಎಸ್‌ಪಿ ಆಧಾರದ ಮೇಲೆ ರಾಜ್ಯದ ಎಲ್ಲಾ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ‘ಅಧಿಕೃತ ಕನಿಷ್ಠ ಖರೀದಿ ಬೆಲೆ’ (ಸ್ಟ್ಯಾಚುಟರಿ ಮಿನಿಮಮ್‌ ಪರ್ಚೇಸ್‌ ಪ್ರೈಸ್‌) ಘೋಷಿಸಬೇಕು. ಹಾಲಿ ಎಪಿಎಂಸಿ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು, ಇದಕ್ಕಿಂತ ಕಡಿಮೆ ಬೆಲೆಯಲ್ಲಿ ರೈತರ ಯಾವುದೇ ಉತ್ಪನ್ನ ಖರೀದಿಯಾಗದಂತೆ ಕ್ರಮ ಕೈಗೊಳ್ಳಲು, ಉಲ್ಲಂಘನೆಗೆ ಶಿಕ್ಷೆ, ದಂಡದಂತಹ ಕ್ರಮಗಳನ್ನೂ ಸೂಚಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ‘ಅಗತ್ಯ ವಸ್ತು ಕಾಯ್ದೆ’ಗೂ ಈ ರೀತಿಯ ತಿದ್ದುಪಡಿ ಸೂಚಿಸಲಾಗಿದೆ. ಧಾರಣೆ ಕುಸಿದಾಗ ಸರ್ಕಾರ ತಡಮಾಡದೆ ‘ಮಧ್ಯಪ್ರವೇಶಿಸಿ’ ಖರೀದಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದೇನೂ ದೊಡ್ಡ ಹೊರೆಯಲ್ಲ.

ಮುಖ್ಯ ವಿಚಾರವೆಂದರೆ, ಎಲ್ಲಾ ಬೆಳೆಗಳನ್ನು ಸರ್ಕಾರ ಖರೀದಿಸುವ ಪರಿಸ್ಥಿತಿ ಎಂದೂ ಬರುವುದಿಲ್ಲ. ದೇಶದ ಪ್ರಮುಖ ಮಾರುಕಟ್ಟೆಗಳನ್ನು ಅವಲೋಕಿಸಿ ದರೆ, ಹಿಂದಿನ ಐದು ವರ್ಷಗಳಲ್ಲಿ ಮೂರು ವರ್ಷಗಳಲ್ಲಿ ಮಾತ್ರ ಬೆಳೆಯೊಂದರ ಧಾರಣೆಯು ಬೆಂಬಲ ಬೆಲೆಗಿಂತ ಕೆಳಗಿಳಿದ ಉದಾಹರಣೆಯಿದೆ, ಅದೂ ಕೊಯ್ಲೋತ್ತರದ ಮೂರೂವರೆ ತಿಂಗಳುಗಳಲ್ಲಿ ಮಾತ್ರ. ಕೊಯ್ಲಿನ ನಂತರ ಸರ್ಕಾರ ತಡಮಾಡದೆ ‘ಮಧ್ಯಪ್ರವೇಶಿಸಿ’ ಖರೀದಿಸುತ್ತದೆ ಎನ್ನುವ ಪ್ರಬಲ ಸಂಕೇತವೇ ಸಕಾರಾತ್ಮಕ ಪರಿಣಾಮ ಬೀರಿ, ಧಾರಣೆ ಮೇಲೇಳುವಂತೆ ಮಾಡುವುದು ಮಾರುಕಟ್ಟೆಯ ಒಂದು ಚಲನಾತ್ಮಕ ಗುಣವಾಗಿರುತ್ತದೆ.

ನೇರವಾಗಿ ಖರೀದಿಸುವುದರ ಜೊತೆಗೇ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ಧಾರಣೆಯ ವ್ಯತ್ಯಾಸವನ್ನು ರೈತರಿಗೆ ಪಾವತಿಸುವ ‘ಬೆಲೆ ಕೊರತೆ ಪಾವತಿ’ಯಂತಹ ವಿನೂತನ ಕ್ರಮಗಳನ್ನೂ ಕೈಗೊಳ್ಳಬಹುದು. ಅಧಿಕ ಉತ್ಪಾದನೆ ನಿಯಂತ್ರಿಸಲು ಜಿಲ್ಲಾ ಮಟ್ಟದ ಬೆಳೆ ಯೋಜನೆ ರೂಪಿಸಿ ಸಂಸ್ಕರಣೆ, ಶೈತ್ಯಾಗಾರದಂತಹ ಮೂಲಸೌಕರ್ಯಗಳನ್ನು ಒದಗಿಸಬೇಕು. ಬೇಡಿಕೆ ಇಲ್ಲದಿರುವಾಗ ಕೂಡಿಡುವ ರೈತರಿಗೆ ಧಾರಾಳ ಅಡಮಾನ ಸಾಲ ಬೇಕೇಬೇಕು. ‘ಅಮೂಲ್’ ಮಾದರಿಯಲ್ಲಿ ಎಲ್ಲ ಬೆಳೆಗಳಿಗೂ ಸಹಕಾರ ಮಾರುಕಟ್ಟೆ ರೂಪಿಸಿದರಂತೂ ರೈತರೇ ಬೆಲೆ ನಿರ್ಧರಿಸುವಂತಹ ಸಾಮರ್ಥ್ಯ ಪಡೆಯುತ್ತಾರೆ.

ಬೆಂಬಲ ಬೆಲೆ, ಅದಕ್ಕೆ ಕಾನೂನಿನ ಸ್ವರೂಪ, ಆ ಮೂಲಕ ಖರೀದಿ, ಹಂಚಿಕೆ ಇವೆಲ್ಲವನ್ನೂ ಮೂಲ ಅರ್ಥದಲ್ಲಿ ‘ಸರ್ಕಾರದ ಮಧ್ಯಪ್ರವೇಶ’ ಎನ್ನಲಾಗುತ್ತದೆ. ಜಾಗತೀಕರಣ, ನವ ಉದಾರೀಕರಣದ ದಟ್ಟ ವಾತಾವ ರಣದಲ್ಲಿ ಇದು ಅಷ್ಟೇನೂ ಸಹ್ಯವಾದ ವಿಚಾರವಲ್ಲ. ‘ಮುಕ್ತ ಮಾರುಕಟ್ಟೆ’ಯ ಭ್ರಮೆ ಗಾಢವಾಗಿರುವಾಗ ‘ಸರ್ಕಾರದ ಮಧ್ಯಪ್ರವೇಶ’ ಬೇಕೆನ್ನುವ ರೈತರ ಈ ಕೂಗು ಚುನಾವಣೆಯ ಈ ಹೊತ್ತಿನಲ್ಲಿ ಯಾವ ರೂಪ ಪಡೆಯುತ್ತದೆ ಎಂದು ಕಾದು ನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.