ಅಸೋಸಿಯೇಷನ್ ಆಫ್ ಕರ್ನಾಟಕ ಮೈಕ್ರೊಫೈನಾನ್ಸ್ ಇನ್‌ಸ್ಟಿಟ್ಯೂಷನ್ಸ್ (ಎಕೆಎಂಐ– ಅಕ್ಮಿ) ‘ಕರ್ನಾಟಕದಲ್ಲಿ ಕಿರು ಹಣಕಾಸಿನ ಬೆಳವಣಿಗೆ’ 2023ರ ವರದಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಶೇ 89ರಷ್ಟು ಜನ ಕಿರು ಹಣಕಾಸು ಸಂಸ್ಥೆಗಳಲ್ಲಿ (ಮೈಕ್ರೊ ಫೈನಾನ್ಸ್) ಸಾಲ ಪಡೆಯಲು ಇಚ್ಛಿಸುತ್ತಾರೆ ಎಂದು ವರದಿ ಹೇಳುತ್ತದೆ. ಈ ವರದಿಯು ಈ ಸಂಸ್ಥೆಗಳ ಸಾಹಸಗಾಥೆಯನ್ನು ಮಂಡಿಸುತ್ತದೆ. ಅಂತೆಯೇ ಈ ಸಂಸ್ಥೆಗಳಲ್ಲಿ ಸಾಲ ಪಡೆದು ಚಿಕ್ಕಪುಟ್ಟ ವ್ಯಾಪಾರ ಮಾಡಿ ಜೀವನವನ್ನು ಸುಧಾರಿಸಿಕೊಂಡವರೂ ಇದ್ದಾರೆ. ಆದರೆ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟಿದೆ.
ಹಿಂದಿನ ಒಂದು ದಶಕದ ಬೆಳವಣಿಗೆಗಳನ್ನು ಗಮನಿಸಿದರೆ, ಕಿರು ಹಣಕಾಸು ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಒಂದು ರೀತಿಯ ಆತಂಕ ಹುಟ್ಟಿಸಿವೆ. ಸಾಲದ ಕಂತುಗಳನ್ನು ಕಟ್ಟುವ ಒತ್ತಡಕ್ಕೆ ಒಳಗಾಗಿ ಎಷ್ಟೋ ಜನ ಊರು ತೊರೆದಿದ್ದಾರೆ. ಇನ್ನು ಕೆಲವರು ತೀವ್ರ ಮಾನಸಿಕ ಸಂಕಷ್ಟಕ್ಕೆ ಸಿಲುಕಿ ವಿಪರೀತದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ಕಲಬುರಗಿ ನಗರದ ಸಿದ್ಧೇಶ್ವರ ಕಾಲೊನಿಯಲ್ಲಿ 38 ವರ್ಷದ ಮಹಿಳೆಯೊಬ್ಬರು ಆರು ಸಂಸ್ಥೆಗಳಿಂದ ಕಿರುಸಾಲ ಪಡೆದು, ಮರುಪಾವತಿ ಮಾಡಲಾಗದೆ ವಸೂಲಿಗಾರರ ಒತ್ತಡಕ್ಕೆ ಸಿಲುಕಿ ಸೆಪ್ಟೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗಿದೆ. ಅದೇ ತಿಂಗಳು ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮ ಪಂಚಾಯಿತಿ ಎದುರು 25 ಮಹಿಳೆಯರು ಇಂತಹ ಸಂಸ್ಥೆಗಳ ಕಿರುಕುಳ ತಡೆಯಲಾರದೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೇಣಿನ ಕುಣಿಕೆ ಹಿಡಿದು ಪ್ರತಿಭಟಿಸಿದ್ದರು. ಕಡೂರು ತಾಲ್ಲೂಕಿನ ತಂಗಲಿ ಗ್ರಾಮದ 64 ವರ್ಷ ವಯಸ್ಸಿನ ರೈತ ಮಹಿಳೆ ಕಡೂರಿನ ಸಂಸ್ಥೆಯೊಂದರಲ್ಲಿ ₹ 78,000 ಸಾಲ ಪಡೆದಿದ್ದರು. ಬೆಳೆ ಕೈಕೊಟ್ಟ ಕಾರಣಕ್ಕೆ ಸಾಲ ತೀರಿಸಲಾಗದೆ ಹೋದ ವರ್ಷ ಆತ್ಮಹತ್ಯೆ ಮಾಡಿಕೊಂಡರು ಎಂದು ವರದಿಯಾಗಿದೆ. ಸರಿಯಾಗಿ ಪರಿಶೀಲನೆ ಮಾಡಿದರೆ, ಹಿಂದಿನ ದಶಕದಲ್ಲಿ ಕಿರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು, ತೀವ್ರ ಕಿರುಕುಳ ಅನುಭವಿಸಿದವರ ಸಂಖ್ಯೆ ಏರಿಕೆಯಾಗುತ್ತಿರುವುದು ತಿಳಿಯುತ್ತದೆ.
ಕೆಲವು ಊರುಗಳನ್ನು ಹತ್ತಾರು ಕಿರು ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಸಂಪರ್ಕಿಸುತ್ತಾರೆ. ಸಾಲ ಪಡೆಯುವುದನ್ನು ಸಾಧ್ಯವಾದಷ್ಟೂ ಸರಳಗೊಳಿಸಲಾಗಿದೆ. ಬರೀ ಆಧಾರ್ ಕಾರ್ಡ್ ಮಾಹಿತಿ ಇಟ್ಟುಕೊಂಡು ಒಂದೆರಡು ದಿನಗಳಲ್ಲಿ ಸಾಲ ಕೊಡಲಾಗುತ್ತದೆ. ಒಬ್ಬರು ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚಿನ ಸಂಸ್ಥೆಗಳಿಂದ ಸಾಲ ಪಡೆಯುತ್ತಾರೆ. ಒಂದು ಸಂಸ್ಥೆಯಲ್ಲಿ ಪಡೆದ ಸಾಲ ತೀರಿಸಲು ಮತ್ತೊಂದರಲ್ಲಿ ಸಾಲ, ಅದನ್ನು ತೀರಿಸಲು ಇನ್ನೊಂದರಲ್ಲಿ ಸಾಲ ಹೀಗೆ ಒಂದರೊಳಗೊಂದು ಬೆರೆತು, ಏಕಕಾಲಕ್ಕೆ ಹತ್ತಾರು ಸಂಸ್ಥೆಗಳ ಹಣ ಕಟ್ಟಬೇಕಾಗುತ್ತದೆ. ಬಡ್ಡಿ ದರವನ್ನು ಕೂಡ ಆಯಾ ಸಂಸ್ಥೆಗಳು ಒಂದೊಂದು ರೀತಿ ವಿಧಿಸುತ್ತಿವೆ.
ಗುಂಪು ಸಾಲದಲ್ಲಿ ಯಾರಾದರೂ ಒಬ್ಬರು ಸಾಲ ಪಡೆದರೆ ಆ ಗುಂಪಿನ ಎಲ್ಲರೂ ಅದಕ್ಕೆ ಹೊಣೆಯಾಗಬೇಕಾಗುತ್ತದೆ. ಹೀಗಾಗಿ, ತಾವು ಪಡೆದ ಸಾಲವನ್ನು ಕಟ್ಟುವುದು ಮಾತ್ರವಲ್ಲ, ಆಯಾ ಗುಂಪಿನಲ್ಲಿ ಸಾಲ ಪಡೆದವರ ಮರುಪಾವತಿಯನ್ನು ಸಹ ಮಾಡಿಸಿಕೊಡಬೇಕಾಗುತ್ತದೆ. ಹತ್ತು ಜನರ ಗುಂಪಿನಲ್ಲಿ, ಸಾಲ ಪಡೆದ ಒಬ್ಬರು ಮರುಪಾವತಿ ಮಾಡದಿದ್ದರೆ, ಉಳಿದ ಒಂಬತ್ತು ಜನ ಅವರ ಮನೆಯ ಮುಂದೆ ನಿಂತು ಸಾಲ ವಸೂಲಿ ಮಾಡಬೇಕಾಗುತ್ತದೆ. ಹೀಗೆ ಸಾಲ ಮರುಪಾವತಿ ಕಿರುಕುಳ ಶುರುವಾಗುತ್ತದೆ.
ಈ ಸಂಸ್ಥೆಗಳಿಂದ ನೇಮಕಗೊಂಡಿರುವ ವಸೂಲಿಗಾರರ ಕಿರುಕುಳ ಹಾಗೂ ದಾಳಿಯ ಕಾರಣಕ್ಕೆ ರಾಜ್ಯದಲ್ಲಿ ಹಲವು ನೆಲೆಯ ಹೋರಾಟಗಳು ಶುರುವಾಗಿವೆ. ಮೈಕ್ರೊಫೈನಾನ್ಸ್ ಹೆಸರಿನಲ್ಲಿ ಕೆಲವು ಬೃಹತ್ ಸಂಸ್ಥೆಗಳು ತಮ್ಮ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿವೆ ಎಂದು ಚಳವಳಿಗಾರರು ದೂರಿದ್ದಾರೆ. ಅಂತಹ ಹಲವು ಸಂಸ್ಥೆಗಳು ಮೈಕ್ರೊಫೈನಾನ್ಸ್ ಘಟಕಗಳನ್ನು ತೆರೆದು ಹಳ್ಳಿಗಳಿಗೆ ಲಗ್ಗೆ ಇಡುತ್ತಿವೆ ಎಂದು ಹೇಳಲಾಗಿದೆ.
ಅವಿಭಜಿತ ಆಂಧ್ರಪ್ರದೇಶದಲ್ಲಿ ಮೈಕ್ರೊಫೈನಾನ್ಸ್ ಸಂಸ್ಥೆಗಳ ಹಾವಳಿ ಮಿತಿಮೀರಿದ್ದರಿಂದ, 2010ರಲ್ಲಿ ಸುಗ್ರೀವಾಜ್ಞೆ ಮೂಲಕ ಮೈಕ್ರೊಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನದಿಂದಾಗಿ ಮೈಕ್ರೊಫೈನಾನ್ಸ್ ಸಂಸ್ಥೆಗಳು ಆಂಧ್ರದಿಂದ ಕಾಲ್ಕಿತ್ತವು. ಅಂತಹ ಅನೇಕ ಸಂಸ್ಥೆಗಳು ಕರ್ನಾಟಕದಲ್ಲಿ ತಮ್ಮ ಅಂಗಡಿಗಳನ್ನು ತೆರೆದಿವೆ. ಮುಂಬರುವ ದಿನಗಳಲ್ಲಿ ನಮ್ಮ ರಾಜ್ಯದಲ್ಲಿಯೂ ಮೈಕ್ರೊಫೈನಾನ್ಸ್ ಸಂಸ್ಥೆಗಳಿಂದ ಪಡೆದ ಸಾಲ ತೀರಿಸಲಾಗದೆ, ಸಾಲ ವಸೂಲಾತಿಯ ಕಟ್ಟುಪಾಡುಗಳಿಂದ ತೀವ್ರ ತೊಂದರೆ ಅನುಭವಿಸುವವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಆಂಧ್ರ ಸರ್ಕಾರ ಜಾರಿಗೊಳಿಸಿದ ಮೈಕ್ರೊಫೈನಾನ್ಸ್ ನಿಯಂತ್ರಣ ಕಾಯ್ದೆಯ ಮಾದರಿಯಲ್ಲಿ ನಮ್ಮ ರಾಜ್ಯ ಸರ್ಕಾರವೂ ಈ ಫೈನಾನ್ಸ್ ಸಂಸ್ಥೆಗಳ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.