ಮಾನವನ ವಿಕಾಸದಲ್ಲಿ ಆತನ ವಿಶೇಷ ಗುಣವಾಗಿ ಗುರುತಿಸಲ್ಪಟ್ಟಿರುವುದು ಬರವಣಿಗೆಯ ಸಾಮರ್ಥ್ಯ. ತಮ್ಮ ಈ ಸಾಮರ್ಥ್ಯದ ಬಗ್ಗೆ ಬೀಗುತ್ತಿದ್ದ ಜನರಿಗೆ ಈಗ ಸವಾಲಾಗಿ ಕಂಡುಬರುತ್ತಿರುವುದು, ಕೃತಕ ಬುದ್ಧಿಮತ್ತೆಯಿಂದ (ಎಐ) ಸೃಷ್ಟಿಯಾಗಿರುವ ಬರಹಗಾರರು ಮತ್ತು ಸಂಶೋಧಕರ ಮತ್ತೊಂದು ಪರ್ಯಾಯ ಲೋಕ.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿಯಲ್ಲಿ ಇದ್ದಕ್ಕಿದ್ದ ಹಾಗೆ ಮೂಡಿಬಂದಿರುವ ಆತ್ಮವಿಶ್ವಾಸ ಎಷ್ಟಿದೆಯೆಂದರೆ, ಎಐ ಮೂಲಕ ಸೂರ್ಯನ ಕೆಳಗಿರುವ ಯಾವುದೇ ವಿಷಯದ ಬಗ್ಗೆ ಏನನ್ನಾದರೂ ಸರಿ ಬಹಳ ಕರಾರುವಾಕ್ಕಾಗಿ ರಚಿಸಬಹುದು ಎಂಬ ಭಾವನೆಯಿದೆ. ಗ್ರಾಹಕ ಕೇಳಿದ್ದನ್ನು ಎಐ ಅರೆಗಳಿಗೆಯಲ್ಲಿ ನೀಡಬಲ್ಲದು. ಇದು ಕವಿತೆಗಳ ರಚನಾ ಮಾರ್ಗವನ್ನು, ಸಾಹಿತ್ಯದ ವಿವಿಧ ನಿರೂಪಣಾ ಶೈಲಿಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಸಂಶೋಧನಾ ಪ್ರಬಂಧಗಳನ್ನು ನಿಮಿಷಗಳಲ್ಲಿ ಅರಗಿಸಿಕೊಂಡು ಉನ್ನತ ಮಟ್ಟದ ಕ್ರಾಸ್-ರೆಫರೆನ್ಸ್ ಮಾಡಿಕೊಡಬಲ್ಲದು. ಇಲ್ಲಿ ವೇಗವಷ್ಟೇ ಮುಖ್ಯವಲ್ಲ, ಇದು ತಪ್ಪುಗಳಾಗದಂತೆ ನೋಡಿ ಕೊಳ್ಳುತ್ತದೆ ಮತ್ತು ನಾವು ಟೈಪ್ ಮಾಡುವ ಶ್ರಮವನ್ನೂ ತಪ್ಪಿಸುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟು
ನೋಡುವುದಾದರೆ ಕವಿ, ಕಾದಂಬರಿಕಾರ, ಸಂಶೋಧಕ ಎಂಬೆಲ್ಲ ಹಣೆಪಟ್ಟಿಗಳು ಯಾವುದೇ ಅನನ್ಯ ಸಾಮರ್ಥ್ಯವನ್ನು ಬಿಂಬಿಸದೆ ಎಲ್ಲರಿಗೂ ಅನ್ವಯಿಸಬಹುದಾಗಿದೆ.
ಎಐ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅದ್ಭುತ ಫಲಿತಾಂಶಗಳನ್ನು ನೀಡುತ್ತಿದ್ದರೆ ಮಾನವನ ಸೃಜನಶೀಲತೆ, ಸಂಶೋಧನಾ ಬದ್ಧತೆ ಮತ್ತು ಅವನ ಅನನ್ಯ ಸಾಮರ್ಥ್ಯವಾದ ಬರವಣಿಗೆಯು ಮುಂದೆ ಗುರುತಿಸ
ಲ್ಪಡುತ್ತವೆಯೇ? ಯಂತ್ರವೇ ಎಲ್ಲವನ್ನೂ ಸೃಜಿಸುವುದಾದರೆ ಮಾನವನ ಸಾಹಿತ್ಯದ ಕರಕೌಶಲದ ಮೌಲ್ಯಕ್ಕೆ ಏನಾಗುತ್ತದೆ? ಬರೆಯುವ ಸಾಮರ್ಥ್ಯವು ಲೋಕಾನುಭವ ಮತ್ತು ಬೌದ್ಧಿಕ ಮೂಲದ ಹಿನ್ನೆಲೆಯಿಂದ ಹೊರಹೊಮ್ಮದೆ ಯಂತ್ರದ ಮೂಲಕ ಹುಟ್ಟಿದರೆ ಎಐ ಯುಗದಲ್ಲಿ ಬರವಣಿಗೆ, ಬರಹಗಾರ ಎಂಬಂಥ ಅಸ್ಮಿತೆಗಳಿಗೆ ಬೆಲೆಯಿರುತ್ತದೆಯೇ?
ಇತ್ತೀಚಿನ ದಿನಗಳಲ್ಲಿ ಎಲ್ಲ ರೀತಿಯ ಬರವಣಿಗೆ ಯನ್ನು ಎಐ ಮಾಡುತ್ತಿರುವುದರಿಂದ ಕರ್ತೃತ್ವವನ್ನು ನಿಖರವಾಗಿ ಗುರುತಿಸುವುದು ಕಷ್ಟದ ಕೆಲಸ. ಅಂದರೆ, ಮೇಲ್ನೋಟಕ್ಕೆ ಅಷ್ಟೇನೂ ಪ್ರತಿಭಾವಂತರಲ್ಲದವರು ಅತ್ಯಂತ ಉತ್ಕೃಷ್ಟ ಮಟ್ಟದ ಲೇಖನ, ಕಥೆ ಅಥವಾ ಕವನ ತೋರಿಸಿ ನಮ್ಮ ಪ್ರತಿಕ್ರಿಯೆ ಕೇಳಿದರೆ ನಾವು ಮೌಲ್ಯಮಾಪನ ಮಾಡಬೇಕಿರುವುದು ಬರವಣಿಗೆ ಯನ್ನು ಮಾತ್ರ. ‘ನೀವೇ ಬರೆದಿರಾ?’ ಎಂದು ಯಾರೂ ಅನುಮಾನಿಸಿ ಪ್ರಶ್ನಿಸುವುದಿಲ್ಲ. ಹೀಗಿರುವಾಗ, ಶೈಕ್ಷಣಿಕ ವಲಯಕ್ಕೆ ಸವಾಲಾಗುವುದು ನಮ್ಮ ಕಣ್ಣ ಮುಂದಿರುವ ಬರಹದಲ್ಲಿ ಕಂಡುಬರುವ ಪದಗಳು ಆ ವ್ಯಕ್ತಿಯ ಆಳವಾದ ಆಲೋಚನೆಗಳು ಮತ್ತು ಓದಿನಿಂದ ಮೂಡಿಬಂದಿರದೆ, ಎಐನಿಂದ ಯಾಂತ್ರಿಕವಾಗಿ ಬಂದವಾಗಿದ್ದು, ಅದರ ಲಾಭವನ್ನು ಆ ವ್ಯಕ್ತಿಯು ಪಡೆಯುವಂತಹ ಪ್ರಸಂಗಗಳು.
ಒಂದು ವಾಕ್ಯವನ್ನೂ ಸ್ವಂತ ಪರಿಶ್ರಮದಿಂದ ಬರೆಯದೆ, ಪೂರಾ ಲೇಖನವನ್ನು ಎಐನಿಂದ ಬರೆಸಿ, ಅದು ತಮ್ಮ ಸಾಧನೆ ಎಂದು ಬೀಗುವ ಪ್ರಸಂಗಗಳು ಈಗ ಹೆಚ್ಚಾಗಿ ಕೇಳಿಬರುತ್ತಿವೆ. ಸಾಂಪ್ರದಾಯಿಕವಾಗಿ ಹೇಳುವುದಾದರೆ, ಕಥೆ, ಕಾದಂಬರಿ, ಸಂಶೋಧನಾ ಲೇಖನದಂತಹವನ್ನು ರಚಿಸಲು ಪ್ರತಿ ವ್ಯಕ್ತಿಯು ತನ್ನ
ಸಮಯ, ಬುದ್ಧಿಶಕ್ತಿ ಮತ್ತು ಭಾವನೆಗಳನ್ನು ಶ್ರದ್ಧೆಯಿಂದ ಹೂಡಿಕೆ ಮಾಡಬೇಕಿತ್ತು. ಈಗ ಕೃತಕ ಬುದ್ಧಿ
ಮತ್ತೆಯೇ ‘ಬರಹಗಾರ’ ಆಗಿರುವಾಗ, ಮಾನವ ಹೂಡಿಕೆಯು ಸಂಪೂರ್ಣವಾಗಿ ಇಲ್ಲದಂತಾಗಿ ನಿಜ
ವಾಗಿಯೂ ಪ್ರತಿಭಾವಂತ ಬರಗಾರರನ್ನು ಗುರುತಿಸುವುದು ಕಠಿಣವಾದ ಕೆಲಸವಾಗಿದೆ.
ಇಂದಿನ ಶೈಕ್ಷಣಿಕ ಜಗತ್ತಿನಲ್ಲಿ ಪದೋನ್ನತಿಗಳು ಅಧ್ಯಾಪಕರು ಮಾಡಿರುವ ಪ್ರಕಟಣೆಗಳ ಪ್ರಮಾಣವನ್ನು ಆಧರಿಸಿರುತ್ತವೆಯೇ ವಿನಾ ಬೋಧನೆಯಲ್ಲಿರುವ ಸ್ವಂತಿಕೆಯನ್ನಲ್ಲ. ಎಐ- ಚಾಲಿತ ಬರವಣಿಗೆಯ ಗಮನಾರ್ಹ ಏರಿಕೆಯೊಂದಿಗೆ, ಅನೇಕ ಶೈಕ್ಷಣಿಕ ಪ್ರಕಟಣೆಗಳು ಈಗ ಅಲ್ಗಾರಿದಮ್‌ಗಳಿಂದ ಉತ್ಪತ್ತಿಯಾಗುತ್ತಿವೆ. ಆದರೂ ಕೃತಿಚೌರ್ಯ ಆಗಿರಬಾರದು ಎಂಬ ಏಕೈಕ ಕರಾರಿನೊಂದಿಗೆ ಎಲ್ಲವೂ ಮಾನ್ಯವಾಗುತ್ತವೆ. ಬೌದ್ಧಿಕ ಪ್ರಯತ್ನ ಮತ್ತು ಶ್ರದ್ಧೆಯ ಔಟ್‌ಪುಟ್‌ನತ್ತ ಗಮನಹರಿಸಲು ಇದರಿಂದ ಸಾಧ್ಯವಾಗದು ಮತ್ತು ಶೈಕ್ಷಣಿಕ ಸಾಧನೆಗಳ ಸಮಗ್ರತೆ ಹಾಗೂ ಪ್ರಕಟಣೆಗಳ ಗುಣಮಟ್ಟ ಕಾಲಕ್ರಮೇಣ ದುರ್ಬಲಗೊಳ್ಳುತ್ತವೆ.
ಎಐ ಬಹಳಷ್ಟು ಜನರಿಗೆ ಘೋಸ್ಟ್ ಬರಹಗಾರ ಆಗಿರುವ ಸಂದರ್ಭದಲ್ಲಿ, ಶಿಕ್ಷಕರ ಮೌಖಿಕ ಸಾಮರ್ಥ್ಯ ಗಳಿಗೆ ಸಮಾನ ಒತ್ತು ನೀಡುವುದು ಅತ್ಯಗತ್ಯ. ಪ್ರಕಟಣೆ ಗಳನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ ಅವರ ಸಂವಹನ ಕೌಶಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕು. ಸಂಶೋಧನೆ ಮತ್ತು ಪ್ರಕಟಣೆ ಮುಖ್ಯವಾಗಿದ್ದರೂ, ಒಬ್ಬ ಅಧ್ಯಾಪಕನ ಮೂಲ ಪ್ರವೃತ್ತಿಯು ಸಂಕೀರ್ಣ ವಿಚಾರಗಳನ್ನು ತಿಳಿಸುವ, ವಿದ್ಯಾರ್ಥಿಗಳನ್ನು ತೊಡಗಿಸಿ ಕೊಳ್ಳುವ ಮತ್ತು ಕ್ರಿಯಾತ್ಮಕ ಕಲಿಕೆಯ ವಾತಾವರಣವನ್ನು ಬೆಳೆಸುವುದರತ್ತ ಇರಬೇಕು.
ಶಿಕ್ಷಣ ಕ್ಷೇತ್ರದಲ್ಲಿ ಅತಿ ತುರ್ತಾಗಿ ಎಲ್ಲರ ಅರಿವಿಗೆ ಬರಬೇಕಿರುವ ವಿಚಾರವೆಂದರೆ, ನಮಗೆ ಆಧುನಿಕಪೂರ್ವದಲ್ಲಿ ಒಂದು ಮೌಖಿಕ ಪರಂಪರೆ ಇತ್ತು. ಈಗ ಅದೇ ಪರಂಪರೆಗೆ ಬೇರೆ ಸ್ವರೂಪದಲ್ಲಿ ಹಿಂದಿರುಗಬೇಕಿದೆ ಎಂಬುದು. ಏಕೆಂದರೆ, ನೂರಾರು ಲೇಖನಗಳನ್ನು ಪ್ರಕಟಿಸಿ ಎಲ್ಲ ರೀತಿಯ ಪ್ರಶಂಸೆ ಗಳಿಸಿ ಕಡೆಗೆ ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ, ನಮ್ಮ ಸಂಶೋಧನಾ ಪ್ರಕಟಣೆಗಳು ಒಳಗೊಂಡಿರುವ ಪ್ರಶ್ನೆಗಳು, ಕುತೂಹಲಗಳು ಮತ್ತು ಪರಿಕಲ್ಪನೆಗಳನ್ನು
ಮೌಖಿಕವಾಗಿ ಸಹ ಸ್ಪಷ್ಟಪಡಿಸಲು ಸಾಧ್ಯವಾದರೆ ಮಾತ್ರ ಎಐ ಜಗತ್ತಿನಲ್ಲಿ ನಮ್ಮ ಅಸ್ತಿತ್ವಕ್ಕೆ ಮಾನ್ಯತೆ ದೊರೆಯುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.