ADVERTISEMENT

ಸಂಗತ: ಒಳಗೊಳ್ಳುವಿಕೆಯೇ ಮುನ್ನಡೆ

ಹೆಚ್ಚು ಸದ್ದಿಲ್ಲದೆ ಆಗುವ ಬದಲಾವಣೆಯ ಬಿಸಿ ನಿಧಾನವಾಗಿ ತಟ್ಟುತ್ತದೆ. ಆ ಬಿಸಿ ಬೆಚ್ಚನೆಯ ಭಾವವನ್ನು ಹುಟ್ಟಿಸುತ್ತದೆ

ವಾದಿರಾಜ್
Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
   

ಐದು ರಾಜ್ಯಗಳ ವಿಧಾನಸಭೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಮತ್ತು ಆನಂತರದ ಬೆಳವಣಿಗೆಗಳು ತಳವರ್ಗಗಳ ನೈಜ ಒಳಗೊಳ್ಳುವಿಕೆ ಇಲ್ಲದೆ ಗಟ್ಟಿಯಾದ ರಾಜಕೀಯ ಮುನ್ನಡೆ ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿವೆ. ನೂರು ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದ ಅವರು ಇದನ್ನೇ ‘ಮುಂದಿನ್ನು ಶೂದ್ರರ ಕಾಲ’ ಎಂದು ಹರಳುಗಟ್ಟಿದ ಮಾತಿನಲ್ಲಿ ಹೇಳಿದ್ದರು. ಪಂಚರಾಜ್ಯಗಳ ಚುನಾವಣೋತ್ತರ ಬೆಳವಣಿಗೆಗಳ ಆಳವನ್ನು ಬಗೆದರೆ, ತಳವರ್ಗಗಳು ಮುಂಚೂಣಿಗೆ ಬರುತ್ತಿರುವುದು ಸ್ಪಷ್ಟವಾಗುತ್ತದೆ.

ಹಿಂದಿನ ವರ್ಷ ಉತ್ತರಪ್ರದೇಶದಲ್ಲಿ ಚುನಾವಣಾ ಗೆಲುವಿನ ನಂತರ ಅಸ್ತಿತ್ವಕ್ಕೆ ಬಂದ ಯೋಗಿ ಅದಿತ್ಯನಾಥ ನೇತೃತ್ವದ ಸಚಿವ ಸಂಪುಟದಲ್ಲಿ ಐವರು ಮಹಿಳೆಯರು ಸ್ಥಾನ ಪಡೆದರು. ಮಾತ್ರವಲ್ಲ, ಅವರಲ್ಲಿ ಮೂವರು ಅಸ್ಪೃಶ್ಯರೆನಿಸಿದ ಜಾಟವ, ಚಮ್ಮಾರ್ ಸಮುದಾಯಕ್ಕೆ ಸೇರಿದವರು. ಇವರು ಸ್ನಾತಕೋತ್ತರ ಪದವೀಧರರೂ ಆಗಿರುವುದು, ಇದು ಬರೀ ಪ್ರಾತಿನಿಧ್ಯಕ್ಕೆ ಸಿಕ್ಕ ಮಾನ್ಯತೆ ಅಲ್ಲ ಎಂಬುದನ್ನು ದೃಢಪಡಿಸುತ್ತದೆ. ದಲಿತರಲ್ಲಿ ಮಹಿಳೆಯರೂ ಒಳಗೊಳ್ಳುವಿಕೆಯ ವ್ಯಾಪ್ತಿಗೆ ಬಂದಿದ್ದಾರೆ ಎಂಬುದು ರಾಜಕಾರಣದಲ್ಲಿ ಐತಿಹಾಸಿಕ ಮುನ್ನಡೆಯೆನಿಸಿದೆ. ಈಗ ‘ಒಳಗೊಳ್ಳುವಿಕೆಯ ರಾಜಕಾರಣ’ ಹಲವು ಮುಖಗಳಲ್ಲಿ ತೆರೆದುಕೊಳ್ಳುತ್ತಿರುವುದು ಗಮನಾರ್ಹವೆನಿಸಿದೆ.

ಇತ್ತೀಚೆಗೆ ಚುನಾವಣೆ ಮುಗಿಸಿದ ದೂರದ ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳಲ್ಲಿ 39 ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಕ್ಷೇತ್ರಗಳು. ರಾಜಧಾನಿ ಐಜ್ವಾಲ್‌ನ ಒಂದು ಕ್ಷೇತ್ರ ಮಾತ್ರ ಸಾಮಾನ್ಯವಾದರೂ ಅಲ್ಲಿಯೂ ಸ್ಪರ್ಧಿಸಿದ ಎಲ್ಲಾ 6 ಅಭ್ಯರ್ಥಿಗಳು ಪರಿಶಿಷ್ಟ ಪಂಗಡದವರೇ ಆಗಿದ್ದರು!

ADVERTISEMENT

ತೆಲಂಗಾಣದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಅಲ್ಲಿನ 19 ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಕ್ಷೇತ್ರಗಳಲ್ಲಿ ಹದಿನಾಲ್ಕನ್ನು ತನ್ನದಾಗಿಸಿಕೊಂಡಿದೆ. ಉಳಿದ ಐದು ಬಿಆರ್‌ಎಸ್ ಪಾಲಾಗಿವೆ. ತೆಲಂಗಾಣದ 12 ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ 9, ಬಿಆರ್‌ಎಸ್‌ಗೆ 3 ಸ್ಥಾನ ದಕ್ಕಿವೆ. ಮತದಾನಕ್ಕೆ ಕೆಲ ದಿನದ ಮೊದಲು ಪ್ರಧಾನಿ ನರೇಂದ್ರ ಮೋದಿ ‘ಮಾದಿಗ ವಿಶ್ವರೂಪಂ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಒಳಮೀಸಲಾತಿಯ ಹೋರಾಟದಲ್ಲಿ ನಿಮ್ಮ ಜೊತೆಗಿದ್ದೇನೆ, ಸಾಮಾಜಿಕ ನ್ಯಾಯ ಕೊಡುವುದು ನನ್ನ ಜವಾಬ್ದಾರಿ’ ಎಂದು ಘೋಷಿಸಿದರು. ಇದರ ಪರಿಣಾಮ ಏನಾಯಿತು? ಅಂದಾಜಿಸುವುದು ಕಷ್ಟ. ಆದರೆ ಅಲ್ಲಿ ಬಿಜೆಪಿಯ ಒಟ್ಟು ಮತ ಗಳಿಕೆ ಪ್ರಮಾಣ ದ್ವಿಗುಣಗೊಂಡಿದೆ.

ತೆಲಂಗಾಣದ ಹೊಸ ಸರ್ಕಾರದಲ್ಲಿ ಬಲ ದಲಿತ ಸಮುದಾಯದ ಮಲ್ಲು ಭಟ್ಟಿವಿಕ್ರಮಾರ್ಕ ಉಪಮುಖ್ಯಮಂತ್ರಿಯಾದರೆ, ಅದೇ ಸಮುದಾಯದ ಗಡ್ಡಂ ಪ್ರಸಾದ್‌ ಕುಮಾರ್ ಸ್ಪೀಕರ್ ಹುದ್ದೆಗೆ ಏರಿದ್ದಾರೆ. ಹಿಂದೆ ಅವಿಭಜಿತ ಆಂಧ್ರಪ್ರದೇಶದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಮಾದಿಗ ಸಮುದಾಯದ ದಾಮೋದರ ರಾಜನರಸಿಂಹ ಮತ್ತು ಬುಡಕಟ್ಟು ಮೂಲದ, ಮಾಜಿ ನಕ್ಸಲ್ ನಾಯಕಿ ಸೀತಕ್ಕ (ಧನಸರಿ ಅನುಸೂಯ) ಸಚಿವರಾಗಿದ್ದಾರೆ.

ಶೇ 33ರಷ್ಟು ಆದಿವಾಸಿಗಳ ಜನಬಾಹುಳ್ಯವಿರುವ ಛತ್ತೀಸಗಢವು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದೆ. ಎರಡನೇ ಅತಿದೊಡ್ಡ ಸಮುದಾಯವೆನಿಸಿದ ‘ಕನ್ವರ್’ ಬುಡಕಟ್ಟಿನ ವಿಷ್ಣುದೇವ್ ಸಾಯ್‌ ಮುಖ್ಯಮಂತ್ರಿ ಆಗಿದ್ದಾರೆ. ಛತ್ತೀಸಗಢದ 29 ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ 17 ಬಿಜೆಪಿಯ ಪಾಲಾದರೆ, ಕಾಂಗ್ರೆಸ್ಸಿಗೆ ಸಿಕ್ಕಿದ್ದು 11. ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ 6 , ಬಿಜೆಪಿ 4 ಸ್ಥಾನ ಪಡೆದಿವೆ.

ಮಧ್ಯಪ್ರದೇಶದ 46 ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ 24, ಕಾಂಗ್ರೆಸ್ 22 ಸ್ಥಾನ ಗಳಿಸಿವೆ. ರಾಜ್ಯದ 35 ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ 26 ಬಿಜೆಪಿ ಪಾಲಾದರೆ, ಕಾಂಗ್ರೆಸ್ಸಿಗೆ 9 ಸ್ಥಾನ ಸಿಕ್ಕಿದೆ. ಬಿಜೆಪಿಯು ಮಧ್ಯಪ್ರದೇಶ ದಲ್ಲಿ ಎಸ್‌ಸಿ ಮತಪ್ರಮಾಣದಲ್ಲಿ ಶೇ 51ರಷ್ಟನ್ನು ತನ್ನದಾಗಿಸಿಕೊಂಡಿದೆ. ಪ್ರಬಲ ಯಾದವ ಸಮುದಾಯಕ್ಕೆ ಮುಖ್ಯಮಂತ್ರಿ ಪದವಿ ಸಿಕ್ಕಿದೆ. ಈ ಹಿಂದೆ ಹಣಕಾಸು ಸಚಿವರೂ ಆಗಿದ್ದ, ಅರ್ಥಶಾಸ್ತ್ರದ ಸ್ನಾತಕೋತ್ತರ ಪದವೀಧರರಾದ ದಲಿತ ಸಮುದಾಯದ ಜಗದೀಶ ದೇವ್ಡಾ ಉಪಮುಖ್ಯಮಂತ್ರಿಯಾಗಿದ್ದಾರೆ.

ರಾಜಸ್ಥಾನದ 34 ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ 22 ಬಿಜೆಪಿಯ ಪಾಲಾದರೆ, ಕಾಂಗ್ರೆಸ್ ಉಳಿಸಿಕೊಂಡಿದ್ದು 11 ಕ್ಷೇತ್ರ ಮಾತ್ರ. ರಾಜ್ಯದ ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ 12ರಲ್ಲಿ ಬಿಜೆಪಿ ಗೆದ್ದರೆ, ಕಾಂಗ್ರೆಸ್ಸಿಗೆ ದಕ್ಕಿದ್ದು 10 ಸ್ಥಾನಗಳು. ಚಾಪೆ, ಹಗ್ಗ ನೇಯುವ ‘ಭೈರ್ವ’ ಎಂಬ ಪರಿಶಿಷ್ಟ ಜಾತಿಯ, ಪಿಎಚ್‌.ಡಿ ಪದವೀಧರರಾದ ಪ್ರೇಮಚಂದ್ ಉಪಮುಖ್ಯಮಂತ್ರಿ ಹುದ್ದೆಗೆ ಏರಿದ್ದಾರೆ.

ಜಾತಿ ಸಮೀಕರಣದ ರಾಜಕಾರಣ ಒಂದು ಸೀಮಿತ  ರಣತಂತ್ರವಾಗಬಹುದಷ್ಟೆ. ಸಾಮಾಜಿಕ ಬದ್ಧತೆ ಇದ್ದರಷ್ಟೇ ‘ಒಳಗೊಳ್ಳುವಿಕೆಯ ರಾಜಕಾರಣ’ವನ್ನು ದಕ್ಕಿಸಿಕೊಳ್ಳಬಹುದು. ಬಾಬಾಸಾಹೇಬ್ ಅಂಬೇಡ್ಕರ್ ಅವರ ನಂತರ ದೇಶಕ್ಕೆ ದಲಿತರು ಕಾನೂನು ಸಚಿವರಾಗಿರುವುದು ಅಪರೂಪ. ಬಿ. ಶಂಕರಾನಂದ ಅವರು ಒಮ್ಮೆ ಕಾನೂನು ಸಚಿವರಾಗಿದ್ದರು. ಕೇಂದ್ರ ಸರ್ಕಾರದ ಈಗಿನ ಕಾನೂನು ಸಚಿವರಾದ ಅರ್ಜುನ್ ರಾಂ ಮೇಘವಾಲ್ ದಲಿತರೆ. ಸಂಸತ್ತಿಗೆ ಸೈಕಲ್ಲಿನಲ್ಲಿ ಬರುವ ಸರಳ ವ್ಯಕ್ತಿತ್ವದ ಮೇಘವಾಲರ ಕಿಸೆಯಲ್ಲಿ ಕಾನೂನು, ಎಂಎ, ಎಂಬಿಎ ಪದವಿಗಳಿವೆ. ಇಂತಹ ತಣ್ಣನೆಯ ಬದಲಾವಣೆಯ ಬಿಸಿ ನಿಧಾನವಾಗಿ ತಟ್ಟುತ್ತದೆ. ಆ ಬಿಸಿ ಬೆಚ್ಚನೆಯ ಭಾವವನ್ನು ಹುಟ್ಟಿಸುತ್ತದೆ.

ಲೇಖಕ: ಆರ್‌ಎಸ್‌ಎಸ್‌ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.