ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬನ ತಾಯಿ, ಮಗ ಓದುತ್ತಿರುವ ಕಾಲೇಜಿಗೆ ಭೇಟಿ ನೀಡಿ, ವಿಭಾಗದ ಮುಖ್ಯಸ್ಥರ ಬಳಿ ಮಗನ ಶೈಕ್ಷಣಿಕ ಪ್ರಗತಿಯ ಕುರಿತು ಸಮಾಲೋಚಿಸತೊಡಗಿದರು. ‘ವಿವಿಧ ಕಂಪನಿಗಳು ನಡೆಸುವ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ನನ್ನ ಮಗ ಭಾಗವಹಿಸಲು ಅವಕಾಶ ಇಲ್ಲವೇ’ ಎನ್ನುವುದು ಅವರ ಮುಖ್ಯ ಪ್ರಶ್ನೆಯಾಗಿತ್ತು.
ಸದ್ಯ ಏಳನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಅವರ ಮಗ, ಹಿಂದಿನ ಸೆಮಿಸ್ಟರ್‌ಗಳ 13 ವಿಷಯಗಳಲ್ಲಿ ಪಾಸ್ ಆಗದೆ ಹಾಗೇ ಉಳಿಸಿಕೊಂಡಿದ್ದ. ಹೀಗಾಗಿ, ಈ ವಿದ್ಯಾರ್ಥಿಗೆ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಏಳು ಮತ್ತು ಎಂಟನೇ ಸೆಮಿಸ್ಟರ್‌ನಲ್ಲಿ ಓದಬೇಕಿರುವ ವಿಷಯಗಳೊಂದಿಗೆ ಪಾಸಾಗದೆ ಉಳಿಸಿಕೊಂಡಿರುವ 13 ವಿಷಯಗಳ ಪರೀಕ್ಷೆ ಬರೆದು ಪಾಸ್ ಆಗುವುದು ಕಷ್ಟಸಾಧ್ಯವೇ ಸರಿ.
ವಾಸ್ತವಾಂಶ ಮನಗಂಡು, ನಾಲ್ಕು ವರ್ಷಗಳಲ್ಲಿ ಆಗದಿದ್ದರೂ ಸಾಧ್ಯವಾದಷ್ಟು ಬೇಗ ಮಗ ಎಂಜಿನಿಯರಿಂಗ್ ಮುಗಿಸಲು ಏನು ಮಾಡಬೇಕೆನ್ನುವ ಕುರಿತು ಮಾಹಿತಿ ಪಡೆಯುವುದು ಅವರ ಏಕಮಾತ್ರ ಆದ್ಯತೆಯಾಗಬಹುದೇನೋ ಎನ್ನುವ ನಿರೀಕ್ಷೆ ಅಧ್ಯಾಪಕರಲ್ಲಿತ್ತು. ಆದರೆ, ಅವರಿಗೆ ಮಗ ಇನ್ನು ಆರೇಳು ತಿಂಗಳುಗಳಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸುವ ಕುರಿತು ಅಪರಿಮಿತ ಭರವಸೆ ಇದ್ದ ಹಾಗಿತ್ತು. ‘ಏಳನೇ ಸೆಮಿಸ್ಟರ್‌ನಲ್ಲಿ ಹೆಚ್ಚುವರಿಯಾಗಿ ಆರು ಹಾಗೂ ಎಂಟನೇ ಸೆಮಿಸ್ಟರ್‌ನಲ್ಲಿ ಹೆಚ್ಚುವರಿಯಾಗಿ ಏಳು ವಿಷಯಗಳ ಪರೀಕ್ಷೆ ಬರೆದು ಪಾಸಾದರೆ ನಾಲ್ಕು ವರ್ಷಕ್ಕೆ ಎಂಜಿನಿಯರಿಂಗ್ ಮುಗಿಸಬಹುದಲ್ಲವೇ?’ ಎಂದು ವಿಚಾರಿಸಿದರು.
ಆದರೆ, ನಿಯಮಾವಳಿ ಪ್ರಕಾರ, ಅವರ ಮಗ ಆಯಾ ಸೆಮಿಸ್ಟರ್‌ನ ಏಳೆಂಟು ವಿಷಯಗಳೊಂದಿಗೆ ಹೆಚ್ಚುವರಿಯಾಗಿ ಆರೇಳು ವಿಷಯಗಳ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಇರಲಿಲ್ಲ. ಅಲ್ಲದೆ 13 ವಿಷಯಗಳನ್ನು ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಯ ಪಾಲಿಗೆ ಒಂದೇ ಬಾರಿಗೆ 14ಕ್ಕಿಂತ ಹೆಚ್ಚು ವಿಷಯಗಳಲ್ಲಿ ಪಾಸಾಗುವುದು ಅಸಾಧ್ಯ ಎನಿಸುವಂತಹ ಸವಾಲೇ ಸರಿ. ವಸ್ತುಸ್ಥಿತಿ ಹೀಗಿದ್ದರೂ ತಾಯಿಗೆ ಮಗ ಕ್ಯಾಂಪಸ್ ಸಂದರ್ಶನದ ಮೂಲಕ ಹೇಗಾದರೂ ಕೆಲಸ ಪಡೆಯಲೇಬೇಕೆನ್ನುವ ಮಹತ್ವಾಕಾಂಕ್ಷೆಯನ್ನು ಸಡಿಲಿಸಲು ಸಾಧ್ಯವಾಗಲೇ ಇಲ್ಲ.
ವಿಶ್ವವಿದ್ಯಾಲಯ ರೂಪಿಸಿರುವ ನಿಯಮಾವಳಿ ಹಾಗೂ ಕ್ಯಾಂಪಸ್ ಸಂದರ್ಶನಕ್ಕೆ ಬರುವ ಕಂಪನಿಗಳು ಅನುಸರಿಸುವ ಮಾನದಂಡಗಳು ಯಾವುವು ಎನ್ನುವುದನ್ನು ಪ್ರಾಧ್ಯಾಪಕರು ಅವರಿಗೆ ವಿವರಿಸಿ, ‘ನಿಮ್ಮ ಮಗ ಮೊದಲು ಎಂಜಿನಿಯರಿಂಗ್ ಪದವಿ ಮುಗಿಸುವ ಹಾಗೆ ನೋಡಿಕೊಳ್ಳಿ. ಈಗಲೇ ಕೆಲಸದ ಬಗ್ಗೆ ಹೆಚ್ಚು ಚಿಂತಿಸಲು ಹೋಗಬೇಡಿ’ ಎನ್ನುವ ಸಲಹೆ ನೀಡಿ ಕಳಿಸಿದರು. ಕೊರೊನಾ ಕಾರಣಕ್ಕೆ ತರಗತಿಗಳು ಸಕಾಲಕ್ಕೆ ನಡೆಯದೆ, ಆನ್‍ಲೈನ್ ತರಗತಿಗಳ ಮೂಲಕ ಕಲಿಸುವ ಸನ್ನಿವೇಶ ಅನಿರ್ದಿಷ್ಟಾವಧಿಗೆ ಮುಂದುವರಿದಾಗ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಅದುವರೆಗೂ ಜಾರಿಯಲ್ಲಿದ್ದ ಗರಿಷ್ಠ ನಾಲ್ಕು ಬ್ಯಾಕ್‍ಲಾಗ್ ನಿಯಮವನ್ನು ಸಡಿಲಗೊಳಿಸಿತು. ವಿದ್ಯಾರ್ಥಿಗಳು ಹಿಂದಿನ ಸೆಮಿಸ್ಟರ್‌ಗಳ ಅದೆಷ್ಟೇ ವಿಷಯಗಳಲ್ಲಿ ಫೇಲ್ ಆಗಿದ್ದರೂ ಮುಂದಿನ ವರ್ಷಕ್ಕೆ ದಾಖಲಾಗಬಹುದು ಎನ್ನುವ ರಿಯಾಯಿತಿ ಘೋಷಿಸಿ ಅನುಷ್ಠಾನಕ್ಕೂ ತರಲಾಯಿತು. ವಿಶ್ವವಿದ್ಯಾಲಯಗಳು ಜಾರಿಗೆ ತಂದ ಈ ಸಡಿಲಿಕೆ ತಮ್ಮ ಪಾಲಿಗೆ ವರದಾನ
ವಾಗಲಿದೆ ಎಂದು, ಕಲಿಕೆಯಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿಗಳು ಮೊದಲಿಗೆ ಭಾವಿಸಿದ್ದರು. ಆದರೆ ಇದರ ದುಷ್ಪರಿಣಾಮ ಏನೆಂಬುದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಈಗ ಮನದಟ್ಟಾಗತೊಡಗಿದೆ.
ಗರಿಷ್ಠ ನಾಲ್ಕು ಬ್ಯಾಕ್‍ಲಾಗ್ ನಿಯಮ ಜಾರಿಯಲ್ಲಿದ್ದ ವೇಳೆ, ಯಾವುದೇ ವಿದ್ಯಾರ್ಥಿ ನಾಲ್ಕಕ್ಕಿಂತ ಹೆಚ್ಚು ವಿಷಯಗಳನ್ನು ಪಾಸ್ ಆಗದೆ ಉಳಿಸಿಕೊಂಡಿದ್ದರೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ದಾಖಲಾಗಲು ಅವಕಾಶ ಇರಲಿಲ್ಲ. ಹೀಗಾಗಿ, ಬಾಕಿ ಇರುವ ವಿಷಯಗಳನ್ನು ಆದಷ್ಟು ಬೇಗ ಪಾಸು ಮಾಡಿಕೊಳ್ಳುವುದು ವಿದ್ಯಾರ್ಥಿಗಳ ಮೊದಲ ಆದ್ಯತೆಯಾಗುತ್ತಿತ್ತು.
ಇನ್ನು ಆರೇಳು ತಿಂಗಳುಗಳಲ್ಲಿ ಎಂಜಿನಿಯರಿಂಗ್ ಓದು ಮುಗಿಸಬೇಕಿರುವ 2023-24ನೇ ಸಾಲಿನ ಕೆಲ ವಿದ್ಯಾರ್ಥಿಗಳು, 20ಕ್ಕಿಂತ ಹೆಚ್ಚು ವಿಷಯಗಳಲ್ಲಿ ಪಾಸ್ ಆಗದೆ ಹಾಗೇ ಉಳಿಸಿಕೊಂಡಿರುವ ನಿದರ್ಶನಗಳೂ ಇವೆ. ಹೀಗೆ ಅಧಿಕ ಸಂಖ್ಯೆಯ ಬ್ಯಾಕ್‍ಲಾಗ್‍ಗಳನ್ನು ಉಳಿಸಿಕೊಂಡು ನಿಗದಿತ ಅವಧಿಗೆ ಪದವಿ ಪಡೆಯುವ ಅರ್ಹತೆ ಗಳಿಸಲು ವಿಫಲರಾಗುವವರ ಬಗ್ಗೆ ಪೋಷಕರು ಹಾಗೂ ಆಯಾ ಕಾಲೇಜು-ವಿಶ್ವವಿದ್ಯಾಲಯ
ಗಳು ವಿಶೇಷ ಮುತುವರ್ಜಿ ತೋರದೇ ಹೋದರೆ, ಅವರು ಪದವಿ ಪೂರ್ಣಗೊಳಿಸುವುದೇ ಅನುಮಾನ.
ಕೊರೊನಾ ಲಾಕ್‍ಡೌನ್ ಜಾರಿಯಲ್ಲಿದ್ದ ವೇಳೆ ಪದವಿ ಓದುತ್ತಿದ್ದ ಮೂರ್ನಾಲ್ಕು ಬ್ಯಾಚುಗಳ ವಿದ್ಯಾರ್ಥಿ
ಗಳಷ್ಟೇ ಈ ಅಪರಿಮಿತ ಬ್ಯಾಕ್‍ಲಾಗ್‍ಗಳ ದುಷ್ಪರಿಣಾಮ ಎದುರಿಸಬೇಕಿದೆ. ವಿಶ್ವೇಶ್ವರಯ್ಯ
ತಾಂತ್ರಿಕ ವಿಶ್ವವಿದ್ಯಾಲಯವು 2022-23ನೇ ಸಾಲಿನ ನಂತರ ಎಂಜಿನಿಯರಿಂಗ್ ಪದವಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ 16 ಕ್ರೆಡಿಟ್‍ಗಿಂತ ಹೆಚ್ಚು ವಿಷಯಗಳನ್ನು ಪಾಸ್ ಮಾಡದೆ ಉಳಿಸಿಕೊಂಡಿ
ದ್ದರೆ, ಅಂತಹ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ಪದೋನ್ನತಿ ಹೊಂದಲು ಅವಕಾಶವಿಲ್ಲ ಎಂಬ ನಿಯಮವನ್ನು ಈಗಾಗಲೇ ಜಾರಿಗೆ ತಂದಿದೆ. ಹೀಗಾಗಿ, ಅಪರಿಮಿತ ಬ್ಯಾಕ್‍ಲಾಗ್ ತಂದೊಡ್ಡಿರುವ ಸಂಕಷ್ಟ ಮೂರ್ನಾಲ್ಕು ಬ್ಯಾಚುಗಳ ವಿದ್ಯಾರ್ಥಿಗಳನ್ನಷ್ಟೇ ಬಾಧಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.