ADVERTISEMENT

ಸಂಗತ: ಬೆಂಗಳೂರು ‘ಟೆಕ್‌ಹಳ್ಳಿ’ ಆಗಬೇಕೆ?

ಜಗತ್ಪ್ರಸಿದ್ಧವಾದ ಬ್ಯ್ರಾಂಡ್‌ ಮಹತ್ವ ‘ಸಿಲಿಕಾನ್‌ ಸಿಟಿ’ ಹೆಸರಿಗೆ ಇದೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 19:31 IST
Last Updated 11 ಜೂನ್ 2021, 19:31 IST
ಸಿಲಿಕಾನ್‌ ಸಿಟಿ ಬೆಂಗಳೂರು
ಸಿಲಿಕಾನ್‌ ಸಿಟಿ ಬೆಂಗಳೂರು   

ಸುಮಾರು ಮೂರು ದಶಕಗಳಿಂದಲೂ ‘ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ’ ಎಂದು ಜಗತ್ತಿನಾದ್ಯಂತ ಪ್ರಖ್ಯಾತವಾಗಿರುವ ಬೆಂಗಳೂರಿನ ಬ್ರ್ಯಾಂಡ್‌ ಹೆಸರನ್ನು ಇನ್ನು ಮುಂದೆ ‘ಟೆಕ್‌ಹಳ್ಳಿ’ ಎಂದು ಕರೆಯಬೇಕೆಂದು ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ ಮಹೀಂದ್ರಾ ನಿರ್ಧರಿಸಿದ್ದಾರೆ. ಅದಕ್ಕಾಗಿ ಅವರು, ಬೆಂಗಳೂರಿನವರೇ ಆದ ಇನ್ಫೊಸಿಸ್‌ನ ನಂದನ್ ನಿಲೇಕಣಿ ಅವರಿಗೆ ತಮ್ಮ ವಿಚಾರ ಹೇಳಿ ಒಪ್ಪಿಸಿದ್ದಾರೆ.

ನಡೆದಿದ್ದು ಇಷ್ಟು: ಕೊರೊನಾ ಲಾಕ್‌ಡೌನ್‌ನಲ್ಲಿ ಬೆಂಗಳೂರು ಒದ್ದಾಡುತ್ತಿರುವಾಗ ಆನಂದ ಅವರಿಗೆ ದೇಸಿ ಸಂಸ್ಕೃತಿಗೆ ಹೊಂದುವಂತೆ ಬೆಂಗಳೂರಿಗೆ ಹೊಸ ಬ್ರ್ಯಾಂಡ್‌ ಹೆಸರಿಡಬೇಕೆನಿಸಿತು. ತಕ್ಷಣ ಅವರು ಟ್ವಿಟರ್ ಅಭಿಯಾನದ ಮೂಲಕ ಹೊಸ ಹೆಸರು ಸೂಚಿಸುವ ಸ್ಪರ್ಧೆ ಏರ್ಪಡಿಸಿದರು. ಹೈದರಾಬಾದಿನ ಶ್ರೀನಿವಾಸ ರೆಡ್ಡಿ ಪಟಿಯೋಲಾ ಸೂಚಿಸಿದ ‘ಟೆಕ್‌ಹಳ್ಳಿ’ ಮತ್ತು ಇತರ ಮೂರು ಹೆಸರುಗಳ ಮೊದಲ ಆಯ್ಕೆಯ ಬಳಿಕ ನಿಲೇಕಣಿ ಅವರನ್ನು ಸಹತೀರ್ಪುಗಾರರನ್ನಾಗಿ ಆಯ್ಕೆ ಮಾಡಿದರು. ಇಬ್ಬರೂ ಸೇರಿ ಬೆಂಗಳೂರಿಗೆ ಟೆಕ್‌ಹಳ್ಳಿ ಎಂಬ ಹೆಸರೇ ಸರಿ ಎಂದು ಪ್ರಕಟಿಸಿದರು.

ಇದು ಇಲ್ಲಿಗೇ ನಿಲ್ಲುವುದಿಲ್ಲ. ಈ ಕೈಗಾರಿಕಾಧಿಪತಿಗಳಿಗೆ ಹೆಸರು ಬದಲಾಯಿಸಲು ಮುಂದೆ ಏನೆಲ್ಲ ಮಾಡಬೇಕೆಂಬ ನೀಲಿನಕ್ಷೆ ಸ್ಪಷ್ಟವಾಗಿರುತ್ತದೆ. ಅದಕ್ಕೆ ಬೇಕಾದ ಲಾಬಿ ಮಾಡಲು ಬೇಕಾದಷ್ಟು ಹಣವೂ ಇರುತ್ತದೆ. ಇಂಗ್ಲಿಷ್‌ನಲ್ಲಿ ಬರೆಯಲು TecHalli ಎಂಬ ಹೊಸ ಪದವನ್ನೇ ಅವರು ಸೃಷ್ಟಿಸಿದ್ದಾರೆ. ಇದು ಅವರ ಹೊಸ ಬ್ರ್ಯಾಂಡಿಂಗ್‌ನ ಮೊದಲ ಸೂಚನೆ. ಆದರೆ ಕನ್ನಡ ನಾಮಾಂತರಗಳ ಸ್ವರೂಪ ಬಲ್ಲವರಿಗೆ ಟೆಕ್‌ಹಳ್ಳಿ ಮುಂದೆ ಜನರ ಬಾಯಲ್ಲಿ ಠಕ್ ಹಳ್ಳಿ ಅಥವಾ ಠಕ್ಕರ ಹಳ್ಳಿ ಎಂದಾದರೆ ಎಂಬ ಆತಂಕ ಮೂಡಿದರೆ ಆಶ್ಚರ್ಯವಿಲ್ಲ.

ADVERTISEMENT

ಬೆಂಗಳೂರಿಗೆ ಅತ್ಯಾಧುನಿಕ ತಂತ್ರಜ್ಞಾನದ ಪ್ರಸಿದ್ಧಿ ಬರುವುದಕ್ಕೆ ಚಾರಿತ್ರಿಕ ಮತ್ತು ವರ್ತಮಾನದ ಹಲವು ಕಾರಣಗಳಿವೆ. ಮೈಸೂರಿನ ಅರಸರು ಮತ್ತು ಸರ್ ಎಂ.ವಿಶ್ವೇಶ್ವರಯ್ಯನವರು ಏಷ್ಯಾದ ಮೊದಲ ಜಲವಿದ್ಯುತ್ ತಯಾರಿಕಾ ಘಟಕವನ್ನು ಗಗನಚುಕ್ಕಿ- ಭರಚುಕ್ಕಿ ಜಲಪಾತದ ಬಳಿ ಸ್ಥಾಪಿಸಿದ್ದರು. ಕನ್ನಂಬಾಡಿ ಕಟ್ಟೆಯಂತೆ ಭದ್ರಾವತಿ ಕಬ್ಬಿಣ ಕಾರ್ಖಾನೆ ಇತ್ಯಾದಿಗಳಾದವು. 1909ರಲ್ಲಿ ಐಐಎಸ್‌ಸಿ ಪ್ರಾರಂಭ ವಾಯಿತು. ಐಐಟಿ, ಎಚ್.ಎ.ಎಲ್., ಭಾರತ್ ಎಲೆಕ್ಟ್ರಾನಿಕ್ಸ್, ಇಸ್ರೊ– ಹೀಗೆ ಹಲವು ಸಂಸ್ಥೆಗಳಾದವು. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿದ್ದ ವೀರಪ್ಪ ಮೊಯಿಲಿ ಹಾಗೂ ಕೈಗಾರಿಕಾ ದೂರದೃಷ್ಟಿ ಇದ್ದ ಆರ್.ಕೆ.ಬಾಳಿಗ ಅವರು ಬೆಂಗಳೂರಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣಕ್ಕೆ ಕಾರಣರಾದರು. ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ಸಿಂಗಪುರ ಮಾದರಿಯಲ್ಲಿ ಐಟಿಪಿಎಲ್‌ ನಿರ್ಮಾಣಕ್ಕೆ ಮುಂದಾದರು. ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ರಾಜಕೀಯ ನಾಯಕರಲ್ಲಿ ಮೊದಲು ಪ್ರಚುರಪಡಿಸಿದವರೂ ವೀರಪ್ಪ ಮೊಯಿಲಿಯವರು. ಉಳಿದಂತೆ ಇಂದಿನ ನಮ್ಮ ಸಾಫ್ಟ್‌ವೇರ್‌ ಕಂಪನಿಗಳ ಚರಿತ್ರೆ ಎಲ್ಲರಿಗೂ ತಿಳಿದಿರುವಂತಹದು.

ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಂತೆ ಬೆಂಗಳೂರು ಬೆಟ್ಟ ಕಣಿವೆಗಳ ನೆಲವಲ್ಲ. ಆದರೆ ಅದು ಸಾಫ್ಟ್‌ವೇರ್‌ ಉದ್ಯೋಗಿಗಳಿಂದಾಗಿ ಜಗತ್ತಿನ ಕಣ್ಣಲ್ಲಿ ಸಿಲಿಕಾನ್ ವ್ಯಾಲಿಯ ಸಾಫ್ಟ್‌ವೇರ್‌ ಸಾಂದ್ರೀಕರಣಕ್ಕೆ ಸಮಾನವಾದ ಜಾಗ ಕಂಪ್ಯೂಟರ್ ಚಿಪ್ ತಯಾರಿಕೆಗೆ ಬೇಕಾಗುವ ಕಚ್ಚಾವಸ್ತು ಸಿಲಿಕಾನ್. ಅದು ಕ್ಯಾಲಿಫೋರ್ನಿಯಾದ ನೆಲದಲ್ಲೂ ಸಿಗುವ ವಸ್ತುವಲ್ಲ. ಆದರೂ ಅದಕ್ಕೆ ಹೆಸರು ಬಂದಿರುವಂತೆ ಬೆಂಗಳೂರಿಗೂ ಸಾಫ್ಟ್‌ವೇರ್‌ ಉದ್ಯೋಗಿಗಳು ಒಂದೆಡೆ ಸೇರಿದ್ದರಿಂದ ಈ ಹೆಸರು ಬಂದಿದೆ.

ಅಮೆರಿಕದಲ್ಲಿ ‘ಬ್ಯಾಂಗಲೂರ‍್ಡ್‌’ ಎಂಬ ಪದವಿದೆ. ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ, ಮಕ್ಕಳಿಗೆ ವಿಜ್ಞಾನ, ಗಣಿತವನ್ನು ಸರಿಯಾಗಿ ಕಲಿಸುವ ಮೂಲಕ ತಮ್ಮ ಕೆಲಸಗಳೆಲ್ಲಾ ಬ್ಯಾಂಗಲೂರ‍್ಡ್ ಆಗದಂತೆ ನೋಡಿ ಕೊಳ್ಳಬೇಕು ಎಂದಿದ್ದರು. ಬ್ಯಾಂಗಲೂರ್ಡ್‌ ಅಂದರೆ, ಬೆಂಗಳೂರಿಗೆ ಆ ಕೆಲಸ ಹೋಯಿತು ಅಥವಾ ಒಂದು ಕೆಲಸವನ್ನು ಹೊರಗುತ್ತಿಗೆಯಾಗಿ ಬೆಂಗಳೂರಿಗೆ ಕಳುಹಿಸಿ ಆಯಿತು ಎಂದು ಅರ್ಥ.

ಗಾರ್ಡನ್ ಸಿಟಿ, ನಿವೃತ್ತರ ಸ್ವರ್ಗ ಇತ್ಯಾದಿ ಹೆಸರುಗಳಿಗಿಂತ ಭಿನ್ನವಾದ ಬ್ರ್ಯಾಂಡ್ ಮಹತ್ವ ಸಿಲಿಕಾನ್ ಸಿಟಿಗೆ ಇದೆ. ಇದು ಉದ್ಯೋಗದ ಗುತ್ತಿಗೆ ಪಡೆಯಲು ಸಹಕರಿಸುವ ಬ್ರ್ಯಾಂಡ್. ಇಲ್ಲಿ ಯಾವ ಕೆಲಸಕ್ಕೆ ಎಷ್ಟು ಜನ ಕೌಶಲಪೂರ್ಣ ಎಂಜಿನಿಯರ್‌ಗಳು ಬೇಕಾದರೂ ಸಿಗುತ್ತಾರೆ ಎಂಬ ಅರ್ಥವನ್ನು ಇದು ಧ್ವನಿಸುತ್ತದೆ. ಇಷ್ಟು ಪ್ರಸಿದ್ಧವಾದ ಒಂದು ಬ್ರ್ಯಾಂಡ್ ವ್ಯಾಲ್ಯೂ ಹೆಸರನ್ನು ಈಗ ಇದ್ದಕ್ಕಿದ್ದಂತೆ ಕಿತ್ತು ಹಾಕಿ, ‘ಟೆಕ್‌ಹಳ್ಳಿ’ ಎಂದು ಮಾಡುವ ಅಗತ್ಯ ಏನು? ಬಸ್ಸು, ಕಾರಿನಂತೆ ಸಿಲಿಕಾನ್ ವ್ಯಾಲಿ ಕೂಡಾ ಕನ್ನಡ ಪದಗಳಂತಾಗಿವೆ. ಕಲ್ಪಿತ ಸಂಸ್ಕೃತಿ ಲಾಭಕ್ಕಾಗಿ, ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರು ನಗರವನ್ನು ಹಳ್ಳಿಯಾಗಿ ಯಾಕೆ ಮಾಡಬೇಕು?

ಇಷ್ಟಕ್ಕೂ ಈ ಇಂಡಸ್ಟ್ರಿ ನಾಯಕರಿಗೆ ಸ್ವಂತಿಕೆ ಬೇಕು ಎಂದಾದರೆ ಅದನ್ನು ತಂತ್ರಜ್ಞಾನದಲ್ಲಿ ಸಾಧಿಸಿ ತೋರಿಸಬೇಕು. ಬೆಂಗಳೂರಿನ ಬಹುತೇಕ ಕಂಪನಿಗಳು ಸಾಫ್ಟ್‌ವೇರ್ ಸರ್ವಿಸ್‌ನಲ್ಲಿ ತೊಡಗಿರುವಂತಹವು. ತಂತ್ರಜ್ಞಾನದ ಮೌಲ್ಯಮಾಪನದಲ್ಲಿ ‘ಪ್ರೊಡಕ್ಟ್’ ಗಳು ಮೇಲಿನ ಮಟ್ಟದಲ್ಲಿ ಇರುವಂತಹವು. ನಮ್ಮ ಈ ನಾಯಕರು ಬೆಂಗಳೂರಿನ ಬ್ರ್ಯಾಂಡ್‌ ಹೆಸರು ಬದಲಿಸುವುದಕ್ಕೆ ಕೆಲಸ ಮಾಡುವ ಬದಲು, ಹೆಚ್ಚು ಪ್ರೊಡಕ್ಟ್ ಕಂಪನಿಗಳಾಗುವಂತೆ ಪ್ರಯತ್ನಿಸಿದರೆ ನಮ್ಮ ಸ್ವಂತಿಕೆ ಮತ್ತು ಆರ್ಥಿಕತೆ ಎರಡೂ ಇನ್ನಷ್ಟು ಶಕ್ತಿಶಾಲಿಯಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.