ಮನುಷ್ಯ ಬುದ್ಧಿ ಬಲದೊಟ್ಟಿಗೆ ಭಾವಪರಿಧಿಯನ್ನು ವಿಸ್ತರಿಸಿಕೊಂಡಾಗಲಷ್ಟೇ ತನ್ನೊಟ್ಟಿಗಿರುವ ಇತರ ಜೀವಸಮೂಹಗಳಿಂದ ಭಿನ್ನವಾಗಿ ಉಳಿಯಬಲ್ಲ. ಜೀವಪರವಾಗಿ ಬದುಕುವ ಮೂಲಕ ತನ್ನ ಅಲ್ಪಾವಧಿಯ ಜೀವಿತವನ್ನೂ ಸ್ಮರಣೀಯ ಮತ್ತು ಸಾರ್ಥಕಗೊಳಿಸಲು ಆತನಿಗೆ ಸಾಧ್ಯ. ತೆಂಗಿನ ಗರಿಯೊಂದು ಉದುರಿಹೋದ ನಂತರವೂ ಮರದಲ್ಲಿ ತನ್ನದೊಂದು ಗುರುತನ್ನು ಉಳಿಸಿಹೋಗುವ ಹಾಗೆ.
ಸಮಾಜವು ಅದೆಷ್ಟೇ ಅಧೋಗತಿಯ ಕಡೆ ಚಲಿಸುತ್ತಿದ್ದರೂ ಕೆಲವರ ಜೀವದಯೆ ಮತ್ತು ನಿಸ್ವಾರ್ಥ ಸೇವಾ ತುಡಿತಗಳೇ ಸಮಾಜದ ಅಂತಃಕರಣವನ್ನು ಇನ್ನೂ ಹಸಿಯಾಗಿ ಕಾಪಿಟ್ಟಿವೆ. ಕುಮಟಾದ ಗೃಹಿಣಿ ಆಶಾ ಅವರು ತಮ್ಮ ಮನೆಯನ್ನೇ ವ್ರದ್ಧಾಶ್ರಮವಾಗಿಸಿಕೊಂಡು, ಬಾಳಿನಂಚಿನಲ್ಲಿರುವ ಜೀವಗಳ ಆರೈಕೆ-ಶುಶ್ರೂಷೆಯಲ್ಲಿ ತೊಡಗಿಕೊಂಡಿದ್ದಾರೆ. ಅನು ಎಂಬ ಯುವತಿಯೊಬ್ಬರು ತಮ್ಮದೊಂದು ತಂಡದೊಟ್ಟಿಗೆ ಊರೂರು ಸುತ್ತುತ್ತಾ ಸರ್ಕಾರಿ ಶಾಲಾ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿದು, ಗೋಡೆಗಳನ್ನು ಚಿತ್ರಗಳ ಮೂಲಕ ಸಿಂಗರಿಸುತ್ತಾ ರಾಜ್ಯದಾದ್ಯಂತ ಸಂಚರಿಸುತ್ತಿದ್ದಾರೆ. ಇಂಥ ನಿದರ್ಶನಗಳು ನ್ಯಾಯ-ನೀತಿ, ದಯೆ-ಕರುಣೆ, ಪ್ರೀತಿ-ಸ್ಫೂರ್ತಿಗಳೆಲ್ಲ ಕಳೆದುಹೋಗುತ್ತಿರುವ ಕಾಲಘಟ್ಟದ ಓಯಸಿಸ್‌ಗಳಂತೆ ಎಂದು ಭಾವಿಸಬೇಕಾಗುತ್ತದೆ.
‘ಕತ್ತಲನ್ನು ಶಪಿಸುತ್ತಾ ಕೂರುವುದಕ್ಕಿಂತ ಮೂಲೆಯಲ್ಲಿ ಮೊಂಬತ್ತಿಯೊಂದನ್ನು ಹಚ್ಚಿಡುವುದು ಮೇಲು’ ಎನ್ನುವ ಮಾತಿಗೆ ಅನ್ವರ್ಥವಾಗಿ ನಮ್ಮ ನಡುವಿನ ಬಹಳಷ್ಟು ಮನಸ್ಸುಗಳು ಬಡಮಕ್ಕಳಿಗೆ ಉಚಿತವಾಗಿ ಅನ್ನ, ಆಶ್ರಯ, ಶಿಕ್ಷಣ ನೀಡುವ ಮೂಲಕ ಅವರಿಗೊಂದು ಬಾಳು ಕಟ್ಟಿಕೊಡುವ ಕೆಲಸದಲ್ಲಿ ನಿರತವಾಗಿವೆ. ಅನೇಕರು ಪರಿಸರ ಕಾಳಜಿಯೊಂದಿಗೆ ನಿರಂತರವಾಗಿ ಜನಜಾಗೃತಿ ಮೂಡಿಸಲು ಶ್ರಮಿಸು
ತ್ತಿದ್ದಾರೆ. ಬೆದರಿಕೆ, ಜೀವಭಯ, ಕಿರುಕುಳಗಳ ನಡುವೆಯೂ ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅನೇಕರು ನಮ್ಮ ನಡುವಿದ್ದಾರೆ.
ಜಾತಿ-ಧರ್ಮಗಳ ಹೆಸರಲ್ಲಿ ಒಡೆದ ಮನೆಯಾಗಿರುವ ಸಮಾಜವನ್ನು ಸಹ್ಯಗೊಳಿಸುವ ಪ್ರಯತ್ನವನ್ನು ಮತ್ತು ಮಾನವೀಯ ಪ್ರಪಂಚಕ್ಕೆ ಕಳಂಕವಾಗಿರುವ ಅಸ್ಪೃಶ್ಯತೆಯಿಂದ ಸಮಾಜವನ್ನು ಮುಕ್ತಿಗೊಳಿಸುವ ಧ್ಯೇಯದೊಂದಿಗೆ ಹಲವರು ಬಾಳುತ್ತಿದ್ದಾರೆ. ಮತ್ತೆ ಕೆಲವರು ಶೋಷಿತರ ಮೇಲೆ ಹೇರಲಾಗುತ್ತಿರುವ ಮತಮೌಢ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಮತ್ತು ವೈಜ್ಞಾನಿಕ ಹಾಗೂ ವೈಚಾರಿಕ ಅರಿವು ಹೆಚ್ಚಿಸುವ ಕಾಯಕದಲ್ಲಿ ತೊಡಗಿದ್ದಾರೆ. ಮದ್ಯಪಾನ, ಧೂಮಪಾನ, ಮಾದಕ ಪದಾರ್ಥಗಳ ವ್ಯಸನ, ಜೂಜುಗಳನ್ನು ನಿರ್ಮೂಲಗೊಳಿಸುವ ಪ್ರಯತ್ನವನ್ನೂ ಹತ್ತಾರು ಸಂಘ–ಸಂಸ್ಥೆಗಳು ನಿರಂತರವಾಗಿ ಜಾರಿಯಲ್ಲಿ ಇಟ್ಟಿವೆ. ಇಂಥ ಹಿಡಿಕಾಳಜಿಗಳೇ ಜೀವಜಗತ್ತನ್ನು ಪೊರೆಯಲು ಬೇಕಾಗುವ ತಾಯ್ತನದ
ಮಾದರಿಗಳಲ್ಲವೇ?
ಸಮಾಜದಲ್ಲಿ ಸಾಕ್ಷರತೆ ಕಮ್ಮಿ ಇದ್ದ ಕಾಲದಲ್ಲಿ ಸಾತ್ವಿಕತೆ ಇತ್ತು. ನೈತಿಕತೆ ಮತ್ತು ಪ್ರಾಮಾಣಿಕತೆಗೆ ಮನಸ್ಸುಗಳು ಹಂಬಲಿಸುತ್ತಿದ್ದವು. ಆಗ ದೇವರ ಮೇಲೆ ಭಯ-ಭಕ್ತಿ ಇದ್ದವು. ಸುಳ್ಳು, ಮೋಸ, ಆಲಸ್ಯ, ಅಧರ್ಮದ ನಡೆಗಳ ಬಗೆಗೊಂದು ಅಂಜಿಕೆ ಇತ್ತು. ಸಾರ್ವಜನಿಕ ಜೀವನದಲ್ಲಿ ಲಜ್ಜೆಗೆ ಮಹತ್ವವಿತ್ತು. ಆಗಿನ ಬಹುತೇಕ ತಪ್ಪು, ಮೋಸ, ಅಪರಾಧಗಳಿಗೆ ಜನಸಾಮಾನ್ಯರ ಅಜ್ಞಾನ, ಅನಕ್ಷರತೆಗಳಷ್ಟೇ ಕಾರಣ
ವಾಗುತ್ತಿದ್ದವು. ಕಾಲ ಸರಿದಂತೆಲ್ಲಾ ಮನುಷ್ಯ ತನ್ನ ತಿಳಿವಳಿಕೆ ಮತ್ತು ನಡವಳಿಕೆಗಳಲ್ಲಿ ಉತ್ತಮನಾಗ
ಬೇಕಿತ್ತು, ಸುಸಂಸ್ಕೃತನೂ ವಿವೇಕಿಯೂ ಸಜ್ಜನನೂ ಆಗಿ ಬದಲಾಗಬೇಕಿತ್ತು. ಆದರೆ ಆಗಿದ್ದೇನು?
ವಿದ್ಯಾವಂತರ ಸಂಖ್ಯೆಯು ಹೆಚ್ಚಾದಂತೆಲ್ಲ, ಆಧುನಿಕತೆಯ ವೃದ್ಧಿ ಸಾಧ್ಯವಾಯಿತು. ಆದರೆ ಸಮಾಜವು ಅನೀತಿಯತ್ತ, ದುಷ್ಟತನದತ್ತ ವಾಲುತ್ತಿರುವ ವಿಷಾದಕರ ವಿದ್ಯಮಾನಗಳಿಗೆ ನಾವೆಲ್ಲ ಸಾಕ್ಷಿಯಾಗಬೇಕಾಯಿತು. ಗುಡಿ, ಚರ್ಚು, ಮಸೀದಿಗಳು ಹೆಚ್ಚಿದವಾದರೂ ಸಮಾಜದಲ್ಲಿ ನೆಮ್ಮದಿ, ಶಾಂತಿ, ಸಾಮರಸ್ಯದ ಜಾಗದಲ್ಲಿ ಬೆಳೆಯುತ್ತಿರುವುದು ಸಣ್ಣತನ, ಅಸಹನೆ, ಅಪನಂಬಿಕೆ, ವಿಭಜಕ ಮನಃಸ್ಥಿತಿ! ವಿಪರ್ಯಾಸವೆಂದರೆ ಇವತ್ತಿನ ಬಹುತೇಕ ಭ್ರಷ್ಟರು, ಮೋಸಗಾರರು, ಅಕ್ರಮ ದಂಧೆಗಳಲ್ಲಿ ಭಾಗಿಯಾದವರು ದೈವಶಕ್ತಿಯಲ್ಲಿ ಅಪಾರ ನಂಬಿಕೆ, ಶ್ರದ್ಧೆಯುಳ್ಳವರು!
ಹಾಗಾದರೆ ಅದೇ ಜನ ತಮ್ಮ ಆಲೋಚನೆ ಮತ್ತು ನಡವಳಿಕೆಯಲ್ಲಿ ದುಷ್ಟತನವನ್ನು ಅಳವಡಿಸಿಕೊಂಡಿ
ದ್ದಾದರೂ ಹೇಗೆ ಎಂಬುದು ಯಕ್ಷಪ್ರಶ್ನೆ. ಪ್ರಸ್ತುತ ಎಲ್ಲ ಒಳ್ಳೆಯತನಗಳ ಸಂಕೇತವೆಂದು ನಂಬುವ ದೇವರು, ಧರ್ಮಗಳಿಗೆ ವಿರುದ್ಧವಾದ ನಡವಳಿಕೆಗಳೇ ಸಮಾಜದಲ್ಲಿ ಹೆಚ್ಚಾಗಲು ಆತ್ಮವಂಚಕ ಪ್ರವೃತ್ತಿ ಕಾರಣ.
ಬಗೆಬಗೆಯ ಧಾರ್ಮಿಕ ಆಚರಣೆಗಳು ತೋರಿಕೆಗಳಾಗುತ್ತಿವೆಯೇ ಹೊರತು ಸಜ್ಜನಿಕೆ-ಸನ್ನಡತೆಗೆ, ಸೇವಾ ಮನೋಭಾವಕ್ಕೆ, ಮಾನವೀಯತೆಯ ವಿಕಾಸಕ್ಕೆ ಒದಗುತ್ತಿಲ್ಲ.
ಶಿವರಾಮ ಕಾರಂತರು ಹೇಳಿದಂತೆ ‘ಕೈಮುಗಿದು ಕೇಳಲೇನಿದೆ.. ಬದುಕೇ ಒಂದು ಉಡುಗೊರೆಯಾದ ಮೇಲೆ...’ ಆದ್ದರಿಂದ ಆಸಕ್ತಿ-ಅವಕಾಶಗಳಿರುವ, ಸಮಾಜಮುಖಿ ಕನಸು ಕಟ್ಟಿಕೊಂಡಿರುವ, ಜೀವಪರ-ಜನಪರವಾಗಿ ಮಿಡಿಯುವ ಕೆಲವೇ ಕೆಲವರು ಆಸ್ಥೆ ವಹಿಸಿ ತೊಡಗಿಕೊಂಡರೂ ಲೋಕದಲ್ಲಿ ಮಾನವೀಯತೆಯ ಬನಿ ಪೂರ್ತಿ ಬತ್ತಿ ಹೋಗದಂತೆ ಉಳಿಸಬಹುದು. ಅದಾಗಲಿ ಎಂಬುದೇ ಕನವರಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.