ಬೆಂಗಳೂರಿನಿಂದ 20 ಕಿ.ಮೀ. ದೂರದ ಕನಕಪುರ ರಸ್ತೆಗೆ ಸಮಾನಾಂತರವಾಗಿ ಒಂದು ಅರಣ್ಯ ಪ್ರದೇಶವಿದೆ. ಬರೀ 590 ಎಕರೆಯಷ್ಟು ವಿಸ್ತಾರ ಹೊಂದಿರುವ, ಎಲೆಯುದುರಿಸುವ ಈ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ತುರಹಳ್ಳಿ ಅರಣ್ಯವೆಂದು ಹೆಸರಿದೆ.
ಬೆಂಗಳೂರಿನಿಂದ ಮೈಸೂರಿಗೆ ಬೇಗ ತಲುಪಿಸುವ ರಸ್ತೆ ಯೋಜನೆಯೊಂದು 1996ರಲ್ಲಿ ಬಂತು. ‘ನೈಸ್’ ಎಂದು ಕರೆಯಲಾಗುವ ರಸ್ತೆಯನ್ನು ಅಭಿವೃದ್ಧಿ ಮಾಡುವುದಕ್ಕೂ ಪೂರ್ವದಲ್ಲಿ ತುರಹಳ್ಳಿ ಅರಣ್ಯ ಪ್ರದೇಶವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸಂಪರ್ಕವನ್ನು ಹೊಂದಿತ್ತು.
ಕಾಡಿನ ಸಂಪರ್ಕದಲ್ಲೇ ಚಲಿಸುವ ಚಿರತೆಗಳು ತುರಹಳ್ಳಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸಾಕು
ನಾಯಿಗಳನ್ನು ಬೇಟೆಯಾಡುತ್ತಿದ್ದವು. ಅಲ್ಲಿ ಹಂದಿ ಗಳೂ ಬಹಳಷ್ಟು ಸಂಖ್ಯೆಯಲ್ಲಿ ಇದ್ದಿದ್ದರಿಂದಾಗಿ, ಅದು ಚಿರತೆಗಳು ಓಡಾಡುವ ಪ್ರದೇಶವಾಗಿತ್ತು. ನೈಸ್ ರಸ್ತೆ ನಿರ್ಮಾಣವಾದ ನಂತರದಲ್ಲಿ ತುರಹಳ್ಳಿ ಅರಣ್ಯ ಪ್ರದೇಶದ ನೆಲವಾಸಿ ಪ್ರಾಣಿಗಳಿಗೆ ಬನ್ನೇರುಘಟ್ಟದಿಂದ ಬಂದು ಹೋಗುವ ಅವಕಾಶ ಇಲ್ಲದಂತಾಯಿತು.
ಈ ಪ್ರದೇಶವಿಂದು ಸಂಪೂರ್ಣ ‘ದ್ವೀಪ’ದಂತಾಗಿ, ಜೀವಿವೈವಿಧ್ಯವಿಲ್ಲದ ಮೃತ ಅರಣ್ಯ ಪ್ರದೇಶವಾಗಿ
ಪರಿವರ್ತಿತವಾಗಿದೆ. ಬೆಂಗಳೂರಿನಿಂದ ಸೈಕಲ್ಲಿನಲ್ಲಿ ಬರುವ ಸವಾರರಿಗೆ ಒಂದಷ್ಟು ಮುದ ನೀಡುವ ಸೇವೆಯನ್ನಷ್ಟೇ ಮಾಡಲು ಅದಕ್ಕೆ ಸಾಧ್ಯವಾಗುತ್ತಿದೆ.
ರಾಜ್ಯದಲ್ಲಿ ಒಟ್ಟು ಒಂಬತ್ತೂವರೆ ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆ ಹೊಂದಿತ್ತು. ಇಷ್ಟು ದೊಡ್ಡ ವ್ಯಾಪ್ತಿಯನ್ನು ಅರಣ್ಯ ಇಲಾಖೆಗೆ ನೀಡಿದರೆ, ಉಳಿದ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂಬ ವರಾತವನ್ನು ಕೆಲವು ಜನಪ್ರತಿನಿಧಿಗಳು ತೆಗೆದ ಕಾರಣಕ್ಕೆ, ಆರೂವರೆ ಲಕ್ಷ ಹೆಕ್ಟೇರ್ ಪ್ರದೇಶವನ್ನು ಮತ್ತೆ ಕಂದಾಯ ಇಲಾಖೆಗೆ ಹಸ್ತಾಂತರಿಸಬೇಕು ಎಂಬುದು ಸರ್ಕಾರದ ವಾದ. ಈ ಪ್ರದೇಶ ಕೂಡಾ ವಿವಿಧ ವನ್ಯಜೀವಿಗಳ ಸಂಪರ್ಕ ಕೊಂಡಿಯಾಗಿದೆ. ಇದನ್ನು ಕಂದಾಯ ಇಲಾಖೆ ವಾಪಸ್ ಪಡೆದು ಕೃಷಿಗೋ ಕೈಗಾರಿಕೆಗಳಿಗೋ ಹಂಚಿದರೆ, ತುರಹಳ್ಳಿಯಂತಹ ಮತ್ತಷ್ಟು ದ್ವೀಪ ಕಾಡುಗಳು ಸೃಷ್ಟಿಯಾಗುತ್ತವೆ.
ಈ ಹೊತ್ತಿನಲ್ಲೇ ತಾಳಗುಪ್ಪದಿಂದ ಹೊನ್ನಾವರಕ್ಕೆ ಹೊಸ ರೈಲು ಪ್ರಸ್ತಾವ ಮುನ್ನೆಲೆಗೆ ಬರುತ್ತಿದೆ. ಅತ್ಯಂತ ದುರ್ಗಮ ಘಟ್ಟಪ್ರದೇಶ ಹಾಗೂ ಶರಾವತಿ ಅಭಯಾರಣ್ಯದ ನಡುವೆ ಹಾದುಹೋಗುವ ಈ ರೈಲು ಮಾರ್ಗ ಇಲ್ಲಿ ನೆಲೆಸಿರುವ, ಪಶ್ಚಿಮಘಟ್ಟಗಳಿಗೆ ಮಾತ್ರ ಸೀಮಿತವಾಗಿರುವ ಸಿಂಗಳೀಕ ಸಂತತಿಗೆ ಕುತ್ತು ತರುವಂತಹ ಪ್ರಯತ್ನವಾಗಿದೆ.
ರಾಜ್ಯದ ಎಲ್ಲಾ ನಗರಗಳು ಬೆಳೆಯುತ್ತಿವೆ. ಬಯಲುನಾಡಿನ ನಗರಗಳ ಬೆಳವಣಿಗೆಯು ಜೀವಿವೈವಿಧ್ಯದ ಮೇಲೆ ಅಷ್ಟೇನೂ ಪರಿಣಾಮ ಬೀರದು. ಆದರೆ, ಪಶ್ಚಿಮಘಟ್ಟಗಳಲ್ಲಿ ಈ ನಗರೀಕರಣ ದಿಂದಾಗಿ ಅರಣ್ಯ ಮತ್ತು ಜೀವಿವೈವಿಧ್ಯಗಳಿಗೆ ಧಕ್ಕೆಯಾಗುವುದು ಶತಃಸಿದ್ಧ.
ಸಾಗರದಿಂದ ಮೂರು ಕಿ.ಮೀ. ದೂರದಲ್ಲಿರುವ ಇಕ್ಕೇರಿ ಅಘೋರೇಶ್ವರ ವೃತ್ತ ದಲ್ಲಿ ಎಡಕ್ಕೆ ತಿರುಗಿ ವರದಾಮೂಲಕ್ಕೆ ಹೋಗುವ ಕಿರುರಸ್ತೆಯಲ್ಲಿ 1.2 ಕಿ.ಮೀ. ಸಾಗಿದರೆ ಎಡಕ್ಕೆ ಟೊಳ್ಳಾದ ದೊಡ್ಡದೊಂದು ಹುಳಿಮಾವಿನಮರವಿದೆ. ಆ ಮರದ ಪೊಟರೆಯಲ್ಲಿ ದಿವಾಚರಿಯಾದ ಉಡ ಹಾಗೂ ನಿಶಾಚರಿಯಾದ ಹಾರುವ ಬೆಕ್ಕು ಹತ್ತು ವರ್ಷಗಳಿಂದ ಸಹಬಾಳ್ವೆ ನಡೆಸುತ್ತಾ ಬಂದಿದ್ದವು. ಮರದ ತುದಿಯಿಂದ ಇನ್ನೊಂದು ಮರದ ಬುಡಕ್ಕೆ ತೊಗಲನ್ನು ಬಳಸಿ ಗ್ಲೈಡ್ ಮಾಡುತ್ತಾ ಇಳಿಯುವ ಹಾರುಬೆಕ್ಕಿಗೆ ಅಪಾಯವಿರುವುದು ವಿದ್ಯುತ್ ತಂತಿಯಿಂದಾದರೆ, ಮರದಿಂದ ಇಳಿದು ನೆಲದಲ್ಲಿ ಆಹಾರ ಹುಡುಕುವ ಉಡಕ್ಕೆ ಅಪಾಯವಿದ್ದುದು ಚಲಿಸುವ ವಾಹನಗಳಿಂದ.
ಆ ರಸ್ತೆಯಲ್ಲಿ ಹೋಗುವ ಅದೆಷ್ಟೋ ಜನ ಉಡವನ್ನು ಹೊಡೆಯಲು ಬಹಳಷ್ಟು ಬಾರಿ ವಿಫಲ ಪ್ರಯತ್ನ ಮಾಡಿದ್ದರು. ಆ ಮಾವಿನಮರದ ಎದುರಿಗೆ ವಾಸಿಸುವ ಮಹಿಳೆಯೊಬ್ಬರು ಬಹಳಷ್ಟು ಬಾರಿ ಉಡವನ್ನು ಬೇಟೆಗಾರರಿಂದ ರಕ್ಷಣೆ ಮಾಡಿದ್ದರು. ಆದರೆ ಇತ್ತೀಚೆಗೆ ಅಕ್ರಮ ಮರಳು ಲಾರಿಯ ವೇಗದ ಚಕ್ರಕ್ಕೆ ಸಿಲುಕಿ ಉಡ ಅಪ್ಪಚ್ಚಿಯಾಯಿತು. ಹಳ್ಳಿಯ ಆ ಹಾದಿಯಲ್ಲಿ ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುವುದು ಕಾನೂನುಬಾಹಿರ. ಈಗಂತೂ ಹಸುರು ಹಾವು, ಸಹಸ್ರಪದಿ, ನೆಲಗಪ್ಪೆಯಂತಹ ಅನೇಕ ಪ್ರಭೇದಗಳ ಸಂತತಿಗಳು ಮರಿಗಳಾಗಿ ಹೊರಬರುತ್ತಿವೆ. ಈ ಪ್ರಾಣಿಗಳು ಸೂಕ್ತ ಸ್ಥಳವನ್ನರಸಿ ಸ್ಥಳೀಯವಾಗಿ ವಲಸೆ ಪ್ರಕ್ರಿಯೆ ಪ್ರಾರಂಭಿಸುತ್ತವೆ. ಅವುಗಳ ಪಥದಲ್ಲಿನ ಬಹುತೇಕ ಪ್ರದೇಶಗಳು ರಸ್ತೆಗಳಾಗಿ ಮಾರ್ಪಟ್ಟು ವಾಹನಗಳ ಉಪಯೋಗಕ್ಕೆ ಸಂಪೂರ್ಣವಾಗಿ ಮೀಸಲಾಗಿವೆ. ಇದರಿಂದಾಗಿ, ಅನೇಕ ಜೀವಿವೈವಿಧ್ಯಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತವೆ.
ಬಸುರಿ ಗ್ವಾಂಕರ ಕಪ್ಪೆಯೊಂದು ಮರಳು ಲಾರಿಯಡಿಯಲ್ಲಿ ಅಪ್ಪಚ್ಚಿಯಾಯಿತು ಎಂದುಕೊಳ್ಳಿ. ಅಲ್ಲಿಗೆ ಸುಮಾರು ಇಪ್ಪತ್ತು ಸಾವಿರ ಮೊಟ್ಟೆಗಳು ಇಹಲೋಕ ತ್ಯಜಿಸಿದಂತೆ. ಅದರಲ್ಲಿ ಹತ್ತು ಸಾವಿರ ಮೊಟ್ಟೆಗಳು ಮರಿಗಳಾಗಿ, ಅದರಲ್ಲಿ ಐದು ಸಾವಿರ ಕಪ್ಪೆಗಳು ಬದುಕಿ, ಮಾನವನಿಗೆ ನೈಸರ್ಗಿಕ ಸೇವೆ ನೀಡುತ್ತವೆ ಎಂದುಕೊಂಡರೆ, ಅದರ ಸೇವೆಯನ್ನು ಹಣದ ರೂಪದಲ್ಲಿ ಅಳೆಯಲಾಗುವುದಿಲ್ಲ.
ಕಾಲುದಾರಿ, ಪಂಚಾಯಿತಿ ರಸ್ತೆಯಾಗಿ, ಮೇಲ್ದರ್ಜೆಗೇರಿ ಲೋಕೋಪಯೋಗಿ ರಸ್ತೆಯಾಗುವ ಪ್ರತೀ ಹಂತದಲ್ಲೂ ಈ ತರಹದ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಪಶ್ಚಿಮಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಘೋಷಣೆ ಮಾಡುವುದನ್ನು ಅರಣ್ಯ ಸಚಿವರೇ ವಿರೋಧಿಸಿದ್ದಾರೆ. ಇನ್ನು ಜೀವಿವೈವಿಧ್ಯ ಉಳಿಯುವುದೆಂತು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.