ADVERTISEMENT

ಸಂಗತ: ಹಾಡು, ಹಾರು, ಮೇಲಕ್ಕೇರು!

ವಾಯುಗುಣದ ಹಲವು ಸೂಕ್ಷ್ಮ ಹೊಳಹುಗಳನ್ನು ಬಿತ್ತರಿಸುವ ಹಕ್ಕಿ ವಲಸೆಯು ಅಚ್ಚರಿಯ ಜೊತೆಗೆ ಎಚ್ಚರಿಕೆಯನ್ನೂ ನೀಡುತ್ತದೆ

ಗುರುರಾಜ್ ಎಸ್.ದಾವಣಗೆರೆ
Published 7 ಮೇ 2021, 20:00 IST
Last Updated 7 ಮೇ 2021, 20:00 IST
ಸಂಗತ
ಸಂಗತ   

ಸಿಂಗ್, ಫ್ಲೈ, ಸೋರ್- ಲೈಕ್ ಎ ಬರ್ಡ್. ಇದು ಈ ವರ್ಷದ ‘ವಿಶ್ವ ವಲಸೆ ಹಕ್ಕಿಗಳ ದಿನ’ದ (ಮೇ 8) ಧ್ಯೇಯವಾಕ್ಯ. ಲಕ್ಷಾಂತರ ಮೈಲಿ ದೂರ ಹಾರಿ ವಲಸೆ ಬಂದು, ವಲಸೆ ಹೋಗಿ, ವಿವಿಧ ಬಣ್ಣ, ಗಾತ್ರ, ಕೂಗು, ಗೂಡು ಮತ್ತು ಜೀವನಕ್ರಮಗಳಿಂದ ನಮ್ಮಲ್ಲಿ ವಿಪರೀತ ಕುತೂಹಲ ಹುಟ್ಟಿಸಿ, ಕಳೆ ಕೀಟ ನಿಯಂತ್ರಿಸಿ, ಆಹಾರ ಉತ್ಪಾದನೆಗೂ ನೆರವಾಗುವ ವಲಸೆ ಹಕ್ಕಿಗಳು ಸಂತತಿ ವೃದ್ಧಿಸಿಕೊಂಡು, ಜೈವಿಕ ಸರಪಳಿಯನ್ನು ಮತ್ತಷ್ಟು ಬಿಗಿಗೊಳಿಸಿ ಮೂಲ ಸ್ಥಾನಗಳಿಗೆ ಹಿಂದಿರುಗುತ್ತವೆ.

ಋತುಮಾನಕ್ಕೆ ಅನುಗುಣವಾಗಿ ಹಗಲು ಕಡಿಮೆಯಾಗಿ, ಶೀತ ಹೆಚ್ಚಾಗಿ ಆಹಾರದ ಕೊರತೆ ಎದುರಾದಾಗ ಭಾರತ ಉಪಖಂಡದ ಕಡೆ ರೆಕ್ಕೆ ಬಿಚ್ಚಿ ಹಾರುವ ಹಕ್ಕಿಗಳು, ಸೆಂಟ್ರಲ್ ಏಷ್ಯನ್ ಫ್ಲೈವೇ ಮೂಲಕ 30 ದೇಶಗಳ ಮೇಲೆ ಹಾದು ಬರುತ್ತವೆ. ಪ್ರತಿವರ್ಷ ಸೆಪ್ಟೆಂಬರ್– ಅಕ್ಟೋಬರ್‌ನಲ್ಲಿ 29 ವಿವಿಧ ದೇಶಗಳಿಂದ ನಮ್ಮ ಪ್ರದೇಶಗಳಿಗೆ ವಲಸೆ ಬಂದು, ಮೊಟ್ಟೆ ಇಟ್ಟು, ಮರಿಗಳಿಗೆ ಜನ್ಮ ನೀಡಿ ಮಾರ್ಚ್– ಏಪ್ರಿಲ್ ವೇಳೆಗೆ ಸ್ವಸ್ಥಾನಗಳಿಗೆ ಮರಳುತ್ತವೆ.

ನಮ್ಮ ರಂಗನತಿಟ್ಟು, ರಾಜಸ್ಥಾನದ ಭರತ್‍ಪುರ, ಒಡಿಶಾದ ಚಿಲ್ಕಾ ಸರೋವರ, ಜಾಮ್‍ನಗರ್‌ನ ಖಿಜಾದಿಯ, ಚೆನ್ನೈನ ಪಲ್ಲಿಕರ್ಣೈ, ಆಂಧ್ರಪ್ರದೇಶದ ಪುಲಿಕಾಟ್ ಪಕ್ಷಿಧಾಮಗಳಲ್ಲಿ ಪ್ರತಿವರ್ಷ ವಿದೇಶಗಳಿಂದ ಆಗಮಿಸುವ ಹಕ್ಕಿಗಳದ್ದೇ ಕಲರವ.

ADVERTISEMENT

ವಲಸೆ ಬರುವ ಹಕ್ಕಿಗಳೇನೂ ಸುಮ್ಮನೆ ಬರುತ್ತವೆ ಎಂದುಕೊಂಡಿರಾ? ಯುರೋಪ್ ಮತ್ತು ಮಧ್ಯ ಏಷ್ಯಾದಿಂದ ಹಾರಿ ಸಾವಿರಾರು ಕಿ.ಮೀ. ದೂರ ಕ್ರಮಿಸುವ ಆಲಿವ್ ಹಸಿರು ಬಣ್ಣದ ಉಲಿಯಕ್ಕಿಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ನುಗ್ಗಿ, ಕಿವಿ ತೂತಾಗುವಂತೆ ಹಾಡುತ್ತಾ ತಾವು ಗೂಡುಕಟ್ಟುವ ಮರದ ಸುತ್ತ ನಾಲ್ಕು ಪ್ರದಕ್ಷಿಣಿ ಹಾಕಿ ನಂತರ ವಿರಮಿಸುತ್ತವೆ. ಕೇವಲ 20 ಗ್ರಾಂ ತೂಕದ ಸೈಬೀರಿಯಾದ ‘ಲಿಟಲ್‍ಸ್ಟಿಂಟ್’ ಹಕ್ಕಿ ಸುಮಾರು 8,000 ಕಿ.ಮೀ. ದೂರದಿಂದ ತಮಿಳುನಾಡಿನ ಪಾಯಿಂಟ್ ಕಾಲಿಮೆರಿ ಪಕ್ಷಿಧಾಮಕ್ಕೆ ಬರುತ್ತದೆ. ಅಮುರ್ ಫಾಲ್ಕನ್ ರಷ್ಯಾದಿಂದ ಹೊರಟು ನಾಗಾಲ್ಯಾಂಡ್‍ನ ಡೊಯಾಂಗ್ ಸರೋವರಕ್ಕೆ ಬಂದು ಆಫ್ರಿಕಾ ತಲುಪಲು 22,000 ಕಿ.ಮೀ. ಕ್ರಮಿಸುತ್ತದೆ. ಗ್ರೇ ವ್ಯಾಗ್‍ಟೇಲ್ (ಬೂದು ಕುಂಡೆಕುಸ್ಕ) ಕಳೆದ ಐದು ವರ್ಷಗಳಿಂದ ಸತತವಾಗಿ ಮಧ್ಯ ಏಷ್ಯಾ ಮತ್ತು ರಷ್ಯಾದಿಂದ ತಮಿಳುನಾಡಿನ ವಾಲ್‍ಪರೈಗೆ ಬರುತ್ತಿದೆ. ‌ಹಿಮಾಲಯದ ತಪ್ಪಲಿನ ನವರಂಗ ಹಕ್ಕಿ (ಇಂಡಿಯನ್ ಪಿಟ್ಟ) ಅಲ್ಲಿನ ಚಳಿ ತಾಳಲಾರದೆ ದಕ್ಷಿಣ ಭಾರತಕ್ಕೆ ಬರುತ್ತದೆ.

ಹಿಮಾಚಲದ ರೋಸ್‍ಫಿಂಚ್, ನೀಲಗಿರಿ ವಲಯದ ರಸ್ತೆಗಳ ಪಕ್ಕ ಕಾಳು ಹೆಕ್ಕುತ್ತಿರುವುದನ್ನು ಪ್ರತಿವರ್ಷ ಕಾಣುತ್ತೇವೆ. ಅಕ್ಟೋಬರ್‌ನಲ್ಲಿ ಫ್ಲೆಮಿಂಗೋಗಳು ಪುಲಿಕಾಟ್ ಪಕ್ಷಿಧಾಮದಲ್ಲಿ ಠಿಕಾಣಿ ಹೂಡಿರುತ್ತವೆ! ವಲಸೆ ಹಕ್ಕಿಗಳ ಅಧ್ಯಯನಕ್ಕಾಗಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯವರು 3,000 ಹಕ್ಕಿಗಳಿಗೆ ಗುರುತಿನ ಬಳೆ ತೊಡಿಸಿದ್ದಾರೆ.

ವಲಸೆ ಮಾರ್ಗದುದ್ದಕ್ಕೂ ಬೀಜ ಪ್ರಸರಣ ಮಾಡಿ ಹೊಸ ಸಸ್ಯ ಸಂಪತ್ತನ್ನು ವೃದ್ಧಿಸುತ್ತ, ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡುವ ಹಕ್ಕಿಗಳು ಸುತ್ತಲಿನ ಹೊಲ- ಗದ್ದೆಗಳಲ್ಲಿ ರೈತನಿಗೆ ಶತ್ರುವಾಗಿ ಕಾಡುವ ಕಳೆ ಕೀಟಗಳನ್ನು ಧ್ವಂಸ ಮಾಡುತ್ತವೆ. ಮಿಡತೆ ಹಾವಳಿಯನ್ನು ತಡೆಯುತ್ತವೆ. ಹಕ್ಕಿ ಹಿಕ್ಕೆಯ ಸಾರಜನಕ, ಮೊಟ್ಟೆ ಕವಚಗಳ ಕ್ಯಾಲ್ಸಿಯಂ ಮತ್ತು ಇತರ ಮಿನರಲ್‍ಗಳು ಮಣ್ಣಿನ ಫಲವತ್ತತೆ ಹೆಚ್ಚಿಸುತ್ತವೆ.

ಬೇಟೆ ಹಕ್ಕಿಗಳ ಕಣ್ಣಿಗೆ ಬೀಳದಿರಲು ಬಹುತೇಕ ಹಕ್ಕಿಗಳು ರಾತ್ರಿಯ ವೇಳೆ ವಲಸೆ ಕೈಗೊಳ್ಳುತ್ತವೆ. ಕೆಲವೊಮ್ಮೆ ನಗರಗಳ ಪ್ರಖರ ದೀಪದ ಬೆಳಕು ಪಕ್ಷಿಗಳ ದಾರಿ ತಪ್ಪಿಸುತ್ತದೆ. ಭೂಮಿಯ ಗುರುತ್ವಾಕರ್ಷಣೆಯನ್ನೇ ಆಧಾರವಾಗಿಟ್ಟು ‘ಮ್ಯಾಗ್ನೆಟಿಕ್ ಮ್ಯಾಪ್’ಗಳನ್ನು ಬಳಸಿ ವಿಶ್ವದ ವಿವಿಧ ಮೂಲೆಗಳನ್ನು ತಲುಪುತ್ತವೆ. ಕಲುಷಿತ ಕೀಟನಾಶಕಭರಿತ ನೀರಿನ ತಾಣಗಳು, ಕಡಿಮೆಯಾಗುತ್ತಿರುವ ನಡುಗಡ್ಡೆಗಳು, ಪಕ್ಷಿಬೇಟೆ, ಮೊಟ್ಟೆಗಳ ಸೇವನೆ ಮತ್ತು ನಾಶದಿಂದಾಗಿ ವಿಶ್ವದ 212 ಜಾತಿಯ ವಲಸೆ ಹಕ್ಕಿಗಳು ಅಳಿವಿನಂಚಿಗೆ ಸರಿದಿವೆ. ಮೀನು ಮತ್ತು ಕೀಟಗಳ ದೇಹದಲ್ಲೂ ಭಾರದ ಲೋಹಗಳು ಸೇರುವುದರಿಂದ, ಭಕ್ಷಿಸುವ ಹಕ್ಕಿಗಳ ಹೊಟ್ಟೆಗೂ ವಿಷ ಸೇರುತ್ತಿದೆ. ವಿದ್ಯುತ್ ತಂತಿ, ಗಾಳಿವಿದ್ಯುತ್ ಯಂತ್ರದ ರೆಕ್ಕೆಗಳಿಗೆ ಸಿಲುಕಿ ಮತ್ತು ಅನಿಯಂತ್ರಿತ ಮೀನುಗಾರಿಕೆಯಿಂದ ಆಹಾರ ಸಿಗದೆ ಹಕ್ಕಿಗಳು ಹಸಿವಿನಿಂದ ಸತ್ತ ಉದಾಹರಣೆಗಳೂ ಇವೆ.

ವಲಸೆ ಬರುವ ಹಕ್ಕಿಗಳು ಕೆಲವು ಸಲ ಬರ್ಡ್‌ಫ್ಲೂ ಅನ್ನು ತರುತ್ತವೆ. ಕಳೆದ ವರ್ಷ ಯುರೋಪ್ ಮತ್ತು ಸೌದಿ ಅರೇಬಿಯಾದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡು, ಅಲ್ಲಿಂದ ವಲಸೆ ಬಂದ ಹಕ್ಕಿಗಳು ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲದಲ್ಲಿ ಜ್ವರ ಹಬ್ಬಿಸಿದ್ದರಿಂದ ಭಾರಿ ಸಂಖ್ಯೆಯ ಹಕ್ಕಿಗಳು ಸಾವನ್ನಪ್ಪಿದ್ದವು. ಗೂಡು ಕಟ್ಟುವ ಜಾಗ ಒತ್ತುವರಿಯಾಗಿ, ವಲಸೆ ಬರುವ ಪಕ್ಷಿಗಳ ಹಿಂಡು ಜಾಸ್ತಿಯಾಗಿ, ಅವುಗಳ ಮಧ್ಯೆ ಅಂತರವಿಲ್ಲದೆ ಜ್ವರದ ವೈರಸ್ ಶೀಘ್ರವಾಗಿ ಹಬ್ಬುತ್ತದೆ ಎನ್ನುವ ತಜ್ಞರು, ಹಕ್ಕಿಗಳಿಗೂ ಪರಸ್ಪರ ಅಂತರ ಬೇಕು ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.