ADVERTISEMENT

ಸಂಗತ | ವ್ಯಕ್ತಿ ಗೌರವಕ್ಕೆ ಮಾನದಂಡವಲ್ಲ ವೃತ್ತಿ

ಸಂಪಾದನೆ ಮತ್ತು ವಿದ್ಯಾರ್ಹತೆಯ ಕಾರಣಕ್ಕೆ ಕಾಯಕಗಳನ್ನುಮೇಲು– ಕೀಳು ಎಂದು ವಿಂಗಡಿಸುವುದು ಸಲ್ಲದು

ರೇವಣ್ಣ ಎಂ.ಜಿ.
Published 18 ಅಕ್ಟೋಬರ್ 2024, 23:10 IST
Last Updated 18 ಅಕ್ಟೋಬರ್ 2024, 23:10 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ದಸರಾ ರಜೆ ಇದ್ದುದರಿಂದ ಕೆಲವು ದಿನಗಳ ಕಾಲ ಸಕುಟುಂಬ ಪ್ರವಾಸ ಹೋಗಿದ್ದೆವು. ವೃತ್ತಿ ಮತ್ತು ಹವ್ಯಾಸ ಬೇರೆ ಬೇರೆಯಾದರೂ ಸಮಾನಮನಸ್ಕ ಮಿತ್ರರಿಬ್ಬರು ಪ್ರವಾಸದಲ್ಲಿ ನಮ್ಮ ಜೊತೆಯಾಗಿದ್ದರು. 

ಕುವೆಂಪು ಅವರ ಕವಿಶೈಲಕ್ಕೆ ಭೇಟಿ ನೀಡಬೇಕೆಂಬುದು ನಮ್ಮ ಬಹುದಿನದ ಬಯಕೆಯಾಗಿತ್ತು. ಸಂಜೆಯ ಹೊತ್ತಿಗೆ ಕವಿಶೈಲವನ್ನು ತಲುಪಿ, ಪ್ರಕೃತಿಯ ಸೊಬಗನ್ನು ಸವಿದು ನಂತರ ಕವಿಮನೆಯನ್ನು ತಲುಪಿದೆವು. ಅಲ್ಲಿನ ಪ್ರಶಾಂತ ವಾತಾವರಣವನ್ನು ಆಸ್ವಾದಿಸಿ ಹೊರಗೆ ಬಂದಾಗ, ಅಲ್ಲಿದ್ದ ಪ್ರವಾಸಿಗರೊಬ್ಬರು ‘ಎಲ್ಲಿಂದ ಬಂದಿರುವಿರಿ? ಏನು ಮಾಡಿಕೊಂಡಿದ್ದೀರಿ?’ ಎಂದು ನಮ್ಮನ್ನು ಪ್ರಶ್ನಿಸಿದರು. ಆಗ ನಮ್ಮ ಮಿತ್ರರೊಬ್ಬರು ನನ್ನ ಕಡೆ ಕೈ ತೋರಿಸಿ ‘ಇವರು ಕಾಲೇಜು ಲೆಕ್ಚರರ್’ ಎಂದು ಪರಿಚಯಿಸಿ, ನಂತರ ಚಾಲಕ ಮಿತ್ರರನ್ನು ತೋರಿಸಿ ‘ಇವರು ಪಾರ್ಟ್‌ಟೈಮ್‌ ಟೀಚರ್‌ ಆಗಿ ಕೆಲಸ ಮಾಡ್ತಿದ್ದಾರೆ’ ಎಂದು ಈ ಮೊದಲು ಅವರು ಮಾಡುತ್ತಿದ್ದ ಕೆಲಸವನ್ನು ಹೇಳಿದರು. ಆದರೆ ತಮ್ಮ ಪರಿಚಯ ಮಾಡಿಕೊಳ್ಳುವಾಗ ‘ನಾನು... ನಾನು...’ ಎಂದು ತಡವರಿಸಿ ಕೊನೆಗೆ ‘ನಾನು ರೈತ’ ಎಂದು ತಗ್ಗಿದ ಧ್ವನಿಯಲ್ಲಿ ಹೇಳಿದರು. ಲೆಕ್ಚರರ್ ಎಂದು ಪರಿಚಯ ಮಾಡಿಕೊಡುವಾಗ ಇದ್ದ ಅವರ ಗಟ್ಟಿಧ್ವನಿ ಅವರಿಬ್ಬರ ಪರಿಚಯ ಮಾಡಿಕೊಡುವಾಗ ಇಲ್ಲವಾದದ್ದನ್ನು ಕಂಡು ನನಗೆ ಅಚ್ಚರಿಯ ಜೊತೆಗೆ ಆತಂಕವಾಯಿತು.

ADVERTISEMENT

ಇಂದು ವ್ಯಕ್ತಿ ಗೌರವ ಎಂಬುದು ವೃತ್ತಿಯ ಆಧಾರದ ಮೇಲೆ ನಿರ್ಧಾರವಾಗುತ್ತಿರುವುದೇ ಮಿತ್ರರ ಈ ಮನಃಸ್ಥಿತಿಗೆ ಕಾರಣವೆಂಬುದು ನಂತರ ಗೊತ್ತಾಯಿತು. ನಮ್ಮ ನಡುವೆ ತರತಮಗಳಿಲ್ಲದಿದ್ದರೂ ವೃತ್ತಿಯ ಬಗೆಗಿನ ಕೀಳರಿಮೆ ಅವರಲ್ಲಿ ಬಂದುದರ ಬಗ್ಗೆ ಬೇಸರವೂ ಆಯಿತು.

ಮಿತ್ರರ ಕೀಳರಿಮೆ ಹೋಗಲಾಡಿಸಲು ‘ಎಷ್ಟೋ ಜೀವಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುರಕ್ಷಿತವಾಗಿ ತಲುಪಿಸುವ ಚಾಲಕ, ಜಗತ್ತಿನ ಜನರ ಹಸಿವನ್ನು ನೀಗಿಸುವ ರೈತ ದೇಶದ ಆಸ್ತಿಯಲ್ಲವೇ? ಇದಕ್ಕೆ ಹೆಮ್ಮೆಪಡಬೇಕಲ್ಲವೇ? ಇತ್ತೀಚೆಗೆ ಯುವ ರೈತನೊಬ್ಬ ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ‘ರೈತ’ ಎಂದು ಹಾಕಿಸಿಕೊಂಡಿದ್ದು ಗೊತ್ತಿಲ್ಲವೇ? ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ಕನಕದಾಸರು ಹೇಳಿದ್ದು ನೆನಪಿಲ್ಲವೇ?’ ಎಂದೆಲ್ಲ ಹೇಳಿದೆ.

ದೊಡ್ಡ ಉದ್ಯೋಗ, ಒಳ್ಳೆಯ ಸಂಬಳ, ಅಂತಸ್ತು, ಕಾರು, ಬಂಗಲೆಯೇ ಯಶಸ್ಸಿನ ಮಾನದಂಡಗಳು, ಇವುಗಳೇ ವ್ಯಕ್ತಿಗೆ ಗೌರವ ತಂದುಕೊಡುವ ಸಾಧನಗಳು ಎಂದು ಬಲವಾಗಿ ನಂಬಿದ್ದ ಕಾರಣಕ್ಕೊ, ವೃತ್ತಿ ಅಸಮಾನತೆಯ ದಳ್ಳುರಿಯಲ್ಲಿ ನೊಂದು ಬೆಂದಿರುವ ಕಾರಣಕ್ಕೊ ಏನೊ ಮಿತ್ರರಿಗೆ ನನ್ನ ಮಾತುಗಳು ಆ ಕ್ಷಣಕ್ಕೆ ರುಚಿಸಲಿಲ್ಲ ಎನಿಸುತ್ತದೆ.

ಪ್ರವಾಸದಿಂದ ಹಿಂದಿರುಗುವಾಗ, ನಮ್ಮ ಕಾರು ತಾಂತ್ರಿಕ ದೋಷದಿಂದಾಗಿ ಕಾಡಿನ ಮಧ್ಯೆ ಉಬ್ಬು ತಗ್ಗುಗಳ ತಿರುವಿನ ರಸ್ತೆಯಲ್ಲಿ ಕೈಕೊಟ್ಟಿತು. ಆಗ ಮಿತ್ರರಿಬ್ಬರು ಕಾರಿನ ಬಾನೆಟ್‌ ಎತ್ತಿ ಏನು ಸಮಸ್ಯೆ ಎಂದು ತಿಳಿಯಲು ಯತ್ನಿಸಿದರೂ ಏನೊಂದೂ ತಿಳಿಯಲಿಲ್ಲ. ವಿಧಿ ಇಲ್ಲದೆ ಪುಟ್ಟ ಮಕ್ಕಳೊಂದಿಗೆ ರಸ್ತೆಬದಿಯಲ್ಲಿ ಅಸಹಾಯಕರಾಗಿ ನಿಂತಿದ್ದೆವು. ಬಹಳಷ್ಟು ವಾಹನಗಳು ಓಡಾಡುತ್ತಿದ್ದರೂ ಎಷ್ಟೋ ಹೊತ್ತಿನವರೆಗೆ ಯಾರೊಬ್ಬರೂ ‘ನಿಮ್ಮ ಸಮಸ್ಯೆ ಏನು?’ ಎಂದು ಕೇಳಲಿಲ್ಲ.

ಬಳಿಕ ಒಬ್ಬರು ನಮ್ಮ ಬಳಿಗೆ ಬಂದು ‘ಏನು ಸಮಸ್ಯೆ? ನಾನು ಕಾರ್ ಮೆಕ್ಯಾನಿಕ್’ ಎಂದು ಪರಿಚಯ ಮಾಡಿಕೊಂಡು, ಸ್ವಲ್ಪ ಹೊತ್ತಿನಲ್ಲೇ ನಮ್ಮ ಕಾರಿನ ಸಮಸ್ಯೆಯನ್ನು ಬಗೆಹರಿಸಿ ನಗುನಗುತ್ತಾ ಅಲ್ಲಿಂದ ಹೊರಟುಹೋದರು. ಆಗ ಚಾಲಕ ಮಿತ್ರರು ರೈತ ಮಿತ್ರರಿಗೆ ‘ನೋಡು, ವೃತ್ತಿಯಲ್ಲಿ ಮೇಲು ಕೀಳೆಂಬುದಿಲ್ಲ. ಈಗ ಮೆಕ್ಯಾನಿಕ್ ಇಲ್ಲದಿದ್ದರೆ ನಾವು ಇಷ್ಟು ಬೇಗ ಇಲ್ಲಿಂದ ಹೋಗಲು ಸಾಧ್ಯವಾಗುತ್ತಿತ್ತೇ? ವೃತ್ತಿ ಯಾವುದಾದರೂ ಘನತೆ ಮತ್ತು ಗೌರವದಿಂದ ಬದುಕುವುದು ಮುಖ್ಯ. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದು ಅಷ್ಟೇ ಮುಖ್ಯ. ನನ್ನನ್ನೇ ನೋಡು, ವಿದ್ಯಾರ್ಹತೆಗೆ ತಕ್ಕುದಾದ ಉದ್ಯೋಗ ಸಿಕ್ಕಿಲ್ಲವೆಂದು ಕಂಗಾಲಾಗಿದ್ದೇನೆಯೇ? ಜೀವನ ನಿರ್ವಹಣೆಗಾಗಿ ಆಸಕ್ತಿಯಿಂದ, ಶ್ರದ್ಧೆಯಿಂದ ಚಾಲಕ ವೃತ್ತಿಯನ್ನು ಮಾಡುತ್ತಿಲ್ಲವೇ?’ ಎಂದು ಹೇಳಿದಾಗ, ರೈತ ಮಿತ್ರರು ಕಿರುನಗೆಯೊಂದಿಗೆ ಸಮ್ಮತಿಯ ಮುದ್ರೆಯೊತ್ತಿದರು.

ಜೀವನ ನಿರ್ವಹಣೆಗೆ ಪ್ರತಿಯೊಬ್ಬರೂ ಒಂದೊಂದು ಕಾಯಕದಲ್ಲಿ ತೊಡಗಿಕೊಳ್ಳಬೇಕಾದುದು
ಅನಿವಾರ್ಯ. ಸಂಪಾದನೆ, ವಿದ್ಯಾರ್ಹತೆಯ ಕಾರಣಕ್ಕೆ ಕಾಯಕಗಳನ್ನು ಮೇಲು ಕೀಳು ಎಂದು ವಿಂಗಡಿಸುವುದು ಸಲ್ಲದು. ದೇಹವೆಂಬ ಬಂಡಿಗೆ ಎಲ್ಲಾ ಅಂಗಗಳು ಹೇಗೆ ಮುಖ್ಯವೊ ಹಾಗೇ ಸಮಾಜಕ್ಕೆ ಎಲ್ಲಾ ವೃತ್ತಿಗಳು, ಎಲ್ಲಾ ವ್ಯಕ್ತಿಗಳು ಮುಖ್ಯ.

ವೃತ್ತಿ ಗೌರವ, ವ್ಯಕ್ತಿ ಗೌರವದ ಬಗೆಗಿನ ಆದರ್ಶದ ಮಾತುಗಳು ರೆಕ್ಕೆ ಬಿಚ್ಚಿ ಆಗಸದಲ್ಲಿ ಹಾರಾಡುತ್ತಿರುವ, ಅಸಮಾನತೆಯೆಂಬ ವಾಸ್ತವವು ರೆಕ್ಕೆ ಕತ್ತರಿಸಿಕೊಂಡು ಬಿದ್ದಿರುವ ವೈರುಧ್ಯ ಸಮಾಜದಲ್ಲಿ ಇಲ್ಲವಾಗಬೇಕು. ಆದರ್ಶದ ಮಾತುಗಳು ವಾಸ್ತವದಲ್ಲಿ ನಡವಳಿಕೆಗಳಾಗಿ ಬದಲಾಗಬೇಕು. ಲಿಂಗ, ಜಾತಿ, ವರ್ಗ, ವೃತ್ತಿಗಳಿಂದ ವ್ಯಕ್ತಿಯ ಮೌಲ್ಯ ನಿರ್ಧಾರ ಮಾಡಬಾರದು ಎಂಬುದನ್ನು ಮನೆಯಲ್ಲಿ, ಶಾಲಾಕಾಲೇಜುಗಳಲ್ಲಿ ಮಕ್ಕಳಿಗೆ ತಿಳಿಸಿಕೊಡಬೇಕು. ಮಕ್ಕಳ ಆಸಕ್ತಿ ಮತ್ತು ಪ್ರತಿಭೆಗೆ ತಕ್ಕಂತಹ ವೃತ್ತಿಯನ್ನು ಆಯ್ದುಕೊಳ್ಳಲು ಪ್ರೋತ್ಸಾಹದ ಜೊತೆಗೆ ಮಾರ್ಗದರ್ಶನವನ್ನೂ ನೀಡಬೇಕಾದುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು.

–ಲೇಖಕ: ಕನ್ನಡ ಉಪನ್ಯಾಸಕ

ಸರ್ಕಾರಿ ಪದವಿಪೂರ್ವ ಕಾಲೇಜು, ಕೃಷ್ಣರಾಜಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.