1930ರಲ್ಲಿ ಪ್ರಕಟವಾದ ಕುವೆಂಪು ಅವರ ‘ಕೊಳಲು’ ಕವನ ಸಂಕಲನದಲ್ಲಿ ನಾಡಗೀತೆ ರಚನೆಯ ದಿನಾಂಕವನ್ನು 7.12.1928 ಎಂದು ಸೂಚಿಸಲಾಗಿದೆ. ಆದರೆ, ಆ ಕವಿತೆಯ ಆಶಯ 1924ರ ಸಮಯದ್ದು ಎಂಬುದು ಕುವೆಂಪು ಅವರ ಆತ್ಮಕಥೆಯಿಂದ ಸ್ಪಷ್ಟವಾಗುತ್ತದೆ. ಕೊಳಲು ಸಂಗ್ರಹದಲ್ಲಿ ಕವಿತೆಯ ಶೀರ್ಷಿಕೆ
‘ಜಯ ಹೇ ಕರ್ಣಾಟಕ ಮಾತೆ!’ ಎಂದಿದ್ದು, ಅದರಲ್ಲೆಲ್ಲೂ ಅದನ್ನು ನಾಡಗೀತೆ ಎಂದಾಗಲಿ, ರಾಷ್ಟ್ರಗೀತೆ ಎಂದಾಗಲಿ ಉಲ್ಲೇಖಿಸಿಲ್ಲ. ಆದರೆ, ತಮ್ಮ ಆತ್ಮಕಥೆ ‘ನೆನಪಿನ ದೋಣಿಯಲ್ಲಿ’ 1924–25ರ ಹಸ್ತಪ್ರತಿಯಿಂದ ಉಲ್ಲೇಖಿಸಿರುವ ‘ಕರ್ಣಾಟ ರಾಷ್ಟ್ರಗೀತೆ’ ಎಂಬ ಶೀರ್ಷಿಕೆಯ ಕವನಕ್ಕೆ ಕೊಟ್ಟಿರುವ ವಿವರಣೆಯಲ್ಲಿ ‘ಅದು
ನನ್ನ ‘ಜಯ ಹೇ ಕರ್ಣಾಟಕ ಮಾತೆ’ ಎಂಬ ನಾಡಗೀತೆಯ ಪ್ರಪಿತಾಮಹನೋ ಪ್ರಪ್ರಪಿತಾಮಹನೋ
ಆಗಿರಬೇಕು. ಠಾಕೂರರ ‘ಜನಗಣಮನ’ದಂತೆ ನಮ್ಮ ಕನ್ನಡ ನಾಡಿಗೂ ಒಂದು ರಾಷ್ಟ್ರಗೀತೆಯನ್ನು ನೀಡುವ ಪ್ರಯತ್ನದ ಭ್ರೂಣಸ್ಥಿತಿಯಂತಿದೆ ಅದು. ಅದರ ರಚನೆಯ ರೂಪಾಂಶ ನಾನು ಬೆಳೆದಂತೆಲ್ಲ ಬದಲಾವಣೆ ಹೊಂದುತ್ತಾ (ಭಾವ ಮತ್ತು ಭಾಷೆ ಎರಡರಲ್ಲಿಯೂ) ಕಡೆಗೆ ‘ಕೊಳಲು’ ಕವನ ಸಂಗ್ರಹ ಅಚ್ಚಾದಾಗ ಒಂದು ಸ್ತಿಮಿತಕ್ಕೆ ನಿಂತಿತ್ತು’ ಎಂದು ಬರೆದಿದ್ದಾರೆ.
ಇಲ್ಲಿ ಮುಖ್ಯವಾಗಿ ಮೂರು ವಿಷಯಗಳನ್ನು ಗಮನಿಸಬೇಕು. ಮೊದಲನೆಯದು, ಆ ಕವಿತೆಯ ಶೀರ್ಷಿಕೆ ‘ಕರ್ಣಾಟ ರಾಷ್ಟ್ರಗೀತೆ’ ಎಂದಿರುವುದು. 1925ರ ಸುಮಾರಿಗೆ, ಭಾರತ ಒಂದು ಗಣರಾಜ್ಯ
ವಾಗುತ್ತದೆ, ಭಾಷಾವಾರು ಪ್ರಾಂತ್ಯಗಳ ರಚನೆಯಾಗುತ್ತದೆ, ಕನ್ನಡ ನಾಡು ಏಕೀಕರಣ ಆಗಿ ಅದಕ್ಕೆ ‘ಕರ್ನಾಟಕ’ ಎಂಬ ಹೆಸರು ಬರುತ್ತದೆ ಎನ್ನುವ ಯಾವ ಕಲ್ಪನೆಗಳೂ ಇರಲಿಲ್ಲ. ಆದರೂ ಕರ್ನಾಟಕವನ್ನು ಒಂದು ರಾಷ್ಟ್ರವನ್ನಾಗಿ ಕಲ್ಪಿಸಿ, ಅದಕ್ಕೊಂದು ರಾಷ್ಟ್ರಗೀತೆಯನ್ನು ರಚಿಸಿರುವುದು ಗಮನಾರ್ಹ. ಬಹುಶಃ ಕವಿಯ ಮನಸ್ಸಿನಲ್ಲಿ ಭಾಷೆಯಾಧಾರಿತ ದೇಶಗಳ ಅಂದಿನ ಯುರೋಪ್ ಇದ್ದಿರಬಹುದು ಎನ್ನಿಸುತ್ತದೆ.
ಎರಡನೆಯದಾಗಿ, ‘ಕರ್ಣಾಟ ರಾಷ್ಟ್ರಗೀತೆ’ ಎಂಬ ಶೀರ್ಷಿಕೆ ಅದಕ್ಕಿದ್ದರೂ, ಅದರ ಐದೂ ಭಾಗಗಳಲ್ಲಿ ‘ಭಾರತ ಜನನಿಯ ತನುಜಾತೆ’ ಎಂಬ ಸಾಲು ಬಂದಿರುವುದು. ಕನ್ನಡ ನಾಡನ್ನು ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಒಪ್ಪಿಕೊಂಡು, ಭಾರತ ಮಾತೆಯ ಮಗಳು ಎಂದು ಕನ್ನಡ ನಾಡನ್ನು ಸ್ತುತಿಸಿರುವುದು ಮತ್ತು ಅದೇ ಆಶಯವನ್ನು ಕವಿತೆಯ ಅಂತಿಮ ಅವತರಣಿಕೆಯಲ್ಲಿ ಉಳಿಸಿಕೊಂಡಿರುವುದು ಗಮನಾರ್ಹ. ಬಹುಶಃ ‘ಕರ್ಣಾಟ ರಾಷ್ಟ್ರಗೀತೆ’ ಎಂಬ ಶೀರ್ಷಿಕೆಯಲ್ಲಿನ ರಾಷ್ಟ್ರ ಎಂಬ ಪದವು ದೇಶದ ಬದಲು ನಾಡನ್ನೇ ಸೂಚಿಸುತ್ತಿರಬಹುದು. ಆಗ ಭಾಷೆಯಾಧಾರಿತ ದೇಶಗಳ ಯುರೋಪ್ ಮಾದರಿಯನ್ನು ನಿರಾಕರಿಸಬಹುದಾಗಿದೆ.
ಮೂರನೆಯದಾಗಿ, ಮೊದಲಿನ ಕವಿತೆಯಲ್ಲಿನ ಹಲವಾರು ಸಾಲುಗಳು ಅಂತಿಮ ರೂಪದಲ್ಲಿಯೂ ಉಳಿದುಕೊಂಡಿರುವುದನ್ನು ಗಮನಿಸಿದರೆ, ಕವಿಯ ಆಶಯ ಬದಲಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮುಖ್ಯವಾಗಿ ‘ಭಾರತ ಜನನಿಯ ತನುಜಾತೆ’, ‘ಜಯ ಹೇ ಕರ್ಣಾಟಕ ಮಾತೆ!’, ‘ಜನನಿಯ ಜೋಗುಳ’, ‘ಕಪಿಲ ಪತಂಜಲ ಗೌತಮ(ಜಿನ)ನುತ’, ‘ಶಂಕರ ರಾಮಾನುಜ’, ‘ಕೃಷ್ಣ ಶರಾವತಿ (ವರ) ತುಂಗಾ’, ‘ಸರ್ವ ಜನಾಂಗದ ಶಾಂತಿ(ನಿಕೇತನ)ಯ ತೋಟ’, ‘ಗಾಯಕ ವೈಣಿಕ’ ಎಂಬಂತಹ ಪದಪುಂಜಗಳನ್ನು ಗಮನಿಸಬಹುದು. ಆದ್ದರಿಂದ, ರಚನೆಯ ರೂಪಾಂಶ, ಭಾವ, ಭಾಷೆ ಬದಲಾಗಿದ್ದರೂ ಮೂಲ ಆಶಯ ಮಾತ್ರ ಮೂಲದ್ದೇ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ, ಮೂಲದ ‘ಪಚ್ಚೆಯ ನವ ಕಂಠೀಮಾಲೆ’ಯಂತಹ ಉಕ್ತಿಗೆ ಬದಲಾಗಿ ‘ಹಸುರಿನ ಗಿರಿಗಳ ಸಾಲೆ ನಿನ್ನಯ ಕೊರಳಿನ ಮಾಲೆ’ ಎಂಬಂತಹ ಸಾಲುಗಳು ಬಂದಿರುವುದು ಅವರ ‘ಭಾವ’ ಬೆಳವಣಿಗೆಯ ಸಂಕೇತವಾಗಿದೆ.
‘ಭಾರತ ಜನನಿಯ ತನುಜಾತೆ’ ಮತ್ತು ‘ಸರ್ವ ಜನಾಂಗದ ಶಾಂತಿಯ ತೋಟ’ ಈ ನಾಡಗೀತೆಯ ಮೂಲ ಆಶಯಗಳೆಂಬುದು ಸ್ಪಷ್ಟ. ಅವರೇ ಒಂದು ಲೇಖನದಲ್ಲಿ ಸ್ಪಷ್ಟಪಡಿಸಿರುವಂತೆ, ಕನ್ನಡ ನಾಡಿನ ವಿಸ್ತೀರ್ಣವನ್ನು ಚದರ ಮೈಲಿಗಳಲ್ಲಿ ಅಳೆಯುವುದಕ್ಕಿಂತ ಚದರ ವರ್ಷಗಳಲ್ಲಿ ಅಳೆಯಬೇಕಾಗಿದೆ. ನಾಡು ಅಥವಾ ದೇಶ ಎಂದರೆ ಅದರ ಭೂಭಾಗ ಮಾತ್ರವಲ್ಲ, ಅದರ ಜನ-ಭಾಷೆ-ಸಂಸ್ಕೃತಿ ಎಲ್ಲವೂ ಸೇರುತ್ತವೆ. ಇವು ತಮ್ಮತನವನ್ನು ಉಳಿಸಿಕೊಂಡೂ ವಿಶ್ವಾತ್ಮಕವಾಗುವ ಆಶಯಗಳೆಂದರೂ ತಪ್ಪಾಗುವುದಿಲ್ಲ.
ಮುಂದೆ ಅವರೇ ಪ್ರತಿಪಾದಿಸಿದ ‘ವಿಶ್ವಮಾನವ ಸಂದೇಶ’ಕ್ಕೂ ಈ ಆಶಯಗಳು ಬೀಜಮಾತ್ರವಾಗಿವೆ ಎನ್ನಬಹುದು.
ವಿಶಾಲ ಜಗತ್ತಿಗೆ ಹೋಲಿಸಿದರೆ ಕರ್ನಾಟಕದ ವಿಸ್ತೀರ್ಣ ತುಂಬಾ ಚಿಕ್ಕದು. ಆದರೆ, ಕನ್ನಡಿಗರ ಕರ್ನಾಟಕ, ಅದನ್ನೊಳಗೊಂಡ ಭಾರತ, ಜಗತ್ತು ಮತ್ತು ಎಲ್ಲರೂ ನನ್ನಂತೆಯೇ ಎಂದು ಭಾವಿಸುವ, ತನ್ಮೂಲಕ ಇಡೀ ಜಗತ್ತನ್ನು ಶಾಂತಿಯ ತೋಟವಾಗಿರಲೆಂದು ಆಶಿಸುವ ಉದಾತ್ತ ಭಾವವನ್ನು ಇಲ್ಲಿ ಕಾಣಬಹುದು. ಇಂತಹ ಆಶಯದ ಬೇರೆ ಯಾವುದಾದರೂ ರಾಷ್ಟ್ರ(ನಾಡ)ಗೀತೆ ಇದ್ದರೆ, ತೌಲನಿಕವಾಗಿ ಅಧ್ಯಯನಕ್ಕೆ ಯೋಗ್ಯ ವಸ್ತುವಾಗುತ್ತದೆ.
ಅಂದಹಾಗೆ, ಈ ‘ಕರ್ಣಾಟ ರಾಷ್ಟ್ರಗೀತೆ’ಯನ್ನು ರಚಿಸಿದಾಗ ಕವಿಯ ವಯಸ್ಸು ಬರೀ 20 ವರ್ಷಗಳು! ಈಗ ನಾಡು ‘ಕರ್ನಾಟಕ’ ಎಂಬ ಹೆಸರು ಪಡೆದ ಸುವರ್ಣಬಮಹೋತ್ಸವದ ಆಚರಣೆಯಲ್ಲಿ ತೊಡಗಿದೆ. ಕವಿಯ
120ನೇ ಜನ್ಮದಿನೋತ್ಸವದ ಸಂದರ್ಭವೂ ಹೌದು. ಹಾಗೆಯೇ, ಅದು ನಾಡಗೀತೆಯ ಆಶಯದ
ಶತಮಾನೋತ್ಸವವೂ ಆಗಬೇಕಿದೆ. ಈ ದಿಸೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕಾರ್ಯೋನ್ಮುಖವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.