‘ಪ್ರೀತಿಯಿಲ್ಲದೆ ಏನನ್ನೂ ಮಾಡಲಾರೆ, ದ್ವೇಷವನ್ನು ಕೂಡ’ ಎಂದು ಕನ್ನಡಿಗರಿಗೆ ಸಾರಿದ ಚಂಪಾ ನಮ್ಮನ್ನು ಅಗಲಿದ್ದಾರೆ. ಹಾಗೆಯೇ, ಆಧುನಿಕ ಜಗತ್ತಿಗೆ ಅನ್ವಯಿಸುವಂತೆ ಪ್ರೀತಿಗೆ ಹೊಸ ವ್ಯಾಖ್ಯಾನ ನೀಡಿದ ಅಮೆರಿಕದ ಖ್ಯಾತ ಸ್ತ್ರೀವಾದಿ ಮತ್ತು ಸಾಂಸ್ಕೃತಿಕ ವಿಮರ್ಶಕರಾದ ಬೆಲ್ ಹುಕ್ಸ್ ಕೂಡ ಕಳೆದ ಡಿಸೆಂಬರ್ 15ರಂದು ನಿಧನರಾಗಿದ್ದಾರೆ.
ಬೆಲ್ ಹುಕ್ಸ್, ಸ್ತ್ರೀವಾದಿ ಚಿಂತನೆಯ ವಿವಿಧ ಆಯಾಮಗಳ ಹೂರಣವೆಂಬಂತೆ ಬರೆದಿರುವ ಮೂವತ್ತಕ್ಕೂ ಹೆಚ್ಚು ಗಮನಾರ್ಹ ಪುಸ್ತಕಗಳಲ್ಲಿ ವಿಶಿಷ್ಟವೆನಿಸುವಂತಹ ಕೃತಿ, ‘ಆಲ್ ಅಬೌಟ್ ಲವ್: ನ್ಯೂ ವಿಷನ್ಸ್’ (ಪ್ರೀತಿಯ ಕುರಿತಾದ ಹೊಸ ದೃಷ್ಟಿಕೋನಗಳು). ಈ ಸಂದರ್ಭದಲ್ಲಿ, ಅವರ ಪ್ರೀತಿಯ ವ್ಯಾಖ್ಯಾನಕ್ಕೆ ಮರುನೋಟ ಬೀರುವುದು ಸೂಕ್ತವೆನಿಸುತ್ತದೆ. ಅದು, ವರ್ತಮಾನ ಕಾಲಕ್ಕೆ ಅನ್ವಯಿಸುವಂತೆ, ಪ್ರೀತಿಯ ತತ್ವಶಾಸ್ತ್ರವನ್ನು ವಿಸ್ತೃತವಾಗಿ ಚರ್ಚಿಸುತ್ತದೆ. ‘ನಮ್ಮ ಸಮಾಜದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಭಾವಹೀನತೆ ಮತ್ತು ಪ್ರೀತಿಯ ಕೊರತೆಯನ್ನು ಕೊನೆಗಾಣಿಸುವ ಹಂಬಲದಿಂದ ಈ ಸಂಶೋಧನಾ ಗ್ರಂಥ ಬರೆದೆ’ ಎಂದು ಲೇಖಕರು ಹೇಳಿಕೊಂಡಿದ್ದಾರೆ.
ಇಲ್ಲಿ, ಲೇಖಕಿ, ಪುನಃ ಪ್ರೀತಿಗೆ ತೆರೆದುಕೊಳ್ಳುವುದು ಹಾಗೂ ಸ್ಪಂದಿಸುವುದು ಹೇಗೆ ಎನ್ನುವುದನ್ನು ಅತ್ಯಂತ ಸರಳವಾಗಿ ವಿವರಿಸುತ್ತಾರೆ. ಅವರ ಪ್ರಕಾರ, ಮನುಷ್ಯ ಸಂಬಂಧಗಳು ಗಟ್ಟಿಯಾಗಿ ಜೋಡಣೆಯಾಗುವುದು, ಪರಸ್ಪರ ಪ್ರೀತಿ, ಗೌರವ, ಸ್ಪಂದನೆ, ಬದ್ಧತೆ, ನಂಬಿಕೆ ಹಾಗೂ ಕಾಳಜಿಯ ತಳಹದಿಯ ಮೇಲೆ. ಹಾಗೆಯೇ, ಆಧುನಿಕ ಜಗತ್ತಿನಲ್ಲಿ ಪ್ರೀತಿಯ ಸಮಸ್ಯೆಗಳ ಮೂಲ ಬೇರುಗಳೆಂದರೆ, ಪ್ರಾಬಲ್ಯ, ನಿಯಂತ್ರಣ, ಅಹಂ, ಆಕ್ರಮಣಶೀಲತೆ ಹಾಗೂ ಸಿದ್ಧ ಮಾದರಿಯ ಸ್ತ್ರೀ-ಪುರುಷ ವಿಭಿನ್ನ ಪಾತ್ರ ವ್ಯಾಖ್ಯಾನಗಳು.
ಬೆಲ್ ಹುಕ್ಸ್ ಹೇಳಿದಂತೆ, ಅತಿಯಾದ ಸ್ವಮೋಹ ಮತ್ತು ಸ್ವಾರ್ಥ ಸಂಸ್ಕೃತಿಯಿಂದ ಬಿಡಿಸಿಕೊಂಡರೆ ಮಾತ್ರ, ಬೆಚ್ಚಗಿನ ಪ್ರೀತಿ ಸಿಗುವುದು ಸಾಧ್ಯ. ಸಾಮಾನ್ಯವಾಗಿ, ಸಂಬಂಧಗಳಲ್ಲಿ ನೋವು ಕಾಣಿಸಿಕೊಂಡಾಗ ನಮ್ಮ ಮೊದಲ ಪ್ರತಿಕ್ರಿಯೆ, ಬಂಧಗಳನ್ನು ಕಡಿದುಕೊಳ್ಳುವುದರಲ್ಲಿ ಇರುತ್ತದೆಯೇ ವಿನಾ ಬದ್ಧತೆಯನ್ನು ಕಾಪಾಡಿಕೊಳ್ಳುವುದರಲ್ಲಿ ಅಲ್ಲ. ಯಾಕೆಂದರೆ, ಪ್ರೀತಿಯನ್ನು ಎಲ್ಲರೂ ಬಯಸುತ್ತಾರೆ, ಆದರೆ, ನೀಡಲು ಸಿದ್ಧರಿರುವುದಿಲ್ಲ. ಅಪ್ಪಟ ಪ್ರೀತಿಯು ಮನುಷ್ಯನನ್ನು ಉದ್ಧರಿಸುವ ಶಕ್ತಿ ಹೊಂದಿದೆ, ಆದರೆ ನಾವು ಅದನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ಧರಾಗಿದ್ದರೆ ಮಾತ್ರ.
ಸಾಮಾನ್ಯವಾಗಿ ನಾವು ಗಂಡು ಮಕ್ಕಳಿಗೆ, ಸಹಜವಾಗಿ ಭಾವನೆಗಳನ್ನು ವ್ಯಕ್ತಪಡಿಸದೆ ಒಳಗೆ ಅದುಮಿಟ್ಟುಕೊಳ್ಳಲು ಕಲಿಸುತ್ತೇವೆ. ಇದನ್ನು ಪುರುಷತ್ವದ ಪ್ರತೀಕವೆನ್ನುತ್ತೇವೆ. ಅದೇ ರೀತಿ, ಹೆಣ್ಣು ಮಕ್ಕಳಿಗೂ ಸಹಜವಾಗಿರಲು ಬಿಡದೆ, ಅವರದಲ್ಲದ ಆದರೆ ಎಲ್ಲರನ್ನೂ ಆಕರ್ಷಿಸುವ ಅಥವಾ ಖುಷಿಗೊಳಿಸುವ ವ್ಯಕ್ತಿತ್ವವನ್ನು ಹೊಂದುವಂತೆ ಸಿದ್ಧಗೊಳಿಸುತ್ತೇವೆ. ಹೀಗೆ ಅಸಹಜವಾಗಿ ಬೆಳೆದ ಹೆಣ್ಣು-ಗಂಡು ಪರಸ್ಪರ ಮುಖಾಮುಖಿಯಾದಾಗ, ಸಾಮಾಜಿಕ ನಿರೀಕ್ಷೆಗಳಿಗೆ ಅನುಗುಣವಾಗಿ ಸುಳ್ಳುಗಳ ಮೇಲೆಯೇ ಸಂಬಂಧ ಬೆಳೆಸುತ್ತಾರೆ. ಈ ಸುಳ್ಳುಗಳು ಮನಸ್ಸಿಗೆ ಮುದ ನೀಡಬಹುದು, ಆದರೆ, ನಿಜವಾದ ಪ್ರೀತಿ ನಿಂತಿರುವುದು ಸತ್ಯವೆಂಬ ಮೌಲ್ಯದ ಮೇಲೆ.
ವಿಸ್ಮಯವೆಂದರೆ, ಅನೇಕರು ತಮ್ಮ ಒಂಟಿತನದಿಂದ ತಪ್ಪಿಸಿಕೊಳ್ಳಲು ಪ್ರೀತಿಯ ಮೊರೆ ಹೋಗುತ್ತಾರೆ. ಆದರೆ, ಒಂಟಿಯಾಗಿರುವುದನ್ನು ಸಿದ್ಧಿಸುವುದು ನಾವು ಸ್ವತಃ ಕರಗತ ಮಾಡಿಕೊಳ್ಳಬೇಕಾದ ಕಲೆಯೇ ವಿನಾ ಅದಕ್ಕಾಗಿ ಇನ್ನೊಬ್ಬ ವ್ಯಕ್ತಿಗೆ ಜೋತು ಬೀಳುವುದೆಂದರೆ, ಅವರನ್ನು ಸಾಧನವಾಗಿ ಬಳಸಿಕೊಂಡಂತೆಯೇ ಸರಿ. ಅಲ್ಲಿ ಸಹಜ ಪ್ರೀತಿ ಅರಳುವುದು ದುರ್ಲಭ.
ಹೀಗೆ, ಪ್ರೀತಿಯ ಪಯಣದಲ್ಲಿ ಅನಿಶ್ಚಿತತೆಯಿದೆ ಎನ್ನುವುದನ್ನು ಒಪ್ಪಿಕೊಂಡು, ಅಲ್ಲಿ ಸುರಕ್ಷತೆಯನ್ನು ಹುಡುಕುವುದರ ಬದಲಾಗಿ ನಷ್ಟ, ನೋವು ಹಾಗೂ ಅಪಾಯವನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗುವುದನ್ನು ಅಭ್ಯಸಿಸಬೇಕು. ಯಾಕೆಂದರೆ, ಈ ದಾರಿಯಲ್ಲಿ ಹಲವಾರು ಸಂಗತಿಗಳು ನಮ್ಮ ನಿಯಂತ್ರಣ ಮೀರಿ ನಡೆಯಬಹುದು. ಅದರಂತೆಯೇ, ನಿಜವಾದ ಪ್ರೀತಿ ಅಸ್ತಿತ್ವದಲ್ಲಿಲ್ಲ ಎನ್ನುವ ಸಿನಿಕರಿಗೆ ಪ್ರೀತಿಯ ಸತ್ಯದರ್ಶನ ಆಗುವುದಿಲ್ಲ.
ಆಧುನಿಕ ಜಗತ್ತಿನ ದೊಡ್ಡ ಪಿಡುಗೆಂದರೆ, ಜನರು ಪರಸ್ಪರ ನಂಬಿಕೆ ಕಳೆದುಕೊಂಡು, ಸಂಶಯದಿಂದಲೇ ವ್ಯವಹರಿಸುತ್ತಿರುವುದು. ಹಾಗಾಗಿ, ನಮ್ಮ ಪ್ರೀತಿಯ ಭಾಷೆ ಬದಲಾಗಬೇಕಾಗಿದೆ. ನಾವು ನಮ್ಮ ಆಲೋ ಚನೆಗಳು ಮತ್ತು ಭಾವನೆಗಳೊಂದಿಗೆ ಸ್ವಲ್ಪ ಹೊತ್ತು ಏಕಾಂಗಿಯಾಗಿ ಸಮಯ ಕಳೆದರೆ, ನಮ್ಮನ್ನು ಅರಿತುಕೊಳ್ಳುವುದು ಸುಲಭ. ಅಲ್ಲಿ, ಪ್ರೀತಿ ಸಹಜವಾಗಿ ಅರಳುತ್ತದೆ. ಪ್ರೀತಿಯ ಮೊದಲ ಮೆಟ್ಟಿಲು ಪ್ರಾಮಾಣಿಕತೆಯಾದರೆ, ಎರಡನೇ ಮೆಟ್ಟಿಲು, ಪರಸ್ಪರ ನಿರಂತರ ಸಂವಹನ. ಸಾಮಾನ್ಯವಾಗಿ ನಾವು ಪ್ರೀತಿಯನ್ನು ನಾಮಪದವಾಗಿ ಉಪಯೋಗಿಸುತ್ತೇವೆ. ಆದರೆ ಅದನ್ನು ಕ್ರಿಯಾಪದವಾಗಿ ಬಳಸಿದಲ್ಲಿ, ಪ್ರೀತಿಸುವುದು ಸುಲಭವಾಗುತ್ತದೆ. ಯಾಕೆಂದರೆ, ಪ್ರೀತಿಯೆಂದರೆ ಕೇವಲ ಭಾವನೆಯಲ್ಲ, ಅದಕ್ಕೆ ಪೂರಕವಾದ ಕಾಯಕವೂ ಮುಖ್ಯ. ಹಾಗಾಗಿ, ಪ್ರೀತಿಸುವುದನ್ನು ಕಲಿಯೋಣ, ಅದಕ್ಕೆ ಮರಳಿ ತೆರೆದುಕೊಳ್ಳೋಣ. ಪ್ರೀತಿಯಿಂದ ಗೆಲ್ಲಲಾಗದ್ದು, ಬೇರೆ ಯಾವುದರಿಂದಲೂ ಗೆಲ್ಲಲು ಅಸಾಧ್ಯ.
ಗಾಂಧಿ ಪ್ರಾಯೋಗಿಕವಾಗಿ ಕಂಡುಕೊಂಡಂತೆ, ‘ಏನೇ ಮಾಡಿದರೂ ಪ್ರೀತಿಯಿಂದ ಮಾಡಿ, ಇಲ್ಲವಾದಲ್ಲಿ, ಮಾಡಲು ಹೋಗಲೇಬೇಡಿ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.