ADVERTISEMENT

ಸಂಗತ | ಇಮೋಜಿ ಕೈಗೆ ಜುಟ್ಟು ಕೊಟ್ಟೀರಿ

ಇಮೋಜಿ ಭಾಷೆಯು ನಮ್ಮೆಲ್ಲ ಭಾವನೆಗಳು ಅಥವಾ ಸಂದೇಶಗಳನ್ನು ಸಮಗ್ರವಾಗಿ ಪ್ರತಿನಿಧಿಸುತ್ತದೆ ಎಂಬ ಹೆಗ್ಗಳಿಕೆಯ ಜೊತೆಗೆ ಕೆಲವು ಸಮಸ್ಯೆಗಳನ್ನೂ ಅದು ನಮ್ಮ ಕಣ್ಣ ಮುಂದೆ ತರುತ್ತದೆ

ಶಿವಲಿಂಗಸ್ವಾಮಿ ಎಚ್.ಕೆ.
Published 22 ಆಗಸ್ಟ್ 2024, 23:37 IST
Last Updated 22 ಆಗಸ್ಟ್ 2024, 23:37 IST
   

ನವನವೀನ ಆವಿಷ್ಕಾರಗಳ ಫಲವಾಗಿ ಇಂದು ಜನಸಂಪರ್ಕ ಹಿಂದಿಗಿಂತಲೂ ಸುಲಭವಾಗಿದೆ ಮತ್ತು ಆರ್ಥಿಕವಾಗಿಯೂ ಹೆಚ್ಚು ದುಂದು ಎನ್ನಿಸುವುದಿಲ್ಲ. ಹೀಗಾಗಿ, ಸಂವಹನಕ್ಕಾಗಿ ಜನ ಈಗ ಹಿಂದಿನಂತೆ ಇನ್‌ಲ್ಯಾಂಡ್ ಲೆಟರ್, ಟೆಲಿಗ್ರಾಮ್‌ನಂತಹವುಗಳಿಗೆ ಮೊರೆ ಹೋಗಬೇಕಾದ ಅವಶ್ಯಕತೆ ಇಲ್ಲ. ಬದಲಾಗಿ, ಸಮಕಾಲೀನ ಜಗತ್ತಿನಲ್ಲಿ ಹೆಚ್ಚು ಪ್ರಸ್ತುತವಾಗುತ್ತಿರು ವುದು ಡಿಜಿಟಲ್ ಸಂವಹನ. ಅಂದರೆ ಪೇಪರ್ ಮತ್ತು ಪೆನ್‌ ಬಳಕೆಯ ಬದಲಾಗಿ ಇ–ಮೇಲ್, ಎಸ್‌ಎಂಎಸ್‌, ವಾಟ್ಸ್‌ಆ್ಯಪ್‌ನಂತಹ ಮಾಧ್ಯಮಗಳ ಮುಖೇನ ಕ್ಷಣಾರ್ಧದಲ್ಲಿ ನಾವು ಯಾರೊಂದಿಗೆ ಬೇಕಾದರೂ ಸಂಪರ್ಕ ಸಾಧಿಸಬಹುದು. ಮುಖ್ಯವಾಗಿ, ಡಿಜಿಟಲ್ ಸಂವಹನದಲ್ಲಿ ಭಾಷಾ ಪ್ರೌಢಿಮೆಗಿಂತ ವಿಭಿನ್ನವಾದ ಸಂವಹನ ಮಾದರಿಗಳ ಬಳಕೆ ಕುರಿತು ತಿಳಿವಳಿಕೆ ಇರಬೇಕು. ತಂತ್ರಜ್ಞಾನದ ಈ ಭಾಷೆಗೆ ಇಮೋಜಿ ಭಾಷೆ ಎಂದು ಕರೆಯಬಹುದು.

ಮೊಬೈಲ್‌ ಫೋನ್‌ ಬಳಕೆಗೆ ಬಂದಾಗ ಅದರೊಂದಿಗೆ ಇದ್ದ ಪ್ರಮುಖವಾದ ಸೌಕರ್ಯವೆಂದರೆ ಎಸ್‌ಎಂಎಸ್‌ (ಶಾರ್ಟ್‌ ಮೆಸೇಜ್‌ ಸರ್ವಿಸ್‌). ಇದು ಕೆಲವೊಮ್ಮೆ ಫೋನ್‌ ಮಾಡುವುದು ಅನವಶ್ಯಕ ಅನ್ನಿಸಿದಾಗ ತುರ್ತು ಸಂದೇಶಗಳನ್ನು ಕಳಿಸಲು ಲಭ್ಯವಿದ್ದ ಮತ್ತು ಹೆಚ್ಚು ಖರ್ಚಿಲ್ಲದ ಅತ್ಯಂತ ಸುಲಭವಾದ ಪರ್ಯಾಯ ಮಾರ್ಗವಾಗಿತ್ತು. ಈ ಸೌಕರ್ಯವು ಬಳಕೆದಾರರಿಗೆ ಸಂವಹನ ಸುಲಭವಾಗುವಂತೆ ಮಾಡಿದ್ದರ ಜೊತೆಗೇ ಅವರನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಅಂದರೆ, ಇದರ ಹೆಸರೇ ಎಸ್‌ಎಂಎಸ್‌ ಎಂದಿರುವಾಗ, ಪೂರ್ಣಪ್ರಮಾಣದ ವಾಕ್ಯ ರಚನೆಗೆ ವಿರಾಮ ಹೇಳುವ ಅನಿವಾರ್ಯವನ್ನು ಅದು ಹುಟ್ಟಿಸುತ್ತದೆ. ಇದರಿಂದಾಗಿ ವಾಕ್ಯಗಳನ್ನು ಕೆಲವು ಪದಗಳಿಗೆ ಸೀಮಿತಗೊಳಿಸುವ ಅಭ್ಯಾಸ ಶುರುವಾಯಿತು. ನಂತರ ಪದಗಳನ್ನು ಸಂಕ್ಷೇಪಗೊಳಿಸುವುದು ಆರಂಭವಾಗಿ, ಕ್ರಮೇಣ ವಾಕ್ಯಗಳು ಮತ್ತು ಪದಗಳಿಗೆ ಬದಲಿ ವ್ಯವಸ್ಥೆಯಾಗಿ ಇಮೋಜಿಗಳು ಬಳಕೆಗೆ ಬಂದವು. ಆನಂತರ ಎಸ್‌ಎಂಎಸ್‌ ಸೌಕರ್ಯವು ತನ್ನದೇ ವ್ಯಾಕರಣವನ್ನು ಸೃಷ್ಟಿಸಿಕೊಂಡಿತು. ಅದನ್ನು ಅನಿವಾರ್ಯಗೊಳಿಸಿತು. ಇದೇ ಇಂದಿನ ಡಿಜಿಟಲ್ ಸಾಕ್ಷರತೆ.

ಈ ಇಮೋಜಿ ಭಾಷೆ ನಮ್ಮೆಲ್ಲ ಭಾವನೆಗಳು ಅಥವಾ ಸಂದೇಶಗಳನ್ನು ಸಮಗ್ರವಾಗಿ ಪ್ರತಿನಿಧಿಸುತ್ತದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಮಾಧಾನದ ಬೆನ್ನಲ್ಲಿಯೇ ಕೆಲವು ಸಮಸ್ಯೆಗಳನ್ನೂ ಅದು ನಮ್ಮ ಕಣ್ಣ ಮುಂದೆ ತರುತ್ತದೆ. ನವಯುಗದಲ್ಲಿ ನಮ್ಮ ಅಸ್ತಿತ್ವ ಕಾಪಾಡಿಕೊಳ್ಳುವ ಸಲುವಾಗಿ ಹಳೆಯ ರೂಢಿಗಳನ್ನು ಒಂದೊಂದಾಗಿಯೇ ಬದಿಗೊತ್ತಿ, ಹೊಸ ಬದಲಿ ವ್ಯವಸ್ಥೆಗಳನ್ನು ಒಪ್ಪಿಕೊಂಡು ಕಲಿಯತೊಡಗುತ್ತೇವೆ. ಈ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಡಿಜಿಟಲ್ ಉಪಕರಣಗಳ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವಲ್ಲಿ ಪ್ರವೀಣರಾಗುತ್ತಿದ್ದಾರೆ ಮತ್ತು ಇದು ಅನಿವಾರ್ಯ ಎಂದೂ ಅರಿತಿದ್ದಾರೆ. ಹೀಗೆ ನಮ್ಮ ನಾಗರಿಕ ಸಮಾಜದ ಸಂವಹನ ಮಾರ್ಗಗಳು ನವೀನ ರೀತಿಯಲ್ಲಿ ವಿಕಸನಗೊಂಡಂತೆಲ್ಲ, ಡಿಜಿಟಲ್ ಸಾಕ್ಷರತೆ ನಮ್ಮನ್ನು ಸಬಲೀಕರಿಸಿದೆ ಎಂಬ ಭ್ರಮೆ ನಮ್ಮನ್ನು ಆವರಿಸುತ್ತದೆ.

ADVERTISEMENT

ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರ ಸಾಕ್ಷರತೆಯು ಪರೀಕ್ಷೆಗೆ ಒಳಪಡುವುದು, ಯಾವ ಯಾವ ಐಕಾನ್‌ಗಳು ಅತ್ಯಂತ ಸಂಕೀರ್ಣವಾದ ಭಾವನೆಗಳು ಮತ್ತು ಆಲೋಚನೆಗಳನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಆಯ್ಕೆ ಮಾಡಿಕೊಳ್ಳುವಾಗ. ಇಂತಹ ಪರಿಕರಗಳು ದೈನಂದಿನ ನಮ್ಮ ವೈಯಕ್ತಿಕ ಸಂವಹನಗಳ ಜೊತೆಗೆ ವೃತ್ತಿಪರವಾಗಿ ಅದರಲ್ಲೂ ಅಕಡೆಮಿಕ್‌ ವಲಯದಲ್ಲಿ ವ್ಯಾಪಿಸಿದರೆ ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಏಕೆಂದರೆ ನಾವು ಸಂವಹನ ಮಾಡುವ ವಿಧಾನವು ಸಾಂಪ್ರದಾಯಿಕ ಪಠ್ಯದಿಂದ ಹೆಚ್ಚು ದೃಶ್ಯ ರೂಪದ ಅಥವಾ ಇಮೋಜಿಯ ಅಭಿವ್ಯಕ್ತಿಗೆ ತೀವ್ರವಾಗಿ ಬದಲಾದರೆ, ವಿದ್ಯಾರ್ಥಿಗಳು ಅದನ್ನೇ ಸಾರ್ವತ್ರಿಕವಾಗಿ ಸ್ವೀಕಾರಾರ್ಹ ಭಾಷೆ ಎಂದು ಪರಿಭಾವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ, ನಮ್ಮ ಸಂವಹನ, ಸಂಸ್ಕೃತಿ ಮತ್ತು ಭಾಷೆಗಳು ಸಂಪೂರ್ಣವಾಗಿ ಇಮೋಜಿಗಳಾಗುವುದು ಆತಂಕಕಾರಿ ವಿಷಯ.  

ಡಿಜಿಟಲ್ ಸಂವಹನದ ವ್ಯಾಪಕ ಬಳಕೆಯು ವಿದ್ಯಾರ್ಥಿಗಳ ಭಾಷಾ ಅಭಿವೃದ್ಧಿಗೆ ಹಾನಿ ಉಂಟು ಮಾಡುವುದು ಖಂಡಿತ. ಸೂಕ್ಷ್ಮ ಸಂವಹನಕಾರರು ಮತ್ತು ಚಿಂತಕರ ಪೀಳಿಗೆಯನ್ನು ಬೆಳೆಸಲು ಸಮತೋಲನದ ದೃಷ್ಟಿಕೋನವನ್ನು ಉತ್ತೇಜಿಸುವುದು ಅತ್ಯಂತ ಮುಖ್ಯ. ಅಂದರೆ, ಪಾರಂಪರಿಕ ಭಾಷಾ ಕೌಶಲಗಳ ಮಹತ್ವವನ್ನು ಇಮೋಜಿಗಳು ಮತ್ತು ಎಸ್‌ಎಂಎಸ್‌ಗಳ ಮಟ್ಟಕ್ಕೆ ಇಳಿಸದೆ, ವಿದ್ಯಾರ್ಥಿಗಳು ಪರಿಪೂರ್ಣ ಭಾಷಾ ಪ್ರಭುತ್ವ ಹೊಂದಲು ಬೇಕಿರುವ ಪರಿಸ್ಥಿತಿಯನ್ನು ಡಿಜಿಟಲ್ ಸಂವಹನದ ಜೊತೆಗೇ ನಿರ್ಮಿಸಬೇಕಿರುವುದು ಇಂದಿನ ಬಹುದೊಡ್ಡ ಸವಾಲು.

ನಮ್ಮೆಲ್ಲ ಆಲೋಚನೆಗಳು ಹಾಗೂ ಭಾವನೆಗಳು ಪ್ರತಿ ಹಂತದಲ್ಲಿಯೂ ಬರೀ ಇಮೋಜಿಗಳಾಗಿ ಅಥವಾ ದೃಶ್ಯರೂಪಕಗಳಾಗಿ ಮಾರ್ಪಾಡಾಗುವುದೇ ರೂಢಿ ಯಾಗಿಬಿಟ್ಟರೆ, ಭಾಷೆಯ ಸಮೃದ್ಧಿ, ಪದಸಂಪತ್ತು ಮತ್ತು ಸುದೀರ್ಘ ವಾಕ್ಯರಚನೆಯನ್ನು ವಿದ್ಯಾರ್ಥಿಗಳು ಕಲಿಯುವುದೇ ದುಸ್ತರವಾಗುತ್ತದೆ. ಪದಗಳನ್ನು ಡಿಕೋಡ್ ಮಾಡುವುದು, ಸಂದರ್ಭವನ್ನು ಅರ್ಥ ಮಾಡಿಕೊಳ್ಳುವುದು, ಉಪಪಠ್ಯವನ್ನು ವ್ಯಾಖ್ಯಾನಿಸುವುದು, ಸಂಕೀರ್ಣ ಪಠ್ಯಗಳನ್ನು ಅರ್ಥಮಾಡಿಕೊಳ್ಳು ವುದು ಮತ್ತು ವಿಶ್ಲೇಷಿಸುವ ಸಾಮರ್ಥ್ಯವನ್ನು ಇಮೋಜಿ ಭಾಷೆ ಖಂಡಿತ ಕಡಿಮೆ ಮಾಡುತ್ತದೆ. ಈ ಕುರಿತು ಎಚ್ಚರ ವಹಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.