ಮಕ್ಕಳಲ್ಲಿ ಕನಸುಗಳನ್ನು ತುಂಬಬೇಕು, ಅವರ ಕನಸುಗಳಿಗೆ ಬಣ್ಣ ಹಚ್ಚಬೇಕು ಎಂಬ ಮಾತುಗಳನ್ನು ಅನೇಕ ಸಂದರ್ಭಗಳಲ್ಲಿ ನಾವು ಉಲ್ಲೇಖಿಸುತ್ತೇವೆ.
ಮಕ್ಕಳಿಗೆ ಎಳವೆಯಲ್ಲೇ ‘ನೀವೇನಾಗಬೇಕೆಂದು ಬಯಸುವಿರಿ?’, ‘ನಿಮ್ಮ ಜೀವನದ ಗುರಿ ಏನು?’, ‘ಯಾವ ವೃತ್ತಿ ಅಂದರೆ ಇಷ್ಟ?’ ಎಂಬಂಥ ಪ್ರಶ್ನೆಗಳನ್ನು ಕೇಳುತ್ತಾ ಅವರನ್ನು ಸಂವಾದದಲ್ಲಿ ತೊಡಗಿಸಿಕೊಳ್ಳುವುದು ಹಾಗೂ ವಿವಿಧ ವೃತ್ತಿಗಳು ಮತ್ತು ಅವುಗಳಿಗೆ ಅಗತ್ಯವಾದ ಶೈಕ್ಷಣಿಕ ಪದವಿಗಳ ಕುರಿತು ಪರಿಚಯ ಮಾಡಿಸುವುದು ಮಕ್ಕಳಲ್ಲಿ ಕನಸುಗಳನ್ನು ತುಂಬುವ ಪ್ರಮುಖ ವಿಧಾನವಾಗಿದೆ.
ಆರು, ಏಳನೇ ತರಗತಿಯಲ್ಲಿದ್ದಾಗಲೇ ‘ನಾನೇನಾಗಬೇಕು?’ ಎಂಬ ಆಲೋಚನೆಯ ಬೀಜವನ್ನು ಮಕ್ಕಳ ತಲೆಯಲ್ಲಿ ಹಾಕಿ, ಮಕ್ಕಳೊಂದಿಗೆ ಶಿಕ್ಷಕರು ಸಂವಾದ ಮಾಡುತ್ತಾ ಅವರಲ್ಲಿ ಉತ್ಸಾಹ, ಪ್ರೇರಣೆ ತುಂಬುತ್ತಿದ್ದಲ್ಲಿ, ಹತ್ತು, ಹನ್ನೆರಡನೇ ತರಗತಿಯ ವೇಳೆಗೆ ಈ ಬೀಜವು ಗಿಡ, ಮರವಾಗಿ ಬೆಳೆಯತೊಡಗುತ್ತದೆ. ಚಿಕ್ಕವರಿದ್ದಾಗ ಮಕ್ಕಳು ಹಾಕಿಕೊಳ್ಳುವ ಗುರಿಗಳು ದೊಡ್ಡವರಾದ ಮೇಲೆ ಬದಲಾಗಲೂಬಹುದು. ಆದರೆ ಮಕ್ಕಳ ಬೆಳವಣಿಗೆಯ ಹಾದಿಯಲ್ಲಿ ಸಿಗುವ ಅನುಭವಗಳು ಹಾಗೂ ದೊರೆಯುವ ಮಾಹಿತಿ, ಪ್ರೇರಣೆಗಳು ಅವರು ತಮ್ಮ ಭವಿಷ್ಯದ ಹಾದಿಯನ್ನು ಕಂಡುಕೊಳ್ಳುವಷ್ಟು ಸಮರ್ಥರನ್ನಾಗಿ ಮಾಡುತ್ತವೆ.
ತಮಗಿರುವ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಪೂರಕವಾದ ಕೌಶಲ ಅಥವಾ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡು ಮುಂದುವರಿದಲ್ಲಿ ಅವರು ಆನಂದದಿಂದ ಕೆಲಸ ಮಾಡುತ್ತಾ ಹೋಗುತ್ತಾರೆ.
ಮಕ್ಕಳು ತಮ್ಮ ನೈಜ ಸಾಮರ್ಥ್ಯ ಹಾಗೂ ಕೌಶಲಗಳನ್ನು ಅರಿತುಕೊಳ್ಳಲು ಸೂಕ್ತ ಅವಕಾಶಗಳನ್ನು ಶಾಲೆಗಳು ಒದಗಿಸಬೇಕು. ಈ ದಿಸೆಯಲ್ಲಿ ಶಿಕ್ಷಕರು ಸ್ವಪ್ರೇರಿತರಾಗಿ ಕಾರ್ಯನಿರ್ವಹಿಸಬೇಕು. ಆದರೆ ಈ ಕುರಿತ ಮಾಹಿತಿ, ಆಸಕ್ತಿ, ತಜ್ಞತೆ, ಪ್ರೇರಣೆ ಎಲ್ಲಾ ಶಿಕ್ಷಕರಿಗೆ ಇರುವುದಿಲ್ಲ. ಅದನ್ನು ಅವರಿಗೆ ನೀಡಬೇಕು. ಇದಕ್ಕಾಗಿ ಸೂಕ್ತ ತಯಾರಿ, ಯೋಜನೆಯ ಅವಶ್ಯಕತೆ ಇದೆ.
ಕೌಶಲ ಮತ್ತು ಉದ್ಯಮಶೀಲತೆಗೆ ಸಂಬಂಧಿಸಿದಂತೆ ಕಾರ್ಯಪಡೆಯು ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಸಿದ್ಧಪಡಿಸಿದ ವರದಿಯಲ್ಲಿ ಸ್ಪಷ್ಟವಾದ ಶಿಫಾರಸುಗಳನ್ನು ಮಾಡಲಾಗಿದೆ. ದೇಶದ ಜನಸಂಖ್ಯೆಯ ಶೇ 55ರಷ್ಟು ಮಂದಿ 20ರಿಂದ 59ರ ವಯೋಮಾನದವರಿದ್ದು,
ದುಡಿಯುವ ವರ್ಗಕ್ಕೆ ಸೇರಿದವರಾಗಿದ್ದಾರೆ. ಈ ವಯೋಮಾನದ ಜನರು ಅಗತ್ಯವಾದ ಕೌಶಲಗಳನ್ನು ಕರಗತ ಮಾಡಿಕೊಂಡು ಸೂಕ್ತವಾದ ಉದ್ಯೋಗಗಳಲ್ಲಿ ನಿರತರಾದಲ್ಲಿ, ದೇಶದ ಆರ್ಥಿಕ ಬೆಳವಣಿಗೆಗೆ ಪುಷ್ಟಿ ದೊರೆಯುತ್ತದೆ. ರಾಜ್ಯದಲ್ಲಿ 2030ರೊಳಗೆ ಕೌಶಲ ತರಬೇತಿ ಹೊಂದಬೇಕಾದ 35 ವಯೋಮಾನದೊಳಗಿನ ಯುವಕ– ಯುವತಿಯರ ಸಂಖ್ಯೆ 1.88 ಕೋಟಿ ಎಂದು ಕಾರ್ಯಪಡೆ ಅಂದಾಜಿಸಿದೆ.
ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಗತ್ಯವಾದ ಡಿಜಿಟಲ್ ಕೌಶಲ ಮತ್ತು ಉದ್ಯಮಶೀಲತೆಯ ಮನೋಭಾವ ಬೆಳೆಸಲು ಶಿಕ್ಷಣ ಇಲಾಖೆಯ ಡಿ.ಎಸ್.ಇ.ಆರ್.ಟಿ.ಯು ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ 9ರಿಂದ 12ನೇ ತರಗತಿಯ ವಿದ್ಯಾರ್ಥಿ
ಗಳಿಗೆ ಉದ್ಯಮಶೀಲ ಮನೋಭಾವ ಬೆಳೆಸುವ ಕುರಿತಾದ ಪಠ್ಯಕ್ರಮವನ್ನು ರೂಪಿಸಿ, ವಾರಕ್ಕೆ ಒಂದು ಅವಧಿಯಲ್ಲಿ ಕಡ್ಡಾಯವಾಗಿ ಕಲಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ದೆಹಲಿಯ ಸರ್ಕಾರಿ ಶಾಲೆಗಳಲ್ಲಿ 2019ರಿಂದ ಜಾರಿಯಲ್ಲಿರುವ ‘ಬ್ಯುಸಿನೆಸ್ ಬ್ಲಾಸ್ಟರ್ಸ್’ ಕಾರ್ಯಕ್ರಮದ ಮಾದರಿಯನ್ನು ಅಳವಡಿಸಿಕೊಳ್ಳಲು ಆಲೋಚಿಸಲಾಗಿದೆ.
ರಾಜ್ಯದ ಐಟಿಐಗಳಿಂದ ವಿವಿಧ ವೃತ್ತಿಗಳಿಗೆ ಸಂಬಂಧಿಸಿದಂತೆ ವಾರ್ಷಿಕ ಸುಮಾರು 70,000 ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಿದ್ದು, ಇವರು ಸಣ್ಣ ಉದ್ದಿಮೆದಾರರಾಗಿ ಮಾರ್ಪಡಲು ಅಗತ್ಯವಾದ ಪಠ್ಯಕ್ರಮವನ್ನು ಅಳವಡಿಸಲು ಮುಂದಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಾಜದಲ್ಲಿರುವ ವಿವಿಧ ವೃತ್ತಿಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿ, ಮಾರ್ಗದರ್ಶನ ಮಾಡಲು ಪ್ರತೀ ಶಾಲೆ, ಕಾಲೇಜಿನಲ್ಲಿ ಒಂದು ಘಟಕ ತೆರೆದು, ಆಸಕ್ತ ಶಿಕ್ಷಕರನ್ನು ಈ ದಿಸೆಯಲ್ಲಿ ಸಜ್ಜುಗೊಳಿಸುವ ಚಿಂತನೆ ಇದೆ. ಪ್ರತೀ ವಿದ್ಯಾರ್ಥಿಗೆ ಅಗತ್ಯವಾಗುವ ಕೌಶಲಗಳು, ಕಲಿಕೆ ಮತ್ತು ಅಭಿವೃದ್ಧಿಯ ಪರ್ಯಾಯಗಳು ಹಾಗೂ ಕೈಗೊಳ್ಳಬಹುದಾದ ವೃತ್ತಿ ಅವಕಾಶಗಳಂತಹ ವಿವರಗಳನ್ನು ಹೊಂದಿರುವ ವೃತ್ತಿ ವರದಿಯ ಕಾರ್ಡ್ ಅನ್ನು ಅಭಿವೃದ್ಧಿಪಡಿಸಿ, ಉಪಯೋಗಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ.
ಕಾಲೇಜು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಕಾರ್ಯಕ್ರಮಗಳ ಜೊತೆ ಜಿಲ್ಲೆಗಳಲ್ಲಿ ಸ್ಥಳೀಯ ವೃತ್ತಿ ಅವಕಾಶಗಳನ್ನು ಸೃಜಿಸಲು ಅಗತ್ಯವಾದ ಕೇಂದ್ರಗಳನ್ನು ರೂಪಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲು ಕಾರ್ಯಪಡೆ ಶಿಫಾರಸು ಮಾಡಿದೆ. ಕೃಷಿ ಮತ್ತು ಕೃಷಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಉದ್ಯಮಗಳನ್ನು ಉತ್ತೇಜಿಸುವ ಅಂಶವು ಮಹತ್ವದ್ದಾಗಿದ್ದು, ದೇಶದ ಕೃಷಿ ಕ್ಷೇತ್ರಕ್ಕೆ ಯುವಜನರನ್ನು ಸೆಳೆದಲ್ಲಿ ಭವಿಷ್ಯದಲ್ಲಿ ಆಹಾರದ ಕೊರತೆ ಕಾಡದು.
ಶಾಲಾ ಕಾಲೇಜುಗಳ ಪಠ್ಯಕ್ರಮ, ಬೋಧನಾ ಕಲಿಕಾ ಪದ್ಧತಿಗಳನ್ನು ಅನುಭವ ಕೇಂದ್ರಿತವಾಗಿಸಿ, ವೃತ್ತಿ ಮತ್ತು ತಂತ್ರಜ್ಞಾನದ ಜೊತೆ ಬೆಸೆಯುವಂತೆ ಶಿಕ್ಷಣ ಪದ್ಧತಿಯನ್ನು ರೂಪಿಸುವುದು ಈ ದಿಸೆಯಲ್ಲಿ ಅಗತ್ಯವಾದ ಅಂಶವಾಗಿದೆ. ಇದನ್ನು ಸಾಧ್ಯವಾಗಿಸಲು ಎಲ್ಲರೂ ಕೈಜೋಡಿಸುವ ಅವಶ್ಯಕತೆ ಇದೆ. ನಮ್ಮ ಶಿಕ್ಷಣ ಕ್ರಮದಲ್ಲಿ ಮಾಹಿತಿ ಕಲಿಕೆಗೆ ಒತ್ತು ನೀಡಿರುವಂತೆ ಜೊತೆ ಜೊತೆಗೆ ಕೌಶಲ ಕಲಿಕೆಯೂ ಆಗುವಂತೆ ಕ್ರಮ ಕೈಗೊಳ್ಳಬೇಕಾಗಿರುವುದು ಇಂದಿನ ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.