ಲ್ಯಾಟಿನ್ ಅಮೆರಿಕದ ಅಂಗೈ ಅಗಲದ ದೇಶ ಚಿಲಿ. ಆದರೆ ಅದರ ಯೋಚನೆ ಯಾರೂ ಊಹಿಸದಷ್ಟು ದೊಡ್ಡದು ಮತ್ತು ಉದಾತ್ತವಾದದ್ದು. ಭೂಮಿಯ ವಾಯುಗುಣ ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಕ್ಲೈಮೇಟ್ ಎಮರ್ಜೆನ್ಸಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ತನ್ನ ನೂತನ ಸಂವಿಧಾನದಲ್ಲಿ ರಾಷ್ಟ್ರೀಯತೆ, ದೇಶಪ್ರೇಮಗಳನ್ನೂ ಮೀರಿ ಪರಿಸರವನ್ನೇ ಪ್ರಧಾನವಾಗಿಸಿಕೊಳ್ಳ ಹೊರಟಿರುವ ವಿಶ್ವದ ಪ್ರಪ್ರಥಮ ದೇಶ ಎಂಬ ಹೆಗ್ಗಳಿಕೆ ಈ ‘ಚಿಲಿ’ಯದ್ದು.
ಅದು 1980. ಸರ್ವಾಧಿಕಾರಿ ಅಗಸ್ಟೊ ಪಿನೊಚೆ ಖಾಸಗಿ ವಲಯಕ್ಕೆ ಮಣೆ ಹಾಕುವ ಸಂವಿಧಾನ ರಚಿಸಿ ಎಲ್ಲರಿಂದಲೂ ಬಲವಂತವಾಗಿ ಒಪ್ಪಿಸಿದ. ದೇಶದ ಪ್ರತಿಯೊಂದು ವ್ಯವಸ್ಥೆಯೂ ಖಾಸಗಿಯವರ ಕೈಯಲ್ಲಿತ್ತು. ಕುಡಿಯುವ, ಬಳಸುವ ನೀರನ್ನೂ ಖಾಸಗಿ ಸ್ವತ್ತನ್ನಾಗಿಸಿದ್ದ ಅತಿರೇಕಕ್ಕೆ ಸಂವಿಧಾನ ಮಣೆಹಾಕಿತ್ತು.
ಮೂಲಭೂತ ಹಕ್ಕುಗಳಿಗೆ ಅರ್ಥವೇ ಇರಲಿಲ್ಲ. ಕಾರ್ಪೊರೇಟ್ ಕಂಪನಿಗಳು ನೀರಿನ ಪೂರೈಕೆ- ಸರಬ ರಾಜಿನ ಉಸ್ತುವಾರಿ ಹೊತ್ತಿದ್ದವು. ನೈಸರ್ಗಿಕ ಸಂಪನ್ಮೂಲಗಳೆಲ್ಲ ಖಾಸಗೀಕರಣಗೊಂಡಿದ್ದವು. ಹೊಸ ಶತಮಾನದ ಪವರ್‌ಹೌಸ್ ಎಂದೇ ಕರೆಸಿಕೊಂಡಿರುವ ‘ಲೀಥಿಯಂ’ನ ಗಣಿಗಳೂ ಖಾಸಗಿಯವರ ಒಡೆತನದಲ್ಲಿದ್ದವು. ನಿಮಗೆ ತಿಳಿದಿರಲಿ, ವಿಶ್ವದಲ್ಲೇ ಅತಿ ಹೆಚ್ಚು ಲೀಥಿಯಂ ಗಣಿಗಳಿರುವುದು ಚಿಲಿಯಲ್ಲಿಯೆ!
ಖಾಸಗೀಕರಣವು ಚಿಲಿಗೆ ವರದಾನವಾಗಿಯೇ ಇತ್ತು. ರಾಷ್ಟ್ರೀಯ ಸಂಪತ್ತು ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಲೇ ಇತ್ತು. ಆದರೆ ಅದು ಸಮಾನವಾಗಿ ಹಂಚಲ್ಪಟ್ಟಿರಲಿಲ್ಲ. ಬಹುತೇಕ ಕಡೆ ಆಗುವಂತೆ ಶ್ರೀಮಂತರ ಸಂಪತ್ತು ನೂರ್ಮಡಿಯಾದರೆ, ಇತರರು ಪಾತಾಳಕ್ಕೆ ಕುಸಿದಿದ್ದರು. ಅಸಮಾನತೆ ಹೆಚ್ಚುತ್ತಲೇ ಹೋಯಿತು. ಮೂವತ್ತೆಂಟು ವರ್ಷ ಸುಮ್ಮನೇ ಸಹಿಸಿಕೊಂಡಿದ್ದ ಜನ 2019ರಲ್ಲಿ ವ್ಯವಸ್ಥೆಯ
ವಿರುದ್ಧ ದೊಡ್ಡ ರೀತಿಯಲ್ಲಿ ತಿರುಗಿಬಿದ್ದರು. ದೇಶದುದ್ದಕ್ಕೂ ಪ್ರತಿಭಟನೆ, ಹರತಾಳಗಳು ನಡೆದವು. ಖಾಸಗೀಕರಣಕ್ಕೆ ಒತ್ತು ನೀಡುವ ಸಂವಿಧಾನ ನಮಗೆ ಬೇಡ, ಅದನ್ನು ಕಿತ್ತೊಗೆಯಿರಿ ಎಂಬುದು ಆಗ್ರಹ
ವಾಗಿತ್ತು.
ಕಳೆದ ಜುಲೈನಲ್ಲಿ ಸಂವಿಧಾನ ಬದಲಾವಣೆಗೆ ಒಪ್ಪಿದ ಆಡಳಿತ, ಅದನ್ನು ರೂಪಿಸಲು 155 ಸದಸ್ಯರಿ ರುವ ಸಮಿತಿಯೊಂದನ್ನು ರಚಿಸಿತು. ಅದರಲ್ಲಿ ಅರ್ಧ ಸೀಟುಗಳಿಗೆ ಮಹಿಳೆಯರು ಮತ್ತು ಮೂಲ ನಿವಾಸಿಗಳೇ ಆಯ್ಕೆಯಾದರು. ಈಗ ಅವರೆಲ್ಲ ಸೇರಿ ನೈಸರ್ಗಿಕ ಸಂಪನ್ಮೂಲಗಳನ್ನು ಖಾಸಗಿ ಕಪಿಮುಷ್ಟಿಗಳಿಂದ ಬಿಡಿಸುವ ಸಂವಿಧಾನ ರೂಪಿಸಬೇಕಿದೆ. ಅದಕ್ಕಾಗಿ ಎರಡು ಮುಖ್ಯ ಬದಲಾವಣೆ ಮಾಡಿ ನೈಸರ್ಗಿಕ ಸಂಪ ನ್ಮೂಲಗಳ ಒಡೆತನ ಮತ್ತು ನಿರ್ವಹಣೆಗೆ ಸರಿಯಾದ ಸೂತ್ರ ಹೊಸೆಯಬೇಕಿದೆ.
ಇದುವರೆಗೂ ಮೂಲಭೂತ ಹಕ್ಕಿನಿಂದ ಹೊರಗಿದ್ದ ನೀರಿನ ಲಭ್ಯತೆಯನ್ನು ಮೂಲಭೂತ ಹಕ್ಕನ್ನಾಗಿಸುವುದು, ಗಣಿಗಾರಿಕೆಯನ್ನು ನಿಯಂತ್ರಿಸುವುದು ಮತ್ತು ಮನುಷ್ಯನ ಉಳಿವಿಗಾಗಿ ಎಷ್ಟರಮಟ್ಟಿಗಿನ ನೈಸರ್ಗಿಕ ಸಂಪನ್ಮೂಲ ಬಳಕೆ ಮಾಡುವುದು ಎಂಬುದನ್ನು ಸಮಿತಿ ನಿರ್ಧರಿಸಬೇಕಿದೆ. ಇಂಥ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸ್ಥಳೀಯ ಸಮುದಾಯಗಳಿಗೆ ಏನೆಲ್ಲ ಅಧಿಕಾರವಿರ
ಬೇಕು ಎಂಬುದರ ಬಗ್ಗೆ ತೀವ್ರತರದ ಚರ್ಚೆಗಳಾಗುತ್ತಿವೆ. ವಿಶೇಷವೆಂದರೆ, ಸಮಿತಿಯ ಸಭೆಗಳಲ್ಲಿ ಗಣಿ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ವಿಶೇಷ ಗೌರವ ನೀಡಲಾಗಿದೆ.
ಉಪ್ಪಿನ ರಾಡಿಯಿಂದ ಲೀಥಿಯಂ ಅನ್ನು ಬೇರ್ಪಡಿಸಿದ ನಂತರ ಅದನ್ನೇ ನೀರಿನಂತೆ ಉಪಯೋಗಿಸಬೇಕೆಂಬುದು ಹೊಸ ಸಮಿತಿಯ ವಾದ. ಆದರೆ ಗಣಿ ಮಾಲೀಕರು ಗಣಿಯಿಂದ ಏಳುವ ಬಿಸಿಯನ್ನು ನಿಯಂತ್ರಿಸಲು ಶುದ್ಧವಾದ ಜನಬಳಕೆಯ ನೀರನ್ನೇ ಬಳಸಿ ನೈಸರ್ಗಿಕ ನೀರಿನ ಮೂಲಗಳ ಮೇಲೆ ಭಾರಿ ಒತ್ತಡ ಸೃಷ್ಟಿಸುತ್ತಿದ್ದಾರೆ. ಇದನ್ನು ತಡೆಯಲೇಬೇಕು ಎಂದಿರುವ ಹೊಸ ಸಂವಿಧಾನ ರಚನಾ ಸಮಿತಿಯು ಮಿನರಲ್‌ಯುಕ್ತ ಉಪ್ಪಿನ ರಾಡಿಯನ್ನು ನೀರು ಎಂದು ಘೋಷಿಸುವ ಎಲ್ಲ ಸಾಧ್ಯತೆಗಳಿವೆ. ಹಾಗಾದಲ್ಲಿ ಅಪಾರ ಪ್ರಮಾಣದ ಲೀಥಿಯಂ ಗಣಿಗಳಿರುವ ಚಿಲಿಯಲ್ಲಿ ನಿಸರ್ಗ ಸಮತೋಲನಕ್ಕೆ ಸರಿಹೊಂದುವಂತೆ ಪರಿಸರಸ್ನೇಹಿ ಗಣಿಗಾರಿಕೆ ಮಾಡಬಹುದು. ಲೀಥಿಯಂ ಬೇರ್ಪಡಿಸಿದ ನಂತರ ಉಳಿಯುವ ದ್ರವವನ್ನೇ ತಂಪಾಗಿಸಿ ನೀರಿನಂತೆ ಬಳಸಿದರೆ ಲಭ್ಯವಿರುವ ಕುಡಿಯುವ ನೀರಿನ ಮೂಲಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಈ ಮಧ್ಯೆ ಅಮೆರಿಕ, ಯುರೋಪ್ ಲಕ್ಷಾಂತರ ಎಲೆಕ್ಟ್ರಿಕ್ ವಾಹನ ತಯಾರಿಸಿ ರಸ್ತೆಗಿಳಿಸುವ ಬೃಹತ್ ಯೋಜನೆ ಹಾಕಿಕೊಂಡಿವೆ. ಇದು ಲೀಥಿಯಂನ ಬೃಹತ್ ದಾಸ್ತಾನು ಹೊಂದಿರುವ ಚಿಲಿಗೆ ಭಾರಿ ಆರ್ಥಿಕ ಲಾಭ ತರಲಿದೆ. ಎಲೆಕ್ಟ್ರಿಕ್ ವಾಹನಕ್ಕೆ ಬೇಕಾದ ಇಂಧನ ತುಂಬಿಡುವ ಬ್ಯಾಟರಿ ಲೀಥಿಯಂನದ್ದೇ ಆಗಿರುತ್ತದೆ.
ಕಳೆದ ಡಿಸೆಂಬರ್‌ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ರುವ 35 ವರ್ಷದ ಚಳವಳಿಕಾರ ಗೇಬ್ರಿಯಲ್ ಬೋರಿಕ್, ಈಗಿರುವ ಸಂಪತ್ತಿನ ಹಂಚಿಕೆಯ ಅಸಮಾನತೆಯನ್ನು ಸರಿಮಾಡುವುದೇ ತಮ್ಮ ಆದ್ಯತೆ ಎಂದಿದ್ದಾರೆ. ಲೀಥಿಯಂ ಗಣಿಗಾರಿಕೆಯನ್ನು ಖಾಸಗಿ ಯಿಂದ ಹೊರತಾಗಿಸಿ ಸಾರ್ವಜನಿಕ ವಲಯಕ್ಕೆ ತರುವುದು ಅವರ ಸದ್ಯದ ಗುರಿ. ಇದರಿಂದ ಬೊಕ್ಕಸಕ್ಕೆ ಭಾರಿ ಆದಾಯ ಬರುತ್ತದೆ. ಆದರೆ ಒಂದು ಟನ್ ಲೀಥಿಯಂ ಹೊರತೆಗೆದಾಗ 16 ಟನ್ ಇಂಗಾಲದ ಡೈ ಆಕ್ಸೈಡ್ ವಾತಾವರಣ ಸೇರುತ್ತದೆ. ‘ಪರಿಸರವೇ ಮೊದಲು’ ಎಂದು ಸಂವಿಧಾನ ರೂಪಿಸುತ್ತಿರುವ ಚಿಲಿ, ಗಣಿಗಾರಿಕೆಯ ಈ ಸಮಸ್ಯೆಯನ್ನು ಹೇಗೆ ನಿಭಾ ಯಿಸುತ್ತದೆ ಮತ್ತು ಸಂವಿಧಾನದ ಹಸಿರು ಆಶಯವನ್ನು ಸಾಕಾರಗೊಳಿಸುತ್ತದೆ ಎಂಬುದನ್ನು ತಿಳಿಯಲು ಇಡೀ ವಿಶ್ವವೇ ಕಾಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.