ಪ್ಯಾರಿಸ್ ಒಲಿಂಪಿಕ್ ಕೂಟ ಮುಗಿದಿದೆ. ಅದು ನಡೆಯುತ್ತಿದ್ದ ಅವಧಿಯಲ್ಲಿ, ಮನೆಯಲ್ಲಿ ಊಟ ಮಾಡುವಾಗ, ಆಫೀಸಿನಲ್ಲಿ ಕೆಲಸ ಮಾಡುವಾಗ ಎಲ್ಲೆಲ್ಲೂ ಆಟದ್ದೇ ಚರ್ಚೆ. ವಿನೇಶ್ ಫೋಗಟ್ ಫೈನಲ್‌ಗೆ ಅನರ್ಹಗೊಂಡ ಸುದ್ದಿ, ನೀರಜ್‍ಗೆ ಚಿನ್ನ ಬರಲಿಲ್ಲವೆಂಬ ಸುದ್ದಿ ಇವೆಲ್ಲವನ್ನೂ ನಾವು ನಮಗೇ ಏನೋ ಆಯಿತೆಂಬಂತೆ ಅಲವತ್ತುಕೊಂಡಿದ್ದಾಗಿದೆ!
ಎಂದೂ ಆಟ ಬಿಡದ ನನ್ನ ಮಗರಾಯ ಶಾಲೆಯಿಂದ ಬಂದಾಕ್ಷಣ ಆಟಕ್ಕೆ ಓಡುವ ಬದಲು, ‘ಛೇ ಇವತ್ತು ಮೂಡೇ ಇಲ್ಲ’ ಎಂದು, ಹಾಕಿಯಲ್ಲಿ ಭಾರತ ಸೋತಿದ್ದಕ್ಕೆ ಮುಖ ಸಪ್ಪಗೆ ಮಾಡಿ ಕುಳಿತದ್ದು ನೋಡಿದಾಗ, ಆಟಗಳಿಗೆ ಇರುವ ಶಕ್ತಿಯ ಬಗ್ಗೆ ಅಚ್ಚರಿಯಾಯಿತು.
ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕ್ರಿಕೆಟ್ ವಿಶ್ವಕಪ್‌ನಂತಹ ಆಟಗಳನ್ನು ‘ಸಾಮಾಜಿಕ ಹಿತ’ದ ಆಟಗಳೆಂದು ನಾವು ಧಾರಾಳವಾಗಿ ಕರೆಯಬಹುದು. ಸಿನಿಮಾದಂತಹ ಸಮೂಹ ಮಾಧ್ಯಮಗಳು ಹೇಗೆ ಏಕಕಾಲಕ್ಕೆ ಸಾವಿರಾರು ಜನರನ್ನು ತಲುಪಬಲ್ಲವೋ ಹಾಗೆಯೇ ಈ ಕ್ರೀಡಾಕೂಟಗಳೂ ನಮ್ಮನ್ನು ಪ್ರಭಾವಿಸಬಲ್ಲವು.
ನಮ್ಮ ಬಾಲ್ಯದಲ್ಲಿ ಟಿ.ವಿ.ಯ ಬಗ್ಗೆ ನಮಗೆ ಪ್ರೀತಿ ಆರಂಭವಾಗಿದ್ದೇ ಸಿನಿಮಾ, ಕ್ರೀಡೆಗಳಿಂದ. ಏಷ್ಯನ್ ಗೇಮ್ಸ್‌ನಲ್ಲಿ ಪಿ.ಟಿ.ಉಷಾ- ಲಿಡಿಯಾರ ಓಟ, ವಿಂಬಲ್ಡನ್‌ನಲ್ಲಿ ನವ್ರಾಟಿಲೋವಾ ಒಂಬತ್ತು ಬಾರಿ ಗೆದ್ದ ಪ್ರಶಸ್ತಿಯ ಸಂಭ್ರಮಗಳನ್ನು ನಾವು ನೋಡುತ್ತಿದ್ದ ಬಗೆ ಹೇಗೆಂದರೆ ‘ನಾವೇ ಅವರು’ ಎಂಬಂತೆ! ರೊಮೇನಿಯಾದ ಜಿಮ್ನಾಸ್ಟಿಕ್ಸ್ ಪಟು ನಾದಿಯಾ ಕೊಮೆನೆಸಿಯ ಜೀವನಕಥೆಯನ್ನು ಆಧರಿಸಿ ಮಾಡಿದ್ದ ಧಾರಾವಾಹಿಯ ಕೆಲವು ಎಪಿಸೋಡ್‍ಗಳನ್ನಂತೂ ನಾವು ಗೆಳತಿಯರು ವಿಡಿಯೊ ರೆಕಾರ್ಡ್ ಮಾಡಿ ಕೊಂಡು ಅದೆಷ್ಟು ಬಾರಿ ನೋಡಿದೆವೋ!
ನನಗನ್ನಿಸುವ ಹಾಗೆ, ಪರೀಕ್ಷೆಯ ಅಂಕಗಳ ಬಲಕ್ಕೆ ಛಲ ಮೂಡಿಸಬೇಕೆಂದರೆ, ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಬೇಕೆಂದರೆ ನಾವು ಮಾಡಬೇಕಾದದ್ದು ಅವರು ಆಟಗಳನ್ನು ನೋಡುವಂತೆ ಮಾಡುವುದು. ಅದರಲ್ಲೂ ಇಂತಹ ಛಲದ ಕ್ರೀಡಾಳು ಸಾಧನೆಯ ಆಟಗಳನ್ನು ವೀಕ್ಷಿಸುವಂತೆ ಮಾಡುವುದು!
ನಾವೇಕೆ ಆಟ ನೋಡುತ್ತೇವೆ?! ತಮಗೆ ಆಡಲು ಸಾಧ್ಯವಾಗದವರೂ ಆಟವಾಡಲು ಇಷ್ಟವಿರದವರೂ ಆಟವನ್ನು ನೋಡಲು ಮಾತ್ರ ಹಿಂದೆ ಸರಿಯುವುದಿಲ್ಲವಷ್ಟೆ! ‘ವೈಯಕ್ತಿಕ’ ಎಂಬಂತಹ ಭಾವದಲ್ಲಿ ಆಟವನ್ನು ನೋಡುವುದು, ಕೆಲಸಗಳನ್ನು ಮಾಡುತ್ತಲೇ ‘ಇಂದು ನಮ್ಮ ಇಷ್ಟದ ಆಟಗಾರ, ಇಷ್ಟದ ತಂಡದ ಗತಿ ಏನಾದೀತೋ’ ಎಂದು ತನ್ನತನದಿಂದ ಚಿಂತಿಸುವುದು ನಮಗೆಲ್ಲರಿಗೂ ಬಲು ಸಾಮಾನ್ಯ. ಗಂಡುಮಕ್ಕಳಿಗಂತೂ ಅದು ‘ಜೀವನ್ಮರಣ’ದ ಪ್ರಶ್ನೆ ಎಂಬಷ್ಟು ಮಹತ್ವದ್ದು. ಏಕೆ ಹೀಗೆ?!
ಈ ಅಂಶಕ್ಕೆ ಹಲವು ಕಾರಣಗಳಿವೆ. ಮೊದಲನೆ ಯದು, ಅದು ನೀಡುವ ಸಂತಸ, ತಾದಾತ್ಮ್ಯದ ಅನುಭವ. ನಾವು ನಿಯಮಗಳಿಗೆ ಒಳಪಡದೆಯೂ ಆಟವಾಡಿದ ಅನುಭವ ಇಲ್ಲಿ ಸಾಧ್ಯ. ನಮ್ಮ ಒತ್ತಡಗಳಿಂದ ಕ್ಷಣಿಕವಾಗಿಯಾದರೂ ಬಿಡುಗಡೆ ಹೊಂದುವುದು. ಅದೂ ಒಲಿಂಪಿಕ್ಸ್‌ನಂತಹ ಕ್ರೀಡಾಕೂಟಗಳಲ್ಲಿ ಅದು ಮತ್ತಷ್ಟು ನಿಜ. ‘ನಾನು, ನಮ್ಮದು, ನಮ್ಮ ದೇಶ, ನಮ್ಮವರು’ ಎಂಬ ‘ನನ್ನತನ’ವನ್ನು ಕ್ರೀಡಾಕೂಟಗಳು ನೀಡುತ್ತವೆ ಎನ್ನುವ ಅಂಶ ಅದನ್ನು ಮತ್ತಷ್ಟು ಆಪ್ತವಾಗಿಸಿಬಿಡುತ್ತದೆ.
ಇವಿಷ್ಟೂ ಒಂದೆಡೆಯಾದರೆ, ಇಂದಿನ ದಿನಗಳಲ್ಲಿ ಒಲಿಂಪಿಕ್ಸ್‌ನಂತಹ ಕ್ರೀಡಾಕೂಟಗಳಿಗೆ ಮತ್ತೊಂದು ಆಯಾಮವೂ ಸೇರಿಕೊಳ್ಳುತ್ತದೆ. ಇಡೀ ಜಗತ್ತು ಧ್ರುವೀಕರಣದತ್ತ ತಿರುಗಿದೆ. ಸಹಿಷ್ಣುತೆ ಎನ್ನುವುದು ನಮ್ಮ ಕೈಗೆ ಸುಲಭವಾಗಿ ಎಟುಕದ ಕೌಶಲವಾಗಿದೆ. ಸಹಿಷ್ಣುತೆ ಎಂದರೆ ಏನು? ‘ನನಗೆ ನೀನು ಇಷ್ಟವಿಲ್ಲ, ಆದರೆ ನೀನು ಇಲ್ಲಿ ಇರಲು ನಾನು ಬಿಡುವೆ’ ಎಂಬ ಭಾವನೆ. ಅಸಹಿಷ್ಣುತೆ ಅಂದರೆ ಅದು ದ್ವೇಷಕ್ಕೆ ಹತ್ತಿರವಾದದ್ದು. ಇಂತಹ ಸಂಘರ್ಷ, ಅಸಹಿಷ್ಣುತೆಯ ಸಮಯದಲ್ಲಿ ಆಟದ ಅಂಗಳದಲ್ಲಿ ಭರವಸೆಯ ಬೆಳಕು ಕಾಣತೊಡಗುತ್ತದೆ. ತನ್ನನ್ನು ಸೋಲಿಸಿ ಗೆದ್ದ ಕ್ರೀಡಾಳುವನ್ನು ಸೋತವರು ಅಭಿನಂದಿಸುವುದು, ಸೋತವರನ್ನೂ ಜನ ಹುರಿದುಂಬಿಸುವುದು, ಸೋಲನ್ನು ‘ಸಹಿಸಿ’ಕೊಳ್ಳುವುದು, ಸೋಲುವ ನೋವನ್ನು ಎದುರಿಸುವುದು ಹೇಗೆ ಎಂಬ ಪ್ರಾಯೋಗಿಕ ಪಾಠಗಳನ್ನು ನಮಗೆ ನೀಡುತ್ತವೆ. ಕ್ರೀಡೆಗಳಲ್ಲಿ ದೈಹಿಕ ನೋವುಗಳನ್ನು ಸಹಿಸಿಕೊಳ್ಳುವುದು, ದೈಹಿಕ ಸಾಮರ್ಥ್ಯ ಬೆಳೆಸಿಕೊಳ್ಳುವುದರ ಜೊತೆಗೆ ಮಾನಸಿಕ
ವಾದ ನೋವಿನಿಂದ ಕ್ರಮೇಣ ಹೊರಬರುವುದೂ ಸಾಧ್ಯವಾಗುತ್ತದೆ.
ಹೆಣ್ಣುಮಕ್ಕಳಿಗೆ ಕ್ರೀಡೆಗಳು ವಿಶೇಷವಾಗಿ ಪ್ರಯೋಜನಕಾರಿ ಎನಿಸುತ್ತದೆ. ದೈಹಿಕವಾಗಿ ಅವರ ಸಾಮರ್ಥ್ಯದ ಅರಿವನ್ನು ಅದು ಮೂಡಿಸಿದರೆ, ಮಾನಸಿಕವಾಗಿಯೂ ಅದು ಅವರನ್ನು ಬೆಳೆಸಬಲ್ಲದು. ಆ ಕ್ಷಣದಲ್ಲಿ ಬದುಕುವ ಪಾಠವನ್ನು ಕ್ರೀಡೆ ಬೋಧಿಸಬಲ್ಲದು.
ಸಿಮೋನ್ ಬೈಲ್ಸ್ ಎಂಬ ಜಿಮ್ನಾಸ್ಟ್ ತನ್ನ ಪ್ರತಿಭೆಯಿಂದ ಜಿಮ್ನಾಸ್ಟಿಕ್ಸ್ ಜಗತ್ತನ್ನೇ ದಂಗಾಗಿಸಿ
ದವಳು. ನಂತರ ಮಾನಸಿಕ ಸಮಸ್ಯೆಗಳಿಂದ ನರಳಿ, ಅದಕ್ಕಾಗಿ ಕ್ರೀಡೆಯಿಂದ ಹಿಂದೆ ಸರಿದು, ಚಿಕಿತ್ಸೆ ಪಡೆದು ಮತ್ತೆ ಕ್ರೀಡಾ ಜಗತ್ತಿಗೆ ಮರಳಿದವಳು. ಆಕೆ ತನ್ನ ಯಶಸ್ಸಿನ ಬಗ್ಗೆ ಒಲಿಂಪಿಕ್ಸ್‌ಗೆ ಮುನ್ನ ಸಂದರ್ಶನದಲ್ಲಿ ಹೇಳಿದ ಮಾತುಗಳಿವು- ‘ಮಾನಸಿಕ ತಡೆಗೋಡೆಗಳಿಂದ ನರಳಿ ಕೆಲಕಾಲ ದೂರವಿದ್ದು ಮತ್ತೆ ಕ್ರೀಡೆಗೆ ಮರಳಿದ ಈ ಸಂದರ್ಭದಲ್ಲಿ, ‘ಯಶಸ್ಸು’ ಎಂದರೆ ನನಗೆ ಅದು ಬೇರೆಯೇ ಅರ್ಥವನ್ನು ನೀಡುತ್ತದೆ. ಇದಕ್ಕೆ ಮೊದಲು ಬೇರೆಯವರೆಲ್ಲರೂ ನನಗಾಗಿ ಯಶಸ್ಸನ್ನು ವ್ಯಾಖ್ಯಾನಿಸುತ್ತಿದ್ದರು. ಈಗ ನನಗೆ ಯಶಸ್ಸು ಎಂದರೆ ಪ್ರದರ್ಶನಕ್ಕಾಗಿ ಕ್ರೀಡಾಂಗಣಕ್ಕೆ ಬರುವುದು, ಆರಾಮದ ಮಾನಸಿಕ ಸ್ಥಿತಿ, ಸಂತಸಪಡುವುದು ಮತ್ತು ಏನಾಗುತ್ತದೆಯೋ ಅದು ಆಗುತ್ತದೆ- ಆಗಲಿ ಎನ್ನುವ ಮನೋಭಾವ’.
ಅಂದರೆ, ಕ್ರೀಡೆ ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಜೀವನದೃಷ್ಟಿಗೂ ಬೇಕೇ ಬೇಕು ಅಲ್ಲವೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.