ಮಂಡ್ಯದಲ್ಲಿ ಡಿಸೆಂಬರ್ 20ರಿಂದ ಮೂರು ದಿನ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸುತ್ತ ನಡೆಯುತ್ತಿರುವ ಚರ್ಚೆಯು ಸಾಹಿತ್ಯೇತರ ರೂಪ ಪಡೆಯುತ್ತಿರುವುದು ವಿಪರ್ಯಾಸ. ಮೂಲತಃ ಮಂಡ್ಯ ಸಮ್ಮೇಳನದ ಮೂಲ ವಿಷಯ ಅಥವಾ ಥೀಮ್ ಕುರಿತು ಗಂಭೀರವಾದ ಚರ್ಚೆಗಳು ನಡೆಯಬೇಕಿತ್ತು. ಏಕೆಂದರೆ ಸಕ್ಕರೆ ಜಿಲ್ಲೆ ಇಂದು ಮಹಿಳೆಯರ ಅಕ್ಕರೆ ಕಳೆದುಕೊಂಡು, ಹೆಣ್ಣುಭ್ರೂಣ ಹತ್ಯೆಗಳ ಕೇಂದ್ರವಾಗಿದೆ. ಈ ದೃಷ್ಟಿಯಿಂದ ನೋಡಿ ದಾಗ, ಸಮ್ಮೇಳನದ ಮೂಲ ವಿಷಯವು ಮಹಿಳೆ ಮತ್ತು ಲಿಂಗ ಸೂಕ್ಷ್ಮತೆಯೇ ಆಗಬೇಕಿದೆ. ಹಾಗೆಯೇ ಸಮ್ಮೇಳನಾಧ್ಯಕ್ಷ ಸ್ಥಾನವನ್ನೂ ಮಹಿಳೆಗೇ ನೀಡಬೇಕಿದೆ. ಇದು ಕೇಳಿ ಪಡೆಯಬೇಕಾದ ಅವಕಾಶವಲ್ಲವಾದರೂ ಪಿತೃಪ್ರಾಧಾನ್ಯ ಮನಃಸ್ಥಿತಿ ಆಳವಾಗಿರುವುದರಿಂದ, ನೆನಪಿಸುವುದು ಪ್ರಜ್ಞಾವಂತ ಸಾಹಿತ್ಯಕ ಮನಸ್ಸುಗಳ ಕರ್ತವ್ಯ.
ಈಗ ಚರ್ಚೆಗೆ ಒಳಗಾಗುತ್ತಿರುವುದು ಸಮ್ಮೇಳನಾಧ್ಯಕ್ಷತೆಯ ಬಗ್ಗೆ. ಸಾಹಿತ್ಯೇತರ ಜಗತ್ತಿನಲ್ಲಿ ಕಾಣಬಹುದಾದ ಅನೇಕ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ತಮ್ಮದೇ ಆದ ಆಸಕ್ತಿಯ ಕ್ಷೇತ್ರಗಳಲ್ಲಿ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಾರಣರಾಗಿದ್ದಾರೆ. ಭಾಷಿಕ ನೆಲೆಯಲ್ಲಿ ಕನ್ನಡದ ಅಸ್ಮಿತೆಗಾಗಿ ನಿರಂತರವಾಗಿ ಹೋರಾಡುತ್ತಿರುವವರು ಇದ್ದಾರೆ. ಹಾಗೆಯೇ ಕರ್ನಾಟಕದ ಸಾಂಸ್ಕೃತಿಕ ಜಗತ್ತನ್ನು ವಿಸ್ತರಿಸುವ ಹಲವು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿದ್ದಾರೆ. ಈ ಮಹನೀಯರ ಅಮೂಲ್ಯ ಕೊಡುಗೆಗಳನ್ನು ಸಮ್ಮಾನಿಸುತ್ತಲೇ, ಸಾಹಿತ್ಯ ಸಮ್ಮೇಳನದ ಮೂಲ ಕಲ್ಪನೆ, ಸ್ವರೂಪ ಮತ್ತು ಉದ್ದೇಶದ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.
ಹಿಂದಿನ 110 ವರ್ಷಗಳಲ್ಲಿ ನಡೆದಿರುವ 86 ಸಮ್ಮೇಳನಗಳಲ್ಲಿ ಮಹಿಳಾ ಸಾಹಿತಿಗೆ ಸಿಕ್ಕಿರುವ ಸ್ಥಾನವನ್ನು ಗಮನಿಸಿದಾಗ, ಸಾಹಿತ್ಯ ಪರಿಷತ್ತು ಇಂದಿಗೂ ಗಂಡಾಳ್ವಿಕೆಯ ನೆರಳಲ್ಲೇ ಸಾಗುತ್ತಿರುವುದು ಸ್ಪಷ್ಟವಾಗುತ್ತದೆ. ಸಮ್ಮೇಳನಾಧ್ಯಕ್ಷರಾಗಿ ಮೊದಲ ಬಾರಿ ಮಹಿಳೆ ಆಯ್ಕೆಯಾಗಲು ಸುಮಾರು 60 ವರ್ಷಗಳೇ ಬೇಕಾದವು (1974– ಜಯದೇವಿತಾಯಿ ಲಿಗಾಡೆ). ಆನಂತರ ಮಹಿಳಾ ಸಾಹಿತಿಗಳಿಗೆ 26 ವರ್ಷಗಳ ರಜೆ ನೀಡಲಾಯಿತು. ಹೊಸ ಶತಮಾನದಲ್ಲಿ ನಡೆದಿರುವ 19 ಸಮ್ಮೇಳನಗಳಲ್ಲಿ ಮೂರು ಬಾರಿ ಮಹಿಳಾ ಸಾಹಿತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ (2000– ಶಾಂತಾದೇವಿ ಮಾಳವಾಡ, 2003– ಕಮಲಾ ಹಂಪನಾ, 2010– ಗೀತಾ ನಾಗಭೂಷಣ). ಇದರರ್ಥ ಕನ್ನಡ ಸಾಹಿತ್ಯ ಲೋಕದಲ್ಲಿ ಸಮ್ಮೇಳನಾಧ್ಯಕ್ಷರಾಗುವ ಅರ್ಹತೆ ಇರುವ ಮಹಿಳಾ ಸಾಹಿತಿಗಳು ಇಲ್ಲವೆಂದೇನಲ್ಲ. ಆ ಗೌರವಯುತ ಸ್ಥಾನಕ್ಕೆ ಮಹಿಳೆಯನ್ನು ಕೂರಿಸುವ ವಿಶಾಲ ಚಿಂತನೆ-ಸೂಕ್ಷ್ಮ ಮನೋಭಾವ ಕನ್ನಡ ಸಾಹಿತ್ಯ ಲೋಕಕ್ಕೆ ಇಲ್ಲ ಎಂದಷ್ಟೇ. ಈ ಬಾರಿಯಾದರೂ ಇದು ಕೈಗೂಡುವುದೇ ನೋಡೋಣ.
ಆದರೆ ಈಗ ನಡೆಯುತ್ತಿರುವ ಚರ್ಚೆ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯೇತರ ವಲಯದಿಂದ ವ್ಯಕ್ತಿಗಳನ್ನು ಆಯ್ಕೆ ಮಾಡಬಹುದೇ ಎಂದು. ಈ ಕುರಿತು ಗಂಭೀರ ಚರ್ಚೆಗಳು ನಡೆದಿದ್ದು, ಪರಿಷತ್ತಿನ ಅಧ್ಯಕ್ಷರು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ, ಸಂತೋಷ. ಆದರೆ ಸಾಹಿತ್ಯೇತರ ಎಂಬ ವಿಶಾಲ ವಲಯವನ್ನು ನಿರ್ವಚಿಸುವವರಾರು? ರಾಜಕೀಯ, ಕೈಗಾರಿಕೋದ್ಯಮ, ವಾಣಿಜ್ಯೋದ್ಯಮ, ಸಾಮಾಜಿಕ ಚಟುವಟಿಕೆ, ಸಾಫ್ಟ್‌ವೇರ್ ಉದ್ಯಮ, ಕ್ರೀಡಾ ವಲಯ ಹೀಗೆ ವಿಸ್ತರಿಸುತ್ತಲೇ ಹೋಗುವ ‘ಸಾಹಿತ್ಯೇತರ’ ವಲಯದಲ್ಲಿ ಎಲ್ಲರನ್ನೂ ಹಿಂದಿಕ್ಕಿ ಮೊದಲ ಸಾಲಿನಲ್ಲಿ ನಿಲ್ಲುವುದು ರಾಜಕೀಯ ಮತ್ತು ಅದರ ಪ್ರಭಾವಳಿಯನ್ನೇ ಬಳಸಿಕೊಳ್ಳುವ ಇತರ ಕ್ಷೇತ್ರಗಳು. ಮತ್ತದೇ ಶಿಫಾರಸು, ಒತ್ತಡ, ಲಾಬಿಕೋರತನ ಮತ್ತು ‘ನಮ್ಮವರಿಗೊಂದು ಜಾಗ ಕೊಡಿ’ ಎನ್ನುವ ಗಟ್ಟಿ ಧ್ವನಿ.
ಸಾಹಿತ್ಯ ಎನ್ನುವುದು ನಮ್ಮ ಸುತ್ತಲಿನ ಸಮಾಜದ ಸ್ಥಿತ್ಯಂತರಗಳನ್ನು ವಸ್ತುನಿಷ್ಠವಾಗಿ ಬಿಂಬಿಸುವಂತಹ ಒಂದು ಅಕ್ಷರ ಲೋಕ. ಇಲ್ಲಿ ರಚನೆಯಾಗುವು ದೆಲ್ಲವೂ ವಸ್ತುನಿಷ್ಠವಾಗಿರುವುದಿಲ್ಲ. ಏಕೆಂದರೆ ಸಾಹಿತಿಯ ವ್ಯಕ್ತಿಗತ ತಾತ್ವಿಕ ನಿಲುವುಗಳು ಸಾಹಿತ್ಯ ವನ್ನೂ ಪ್ರಭಾವಿಸುತ್ತವೆ. ಈ ನೆಲದ ನಿವಾಸಿಗಳು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳು, ಜಟಿಲ ಸಾಂಸ್ಕೃತಿಕ ಸಿಕ್ಕುಗಳು ಮತ್ತು ತಳಸಮಾಜದಲ್ಲಿ ಅನುಭವಿಸುತ್ತಿರುವ ನಿತ್ಯಬದುಕಿನ ಸವಾಲುಗಳನ್ನು ಸಾಹಿತ್ಯಲೋಕದ ವಿವಿಧ ಪ್ರಕಾರಗಳು ಬಿಂಬಿಸುತ್ತಲೇ ಬರುತ್ತವೆ. ಈ ಅಕ್ಷರಾಭಿವ್ಯಕ್ತಿಯ ಹೂರಣವನ್ನು ಸಮಷ್ಟಿ ಪ್ರಜ್ಞೆಯೊಂದಿಗೆ ಕನ್ನಡ ಜನತೆಯ ಮುಂದಿಟ್ಟು ಪರಾಮರ್ಶಿಸುವ ಮತ್ತು ಆತ್ಮಾವಲೋಕನಕ್ಕೆ ಎಡೆಮಾಡಿಕೊಡುವ ರೀತಿಯಲ್ಲಿ ನಿಷ್ಕರ್ಷೆಗೆ ಒಳಪಡಿಸುವ ಜವಾಬ್ದಾರಿ ಕನ್ನಡ ಸಾಹಿತ್ಯ ಸಮ್ಮೇಳನಗಳ ಮೇಲಿರುತ್ತದೆ. ಆದ್ದರಿಂದಲೇ ಇಲ್ಲಿ ಅಧ್ಯಕ್ಷ ಪೀಠ ಅಲಂಕರಿಸು
ವವರಿಗೆ ಸಾಹಿತ್ಯಕ ಪ್ರಜ್ಞೆಯೊಂದಿಗೆ ಸಾಮಾಜಿಕ ಸೂಕ್ಷ್ಮ ಸಂವೇದನೆಗಳೂ ಇರುವುದು ಮುಖ್ಯವಾಗುತ್ತದೆ.
ಹಾಗಾಗಿ, ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯೇತರರನ್ನು ತಂದು ಕೂರಿಸುವುದು ಸರಿಯಲ್ಲ. ಮಹಾರಾಷ್ಟ್ರದ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳು, ಅಧಿಕಾರಿಗಳಿಗೆ ವೇದಿಕೆ ಏರಲೂ ಅವಕಾಶ ಇರುವುದಿಲ್ಲ. ಕನ್ನಡದ ಮಟ್ಟಿಗೆ ಈ ಪರಂಪರೆಯನ್ನು ಅನುಸರಿಸಲಾಗಿಲ್ಲ. ಕನಿಷ್ಠ ಸಾಹಿತ್ಯಕ ಜವಾಬ್ದಾರಿಯ ದೃಷ್ಟಿಯಿಂದಲಾದರೂ ಸಮ್ಮೇಳನಾಧ್ಯಕ್ಷರನ್ನು ಸಾಹಿತ್ಯಲೋಕದಿಂದಲೇ ಆಯ್ಕೆ ಮಾಡುವುದು ಸೂಕ್ತ. ಮಂಡ್ಯ ಸಮ್ಮೇಳನಕ್ಕೆ ಮಹಿಳಾ ಸಾಹಿತಿಯನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡ ಬೇಕಿರುವುದು ನಮ್ಮ ನೈತಿಕ ಕರ್ತವ್ಯವೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.