ADVERTISEMENT

ಸಂಗತ | ಕೊರೊನಾ ನಿಯಂತ್ರಣ: ಸ್ವೀಡನ್ ಭಿನ್ನ ಪಥ

ಸೋಂಕಿನ ವಿಚಾರದಲ್ಲಿ, ಬಿಗಿ ಕಾನೂನುಗಳ ಬದಲು ಮಾರ್ಗಸೂಚಿಗಳು ಜನರನ್ನು ಹೆಚ್ಚಾಗಿ ತಲುಪಬೇಕು ಎನ್ನುವುದು ಸ್ವೀಡನ್‌ ಪ್ರಧಾನಿಯ ಸ್ಪಷ್ಟ ನುಡಿ

ಸರೋಜಾ ಪ್ರಕಾಶ
Published 28 ಏಪ್ರಿಲ್ 2020, 1:43 IST
Last Updated 28 ಏಪ್ರಿಲ್ 2020, 1:43 IST
   

ನಮ್ಮದು ‘ನಂಬಿಕೆ ಆಧಾರಿತ’ ಮಾದರಿ ಎನ್ನುತ್ತಾರೆ ಸ್ವೀಡನ್ನಿನ ಸಾಂಕ್ರಾಮಿಕ ರೋಗ ತಜ್ಞ ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಯ ವರಿಷ್ಠ ಆ್ಯಂಡರ್ಸ್ ಟೆಗ್ನೆಲ್. ಇತರ ದೇಶಗಳಂತೆ ಸರ್ಕಾರದ ಬದಲಾಗಿ ಸ್ವತಂತ್ರ ವೈದ್ಯಕೀಯ ಸಂಸ್ಥೆಯೇ ಈ ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಪಿಡುಗನ್ನು ನಿಭಾಯಿಸುವ ಹೊಣೆ ಹೊತ್ತಿದೆ! ಅದರ ನಿರ್ಣಯಗಳಿಗೆ ಸರ್ಕಾರ ಪೂರ್ತಿ ಬೆಂಬಲ ನೀಡಿದೆ.

ಯುರೋಪಿನ ಸ್ಕಾಂಡಿನೆವಿಯಾ ದೇಶಗಳಾದ ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಫಿನ್‌ಲ್ಯಾಂಡ್‌ಗಳಲ್ಲಿ ಉಳಿದ ಮೂರೂ ದೇಶಗಳು ಇಡೀ ದೇಶವನ್ನೇ ಬಂದ್ ಮಾಡಿ ಕುಳಿತರೆ, ಸ್ವೀಡನ್ ಕೊರೊನಾವನ್ನು ನಿಭಾಯಿಸುತ್ತಿರುವ ಪರಿ ವಿಶಿಷ್ಟವಾಗಿದೆ. ಆ ದೇಶದಲ್ಲಿ ನೆಲೆಸಿರುವ ನನ್ನ ಪುತ್ರಿ ಅಶ್ವಿನಿ ವೈದ್ಯೆಯಾಗಿದ್ದು, ಸ್ಟಾಕ್‌ಹೋಮಿನ ಕೆರೊಲಿನ್ಸ್ಕ ಆಸ್ಪತ್ರೆಯಲ್ಲಿ ರೋಗಶಾಸ್ತ್ರಜ್ಞೆ. ಕೊರೊನಾಗೆ ಸಂಬಂಧಿಸಿದ ಅಲ್ಲಿಯ ಬೆಳವಣಿಗೆಗಳ ಬಗ್ಗೆ ಆಕೆಯಿಂದ ನಮಗೆ ನಿರಂತರವಾಗಿ ಮಾಹಿತಿ ಸಿಗುತ್ತಿದೆ.

ಒಂದೂಕಾಲು ಕೋಟಿ ಜನಸಂಖ್ಯೆಯ ಸ್ವೀಡನ್ನಿನಲ್ಲಿ ಸಂಪೂರ್ಣ ಲಾಕ್‌ಡೌನ್ ಇಲ್ಲವೇ ಇಲ್ಲ. ದೇಶದ ಗಡಿಗಳು ತೆರೆದೇ ಇವೆ. 16 ವರ್ಷದೊಳಗಿನ ಮಕ್ಕಳಿಗೆ ಶಾಲೆ ನಡೆಯುತ್ತಲೇ ಇದೆ. ಬಾರ್, ಹೋಟೆಲ್, ಜಿಮ್‌ಗಳು ಸಹ ತೆರೆದಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಂದಿನಂತೆಯೇ ಇದೆ. ಸಾರ್ವಜನಿಕ ಸ್ಥಳಗಳಲ್ಲೂ ಜನ ಮಾಸ್ಕ್ ಧರಿಸಿರುವುದಿಲ್ಲ! ಹೈಸ್ಕೂಲು, ವಿಶ್ವವಿದ್ಯಾಲಯಗಳು ಮಾತ್ರ ಮುಚ್ಚಿವೆ. ಹೆಚ್ಚಿನ ಜನ ಮನೆಯಿಂದಲೇ ಕಚೇರಿ ಕೆಲಸ ನಡೆಸಿದ್ದಾರೆ.

ADVERTISEMENT

ಟೆಗ್ನೆಲ್ ತಂಡದ ಪ್ರಕಾರ, ಕೋವಿಡ್-19ಕ್ಕೆ ಲಸಿಕೆ ಕಂಡುಹಿಡಿಯುವವರೆಗೆ ಸೋಂಕು ಹರಡುವುದನ್ನು ನಿಲ್ಲಿಸುವುದಾಗಲೀ ಸಂಪೂರ್ಣ ನಿರ್ಮೂಲಗೊಳಿಸುವುದಾಗಲೀ ಸಾಧ್ಯವಿಲ್ಲ. ಸೋಂಕು ಹೆಚ್ಚು ಹರಡದಂತೆ ಮಾಡಬಹುದು, ಅಷ್ಟೆ. ಅದನ್ನು, ತುರ್ತುಸ್ಥಿತಿ ಹೇರುವ ಬದಲಾಗಿ ಜನ ತಾವಾಗಿಯೇ ಅನುಸರಿಸುವಂತೆ ಮಾಡುವ ಯೋಜನೆ ಟೆಗ್ನೆಲ್ ಅವರ ತಂಡದ್ದು. ರೋಗ ಹರಡದಂತೆ ನೋಡಿಕೊಳ್ಳುವುದು ಪ್ರತೀ ನಾಗರಿಕನ ಜವಾಬ್ದಾರಿ ಎಂದು ಸ್ವೀಡನ್ನಿನ ನೆಲದ ಕಾನೂನು ಕೂಡ ಹೇಳುತ್ತದೆ.

ಆದರೂ ಸರ್ಕಾರ ಎಲ್ಲ ಮಾಧ್ಯಮಗಳ ಮೂಲಕ, ಬೀದಿ ಬೀದಿಗಳಲ್ಲಿ ಭಿತ್ತಿಪತ್ರಗಳ ಮೂಲಕ, ಕೊರೊನಾ ವಿರುದ್ಧ ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ಒತ್ತಿ ಒತ್ತಿ ಹೇಳುತ್ತಿದೆ. ವಯಸ್ಕರು ದೈಹಿಕ ಅಂತರ ಕಾಯ್ದುಕೊಳ್ಳಿ, ಅನವಶ್ಯಕ ಪ್ರಯಾಣ ಬೇಡ, ನೀರಿನ ಬಾಟಲಿ, ಬಾತ್ ರೂಮು, ಸಿಗರೇಟ್ ಇವುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ– ಇವು ಪ್ರಮುಖ ಅಂಶಗಳು. ಯಾರಿಗೇ ಆದರೂ ಅನಾರೋಗ್ಯದ ಲಕ್ಷಣ ಕಂಡುಬಂದರೆ, ಮನೆಯಿಂದಲೇ ಆಸ್ಪತ್ರೆಗೆ ಫೋನ್‌ ಮಾಡಿ ಚಿಕಿತ್ಸೆಗೆ ಸಲಹೆ ಪಡೆಯಬಹುದು. ಅವಶ್ಯಬಿದ್ದರೆ ಆಸ್ಪತ್ರೆಗೆ ವಿಮಾನದ ಮೂಲಕವೂ ಸಾಗಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತದೆ.

ಶಾಲೆಗಳಿಗೆ ರಜೆ ಘೋಷಿಸಿದರೆ ಪೋಷಕರೂ ಕೆಲಸಕ್ಕೆ ರಜೆ ಹಾಕಬೇಕಾಗುತ್ತದೆ. ಆಗ ತುರ್ತುಸೇವೆಗೆ ವಿವಿಧ ಕ್ಷೇತ್ರಗಳ ಕಾರ್ಯಕರ್ತರ ಲಭ್ಯತೆ ಇಳಿಮುಖವಾಗುತ್ತದೆ. ಒಂಬತ್ತು ವರ್ಷದೊಳಗಿನ ಮಕ್ಕಳಿಗೆ ಕೋವಿಡ್‌ನಿಂದಾಗಿ ಜೀವಹಾನಿ ಆಗುವ ಸಂಭವ ಕಡಿಮೆ. ಆದ್ದರಿಂದ ಆರೋಗ್ಯವಂತ ಮಕ್ಕಳೆಲ್ಲರೂ ಶಾಲೆಗೆ ಹೋಗಲಿ ಎಂದಿತು ಟೆಗ್ನೆಲ್ ತಂಡ.

ಪರಿಣಾಮ, ಏಪ್ರಿಲ್ ಒಂದರಿಂದ ನೋಡನೋಡುತ್ತಿದ್ದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಸಾಗಿತು. 16 ಸಾವಿರ ಮಂದಿಗೆ ರೋಗಲಕ್ಷಣ ಕಂಡರೆ, ಅವರಲ್ಲಿ 1,937 ಜನ ತೀರಿಕೊಂಡರು. ಆದರೆ ಇದು ಸಹಜ ಎನ್ನುತ್ತದೆ ವೈದ್ಯರ ತಂಡ. ಸೋಂಕುಪೀಡಿತರ ಸಂಖ್ಯೆ ಏರುತ್ತ, ಮುಂದೊಮ್ಮೆ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ಚಕ್ರ ನಿಧಾನಗತಿಗೆ ತಿರುಗಲೇಬೇಕು, ಆಗ ‘ಸಮುದಾಯ ನಿರೋಧಕಶಕ್ತಿ’ ಬಂದಿರುತ್ತದೆ ಎಂಬ ಲೆಕ್ಕಾಚಾರ.

ವಯಸ್ಕರು ಚಿಕಿತ್ಸೆ ಪಡೆಯುತ್ತಿದ್ದ ನರ್ಸಿಂಗ್ ಹೋಮ್‌ಗಳಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚತೊಡಗಿದಾಗ ಟೆಗ್ನೆಲ್ ತಂಡ ಬಹಳಷ್ಟು ಟೀಕೆ ಎದುರಿಸಿತು. ಇಪ್ಪತ್ತೆರಡು ಖ್ಯಾತ ವಿಜ್ಞಾನಿಗಳು ದೇಶದ ಆರೋಗ್ಯ ನೀತಿಯನ್ನು ಖಂಡಿಸಿದರು. ಆದರೂ ಸರ್ಕಾರವು ಆರೋಗ್ಯ ಸಂಸ್ಥೆಗೆ ತನ್ನ ಸಹಕಾರವನ್ನು ಮುಂದುವರಿಸುತ್ತಿದೆ.

ಡಾಕ್ಟರ್ ಟೆಗ್ನೆಲ್ ತಂಡ ಪ್ರತೀ ಬೆಳಿಗ್ಗೆ ಸಂಗ್ರಹಿಸಿದ ಮಾಹಿತಿಯ ವಿಶ್ಲೇಷಣೆಯನ್ನು ಆಧರಿಸಿ ಮುಂದಿನ ಹೆಜ್ಜೆಯನ್ನು ನಿರ್ಧರಿಸುತ್ತದೆ. ನಿತ್ಯವೂ ತಂಡದ ವಿವಿಧ ಕ್ಷೇತ್ರಗಳ ತಜ್ಞರು ಅಂದು ತೆಗೆದುಕೊಳ್ಳುತ್ತಿರುವ ಹೆಚ್ಚುವರಿ ಸುರಕ್ಷಾ ಕ್ರಮಗಳನ್ನು ಪತ್ರಿಕಾ ಪ್ರಕಟಣೆಯ ಮೂಲಕ ಜನರಿಗೆ ತಿಳಿಸುತ್ತಾರೆ.

‘ಮೊದಮೊದಲು ಆತಂಕವಿತ್ತು. ಆದರೆ, ಈಗ ಸ್ವೀಡನ್ ಮಾದರಿಯಲ್ಲಿ ನನಗೆ ಪೂರ್ತಿ ವಿಶ್ವಾಸ ಹುಟ್ಟಿದೆ’ ಎನ್ನುತ್ತಾಳೆ ಅಶ್ವಿನಿ.

ಬಿಗಿ ಕಾನೂನುಗಳ ಬದಲು ಹೆಚ್ಚು ಹೆಚ್ಚು ಮಾರ್ಗಸೂಚಿಗಳು ಜನರನ್ನು ತಲುಪುತ್ತಿವೆ ಎನ್ನುವ ಪ್ರಧಾನಿ ಸ್ಟೇಫನ್ ಲವಿಯನ್‌ ‘ನಾವು ಹಿರಿಯರು, ಹಿರಿಯರ ಹಾಗೇ ವರ್ತಿಸಬೇಕು, ವದಂತಿಗಳನ್ನು ಹರಡಬಾರದು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾರೂ ಒಂಟಿಯಲ್ಲ. ಆದರೆ, ಪ್ರತಿಯೊಬ್ಬರೂ ಜವಾಬ್ದಾರರು’ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸ್ವೀಡನ್‌ನಲ್ಲಿ ಕೊರೊನಾ ಏರುಗತಿ ಮಂದವಾಗಿದೆ. ‘ನಂಬಿಕೆ ಆಧಾರಿತ’ ಮಾದರಿಯ ಈ ಪಥ ಮುಂದೆ ಎಲ್ಲಿಗೆ ತಲುಪುತ್ತದೆಂದು ಕಾದು ನೋಡಬೇಕಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.