ADVERTISEMENT

ವಿಪತ್ತು, ವಿನಿಮಯ, ವಿಕೇಂದ್ರೀಕರಣ

ಸಂಪದ್ಭರಿತ ಸಮಾಜಕ್ಕಿಂತ ಸೌಹಾರ್ದದ ಸಮಾಜ ನಿರ್ಮಾಣವಾಗಬೇಕಿದೆ

ಜಿ.ವಿ.ಆನಂದಮೂರ್ತಿ
Published 3 ಏಪ್ರಿಲ್ 2020, 20:00 IST
Last Updated 3 ಏಪ್ರಿಲ್ 2020, 20:00 IST
   

ಭಾರತದ ಧರ್ಮ ಮತ್ತು ರಾಜಕಾರಣವು ದೀರ್ಘಕಾಲೀನ ವಿರಾಮದಲ್ಲಿರುವ ಈ ಹೊತ್ತಿನಲ್ಲಿ, ಜನರ ನಡುವಿನಿಂದ ಬಂದಿರುವ ಕೆಲವು ಸುದ್ದಿಗಳು ಭವಿಷ್ಯದಲ್ಲಿ ಕಾಣಬಹುದಾದ ಭರವಸೆಯ ದಾರಿಯನ್ನು ನಮಗೆ ತೋರುತ್ತಿವೆ. ಮೈಸೂರು ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಜನರು ಲಾಕ್‌ಡೌನ್‌ನಿಂದಾಗಿ ಹಳ್ಳಿಗಳನ್ನು ಬಿಟ್ಟು ಹೊರಬರದೆ, ದವಸ-ಧಾನ್ಯ, ತರಕಾರಿ, ಹಾಲು ಮುಂತಾದ ದೈನಂದಿನ ವಸ್ತುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾ ಯಾರಿಗೂ ಕೊರತೆಯಾಗದಂತೆ ಹಾಗೂ ಏನೂ ಇಲ್ಲದವರಿಗೆ ಉಚಿತವಾಗಿ ದವಸ –ಧಾನ್ಯವನ್ನು ಕೊಡುವ ಮತ್ತು ಮುಖ್ಯವಾಗಿ ನಗರಗಳನ್ನು ಅವಲಂಬಿತದಂತೆ ಬದುಕುತ್ತಿರುವ ಸಂತಸಕರ ಸುದ್ದಿಯೊಂದು ಪ್ರಕಟವಾಗಿದೆ. ಇದು ‘ವಿಪತ್ತು ಸೃಷ್ಟಿಸಿದ ಒಂದುಗೂಡುವಿಕೆ’. ‘ಕೊಳ್ಳುಬಾಕತನ’ವನ್ನೇ ಧರ್ಮವನ್ನಾಗಿ ಮಾಡಿಕೊಂಡಿರುವ ಹಾಗೂ ಹೆಚ್ಚು ಸ್ವಾರ್ಥಮಯವಾಗಿರುವ ಇಂದಿನ ನಗರಗಳಿಗೆ ಇವೆಲ್ಲವೂ ಸೌಹಾರ್ದದ ಬದುಕಿನ ಪಾಠಗಳಾಗಬೇಕಿದೆ.

ಹಿಂದೆ ಸಮುದಾಯಗಳನ್ನು ಬೆಸೆಯುತ್ತಿದ್ದ ವಸ್ತುಗಳ ವಿನಿಮಯದಂಥ ಆರ್ಥಿಕ ಮೂಲದ ಕೊಡುಕೊಳ್ಳುವಿಕೆಯ ಚಟುವಟಿಕೆಗಳು ಹಳ್ಳಿಗಳನ್ನು ಸ್ವಾವಲಂಬನೆಯ ಕಡೆಗೆ ಮುನ್ನಡೆಸುತ್ತಿದ್ದವು. ಹಳ್ಳಿಗಳನ್ನು ನಗರಗಳ ಮೇಲಿನ ಅವಲಂಬನೆಯಿಂದ ಮುಕ್ತಗೊಳಿಸುವ ದಿಕ್ಕಿನಲ್ಲಿ ಇವು ಮಹತ್ವದ ಹೆಜ್ಜೆಗಳಾಗುತ್ತವೆ. ಇಂದು ಈ ವಿದ್ಯಮಾನಗಳು ಸಣ್ಣದಾಗಿ ಕಾಣುತ್ತಿರಬಹುದು! ಆದರೆ, ಭವಿಷ್ಯದಲ್ಲಿ ಇದನ್ನೇ ಸಮಾಜದ ಆರೋಗ್ಯವನ್ನು ಕಾಪಾಡುವ ‘ದೈವಿಕತೆ’ಯಂತೆ ಆಚರಣೆಯಲ್ಲಿ ತಂದಿದ್ದೇ ಆದರೆ, ಅದರಿಂದ ಉಂಟಾಗುವ ಸಾಮಾಜಿಕ ಸಾಮರಸ್ಯದ ಸಂಗತಿಗಳು ಅಲೆಯಂತೆ ಹಬ್ಬುವುದರಲ್ಲಿ ಯಾವ ಸಂದೇಹವೂ ಇಲ್ಲ.

ಮುಖ್ಯವಾಗಿ, ಹಳ್ಳಿಗಾಡಿನ ಮಹಿಳೆಯರಿಂದ ನಡೆಯುತ್ತಿರುವ, ಪರಸ್ಪರ ನೆರವಾಗುವ ಈ ಚಟುವಟಿಕೆ ಹೆಚ್ಚು ಮಾನವೀಯ ನೆಲೆಯಲ್ಲಿ ನಡೆಯುತ್ತಿದೆ. ಸ್ತ್ರೀಚೈತನ್ಯದ ಪಾಲ್ಗೊಳ್ಳುವಿಕೆಯಿಂದ ಈ ಚಟುವಟಿಕೆಯು ಸಮಾಜವನ್ನು ಬೆಸೆಯುವುದರಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಭಾರತದ ಮನಸ್ಸು ಆಳದಲ್ಲಿ ಬಯಸುವುದು ಇಂತಹ ಬದುಕನ್ನೇ.

ADVERTISEMENT

ಹಳ್ಳಿಗಳನ್ನು ಸಬಲಗೊಳಿಸುವ ಈ ವಿನಿಮಯವು ದವಸ-ಧಾನ್ಯಗಳಿಗೇ ನಿಲುಗಡೆಯಾಗಬಾರದು. ಇದು ಹೀಗೆಯೇ ಮುಂದುವರಿದರೆ, ಹಳ್ಳಿಗಳಿಂದ ಕಣ್ಮರೆಯಾಗಿರುವ ಕುಶಲಕರ್ಮಿಗಳು ಗ್ರಾಮಗಳಿಗೆ ಹಿಂದಿರುಗಬಹುದು! ನಗರ ಜೀವನದ ವಿಕೃತಿಗಳನ್ನು ಕಂಡಿರುವ ಯುವಕರು ಮತ್ತೆ ತಮ್ಮ ಹಳ್ಳಿಗಳತ್ತ ಮುಖ ತಿರುಗಿಸಿ, ತಮ್ಮ ತಮ್ಮ ಊರುಗಳನ್ನು ಸುಂದರಗೊಳಿಸಲು ಮುಂದಾಗಬಹುದು. ಹೂಳು ತುಂಬಿ ಕಣ್ಮರೆಯಾಗಿರುವ ಕೆರೆ-ಕಟ್ಟೆಗಳು ಮತ್ತೆ ಜೀವಪಡೆದು ಉಸಿರಾಡುತ್ತವೆ.

ಕೈಮಗ್ಗ ಮತ್ತೆ ಶಬ್ದ ಮಾಡುತ್ತದೆ. ಗಾಣ, ಕುಂಬಾರರ ತಿಗರಿಗಳು ಮತ್ತೆ ತಿರುಗುತ್ತವೆ. ಮೇದರ ಕೈಗಳು ಬಿಡುವಿಲ್ಲದಂತಾಗುತ್ತವೆ. ಇದರ ಬೆನ್ನಲ್ಲೇ ಅಲ್ಲಿನ ಮಣ್ಣು, ಮರವಳಿ, ನೀರು, ಗೊಬ್ಬರ ಎಲ್ಲವೂ ಹಳ್ಳಿಗಳ ಮಣ್ಣಿನಲ್ಲಿಯೇ ಉಳಿದುಕೊಳ್ಳುತ್ತವೆ. ಬೇಸಾಯದ ಚಕ್ರ ಉರುಳಲು ಆರಂಭಗೊಳ್ಳುತ್ತದೆ. ಪಶುಸಂಗೋಪನೆ ಮತ್ತೆ ಜೀವ ಪಡೆಯುತ್ತದೆ. ಆಗ ಹಳ್ಳಿಗಳು ಮೊದಲಿನಂತೆ ತಮ್ಮಲ್ಲಿರುವ ಯುವಕರಿಗೆ ಉದ್ಯೋಗ ಕಲ್ಪಿಸುವ ಕೇಂದ್ರಗಳಾಗುತ್ತವೆ.

ಆಗ ಪರಸ್ಪರ ನೆರವಾಗುವ ಕ್ರಿಯೆಗಳು ಜಾತಿ– ಸಂಪ್ರದಾಯಗಳನ್ನು ಮುರಿದು ಮನೆಯಿಂದ ಮನೆಗೆ, ಹಳ್ಳಿಯಿಂದ ಹಳ್ಳಿಗೆ ಹಬ್ಬುತ್ತಾ ಹೋಗುತ್ತವೆ. ಭಾರತದ ಹಳ್ಳಿಗಳು ಇದ್ದದ್ದು ಹೀಗೆಯೇ. ಭಾರತದ ಗ್ರಾಮಗಳ ಆರ್ಥಿಕ ಸಬಲೀಕರಣಕ್ಕೆ ಗಾಂಧೀಜಿ ಕೊಟ್ಟ ನೈತಿಕ ಶಬ್ದಗಳನ್ನೇ ನಾವೀಗ ಮರುಬಳಕೆ ಮಾಡಬೇಕಿದೆ. ಸಂಪದ್ಭರಿತ ಸಮಾಜಕ್ಕಿಂತ, ಸೌಹಾರ್ದ ಸಮಾಜದ ನಿರ್ಮಾಣ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕಿದೆ.

ಇವೆಲ್ಲವೂ ನಾವು ಯಾವುದೇ ತತ್ವ, ಸಿದ್ಧಾಂತ ಹಾಗೂ ನಿಧಿಯ ನೆರವಿಲ್ಲದೆ, ಕೇವಲ ವಿವೇಕದ ನಡವಳಿಕೆ ಮತ್ತು ಸಾಮೂಹಿಕ ಸಹಕಾರದಿಂದ ವಸಾಹತೋತ್ತರ ಆಧುನಿಕತೆ ಸೃಷ್ಟಿಸಿದ ‘ಕೇಂದ್ರೀಕರಣ’ದ ವಿರುದ್ಧ ಸಾಧಿಸಬಹುದಾದ ಗೆಲುವುಗಳು. ಈ ಬಗೆಯ ಪರಿವರ್ತನೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯೂ ಅನುಷ್ಠಾನಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ! ಭಾರತದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಒಂದು ಸಮಪ್ರಮಾಣಕ್ಕೆ ಬರುವವರೆಗೂ, ವಿಕೇಂದ್ರೀಕರಣ ತತ್ವದ ಪಾಲನೆಯಾಗಿರುವ ಈ ಸೌಹಾರ್ದದ ಬದುಕು ಹೀಗೇ ಮುಂದುವರಿಯಲಿ ಎಂಬ ಆಶಯ ಮೂಡುತ್ತದೆ.

ಇವೆಲ್ಲವೂ ನಡುದಾರಿಯಲ್ಲಿ ಸಿಗುವ ತಂಗುದಾಣಗಳಲ್ಲ! ಈ ದಾರಿಯಲ್ಲಿ ನಮ್ಮ ಪಯಣ ಹೀಗೆಯೇ ಮುಂದುವರಿಯುತ್ತದೆ. ಇದರಿಂದಾಗಿ ಪರಿಸರಸ್ನೇಹಿ ಮತ್ತು ಮಾನವೀಯ ಸಂಬಂಧಗಳನ್ನು ಬೆಸೆಯುವ ನಡಿಗೆ ಹಾಗೂ ಸೈಕಲ್ ಬಳಕೆ ಹೆಚ್ಚುತ್ತದೆ. ಇವೆಲ್ಲವೂ ಕಡಿಮೆ ಪ್ರಮಾಣದ ಸಾಧನೆಗಳಲ್ಲ! ಈಗಿನ ವರದಿಯಂತೆ, ಲಾಕ್‌ಡೌನ್ ಪರಿಣಾಮವಾಗಿ ಪರಿಸರದ ಸಮತೋಲನ ಒಂದು ಹಿಡಿತಕ್ಕೆ ಬಂದಿದೆ. ಪ್ರಕೃತಿಯನ್ನು ಗಾಸಿಗೊಳಿಸದ ಸರಳ ಜೀವನ, ವ್ಯಸನಗಳಿಲ್ಲದ ಬದುಕು, ಸಂಗ್ರಹ ಗುಣವಿಲ್ಲದ ಮನಸ್ಸು ಮತ್ತು ಎಲ್ಲರನ್ನೂ ಕಾರುಣ್ಯದಿಂದ ನೋಡುವ ಕಣ್ಣು ಇವೇ ‘ಶಾಂತಿ’ ಅಥವಾ ‘ನೆಮ್ಮದಿ’ಯ ಬದುಕಿನ ಕೀಲಿಕೈಗಳು. ಬದಲಾದ ಸನ್ನಿವೇಶದಲ್ಲಿ, ಪ್ರಕೃತಿಯೇ ನಮ್ಮ ಮೊದಲ ‘ದೇವರು’ ಎಂದು ಹೇಳುವ ಕಾಲ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.