ಗಣರಾಜ್ಯೋತ್ಸವದ ನೆಪ ಮಾಡಿಕೊಂಡು ಸಂದೀಪ್ ಶಾಸ್ತ್ರಿ ಅವರು, ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಗೊಳ್ಳುತ್ತಿರುವುದು, ಚುನಾವಣೆಗಳಲ್ಲಿ ಜನ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆ ಪಡುವಂಥ ವಿಷಯಗಳಲ್ಲಿ ಒಂದು ಎಂದು ಹೇಳುತ್ತಲೇ ಭರವಸೆಗಳು ಮತ್ತು ಅನುಷ್ಠಾನದ ನಡುವಿನ ಕಂದಕದ ಕುರಿತು ಪ್ರಸ್ತಾಪಿಸಿರುವುದು (ಪ್ರ.ವಾ., ಜ. 26) ಅತ್ಯಂತ ಸರಿಯಾಗಿಯೇ ಇದೆ. ಆದರೂ ಭಾರತೀಯ ಸಮಾಜ ಏಕತೆಗೆ ಕಂಟಕಪ್ರಾಯವಾದ ರೀತಿಯಲ್ಲಿ ಕೋಮುಗಳ ಧ್ರುವೀಕರಣದತ್ತ ಸಾಗುತ್ತಿರುವು
ದರ ಕುರಿತೇ ಅವರ ಒತ್ತು ಹೆಚ್ಚು ಇರುವಂತಿದೆ.
ಭಾರತೀಯ ಸಮಾಜ ಸಾಗಿಬಂದ ಪರಂಪರೆಯತ್ತ ಕಣ್ಣು ಹಾಯಿಸಿದಾಗ, ಆ ಕಂಟಕವನ್ನು ಗೆದ್ದು ನಿಲ್ಲುತ್ತದೆಂದೇ ನಾವು ಭರವಸೆ ತಾಳಬಹುದು. ಆದರೆ ಭಾರತೀಯ ಪ್ರಜಾಪ್ರಭುತ್ವದ ಹೆಮ್ಮರವನ್ನು ಒಳಗಿನಿಂದಲೇ ಕುಟ್ಟೆಹುಳುವಿನಂತೆ ಕೊರೆಯುತ್ತಿರುವ ಬಹುಮುಖ್ಯ ಸಂಗತಿಯನ್ನು ಅವರೇಕೋ ಮರೆತಂತಿದೆ. ಅದೆಂದರೆ, ಏರುತ್ತಿರುವ ಚುನಾವಣಾ ವೆಚ್ಚಗಳು ಮತ್ತು ರಾಜಕಾರಣಿಗಳು, ಅಧಿಕಾರಶಾಹಿಯ ಮುಗಿಲುಮುಟ್ಟಿರುವ ಭ್ರಷ್ಟಾಚಾರ.
ಈ ಹೊತ್ತು ಒಬ್ಬ ನೇರ ನಡೆನುಡಿಯ, ಹಣಬಲ ಇಲ್ಲದ ಪ್ರಾಮಾಣಿಕ ವ್ಯಕ್ತಿಯೊಬ್ಬ ಚುನಾವಣೆಗಳಲ್ಲಿ ಸ್ಪರ್ಧಿಸುವುದಿರಲಿ, ಸ್ಪರ್ಧಿಸುವುದನ್ನು ಯೋಚಿಸಲೂ ಆಗದಷ್ಟು ಮಟ್ಟಿಗೆ ಚುನಾವಣೆಗಳಲ್ಲಿ ಹಣದ ತಾಂಡವ ನರ್ತನ ನಡೆಯುತ್ತಿದೆ. ಈ ಚುನಾವಣಾ ವೆಚ್ಚವನ್ನು ಭರ್ತಿ ಮಾಡಿಕೊಳ್ಳಲೋ ಎಂಬಂತೆ, ಗೆದ್ದುಬಂದ ಜನಪ್ರತಿನಿಧಿಗಳು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಣ ಮಾಡುವುದನ್ನೇ ಜೀವನಕ್ರಮವಾಗಿ ರೂಪಿಸಿಕೊಳ್ಳಲು ನಿರ್ಲಜ್ಜರಾಗಿ ಹಾತೊರೆಯುತ್ತಿರುವುದು ಹೇಸಿಗೆ ಹುಟ್ಟಿಸುತ್ತದೆ.
ಖರ್ಚು ಮಾಡಿರುವುದನ್ನು ವಾಪಸ್ ಪಡೆಯುವುದಷ್ಟಕ್ಕೇ ಈ ಅಕ್ರಮ ಗಳಿಕೆ ಸೀಮಿತಗೊಂಡಿದ್ದರೆ ಇಷ್ಟೊಂದು ಕಳವಳದ ಅಗತ್ಯವಿರಲಿಲ್ಲ ಮತ್ತು ನಮ್ಮ ಉದಾರಿಗಳಾದ ಜನ ಅಂಥದ್ದನ್ನು ಕ್ಷಮಿಸುತ್ತಾರೆ. ಆದರೆ ಆ ಹಣದ ದಾಹವೆಂಬುದು ಅನೇಕ ತಲೆಮಾರುಗಳು ಕೂತು ತಿಂದರೂ ಸವೆಯಲಾರ
ದೆಂಬಷ್ಟು ಮಟ್ಟಿನ ಹಣದ ಹಪಹಪಿಗೆ ಇಳಿದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಷ್ಟಾಗಿದೆ.
ಇನ್ನು ಜಾತಿಗಳನ್ನು ಮೀರಿ ಸಾಮರ್ಥ್ಯ ಮತ್ತು ಜನಪ್ರಿಯತೆಯ ಮೇಲೆ ಆಯ್ಕೆಯಾದ ಅತಿ ವಿರಳ ನಿದರ್ಶನಗಳು ಇರುವುದು ನಿಜವಾದರೂ ಚುನಾವಣೆಗಳು ಸದ್ಯಕ್ಕಂತೂ ಮುಖ್ಯವಾಗಿ ಜಾತಿಗಳ ಆಧಾರದ ಮೇಲೆಯೇ ನಡೆಯುತ್ತಿವೆ. ಅಧಿಕಾರ ರಾಜಕಾರಣವೇ ಮುಖ್ಯವಾಗಿರುವುದರಿಂದ ರಾಜಕೀಯ ಪಕ್ಷಗಳ ನೀತಿಗಳು ಲೆಕ್ಕಕ್ಕೇ ಇಲ್ಲ. ‘ನಮ್ಮ ಪಕ್ಷದ ನೀತಿಗಳನ್ನು ಒಪ್ಪಿ ಬಂದವರಿಗೆ ತೆರೆದೆದೆಯ ಸ್ವಾಗತ’ ಎಂಬುದು ಮುಖಂಡರ ಎಂದಿನ ಪಲ್ಲವಿಯೇ ಆದರೂ ‘ರಾತ್ರಿ ಮಲಗುವಾಗ ಒಂದು ಪಕ್ಷದಲ್ಲಿದ್ದವರು ಬೆಳಗಾಗ ಏಳುವ ಹೊತ್ತಿಗೆ ಇನ್ನೊಂದು ಪಕ್ಷದವರಾಗಿ ಬದಲಾಗಿಬಿಡುವ’ ಚೋದ್ಯ ಯಾರಿಗೆ ತಾನೇ ತಿಳಿದಿಲ್ಲ.
ಜೀವಮಾನವಿಡೀ ಒಂದು ಪಕ್ಷದಲ್ಲಿದ್ದು ಉನ್ನತ ಅಧಿಕಾರ ಸ್ಥಾನಗಳನ್ನು ಅಲಂಕರಿಸಿದ ನಂತರದಲ್ಲೂ ತನ್ನನ್ನು ಮಂತ್ರಿಗಿರಿಗೆ ಪರಿಗಣಿಸಲಿಲ್ಲವೆಂದೋ ತನಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲವೆಂಬ ಕಾರಣಕ್ಕೋ ಯಾರನ್ನೋ ಕಂಡರೆ ಆಗುವುದಿಲ್ಲವೆಂಬ ಕಾರಣಕ್ಕೋ ಪಕ್ಷ ತ್ಯಜಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಈ ವಿಷಯದಲ್ಲಿ ಎಡಪಕ್ಷಗಳು ಮಾತ್ರ ಅಪವಾದ. ಅಲ್ಲಿ ಹೀಗೆಲ್ಲ ಕ್ಷುಲ್ಲಕ ಕಾರಣಕ್ಕೆ ಪಕ್ಷ ತ್ಯಜಿಸಿದ ನಿದರ್ಶನಗಳಿಲ್ಲ. ಈಗ ಅದಕ್ಕೊಂದು ಪಾರಿಭಾಷಿಕ ಪದವನ್ನೇ ಸೃಷ್ಟಿಸಿದ್ದರೂ (ಆಪರೇಷನ್), ಅದು ನಗೆಗೀಡಾಗಿರುವುದನ್ನು ಅವರು ಮರೆತು ಮತ್ತೆ ಮತ್ತೆ ಅದನ್ನೇ ಪುನರಾವರ್ತಿಸುತ್ತಿರುವುದು ಇನ್ನೊಂದು ದುರಂತ.
ಸಂವಿಧಾನಾತ್ಮಕವಾಗಿ ಸ್ಥಾಪಿತವಾದ ಅನೇಕ ಮಹತ್ವದ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು
(ಉದಾಹರಣೆಗೆ, ಸಿಬಿಐ, ಲೋಕಾಯುಕ್ತ, ಲೋಕಸೇವಾ ಆಯೋಗ, ಇ.ಡಿ, ಆದಾಯ ತೆರಿಗೆ ಇಲಾಖೆ...) ಯಾರೂ ನಂಬದಷ್ಟು ಮಟ್ಟಿಗೆ ಹಾಳುಗೆಡವುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಲ್ಲದೆ ಮತ್ತೇನು? ಈ ವಿಷಯದಲ್ಲಿ ಆ ಪಕ್ಷ ಈ ಪಕ್ಷ ಎಂಬ ಭೇದವಿಲ್ಲದೆ ಎಲ್ಲ ಪಕ್ಷಗಳ ಪಾಲೂ ಸ್ಪರ್ಧಾತ್ಮಕ
ವಾಗಿಯೇ ಇದೆ. ರಾಷ್ಟ್ರೀಯ ಮಹತ್ವದ ವಿಚಾರಗಳಲ್ಲಾದರೂ ಪಕ್ಷರಾಜಕಾರಣವನ್ನು ಮೀರುವ ಸಂದರ್ಭಗಳು ಈಚೀಚೆಗೆ ತೀರಾ ವಿರಳವಾಗುತ್ತಿವೆ. ಯಾರಿಗೆ ಯಾರನ್ನು ಕಂಡರೂ ಗೌರವವೆಂಬುದು ಲವಲೇಶವೂ ಇಲ್ಲದ ರೀತಿಯಲ್ಲಿ ಅವರ ಮಾತುಗಳಲ್ಲಿ ಸಾರ್ವಜನಿಕವಾಗಿ ಬೀದಿಜಗಳದ ಭಾಷೆಯ ಬಳಕೆಯಾಗುತ್ತಿರುವುದು ಪ್ರಜಾಪ್ರಭುತ್ವದ ಪ್ರಬುದ್ಧತೆಯ ಲಕ್ಷಣವೆಂದು ಯಾರು ತಾನೆ ಹೇಳಲು ಸಾಧ್ಯ?
ರಾಜಕಾರಣಿಗಳ ಭ್ರಷ್ಟಾಚಾರದೊಂದಿಗೆ ತೀವ್ರಪ್ರತಿಸ್ಪರ್ಧೆಯನ್ನೊಡ್ಡುವ ರೀತಿಯಲ್ಲಿ ಅಧಿಕಾರಶಾಹಿಯ ಭ್ರಷ್ಟಾಚಾರ ಸಾಗಿರುವುದು ನಮ್ಮ ಪ್ರೀತಿಯ ಪ್ರಜಾಪ್ರಭುತ್ವಕ್ಕೆ ಮತ್ತೊಂದು ಕೊಡಲಿಪೆಟ್ಟಾಗಿರುವುದಕ್ಕೆ ನಾವು ಮೂಕಸಾಕ್ಷಿಗಳಾಗಿದ್ದೇವೆ. ಇದೊಂದು ರೀತಿಯ ಬೀಜವೃಕ್ಷ ನ್ಯಾಯದಂತಾಗಿದೆ. ಆದರೆ ಈಗಂತೂ ಶ್ರೀಸಾಮಾನ್ಯರ ಮೇಲೆ ಇದರಿಂದ ಆಗುತ್ತಿರುವ ದುಷ್ಪರಿಣಾಮವನ್ನು ಮರೆತ ರೀತಿಯಲ್ಲಿ ನಮ್ಮ ಭವ್ಯಭಾರತದಲ್ಲಿ ಎರಡೂ ಭ್ರಷ್ಟಾಚಾರಗಳು ಪರಸ್ಪರ ಕೈ ಕೈ ಹಿಡಿದು ಸಾಗುತ್ತಿರುವುದಂತೂ ನಿಜ. ಇದು ನಿಜಕ್ಕೂ ಜನತೆಯ ದುರ್ದೈವವಲ್ಲದೆ ಬೇರೆಯಲ್ಲ.
ದೇಶವು ಗಣರಾಜ್ಯೋತ್ಸವದ ಅಮೃತ ಮಹೋತ್ಸವದತ್ತ ದಾಪುಗಾಲು ಹಾಕುತ್ತ ಸಾಗಿರುವ ಈಗಲಾದರೂ ಈ ಕುರಿತು ಜನತೆ, ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಆತ್ಮಾವಲೋಕನ ಮಾಡಿಕೊಳ್ಳುವರೆಂದು ಆಶಿಸೋಣವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.