ADVERTISEMENT

ಸಂಗತ | ಕರೀ ಬೂಷ್ಟಿನ ಕರಾಳ ಕುಣಿತ

ಸಕ್ಕರೆಯ ಮೇಲಿನ ಅಕ್ಕರೆಯೇ ಇದಕ್ಕೆ ಕಾರಣ

ನಾಗೇಶ ಹೆಗಡೆ
Published 17 ಮೇ 2021, 19:30 IST
Last Updated 17 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್‌ ಕಾಯಿಲೆಯಿಂದ ಇದೀಗ ತಾನೇ ಎದ್ದು ಓಡಾಡುವಂತಾದ ಕೆಲವರ ಮೂಗಿಗೆ ಈಗ ಹೊಸದೊಂದು ವೈರಿ ವಕ್ಕರಿಸುತ್ತಿದೆ. ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್)‌ ಎಂಬ ಬೂಷ್ಟು ಬೀಜಾಣು ನುಗ್ಗಿ ಬಂದು ಹೊಸದೊಂದು ಕಾಯಿಲೆಯನ್ನು ತರುವಂತಾಗಿದೆ. ವಿಶೇಷವಾಗಿ ಇದು ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇದ್ದವರಿಗೆ ಜಾಸ್ತಿ ಕಾಟ ಕೊಡುತ್ತಿದೆ. ಶರೀರದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟರೆ ಈ ಕಾಯಿಲೆಯಿಂದ ಬಚಾವಾಗಬಹುದು.

ಬೂಷ್ಟು (ಬೂಜು) ಅಥವಾ ಶಿಲೀಂಧ್ರ ನಮ್ಮ ಸುತ್ತ ಎಲ್ಲ ಕಡೆ ಸೂಕ್ಷ್ಮ ಅಣುವಿನ ರೂಪದಲ್ಲಿರುತ್ತವೆ. ಮಣ್ಣು, ನೀರು, ಗಾಳಿಯಲ್ಲಿ ಸಂಚರಿಸುತ್ತ, ಊಟ ಸಿಕ್ಕರೆ ತಕ್ಷಣ ಉದ್ದುದ್ದ ಬೆಳೆಯುತ್ತ, ಸಂತಾನವೃದ್ಧಿ ಮಾಡುತ್ತ ಹೋಗುತ್ತವೆ. ಲಿಂಬೆ ಹೋಳು, ಕೊಳೆತ ಹಣ್ಣು, ತರಕಾರಿ, ರೊಟ್ಟಿ ಪಲ್ಲೆ ಎಲ್ಲವುಗಳ ಮೇಲೆ ಬೆಳೆಯುತ್ತವೆ. ಎಲ್ಲಿ ಏನೇ ಬೆಳೆಯಲಿ, ಅವನ್ನು ಚಿಂದಿಚಿಂದಿ ಮಾಡಿ ಕಣರೂಪಕ್ಕೆ ತಂದು ಮಣ್ಣಿಗೆ ಸೇರಿಸುವ ಕೆಲಸ ಅವುಗಳದ್ದು.

ಪ್ರಕೃತಿಯಲ್ಲಿ ಸುಮಾರು 35 ಲಕ್ಷ ಪ್ರಭೇದಗಳಿಗೆ ಸೇರಿದ ಶಿಲೀಂಧ್ರಗಳಿವೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ನಮಗೆಲ್ಲ ಪರಿಚಿತವಿರುವ ಅಣಬೆ (ನಾಯಿಕೊಡೆ) ಅವುಗಳಲ್ಲಿ ಅತಿ ದೊಡ್ಡದು. ಕಣ್ಣಿಗೆ ಕಾಣದ ಸೂಕ್ಷ್ಮ ಅಣಬೆಗಳಲ್ಲಿ ಕೆಲವು ನಮಗೆ ತುಂಬ ಪ್ರಯೋಜನಕಾರಿ; ಇನ್ನು ಕೆಲವು ಅಷ್ಟೇ ಕಾಟ ಕೊಡುತ್ತವೆ. ಈಗ ಚರ್ಚೆಯಲ್ಲಿರುವ ಕಪ್ಪುಶಿಲೀಂಧ್ರಗಳು ಮ್ಯೂಕರ್‌ ಮೈಸಿಟೀಸ್‌ ಎಂಬ ವರ್ಗಕ್ಕೆ ಸೇರಿವೆ.

ADVERTISEMENT

ಶಿಲೀಂಧ್ರದ ಸೂಕ್ಷ್ಮ ಬೀಜಕಣಗಳು ನಮ್ಮ ಪಾದದ ಉಂಗುಷ್ಠದಿಂದ ಹಿಡಿದು ತಲೆಯವರೆಗಿನ ಶರೀರದ ಯಾವ ಭಾಗಕ್ಕಾದರೂ ಅಂಟಿ ಕೂತು ಬೆಳೆದು ಹಿಂಸೆ ಕೊಡಬಹುದು. ದೇಹದ ಒಳಕ್ಕೂ ಹೊಕ್ಕು ಹಾವಳಿ ಎಬ್ಬಿಸಬಹುದು. ಮೂಗಿನ ಮೂಲಕ ಪ್ರವೇಶ ಪಡೆಯುವ ಈ ಕಪ್ಪು ಶಿಲೀಂಧ್ರ ತುಂಬ ಅಪಾಯಕಾರಿಯಾದರೂ ಅಷ್ಟೇ ಅಪರೂಪವಾದದ್ದು. ಸಾಮಾನ್ಯವಾಗಿ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿರುವ (ಅಂದರೆ ರೋಗನಿರೋಧಕ ಶಕ್ತಿ ಸಾಕಷ್ಟು ದುರ್ಬಲವಾಗಿರುವ) ಪ್ರತೀ ಲಕ್ಷ ಜನರಲ್ಲಿ ಹದಿನಾಲ್ಕು ಜನರ ಮೇಲೆ ಇದು ದಾಳಿ ಮಾಡುತ್ತದೆ.

ಮೂಗಿನೊಳಕ್ಕೆ ತೂರಿಕೊಂಡ ಇದು ಶುದ್ಧ ರಕ್ತನಾಳಕ್ಕೆ ಹೋಗಿ ರಕ್ತದ ಸಕ್ಕರೆಯನ್ನು ಹೀರುತ್ತ ಬೆಳೆಯುತ್ತ ತನ್ನ ಸಂತಾನವೃದ್ಧಿ ಮಾಡಿಕೊಳ್ಳುತ್ತ ಹೋಗುತ್ತದೆ. ಚಿಕಿತ್ಸೆ ನೀಡದಿದ್ದರೆ ಕಣ್ಣು, ಕಿವಿ, ವಸಡು ಕೊನೆಗೆ ಮಿದುಳಿನಲ್ಲೂ ಇದರ ಸಂತಾನ ಬೆಳೆಯುತ್ತದೆ. ಈ ಕಾಯಿಲೆಗೆ ವೈದ್ಯವಿಜ್ಞಾನದಲ್ಲಿ ‘ಮ್ಯೂಕರ್‌ಮೈಕೊಸಿಸ್‌’ ಎನ್ನುತ್ತಾರೆ. ಇದರ ದಾಳಿಗೆ ಸಿಲುಕುವವರಲ್ಲಿ ಶೇಕಡ 60- 70 ಮಂದಿ ಡಯಾಬಿಟೀಸ್‌ ಕಾಯಿಲೆ ಇದ್ದವರೇ ಆಗಿರುತ್ತಾರೆ. ಕೋವಿಡ್‌ಗೆ ಸಿಲುಕಿದವರನ್ನು ಮತ್ತು ಅಂಗಾಂಶ ಕಸಿ ಮಾಡಿಸಿಕೊಂಡು ಚೇತರಿಸಿಕೊಳ್ಳುತ್ತಿರುವವರನ್ನು ಇದು ಹೆಚ್ಚಾಗಿ ಬಾಧಿಸುತ್ತದೆ. ಈ ಕಾಯಿಲೆಗೆ ಸೋಂಕು ಗುಣವಿಲ್ಲ. ಅಷ್ಟರಮಟ್ಟಿಗೆ ನಾವೆಲ್ಲ ಸುರಕ್ಷಿತ.

ಕಪ್ಪು ಶಿಲೀಂಧ್ರ ದಾಳಿಯ ಮೊದಲ ಲಕ್ಷಣ ಏನೆಂದರೆ ಮೂಗಿನಲ್ಲಿ ದುರ್ವಾಸನೆ ಬರುವುದು, ಮೂಗು ಕಟ್ಟಿದಂತಾಗುವುದು, ಮೂಗಿನ ಒಳಪೊರೆ ಊದಿಕೊಂಡು ಕಪ್ಪುಬಣ್ಣಕ್ಕೆ ತಿರುಗುವುದು. ಮೂಗಿನಿಂದ ಕಪ್ಪು ಸಿಂಬಳ ಬರುವುದು; ತಲೆನೋವು, ಜ್ವರ ಕಾಣಿಸಿಕೊಳ್ಳುವುದು. ಶಿಲೀಂಧ್ರ ಪ್ರಸರಣ ಹೆಚ್ಚುತ್ತ ಹೋದರೆ ಮೇಲ್ದುಟಿಯ ಒಳಭಾಗವೂ ಕಪ್ಪಾಗುತ್ತದೆ. ಕೆನ್ನೆ ಕಪ್ಪಾಗಿ, ಮುಖದ ಒಂದು ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ಜೊತೆಗೆ ವಸಡಿನ ನೋವು. ಕಣ್ಣಿಗೂ ಇದು ಪಸರಿಸಿದಾಗ ಕಣ್ಣೆವೆ ಊತು, ಅದು ಜೋತುಬೀಳುತ್ತದೆ. ಕೆಂಪಾಗುತ್ತದೆ. ಕ್ರಮೇಣ ಕಪ್ಪಾಗುತ್ತದೆ. ಶಿಲೀಂಧ್ರ ದಾಳಿಯನ್ನು ಸಾಕಷ್ಟು ಮುಂಚಿತವಾಗಿ ಗುರುತಿಸಿದರೆ ಅವುಗಳನ್ನು ಸೋಲಿಸಲು ‘ಅಂಫೊಟೆರಿಸಿನ್‌ ಬಿ’ ಎಂಬ ಔಷಧ, ಚುಚ್ಚುಮದ್ದು ಈ ಹಿಂದೆಯೇ ಬಳಕೆಯಲ್ಲಿದೆ. ಇರುವುದು ಅದೊಂದೇ ಔಷಧ. ಮೊದಲೇ ದುಬಾರಿ. ಈಗಂತೂ ಕಾಳಸಂತೆ ಸೇರಿರಬಹುದು.

ಕೋವಿಡ್‌ ಕಾಯಿಲೆಯಿಂದ ಗುಣವಾಗುತ್ತಿರುವ ಎಲ್ಲರ ಮೇಲೂ ಇದು ದಾಳಿ ಮಾಡುವುದಿಲ್ಲ. ಮಧುಮೇಹಿಗಳಲ್ಲೂ ಅನೇಕರಲ್ಲಿ ರೋಗನಿರೋಧಕ ಶಕ್ತಿ ಚೆನ್ನಾಗಿದ್ದರೆ ಇದು ಅಂಜುತ್ತದೆ. ಕೋವಿಡ್‌ ರೋಗವನ್ನು ಹಿಮ್ಮೆಟ್ಟಿಸಲೆಂದು ಕೆಲವು ಡಾಕ್ಟರ್‌ಗಳು ಸ್ಟೀರಾಯಿಡ್‌ ಔಷಧವನ್ನು ಪ್ರಯೋಗಿಸುತ್ತಾರೆ. ಕೆಲವು ಬಾರಿ ಮೊನೊಕ್ಲೋನಲ್‌ ಆ್ಯಂಟಿಬಾಡೀಸ್‌ (ಅಂದರೆ ಮನುಷ್ಯರ ಬಿಳಿರಕ್ತಗೋಲಗಳಿಂದ ತಯಾರಿಸಿದ ಜೀವಿರೋಧಕಗಳನ್ನು) ಔಷಧ ರೂಪದಲ್ಲಿ ಕೊಡುತ್ತಾರೆ. ವಿಶೇಷವಾಗಿ ಸ್ಟೀರಾಯಿಡ್‌ಗಳನ್ನು ಲೆಕ್ಕ ತಪ್ಪಿ ಕೊಟ್ಟಾಗ ಅದು ರೋಗನಿರೋಧಕ ಶಕ್ತಿಯನ್ನು ಕಮ್ಮಿ ಮಾಡುತ್ತಲೇ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಮೇಲಾಗಿ, ಕಾಯಿಲೆ ಬಿದ್ದವರಿಗೆ ಶಕ್ತಿ ಬರಲೆಂದು ಗ್ಲುಕೋಸ್‌ ಮತ್ತು ಸಕ್ಕರೆ ಅಂಶ ಜಾಸ್ತಿ ಇರುವ ಹಣ್ಣು, ಪೇಯಗಳನ್ನು ಕೊಡಲಾಗುತ್ತದೆ. ಅವೆಲ್ಲವೂ ಈ ಫಂಗಸ್‌ನ ವೃದ್ಧಿಗೆ ಸಹಾಯ ಮಾಡುತ್ತವೆ. ವೈರಿಯನ್ನು ಪೋಷಿಸುವ ಕೆಲಸ ಕೆಲವೊಮ್ಮೆ ಆಸ್ಪತ್ರೆಗಳಲ್ಲೇ ನಡೆಯುತ್ತದೆ. ಮನೆಯಲ್ಲೇ ಚಿಕಿತ್ಸೆ ಪಡೆಯುವವರಲ್ಲಿ ಸಕ್ಕರೆ ಕಾಯಿಲೆ ಇದ್ದರೆ ಸ್ಟೀರಾಯಿಡ್‌ ಔಷಧವನ್ನು ಬಳಸುವಾಗ ಹುಷಾರಾಗಿರಬೇಕು. ಸಿಹಿ ತಿನ್ನಿಸಬಾರದು.

ಸಕ್ಕರೆಯ ನಿಯಂತ್ರಣ ರಕ್ತಕ್ಕೂ ಒಳ್ಳೆಯದು, ದೇಹಕ್ಕೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.