ಕೋವಿಡ್ ಕುರಿತು ‘ಮರಣ ಮೃದಂಗ’, ‘ಕೋವಿಡ್ ಬಂದರೆ ಸಾವು ಖಚಿತ’ ಎಂಬಂತಹ ಶಬ್ದಗಳನ್ನು ಕೆಲವು ಟಿ.ವಿ. ಚಾನೆಲ್‌ಗಳು ಇಡೀ ದಿನ ಬಿತ್ತರಿಸುತ್ತಿರುವುದನ್ನು ಕಾಣುತ್ತೇವೆ. ಇದರಿಂದ ಗಾಬರಿಗೊಳ್ಳುವ ಜನಸಾಮಾನ್ಯರು, ಕೊರೊನಾ ಸೋಂಕು ತಮಗೇನಾದರೂ ಬಂದರೆ ತಮ್ಮ ಅಂತ್ಯ ಬಂದ ಹಾಗೆಯೇ ಎಂಬ ಭಯ, ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಾರೆ.
ಇದಕ್ಕೆ ವಿರುದ್ಧವಾಗಿ ‘ಎಚ್ಚರಿಕೆಯಿಂದಿರಿ, ಧೈರ್ಯದಿಂದಿರಿ, ಕೊರೊನಾ ವೈರಾಣುವಿನ ಸೋಂಕನ್ನು ಎದುರಿಸಲು ನಿಮ್ಮ ಮನಃಸ್ಥಿತಿ ಅತ್ಯಂತ ಮುಖ್ಯವಾದುದು. ಭಯ ಮತ್ತು ಆತಂಕದಿಂದ ನರಳಬೇಡಿ’ ಎಂದು ಧೈರ್ಯ ತುಂಬುವ ಮಾತುಗಳನ್ನು ಕೆಲವರು ಬಿತ್ತರಿಸುವುದನ್ನೂ ನೋಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 24ರಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ‘ಗಾಬರಿ ಬೇಡ, ಆದರೆ ಎಚ್ಚರಿಕೆ ಅಗತ್ಯ’ ಎಂಬ ಸಂದೇಶವನ್ನು ನೀಡಿದ್ದರು.
ಯಾವುದೇ ಕಾಯಿಲೆಯನ್ನು ಯಶಸ್ವಿಯಾಗಿ ಎದುರಿಸಲು ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿ ಪ್ರಮುಖವಾದದ್ದು. ಯಾವುದೇ ಬಗೆಯ ಸೋಂಕು ಉಂಟಾದಾಗ ಅದನ್ನು ಯಶಸ್ವಿಯಾಗಿ ಹೊಡೆದೋಡಿಸಲು ನಮ್ಮ ದೇಹದಲ್ಲಿ ರಕ್ಷಣಾ ಸೈನ್ಯಗಳಿವೆ. ಅವುಗಳಲ್ಲಿ ಮುಖ್ಯವಾದವು ರಕ್ತದಲ್ಲಿರುವ ಬಿಳಿರಕ್ತ ಕಣಗಳು ಮತ್ತು ಟಿ.ಲಿಂಫೊಸೈಟ್ ಎಂಬ ಜೀವಕೋಶಗಳು. ನಮ್ಮ ದೇಶ ಕಾಯುವ ಸೈನಿಕರು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಗಡಿಯನ್ನು ಕಾಯುತ್ತಾರಲ್ಲವೆ? ಬೇರೆಯವರು ಆಕ್ರಮಣ ಮಾಡಲು ಪ್ರಯತ್ನಿಸಿದಾಗ ತಮ್ಮ ಜೀವದ ಹಂಗು ತೊರೆದು ಅವರನ್ನು ಹೊಡೆದೋಡಿಸುತ್ತಾರೆ. ಹಾಗೆಯೇ ನಮ್ಮ ದೇಹದೊಳಗಿರುವ ರಕ್ಷಣಾ ಸೈನಿಕರು ಯಾವುದೇ ಪರಕೀಯ ವಸ್ತುವಿನ ಸೋಂಕು ಉಂಟಾದಾಗ ಅದನ್ನು ಗುರುತಿಸಿ ಹೊಡೆದೋಡಿಸಲು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಎಚ್ಚರದಿಂದ ಇರುತ್ತಾರೆ. ಒಂದು ವಿಶೇಷವೆಂದರೆ, ನಮ್ಮ ರೋಗನಿರೋಧಕ ಸೈನ್ಯಕ್ಕೂ ನಮ್ಮ ಮನಃಸ್ಥಿತಿಗೂ ನಮ್ಮ ಮೆದುಳಿನ ಆಯ್ದ ಭಾಗಗಳಿಗೂ ನಿಕಟವಾದ ಸಂಬಂಧ ಇದೆ ಎಂಬುದನ್ನು ವಿಜ್ಞಾನಿಗಳು ಖಚಿತಪಡಿಸಿದ್ದಾರೆ.
ಸಕಾರಾತ್ಮಕ ಭಾವನೆಗಳಾದ ಧೈರ್ಯ, ಮುನ್ನೆಚ್ಚರಿಕೆ, ಸಂತಸ, ಆತ್ಮವಿಶ್ವಾಸದಂತಹವು ನಮ್ಮ ರೋಗ ನಿರೋಧಕ ಸೈನ್ಯಗಳನ್ನು ಉತ್ತೇಜಿಸಿ, ಅವು ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತವೆ. ನಕಾರಾತ್ಮಕ ಭಾವನೆಗಳಾದ ಭಯ, ಕೋಪ, ದುಃಖ, ಹತಾಶೆ ಮತ್ತು ಅನಾಥಪ್ರಜ್ಞೆಯಂತಹವು ರೋಗನಿರೋಧಕ ಸೈನ್ಯಗಳ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತವೆ. ಸೋಂಕುಂಟು ಮಾಡುವ ವೈರಾಣುಗಳ ವಿನಾಶಕಾರಿ ವರ್ತನೆಯನ್ನು ಪ್ರೋತ್ಸಾಹಿಸುತ್ತವೆ.
ರೋಗನಿರೋಧಕ ಸೈನ್ಯದ ಕಾರ್ಯನಿರ್ವಹಣೆಗೂ ನರಮಂಡಲಕ್ಕೂ ನಮ್ಮ ಮನಃಸ್ಥಿತಿಗೂ ಇರುವ ಸಂಬಂಧದ ಕುರಿತು ಆಳವಾದ ಸಂಶೋಧನೆಗಳು ನಡೆದಿವೆ. ಮೆದುಳಿನ ಭಾವನಾ ಕೇಂದ್ರಗಳು ಯೋಚನಾ ಕೇಂದ್ರಗಳೊಂದಿಗೆ ನರತಂತುಗಳ ಮೂಲಕ ನಿರಂತರ ಸಂಪರ್ಕ ಹೊಂದಿರುತ್ತವೆ. ಸಕಾರಾತ್ಮಕ ಯೋಚನೆಗಳು ಬಂದಾಗ ಸಕಾರಾತ್ಮಕ ಭಾವನೆಗಳುಂಟಾಗುತ್ತವೆ. ಕೊರೊನಾ ಸೋಂಕನ್ನೇ ಉದಾಹರಿಸೋಣ. ‘ನೂರು ವರ್ಷದ ವೃದ್ಧ ಮಹಿಳೆ ಗುಣಮುಖಳಾಗಿ ಸಂತೋಷದಿಂದ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಳು’ ಎಂಬುದನ್ನು ಟಿ.ವಿ. ಮಾಧ್ಯಮದಲ್ಲಿ ನೋಡಿದಾಗ, ಅದನ್ನು ನೋಡುತ್ತಿದ್ದ ವ್ಯಕ್ತಿಯ ಮನಸ್ಸಿಗೆ, ತನಗೆ ಸೋಂಕುಂಟಾದರೆ ತಾನೂ ಗುಣಮುಖನಾಗುತ್ತೇನೆ ಎನಿಸಿ, ಧೈರ್ಯ ಮತ್ತು ಆಶಾಭಾವ ಉಂಟಾಗುತ್ತವೆ. ಈ ವಿಧದ ಮನೋಭಾವವು ರೋಗನಿರೋಧಕ ಸೈನ್ಯದ ಉತ್ಪತ್ತಿಯನ್ನು ಹೆಚ್ಚಿಸಿ, ಅವುಗಳ ಕಾರ್ಯಕ್ಷಮತೆ ಅಧಿಕಗೊಳ್ಳುವಂತೆ ಮಾಡುತ್ತದೆ. ಇದರಿಂದ ರೋಗಿಯು ಸೋಂಕನ್ನು ಎದುರಿಸುವಲ್ಲಿ ಯಶಸ್ವಿಯಾಗುತ್ತಾನೆ.
‘ಮರಣ ಮೃದಂಗ, ಒಂದೇ ದಿನ ಇಷ್ಟು ಸಾವು’ ಎಂಬಂತಹ ಸುದ್ದಿಗಳನ್ನು ಕೇಳಿದಾಗ, ಓದಿದಾಗ ತನಗೂ ಸೋಂಕುಂಟಾದರೆ ತನ್ನ ಸಾವು ಖಚಿತ ಎಂಬ ನಕಾರಾತ್ಮಕ ಯೋಚನೆ ಬಂದು, ಅದಕ್ಕೆ ಸರಿಯಾಗಿ ನಕಾರಾತ್ಮಕ ಭಾವನೆಗಳಾದ ಭಯ, ಆತಂಕ ಮತ್ತು ತನ್ನ ಜೀವಕ್ಕೆ ಏನಾದರೂ ಕುತ್ತು ಬರಬಹುದು ಎಂಬ ಹತಾಶೆ ಉಂಟಾಗುತ್ತದೆ. ಈ ವಿಧದ ಮನಃಸ್ಥಿತಿಯು ರೋಗನಿರೋಧಕ ಸೈನ್ಯದ ಉತ್ಪತ್ತಿಯನ್ನು ಕುಂಠಿತಗೊಳಿಸಿ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ.
ಕೆಲವು ರಸದೂತಗಳ ಮೂಲಕ ಮೆದುಳು ಮತ್ತು ರಸಗ್ರಂಥಿಗಳು ಕಾರ್ಯನಿರ್ವಹಿಸುತ್ತವೆ. ಅವುಗಳಲ್ಲಿ ನಕಾರಾತ್ಮಕ ಭಾವನೆಗಳುಂಟಾದಾಗ ಅತಿಯಾದ ಆತಂಕ, ದುಃಖ, ಹತಾಶೆ, ಭಯದ ಭಾವನೆಯಿಂದ ಸ್ಫುರಿಸುವ ರಸದೂತಗಳು ರೋಗನಿರೋಧಕ ಸೈನ್ಯಗಳ ಉತ್ಪತ್ತಿಯನ್ನು ಕಡಿಮೆ ಮಾಡುತ್ತವೆ. ಭಾವನೆಗಳ ನಿರ್ವಹಣೆಯಲ್ಲಿ ಕಾರ್ಯ ನಿರ್ವಹಿಸುತ್ತಾ ರೋಗನಿರೋಧಕ ಸೈನ್ಯಗಳ ಮೇಲೆ ಪರೋಕ್ಷವಾಗಿ ಪರಿಣಾಮಗಳನ್ನು ಉಂಟು ಮಾಡುತ್ತವೆ.
ರೋಗನಿರೋಧಕ ಸೈನ್ಯಗಳ ಉತ್ಪತ್ತಿಗೆ ಪೂರಕವಾಗಿರುವ ಇನ್ನೊಂದು ಅಂಶ ನಮ್ಮ ಜೀವನಶೈಲಿ. ನಿಯಮಿತ ವ್ಯಾಯಾಮ, ಸಮತೋಲಿತ ಪೌಷ್ಟಿಕ ಆಹಾರ, ಸಕಾರಾತ್ಮಕ ಆಲೋಚನೆಗಳು, ಯೋಗಾಭ್ಯಾಸ ಮತ್ತು ಸ್ವಚ್ಛತೆ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಒಟ್ಟಿನಲ್ಲಿ, ಸಕಾರಾತ್ಮಕ ಯೋಚನೆಗಳು, ಸ್ವಚ್ಛತೆ ಮತ್ತು ಉತ್ತಮ ಜೀವನಶೈಲಿಯಿಂದ ಹೆಚ್ಚಿನ ರೋಗಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯ ಎಂಬುದನ್ನು ನಾವು ಅರಿಯಬೇಕಾಗಿದೆ.
ಲೇಖಕ: ಮನೋವೈದ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.