ADVERTISEMENT

ಸಂಗತ | ಕ್ರಿಕೆಟ್‌: ನಡೆಯಲಿ ವಸ್ತುನಿಷ್ಠ ವಿಶ್ಲೇಷಣೆ

ಎಲ್ಲ ಕ್ರೀಡೆಗಳಿಗೂ ಸೂಕ್ತ ರೀತಿಯಲ್ಲಿ ಉತ್ತೇಜನ ಸಿಗಬೇಕಾಗಿದೆ

ಯೋಗಾನಂದ
Published 16 ಜುಲೈ 2024, 22:26 IST
Last Updated 16 ಜುಲೈ 2024, 22:26 IST
Sangatha 
Sangatha    

‘ಕ್ರಿಕೆಟ್‌ 11 ಮಂದಿ ದಡ್ಡರು ಆಡುವ ಮತ್ತು 11,000 ದಡ್ಡರು ನೋಡುವ ಆಟ’ ಎಂದರು ಜಾರ್ಜ್‌ ಬರ್ನಾರ್ಡ್‌ ಶಾ. ಅವರ ಟೀಕೆಗೆ ಬಹುತೇಕ ಖಾರವಾದ ಪ್ರತಿಕ್ರಿಯೆಗಳೇ ಬಂದವು. ಅವು ಹೇಗೂ ಇರಲಿ, ಕ್ರಿಕೆಟ್‌ ಕುರಿತು ಆಗಿಂದಾಗ್ಗೆ ವಸ್ತುನಿಷ್ಠ ವಿಶ್ಲೇಷಣೆಗಳ ಅಗತ್ಯವಂತೂ ಇದೆ.

ರಾಜಕಾರಣ, ಹಣ, ಜೂಜು, ದುರಾಸೆಯಿಂದ ಕ್ರಿಕೆಟ್‌ ‘ಅಧಿಕಾರದ ಆಟ’ ಆಗಿರುವುದನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ, ಕ್ರಿಕೆಟ್‌ಗೆ ಈ ಪರಿಯ ಮನ್ನಣೆ, ಆದರ ಬೇಕೆ ಎನ್ನುವುದು ಪ್ರಶ್ನೆ. ಕ್ರೀಡೆಯೆಂದರೆ ಇದೊಂದೇ ಎನ್ನುವಂತೆ ಮಾಧ್ಯಮಗಳು ಅತಿರಂಜಿತವಾಗಿ ಬಿಂಬಿಸುತ್ತವೆ. ಮಕ್ಕಳು ಎಲ್ಲೆಂದರಲ್ಲಿ ಕ್ರಿಕೆಟ್‌ ಆಟದಲ್ಲಿ ಮೈಮರೆಯುತ್ತವೆ. ಒಂದಷ್ಟು ಜಾಗ, ತುಂಡು ಮರವಿದ್ದರೆ ಅವರಿಗೆ ಗೋಡೆಯೇ ವಿಕೆಟ್‌ತ್ರಯ!

ಕ್ರಿಕೆಟ್‌ ಸೆಲೆಬ್ರಿಟಿ ಆಟಗಾರರನ್ನು ‘ದೇವಮಾನವ’ರಂತೆ ಭಾವಿಸಲಾಗುತ್ತದೆ. ಮಕ್ಕಳು ಕೈಯಲ್ಲಿ ಬ್ಯಾಟಿರದಿದ್ದರೂ ತಮ್ಮ ನೆಚ್ಚಿನ ಆಟಗಾರರ ಶೈಲಿಯಲ್ಲೇ ಬೀಸುತ್ತಾರೆ. ಅವರ ಸಂಭ್ರಮದ ಎಸೆತಕ್ಕೆ ಬಾಲ್‌ ಬೇಕಾಗುವುದಿಲ್ಲ! ಮಕ್ಕಳು ಈ ಆವೇಶದಲ್ಲಿ ಶಾಲೆಯನ್ನು ಮರೆಯುವ ಸಾಧ್ಯತೆಯಿದೆ. ಓದು, ಬರಹಕ್ಕೆ ಯಾವುದೇ ಆಟೋಟ ಪ್ರೇರಣೆಯಾದರೆ ಒಳ್ಳೆಯದೆ. ಆದರೆ ಲವಲವಿಕೆಯೇ ವ್ಯಾಸಂಗವನ್ನು ಹಿಂದಿಕ್ಕಿದರೆ? ಒಂದು ವೃತ್ತಾಂತ ಕಾಡುತ್ತದೆ.
ಹಾಸ್ಟೆಲ್ಲಿನಲ್ಲಿ ಗಾಢನಿದ್ರೆಯಲ್ಲಿದ್ದ ಹುಡುಗನೊಬ್ಬ ದಿಢೀರನೆ ಪಕ್ಕದಲ್ಲಿದ್ದ ಸೌದೆ ಸೀಳನ್ನು ಬೀಸಿ ‘ಸಿಕ್ಸರ್‌’ ಅಂತ ಚೀರಿದ್ದ.

ADVERTISEMENT

ಜನರಿಗೆ ಕ್ರಿಕೆಟ್‌ ಹೃದಯದ ಬಡಿತದಷ್ಟೇ ಮುಖ್ಯ ಎನ್ನಿಸಿದೆ. ನಗರ ಪ್ರದೇಶಗಳಲ್ಲಿ ಎರಡು ತಂಡಗಳ ನಡುವೆ ಸಾರ್ವಜನಿಕ ಉದ್ಯಾನಗಳಲ್ಲಿ ಅದ್ದೂರಿಯಾಗಿ ಪಂದ್ಯಗಳು ಆಯೋಜನೆಗೊಳ್ಳುತ್ತವೆ. ಮೇರೆಮೀರಿದ ಸಡಗರವು ಬೆಳಕಿನ ಮಾಲಿನ್ಯ, ಶಬ್ದ ಮಾಲಿನ್ಯದ ಪರಿವೆಗೆ ಗ್ರಹಣ ಹಿಡಿಸುತ್ತದೆ. ಧ್ವನಿವರ್ಧಕಗಳ ಮೂಲಕ ವೀಕ್ಷಕ ವಿವರಣೆಗಳು ಮೊಳಗಿರುತ್ತವೆ. ಸಡಗರಕ್ಕೆ ಇಂಬು ನೀಡಲು, ಬ್ಯಾಟ್ಸ್‌ಮನ್‌ ಬೌಂಡರಿ,‌ ಸಿಕ್ಸರ್ ಹೊಡೆದಾಗ ಕುಣಿತ, ಭಾವಾವೇಶವನ್ನು
ಅನುಕರಿಸಲಾಗುತ್ತದೆ.

ಪಂದ್ಯಗಳನ್ನು ಟಿ.ವಿ.ಯಲ್ಲಿ ಸತತವಾಗಿ ಹೆಚ್ಚು ಸಮಯ ವೀಕ್ಷಿಸಿದಾಗ ಮಕ್ಕಳು ನಾಯಕನ ಬಗ್ಗೆ ವಿವರಗಳನ್ನು ತಿಳಿಯಲು ಯತ್ನಿಸುತ್ತಾರೆ. ಪೋಷಕರು ತಮ್ಮ ಮಕ್ಕಳು ಪಂದ್ಯಗಳನ್ನು ನೇರವಾಗಿ ವೀಕ್ಷಿಸುವುದನ್ನು ನಿರುತ್ತೇಜಿಸುವುದು ಮುಖ್ಯವಾಗುತ್ತದೆ. ತಾವಾಗಿಯೇ ತಮ್ಮ ಮಕ್ಕಳಿಗೆ ಪಂದ್ಯದ ಸ್ಕೋರ್‌, ವಿಕೆಟ್‌ ಪತನ, ಫಲಿತಾಂಶ ತಿಳಿಸುವುದಾಗಿ ಹೇಳಿ ಅವರ ಅತಿರೇಕವನ್ನು ತಡೆಗಟ್ಟಬಹುದು.

ಕ್ರಿಕೆಟ್‌ ಪಂದ್ಯವನ್ನು ಮಹಾಸಮರವೆಂದೇ ಭಾವಿಸುವ ಮಂದಿಗೆ ಕೊರತೆಯಿಲ್ಲ. ಪಂದ್ಯವೆಂದರೆ ಸೋಲು, ಗೆಲುವು ಇದ್ದದ್ದೆ. ಉಭಯ ತಂಡಗಳೂ ಜಯಿಸಲು ಸಾಧ್ಯವೇ? ಹಣಾಹಣಿ, ಸೆಣಸಾಟದಂತಹ ಒಕ್ಕಣೆಗಳು ಅರ್ಥಹೀನ. ಕ್ರೀಡಾ ಮನೋಭಾವ ಎನ್ನುವುದಿದೆ. ರಾಜ್ಯಗಳು, ದೇಶಗಳನ್ನು ಒಗ್ಗೂಡಿಸ
ಬೇಕಾದ ಕ್ರೀಡಾ ತಂಡಗಳು ಅದು ಹೇಗೆ ಪರಸ್ಪರ ವೈರಿಗಳಾದಾವು? ಪಂದ್ಯ ಗೆಲ್ಲಲು ‘ದೈವ’ದ ಮೊರೆ ಹೋಗುವುದಿದೆ! ನೆಚ್ಚಿನ ತಂಡ ಗೆದ್ದರೆ ವೀರೋಚಿತ ಪ್ರಶಂಸೆ. ಪರಾಭವಗೊಂಡಿತೆಂದರೆ ನಿಂದಿಸುವುದು, ತೆಗಳುವುದು, ದೂರುವುದು. ಒಂದೇ ಕ್ರೀಡೆಯನ್ನು ವೈಭವೀಕರಿಸಿದರೆ ಸಹಜವಾಗಿ ಆ ಕುರಿತು ಅತೀವ ಪೈಪೋಟಿ ಏರ್ಪಡುತ್ತದೆ. ಪಂದ್ಯದಲ್ಲಿ ಸೋಲು-ಗೆಲುವಿನ ಬಗ್ಗೆ ಬೆಟ್ಟಿಂಗ್‌ಗೆ ಪ್ರಚೋದನೆಯಾಗುತ್ತದೆ. ಕೆಲವು ವರ್ಷಗಳ ಹಿಂದೆ ‘ಮ್ಯಾಚ್‌ ಫಿಕ್ಸಿಂಗ್‌’ ಭೂತ ತಾಂಡವವಾಡಿದ್ದು ನೆನಪಿನಲ್ಲಿದೆ.

ಹಾಕಿಯು ಹೆಸರಿಗಷ್ಟೇ ಭಾರತದ ರಾಷ್ಟ್ರೀಯ ಕ್ರೀಡೆ. ಹಾಕಿಯೂ ಸೇರಿದಂತೆ ಕಬಡ್ಡಿ, ಫುಟ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌, ಟೆನಿಸ್‌ಗೆ ಸಹ ಕ್ರಿಕೆಟ್‌ನಂತೆ ಮನ್ನಣೆ ಸಿಗಬೇಕಲ್ಲವೆ? ಉಳಿದ ಕ್ರೀಡೆಗಳ ಸುಪ್ತ ಪ್ರತಿಭೆಗಳು ಮತ್ತು ಕೌಶಲಗಳು ಬೆಳಕಿಗೆ ಬರಲು ಆಸ್ಪದವಾಗುತ್ತಿಲ್ಲ, ಅವು ಬೆಳೆಯಲಾಗುತ್ತಿಲ್ಲ. ಜಗತ್ತಿನಾದ್ಯಂತ ದಿನನಿತ್ಯ ಫುಟ್‌ಬಾಲ್‌ ಪಂದ್ಯಗಳಾಗುತ್ತವೆ. ಆದರೆ ನೋಡುವವರ ಸಂಖ್ಯೆ ನಮ್ಮಲ್ಲಿ ಎಷ್ಟು? ಕ್ರಿಕೆಟ್‌ ಪಂದ್ಯ ಗೆದ್ದು ಸ್ವದೇಶಕ್ಕೆ ಮರಳಿದ ತಂಡಕ್ಕೆ ಒಟ್ಟಿಗೇ ಹತ್ತು ಯುದ್ಧಗಳನ್ನು ಜಯಿಸಿದವರಿಗೂ ಇರದಂತಹ ಸ್ವಾಗತ!

ಶಾಲೆಯ ಮೂಲಸೌಕರ್ಯಗಳಲ್ಲಿ ಕ್ರಿಕೆಟ್‌ ಮೈದಾನಕ್ಕಿರುವ ಆದ್ಯತೆ ಫುಟ್‌ಬಾಲ್‌ಗೆ ಇಲ್ಲ. ಕ್ರಿಕೆಟ್‌ನ ಹಾಗೆ ಎಲ್ಲ ಕ್ರೀಡೆಗಳಿಗೂ ವೀಕ್ಷಕತ್ವ ಇರಬೇಕಾದದ್ದು ನ್ಯಾಯಸಮ್ಮತ.

ಕ್ರಿಕೆಟ್‌ ದುಬಾರಿ ಕ್ರೀಡೆಯೇ ಹೌದು. ಫುಟ್‌ಬಾಲ್‌ಗೆ ಒಂದು ಬಾಲ್‌ ಇದ್ದರಾಯಿತು, ಒಂಟಿಯಾಗಿಯೂ ಅಭ್ಯಸಿಸಬಹುದು. ಫುಟ್‌ಬಾಲ್‌ ಆಟದ ನೀತಿ ನಿಯಮಾವಳಿ ಸರಳ, ಸುಲಭ. ಕಡಿಮೆ ಬಜೆಟ್‌ನ ಕ್ರಿಕೆಟ್‌ ಎಂದರೂ ಸ್ಟಂಪ್ಸ್ (ವಿಕೆಟ್‌ಗಳು), ಬ್ಯಾಟ್‌ ಮತ್ತು ಬಾಲ್‌, ಕನಿಷ್ಠ ಇಬ್ಬರು ಆಟಗಾರರು ಬೇಕು. ಇನ್ನು ಕ್ರಿಕೆಟ್‌ ಪಂದ್ಯದ ಸಮಯವೂ ಹೆಚ್ಚು. ಫುಟ್‌ಬಾಲ್ ತೊಂಬತ್ತು ನಿಮಿಷಗಳಲ್ಲಿ ಮುಗಿದರೆ, ಕ್ರಿಕೆಟ್‌ ಪಂದ್ಯಕ್ಕೆ ಕಡಿಮೆಯೆಂದರೂ 4 ತಾಸುಗಳು ಬೇಕು. ಈ ನ್ಯೂನತೆಯಿಂದಲೇ ಅನೇಕ ದೇಶಗಳು ಕ್ರಿಕೆಟ್‌ನಿಂದ ದೂರವೇ ಉಳಿದಿವೆ. ದೇಶಿ ಮೂಲವೆಂಬ ಕಾರಣಕ್ಕೆ ಕೆಲವು ದೇಶಗಳು ಆಟವನ್ನು ಉತ್ತೇಜಿಸಿರ
ಬಹುದಷ್ಟೆ.

ಕ್ರಿಕೆಟ್‌ ಮಾತ್ರವಲ್ಲ ಪ್ರತಿ ಕ್ರೀಡೆಯೂ ಸಡಗರವೆ. ಕ್ರೀಡೆ ಯಾವುದೇ ಇರಲಿ ಪಂದ್ಯದಲ್ಲಿ ಜಯಿಸಿದರೆ
ಸಂತಸವೆ. ಆಟದ ಮೈದಾನದಲ್ಲಿ ಏನು ನೆರವೇರುವುದೋ ಅದು ಮೈದಾನದಲ್ಲೇ ಉಳಿಯಬೇಕು. ಮೈದಾನದ ಹೊರಗೆ ಎಲ್ಲರೂ ಗೆಳೆಯರೆ. ಕ್ರಿಕೆಟ್‌ ಒಂದು ಕ್ರೀಡೆ. ಚೆನ್ನಾಗಿ ಆಡಿದರೆ ಅದು ಅಭ್ಯಾಸದ ಘನರೂಪ. ಪಂದ್ಯದಲ್ಲಿ ಸೋಲಾದರೆ ಅದರಿಂದ ಯಾವುದೇ ಹಾನಿ ಇಲ್ಲ. ನಮ್ಮ ಪಾಲಿಗೆ ಕ್ರಿಕೆಟ್‌ ಗೀಳಾಗದಿರುವಂತೆ ನಮ್ಮ ಇತಿಮಿತಿಯನ್ನು ನಾವೇ ನಿರ್ಧರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.