ADVERTISEMENT

ರಣಜಿ ಕ್ರಿಕೆಟ್‌ | ನಾಲ್ಕರ ಘಟ್ಟದಲ್ಲೇ ಎಡವುತ್ತಿರುವುದೇಕೆ?

ಈ ರಣಜಿಯ ಋತುವನ್ನು ಒಂದು ಪಾಠವಾಗಿ ಪರಿಗಣಿಸಿದರೆ, ಸುಧಾರಣೆ ಸಾಧ್ಯ

ಗಿರೀಶದೊಡ್ಡಮನಿ
Published 5 ಮಾರ್ಚ್ 2020, 20:12 IST
Last Updated 5 ಮಾರ್ಚ್ 2020, 20:12 IST
ಕ್ರಿಕೆಟ್‌ 
ಕ್ರಿಕೆಟ್‌    

‘ಈ ವರ್ಷ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿ ಗೆದ್ದಿದ್ದೇವೆ. ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಪ್ರಶಸ್ತಿಯನ್ನೂ ಜಯಿಸಿದ್ದೇವೆ. ಆದರೆ ರಣಜಿ ಟ್ರೋಫಿ ಜಯಿಸಿದ್ದರೆ ದೇಶಿ ಋತು ಸಾರ್ಥಕವಾಗುತ್ತಿತ್ತು’– ಕರ್ನಾಟಕ ಕ್ರಿಕೆಟ್ ತಂಡದ ಆಟಗಾರರೊಬ್ಬರ ಬೇಸರದ ನುಡಿ ಇದು.

ದೇಶಿ ಕ್ರಿಕೆಟ್‌ನ ರಾಜ, ರಣಜಿ ಟ್ರೋಫಿಯನ್ನು ಗೆದ್ದರೆ ಸಿಗುವ ಮನ್ನಣೆಯೇ ಬೇರೆ. ಸತತ ಮೂರು ವರ್ಷಗಳಿಂದ ತಂಡವು ನಾಲ್ಕರ ಘಟ್ಟದಲ್ಲಿಯೇ ಎಡವುತ್ತಿರುವುದು ಏಕೆ? ಆಟವೆಂದರೆ ಸೋಲು– ಗೆಲುವು ಸಹಜ. ಆದರೆ, 13 ವರ್ಷಗಳಿಂದ ಫೈನಲ್‌ ಸನಿಹವೂ ಸುಳಿಯದ ಬಂಗಾಳದಂತಹ ತಂಡದ ಎಳೆಯ ಬೌಲರ್‌ಗಳ ಎದುರು ಕರ್ನಾಟಕವು ಹೋರಾಟವನ್ನೇ ತೋರದಷ್ಟು ದುರ್ಬಲವಾಗಿರಲಿಲ್ಲ.

ಮೊದಲ ಇನಿಂಗ್ಸ್‌ನಲ್ಲಿ 190 ರನ್‌ಗಳ ಹಿನ್ನಡೆ ಅನುಭವಿಸುವಂತಹ ಕೆಟ್ಟ ಬ್ಯಾಟಿಂಗ್‌ ಪಡೆ ಇರಲಿಲ್ಲ. ಭಾರತ ತಂಡದಲ್ಲಿ ಆಡುವ ಬ್ಯಾಟ್ಸ್‌ಮನ್‌ಗಳು, ಭಾರತ ‘ಎ’ ತಂಡದಲ್ಲಿ ಆಡಿದ ಅನುಭವಿಗಳು ಇದ್ದರೂ ಈ ಸ್ಥಿತಿ ಬಂದಿದ್ದು ಏಕೆ? ಹಿಂದಿನ ಎರಡು ವರ್ಷವೂ ಸೆಮಿಯಲ್ಲಿ ಸೋತಾಗ ಅಲ್ಲೊಂದಿಷ್ಟು ಹೋರಾಟದ ಆಟವಿತ್ತು. ಹೋದ ವರ್ಷ ಸೌರಾಷ್ಟ್ರದ ವಿರುದ್ಧ ಸೋತಾಗ ಚೇತೇಶ್ವರ್ ಪೂಜಾರ ಅವರು ಔಟಾಗಿದ್ದನ್ನು ಅಂಪೈರ್‌ ತಪ್ಪಾಗಿ ತೀರ್ಪು ನೀಡಿದ್ದು ವಿವಾದವಾಗಿತ್ತು. ಅದರಲ್ಲಿ ಕರ್ನಾಟಕದ ಸೋಲು ಮರೆಯಾಗಿತ್ತು. ಆದರೆ, ಈ ಬಾರಿಯದ್ದು ಸ್ವಯಂಕೃತ ಲೋಪಗಳಿಂದಾದ ಸೋಲೆಂದರೆ ತಪ್ಪಾಗಲಿಕ್ಕಿಲ್ಲ.

ADVERTISEMENT

ಆದರೆ, ತಂಡದಲ್ಲಿದ್ದ ಪ್ರತಿಭಾ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ನಾಯಕ ಕರುಣ್ ನಾಯರ್ ಮತ್ತು ಮ್ಯಾನೇಜ್‌ಮೆಂಟ್ ಎಡವಿದ್ದು ಮೇಲ್ನೋಟಕ್ಕೆ ಕಂಡುಬರುತ್ತದೆ. ಯುವಪ್ರತಿಭೆ ದೇವದತ್ತ ಪಡಿಕ್ಕಲ್, ಸಮರ್ಥ್, ಅನುಭವಿ ಮಧ್ಯಮವೇಗಿ ಅಭಿಮನ್ಯು ಮಿಥುನ್ ಮತ್ತು ಕೆ. ಗೌತಮ್ ತಮ್ಮ ಶ್ರೇಷ್ಠ ಸಾಮರ್ಥ್ಯ ಮೆರೆದರು. ಅವರು ತೋರಿದ ಛಲದ ಆಟ ಉಳಿದವರಲ್ಲಿ ಕಂಡುಬರಲಿಲ್ಲ. ಬಹಳ ದಿನಗಳಿಂದ ಕೆಂಪು ಚೆಂಡಿನ ಪಂದ್ಯಗಳಿಂದ ದೂರವಿರುವ ರಾಹುಲ್ ಅವರನ್ನು ಇನಿಂಗ್ಸ್‌ ಆರಂಭಿಸಲು ಕಳಿಸಿದ್ದು ಕೂಡ ಈಗ ಚರ್ಚೆಗೆ ಗ್ರಾಸವಾಗಿದೆ. ಈ ಋತುವಿನಲ್ಲಿ ತಂಡದ ಅತಿ ಹೆಚ್ಚು ರನ್‌ ಗಳಿಸಿರುವ ದೇವದತ್ತ ಪಡಿಕ್ಕಲ್ ಅವರನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳಿಸಿದ್ದು ಏಕೆ?

‘ಕರುಣ್ ನಾಯಕತ್ವದಲ್ಲಿ ಅನುಭವದ ಕೊರತೆ ಇದೆ. ಬೌಲಿಂಗ್ ಚೇಂಜ್ ಮತ್ತು ತತ್‌ಕ್ಷಣದ ಯೋಜನೆ ರೂಪಿಸುವ ಸಾಮರ್ಥ್ಯ ಇರಬೇಕು. ಬಂಗಾಳ ತಂಡವು 67 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಆ ಹಂತದಲ್ಲಿ ನಾಯಕನ ಚಾಣಾಕ್ಷತನ ಅಗತ್ಯವಾಗುತ್ತದೆ. ಆದರೆ ಬ್ಯಾಟ್ಸ್‌ಮನ್ ಅನುಸ್ಟುಪ್ ಮಜುಂದಾರ್ ಅವರ ಶತಕ ಮತ್ತು ಎರಡು ಜೊತೆಯಾಟಗಳಲ್ಲಿ ಗಳಿಸಿದ ರನ್‌ಗಳು ಕರ್ನಾಟಕದಿಂದ ಪಂದ್ಯವನ್ನು ದೂರ ತೆಗೆದುಕೊಂಡು ಹೋದವು. ಈ ಜೊತೆಯಾಟಗಳನ್ನು ಮುರಿಯುವ ಯೋಜನೆ ಸಿದ್ಧವಾಗಲಿಲ್ಲ’ ಎಂದು ಕ್ರೀಡಾ ಮನಃಶಾಸ್ತ್ರಜ್ಞ ಎಂ.ಎನ್. ವಿಶ್ವನಾಥ್ ಅಭಿಪ್ರಾಯಪಡುತ್ತಾರೆ.

ಎದುರಾಳಿ ತಂಡದ ಸಾಮರ್ಥ್ಯಕ್ಕೆ ಅನುಗುಣವಾಗಿ ಹನ್ನೊಂದರ ಬಳಗವನ್ನು ಆಯ್ಕೆ ಮಾಡಲಾಗುತ್ತದೆ. ಬಂಗಾಳ ತಂಡದಲ್ಲಿ ಒಂಬತ್ತನೇ ಕ್ರಮಾಂಕದವರೆಗೂ ಬ್ಯಾಟಿಂಗ್‌ ಮಾಡುವ ಸಮರ್ಥರಿದ್ದರು. ಆದರೆ ಮೂವರು ಮಧ್ಯಮವೇಗಿಗಳು, ಒಬ್ಬ ಆಫ್‌ಸ್ಪಿನ್ನರ್‌ನೊಂದಿಗೆ ತಂಡವು ಕಣಕ್ಕಿಳಿಯಿತು. ಇದು ಕೂಡ ಬಂಗಾಳದ ಬಾಲಂಗೋಚಿ ಬ್ಯಾಟಿಂಗ್‌ ಅನ್ನು ನಿಯಂತ್ರಿಸಲು ಅಡ್ಡಿಯಾಯಿತು. ಶ್ರೇಯಸ್ ಗೋಪಾಲ್ ಅಥವಾ ಪವನ್ ದೇಶಪಾಂಡೆ ಅವರಂತಹ ಸ್ಪಿನ್ ಆಲ್‌ರೌಂಡರ್‌ಗಳಿದ್ದಿದ್ದರೆ ಅನುಕೂಲವಾಗುತ್ತಿತ್ತು.

ಕರುಣ್ ಸತತವಾಗಿ ಬ್ಯಾಟಿಂಗ್ ವೈಫಲ್ಯ ಕಂಡರೂ ನಾಯಕನೆಂಬ ಕಾರಣಕ್ಕೆ ಅವರನ್ನು ಕೈಬಿಡಲಿಲ್ಲ. ಸಾಲದ್ದಕ್ಕೆ ‘ಅವರು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ, ರನ್‌ಗಳು ಬರುತ್ತಿಲ್ಲ’ ಎಂಬ ಪ್ರತಿಕ್ರಿಯೆ ತಂಡದ ಆಡಳಿತದಿಂದ ಬಂದಿತ್ತು. ಅವರು ಈ ಬಾರಿ 15 ಇನಿಂಗ್ಸ್‌ಗಳಿಂದ ಬರೀ 26.14ರ ಸರಾಸರಿಯಲ್ಲಿ 366 ರನ್‌ ಗಳಿಸಿದ್ದಾರೆ. ಅವರಿಗೆ ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ನೀಡಿ, ಬೇರೆಯವರಿಗೆ ನಾಯಕತ್ವ ವಹಿಸಬಹುದಾಗಿತ್ತಲ್ಲವೇ?

ಕೆಲವು ವರ್ಷಗಳಿಂದ ರಣಜಿ ಟೂರ್ನಿಯಲ್ಲಿ ಕೆಲವು ತಂಡಗಳು ವಿಭಿನ್ನ ತಂತ್ರಗಾರಿಕೆಯನ್ನು ಅಳವಡಿಕೊಂಡಿವೆ. ಊಟ, ಚಹಾ ವಿರಾಮಗಳ ಅವಧಿಗಳನ್ನು ಲೆಕ್ಕಕ್ಕಿಟ್ಟುಕೊಂಡು ಆಡುವ ಪದ್ಧತಿಯಿತ್ತು. ಆದರೆ, ಈಗ ಪ್ರತಿ ಗಂಟೆಗೊಂದು ತಂತ್ರಗಾರಿಕೆಯನ್ನು ಮಾಡಿಕೊಂಡು ಆಡುತ್ತಿವೆ. ಬಂಗಾಳ ಕೋಚ್ ಅರುಣ್‌ ಲಾಲ್ ಆಗಾಗ ತಮ್ಮ ಆಟಗಾರರೊಂದಿಗೆ ‘ಪೆಪ್‌ ಟಾಕ್‌’ ಮಾಡಿ ಈ ತಂತ್ರವನ್ನು ಬಹಳ ಶಿಸ್ತಿನಿಂದ ಜಾರಿ ಮಾಡಿದರು. ಅದಕ್ಕಾಗಿಯೇ ಇಶಾನ್ ಪೊರೆಲ್, ಮುಕೇಶ್ ಕುಮಾರ್ ಅವರಂತಹ ಅನುಭವವಿಲ್ಲದ ಬೌಲರ್‌ಗಳು ಕರ್ನಾಟಕದ ಬ್ಯಾಟಿಂಗ್ ಪಡೆಗೆ ಸಿಂಹಸ್ವಪ್ನರಾದರು. ಅದು ಕರ್ನಾಟಕ ಬಳಗದಲ್ಲಿ ಹೆಚ್ಚು ಕಂಡುಬರಲಿಲ್ಲ. ಈ ಋತುವನ್ನು ಒಂದು ಪಾಠದಂತೆ ತೆಗೆದುಕೊಂಡರೆ, ಹಲವಾರು ಸುಧಾರಣೆಗಳನ್ನು ಮಾಡಿಕೊಂಡು ಮುಂದಿನ ಸಲ ಕಣಕ್ಕಿಳಿಯುವ ಸವಾಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.