ADVERTISEMENT

ಸಂಗತ | ಕೋವಿಡ್-19 ನೆಪದಲ್ಲಿ ಸಾಂಕ್ರಾಮಿಕವಾಗುತ್ತಿದೆ ಸೈಬರ್ ಅಪರಾಧ

ಸೈಬರ್‌ ಸೋಗಿನ ವಂಚಕ ವೈರಾಣು

ಗೀತಾ ವಸಂತ
Published 5 ಮೇ 2020, 20:00 IST
Last Updated 5 ಮೇ 2020, 20:00 IST
.
.   

‘ಆಯುಷ್ಯ ಮುಗಿದರೆ ಆತ ಕುಳಿತ ಮಣೆ ಮೇಲಿಂದಾದರೂ ಬಿದ್ದು ಸಾಯುತ್ತಾನೆ’ ಎಂಬ ಮಾತನ್ನು ಹಿರಿಯರಿಂದ ಬಹುಶಃ ಎಲ್ಲರೂ ಕೇಳಿರುತ್ತಾರೆ. ಈಗ ಕೋವಿಡ್-19 ಹೊಸದಾಗಿ ಹೇಳಿಕೊಡುತ್ತಿರುವ ಪಾಠ ಎಂದರೆ ‘ಮೋಸ ಹೋಗಬೇಕೆಂದರೆ ಅಥವಾ ಯಾವುದೋ ಅಪರಾಧದ ಬಲಿಪಶುಗಳಾಗಬೇಕಾದರೆ ನಾವು ಹೊರಗೆಲ್ಲೂ ಹೋಗಬೇಕಾಗಿಲ್ಲ, ಕುಳಿತಲ್ಲೇ ಅನಾಯಾಸವಾಗಿ ಮೋಸ ಹೋಗಬಹುದು’ ಎನ್ನುವುದು.

‘ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ’, ‘ಕೌಟುಂಬಿಕ ಸಂಬಂಧಗಳಿಗೊಂದು ಪುನರ್ ಮುನ್ನುಡಿ’, ‘ಆನ್‍ಲೈನ್ ಕಲಿಕೆ, ‘ಮನೆಯಿಂದಲೇ ಕಾಯಕ’ ಮುಂತಾದ, ಉದ್ಯೋಗ ಹಾಗೂ ಜೀವನದ ಮರುವ್ಯಾಖ್ಯಾನವನ್ನು ಅರಗಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಕಲಿಯಬೇಕಾದ ಬಹುಮುಖ್ಯ ಪಾಠ ಎಂದರೆ, ಅಂತರ್ಜಾಲದ ಯುಗದಲ್ಲಿ ‘ಆರ್ಥಿಕ ವಂಚನೆ’ ಸರ್ವಾಂತರ್ಯಾಮಿ ಎಂಬುದು.

ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಶನ್ (ಎಫ್‍ಬಿಐ) ಮಾಧ್ಯಮಗಳಿಗೆ ಇತ್ತೀಚೆಗೆ ನೀಡಿದ ಹೇಳಿಕೆಯ ಪ್ರಕಾರ, ಕೊರೊನಾ ವ್ಯಾಧಿಯ ಹಿನ್ನೆಲೆಯಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಸಾಮಾನ್ಯವಾಗಿ ಅಮೆರಿಕದ ಸೈಬರ್ ಅಪರಾಧ ನಿಯಂತ್ರಣ ವಿಭಾಗದ ವೆಬ್‍ಸೈಟ್‍ನಲ್ಲಿ ದಿನಕ್ಕೆ ಸಾವಿರ ಪ್ರಕರಣಗಳು ನೋಂದಣಿಯಾಗುತ್ತಿದ್ದರೆ, ಅದರ ಸಂಖ್ಯೆ ಪ್ರಸ್ತುತ ಸುಮಾರು ಮೂರು ಸಾವಿರದಿಂದ ನಾಲ್ಕು ಸಾವಿರದವರೆಗೂ ಏರಿದೆ. ಸೈಬರ್ ಅಪರಾಧಗಳ ನೋಂದಣಿಯಲ್ಲಿ ಉಲ್ಲೇಖವಾಗುತ್ತಿರುವ ಪ್ರಕರಣಗಳೆಂದರೆ, ಬ್ಯಾಂಕ್ ಖಾತೆಯಿಂದ ಹಣದ ಕಳ್ಳತನ, ಕಚೇರಿಗಳ ಅತ್ಯಮೂಲ್ಯ ದಾಖಲೆಗಳ ಕಳವು, ಅಧಿಕೃತ ವೆಬ್‍ಸೈಟ್‍ಗಳಿಗೆ ಅಶ್ಲೀಲ ಜಾಲತಾಣಗಳ ಲಿಂಕ್, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅನಗತ್ಯ ಇ– ಮೇಲ್‌ಗಳು, ಕೋವಿಡ್‍ಗೆ ಸಂಬಂಧಿಸಿದಂತೆ ಇರುವ ಅಪ್ಲಿಕೇಶನ್‍ಗಳನ್ನು ಹೋಲುತ್ತಿರುವ ನಕಲಿ ಆ್ಯಪ್‌, ಕೋವಿಡ್ ಪರಿಹಾರ ನಿಧಿ ಸಂಗ್ರಹಿಸುವ ನಕಲಿ ವೆಬ್‍ಸೈಟ್‍ಗಳು ಇತ್ಯಾದಿ.

ADVERTISEMENT

ಭಾರತದ ನಿದರ್ಶನವನ್ನು ತೆಗೆದುಕೊಳ್ಳುವುದಾದರೆ, ಮಾರ್ಚ್ ಅಂತ್ಯದಲ್ಲಿ ಲಾಕ್‍ಡೌನ್ ಘೋಷಣೆಯಾದ ದಿನದಿಂದ ಇಲ್ಲಿಯವರೆಗೂ ಹೆಚ್ಚಿನ ಹಣಕಾಸು ವ್ಯವಹಾರಗಳು ಆನ್‍ಲೈನ್‌ನಲ್ಲೇ ನಡೆಯುತ್ತಿವೆ. ಇದರ ಜೊತೆಗೆ ಉದ್ಯಮರಂಗ, ಶಿಕ್ಷಣರಂಗ ತಮ್ಮ ಮೀಟಿಂಗ್‍ಗಳಿಗೆ, ಬೋಧನೆಗೆ ಅಂತರ್ಜಾಲವನ್ನೇ ನೆಚ್ಚಿಕೊಂಡಿವೆ. ಕೋವಿಡ್-19 ಎಂಬ ಅನಿವಾರ್ಯವು ತಂತ್ರಜ್ಞಾನವನ್ನು ಒಪ್ಪಿಕೊಂಡವರು, ಒಪ್ಪಿಕೊಳ್ಳದವರು ಎಲ್ಲರನ್ನೂ ತನ್ನ ತೆಕ್ಕೆಯೊಳಗೆ ಬೀಳುವಂತೆ ಮಾಡಿದೆ. ‘ಡಿಜಿಟಲ್ ರೆಫ್ಯೂಜೀಸ್’ ಮತ್ತು ‘ನೆಟಿಜನ್’ಗಳ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ಈ ತಂತ್ರಜ್ಞಾನದ ಜೊತೆಗೆ ನೆರಳಾಗಿ ಬರುವ ಆನ್‌ಲೈನ್ ವಂಚನೆ ಎಂಬ ಕಬಂಧಬಾಹು, ಅಂತರ್ಜಾಲ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ತನ್ನ ವ್ಯಾಪಕತೆಯನ್ನು ಇನ್ನಷ್ಟು ವಿಸ್ತಿರಿಸಿಕೊಂಡಿರುವುದು ನಿಜ. ಭಾರತದಲ್ಲಿ ಕೆಲವು ಖಾಸಗಿ ಸಂಶೋಧನಾ ಕಂಪನಿಗಳು ನಡೆಸಿದ ಸಮೀಕ್ಷೆಗಳು ಇದನ್ನು ದೃಢಪಡಿಸಿವೆ.

ಸೈಬರ್ ಸುರಕ್ಷಾ ಸಂಸ್ಥೆ ಯೂನಿಕೆನ್‌ನ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಗಣನೀಯವಾಗಿ ಏರಿದೆ. ಈ ಪ್ರಕರಣಗಳು ಕೋವಿಡ್-19ರ ತಕ್ಷಣದ ಆರ್ಥಿಕ ಪರಿಣಾಮ ಎಂಬುದನ್ನು ನಾವು ಮನಗಾಣಬೇಕು. ಮನುಕುಲಕ್ಕೆ ಕೇಡುಂಟಾದರೆ ಮಾನವೀಯತೆ ಬಡಿದೇಳಬೇಕು ಎನ್ನುವ ಮಾತನ್ನು ಸೈಬರ್ ಅಪರಾಧಿಗಳು ಸುಳ್ಳು ಮಾಡುತ್ತಿದ್ದಾರೆ. ಕೊರೊನಾ ಸೋಂಕಿನ ವಿರುದ್ಧದ ಭಾರತದ ಹೋರಾಟಕ್ಕೆ ಆರ್ಥಿಕ ಚೇತನವನ್ನು ನೀಡುವುದಕ್ಕಾಗಿ ಆರಂಭಿಸಿದ ಪ್ರಧಾನಿ ಪರಿಹಾರ ನಿಧಿಯ ಖಾತೆಯನ್ನು ಹೋಲುವ ಸುಮಾರು ಹದಿನೈದು ವೆಬ್‍ಸೈಟ್‌ಗಳು ಏಕಾಏಕಿ ಸೃಷ್ಟಿಯಾದದ್ದು ಇದಕ್ಕೆ ನಿದರ್ಶನ.

ಇನ್ನೊಂದು ಸೈಬರ್ ಸುರಕ್ಷಾ ಸಂಸ್ಥೆ ‘ಕ್ಲೌಡ್‍ಸೆಕ್’ ಪ್ರಕಾರ, ಸೈಬರ್ ಅಪರಾಧಿಗಳು ಕೋವಿಡ್-19ರಹಿನ್ನೆಲೆಯಲ್ಲಿ ತಮ್ಮ ಕಾರ್ಯಚಟುವಟಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. ಪರಿಹಾರ ನಿಧಿಗೆ ಕನ್ನ ಹಾಕುವ ಅಥವಾ ಕೊರೊನಾಕ್ಕೆ ಸಂಬಂಧಿಸಿದ ಸ್ಯಾನಿಟೈಸರ್ ಕಿಟ್‍ಗಳು, ಪರೀಕ್ಷಾ ಕಿಟ್‌ಗಳನ್ನು ಒದಗಿಸುವ ಮುಖವಾಡವನ್ನು ಹಾಕಿಕೊಂಡಿದ್ದಾರೆ.

ಇದನ್ನೆಲ್ಲಾ ಗಮನಿಸಿದರೆ, ಕೊರೊನಾ ವೈರಸ್ ಎಂಬ ವ್ಯಾಧಿಯು ದೇಹದೊಂದಿಗೆ ಮನಸ್ಸೂ ಸ್ವಚ್ಛವಾಗಿರಲಿ, ಆಗ ತನ್ನಿಂದತಾನೇ ಇಡೀ ಭೂಮಂಡಲ ಸ್ವಚ್ಛವಾಗುತ್ತದೆ ಎಂದು ಹೇಳಿಕೊಡುತ್ತಿರುವ ಸಂದರ್ಭದಲ್ಲೇ, ಸಂಪತ್ತಿನ ವ್ಯಾಮೋಹದ ಬಲೆಯೊಳಗೆ ಸಿಲುಕಿರುವ ವಿಕೃತ ಮನಸ್ಸುಗಳನ್ನು ಯಾವ ಸಾನಿಟೈಸರ್‌ಗಳೂ ತೊಳೆಯಲಾರವು ಎಂಬುದನ್ನೂ ಕಲಿಸಿಕೊಡುತ್ತಿದೆ ಎನಿಸುತ್ತದೆ.

ಇದಕ್ಕಿರುವ ಪರಿಹಾರವೆಂದರೆ, ಸೈಬರ್ ಅಪರಾಧ ಎಲ್ಲೋ ನಡೆಯುತ್ತದೆ, ಯಾರೋ ಮೋಸ ಹೋಗುತ್ತಾರೆ ಎಂಬ ಉಡಾಫೆಯನ್ನು ಬಿಟ್ಟು ನಮ್ಮ ಜಾಗರೂಕತೆಯಲ್ಲಿ ನಾವು ಇರುವುದು. ಚೀನಾದಲ್ಲಿ ಕೊರೊನಾ ವೈರಸ್‌ ಬಾಧಿಸುತ್ತಿದ್ದ ಸಂದರ್ಭದಲ್ಲಿ, ಅದು ಯಾವುದೋ ಒಂದು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ, ನಮ್ಮ ದೇಶಕ್ಕೆ, ನಮ್ಮ ರಾಜ್ಯಕ್ಕೆ ಬರಲು ಸಾಧ್ಯವಿಲ್ಲ ಎಂದೇ ಯೋಚಿಸಿದ್ದೆವು. ಈ ಯೋಚನೆಯನ್ನು ತಲೆಕೆಳಗು ಮಾಡಿ, ಅದೀಗ ನಮ್ಮ ಪಕ್ಕದ ಗಲ್ಲಿಗೇ ಬಂದು ಕುಳಿತಿದೆ. ಇದೇ ಬೆಳವಣಿಗೆಯನ್ನು ಸೈಬರ್ ಅಪರಾಧಕ್ಕೂ ಹೋಲಿಸಬೇಕು, ಕೋವಿಡ್-19ರಂತೆ ಅದೂ ಸಾಂಕ್ರಾಮಿಕವಾಗಬಹುದು ಎಂಬ ಯೋಚನೆಯೊಂದು ನಮ್ಮಲ್ಲಿ ಇರಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.