ಭಾರತದಲ್ಲಿ ಸಾಮಾಜಿಕವಾಗಿ ಮುಖ್ಯವಾದ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಯೋಗ ಭೂಮಿಯೂ ಇದೇ. ಲಕ್ಷಾಂತರ ಅನುಯಾಯಿಗಳೊಂದಿಗೆ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದು ಇಲ್ಲಿನ ನಾಗಪುರದಲ್ಲೇ. ಆರ್‌ಎಸ್‌ಎಸ್ ಆರಂಭವಾದದ್ದೂ ಅದೇ ನಾಗಪುರದಲ್ಲಿ. ಮೀಸಲಾತಿಯ ಜನಕ ಎಂದೇ ಗುರುತಿಸಲಾಗುವ ಶಾಹು ಮಹಾರಾಜರ ಕರ್ಮ ಭೂಮಿಯೂ ಮಹಾ ರಾಷ್ಟ್ರವೇ. ಅಸ್ಪೃಶ್ಯತೆ ನಿವಾರಣೆಗೆ ಗಾಂಧೀಜಿ ನಡೆಸಿದ ಅನೇಕ ಪ್ರಯೋಗಗಳಿಗೆ ಮುಂಬೈ, ವಾರ್ಧಾಗಳೇ ಸಾಕ್ಷಿಯಾಗಿದ್ದು. ಅಂತಹ ರಾಜ್ಯದಲ್ಲಿ ಇದೀಗ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಂದಿದೆ.
ಬಿಜೆಪಿಯು ಶಿವಸೇನೆಯ ಅರೆಮನಸ್ಸಿನ ಬೆಂಬಲದೊಂದಿಗೆ 5 ವರ್ಷ ಅವಧಿ ಪೂರೈಸಿದ ಬಳಿಕ ನಡೆದ ಚುನಾವಣೆ ಇದು. ಮರಾಠಾ ಮೀಸಲಾತಿ ಬೇಡಿಕೆಯ ಚಳವಳಿ ತೀವ್ರ ಸ್ವರೂಪ ಪಡೆದದ್ದು, ಕೋರೆಗಾಂವ್ ಹೋರಾಟದ ದ್ವಿಶತಮಾನೋತ್ಸವ ಕಾರ್ಯಕ್ರಮ ಹಿಂಸಾಚಾರಕ್ಕೆ ತಿರುಗಿ, ಜಾತಿ ಸಂಘರ್ಷಕ್ಕೆ ಕಾರಣವಾಗಿದ್ದು ಈ ಅವಧಿಯಲ್ಲೇ. ಕೋರೆಗಾಂವ್ ಕಾರ್ಯಕ್ರಮದೊಂದಿಗೆ ಗುರುತಿಸಿಕೊಂಡಿದ್ದ ಹಲವರಿಗೆ ನಕ್ಸಲರೊಂದಿಗೆ ಸಂಬಂಧವಿದೆ ಎಂಬ ಆರೋಪ ಕೇಳಿಬಂದು ಹಲವರ ಬಂಧನ ದೇಶಮಟ್ಟದ ಸುದ್ದಿಯಾಗಿತ್ತು.
ಇತಿಹಾಸ- ವರ್ತಮಾನ ಎರಡೂ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಚುನಾವಣೆಯ ಫಲಿತಾಂಶಕ್ಕೆ ತನ್ನದೇ ಆದ ಸಾಮಾಜಿಕ ಪ್ರಾಮುಖ್ಯ ಇದೆ. ಮಹಾರಾಷ್ಟ್ರದ ದಲಿತ ಸಮುದಾಯದಲ್ಲಿ ಮಹಾರ್, ಮಾತಂಗ, ಚಮ್ಮಾರ್ ಎಂಬ ಮೂರು ಪ್ರಮುಖ ಜಾತಿಗಳು. ಈ ಜಾತಿಗಳಲ್ಲೇ ಒಟ್ಟು ದಲಿತರ ಶೇ 80ರಷ್ಟು ಜನಸಂಖ್ಯೆ ಇದೆ. ಪರಿಶಿಷ್ಟ ಜಾತಿಯ 29, ಪರಿಶಿಷ್ಟ ಪಂಗಡದ 21 ಮೀಸಲು ವಿಧಾನಸಭಾ ಕ್ಷೇತ್ರಗಳು ಇಲ್ಲಿವೆ. ಮೀಸಲು ಕ್ಷೇತ್ರಗಳಲ್ಲದೆ ಒಂದು ಸಾಮಾನ್ಯ ಕ್ಷೇತ್ರದಲ್ಲೂ ದಲಿತರು ಗೆದ್ದಿದ್ದಾರೆ. ಪಕ್ಷವಾರು ನೋಡುವುದಾದರೆ, ಎನ್‌ಸಿಪಿಯಿಂದ 6, ಕಾಂಗ್ರೆಸ್‌ನಿಂದ 8, ಶಿವಸೇನೆಯಿಂದ 5, ಬಿಜೆಪಿಯಿಂದ 10 ದಲಿತ ಶಾಸಕರು ಆಯ್ಕೆಯಾಗಿದ್ದಾರೆ. ಈ ಸಲ ಮಹಾರ್ ಜಾತಿಯಿಂದ 8 (ಎನ್‌ಸಿಪಿ 3, ಕಾಂಗ್ರೆಸ್ 3, ಶಿವಸೇನಾ 2), ಚಮ್ಮಾರ್ ಜಾತಿಯಿಂದ 12 (ಎನ್‌ಸಿಪಿ 2, ಕಾಂಗ್ರೆಸ್ 2, ಬಿಜೆಪಿ 5, ಶಿವಸೇನಾ 2, ಪಕ್ಷೇತರ 1), ಮಾತಂಗ ಜಾತಿಯಿಂದ 4 (ಕಾಂಗ್ರೆಸ್ 2, ಬಿಜೆಪಿ 2) ಶಾಸಕರು ಆಯ್ಕೆಯಾಗಿದ್ದಾರೆ. ಅಲ್ಲದೆ ಸಣ್ಣ ಜಾತಿಗಳೆನಿಸಿದ ಕೈಕಡೆ 1 (ಎನ್‌ಸಿಪಿ), ಅಲೆಮಾರಿ ಜಾತಿಯೆನಿಸಿದ ಬರೂಡ್ 2 (ಬಿಜೆಪಿ), ವಾಲ್ಮೀಕಿ 1 (ಬಿಜೆಪಿ), ಭಲೈ 1 (ಶಿವಸೇನಾ), ಖಾಟಿಕ್ 1 (ಕಾಂಗ್ರೆಸ್) ಶಾಸಕರು ಚುನಾಯಿತರಾಗಿದ್ದಾರೆ. ಮೀಸಲು ಅಲ್ಲದ ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತ ಸಮುದಾಯದ ಐವರಿಗೆ ಕಾಂಗ್ರೆಸ್ ಹಾಗೂ ಇಬ್ಬರಿಗೆ ಶಿವಸೇನಾ ಟಿಕೆಟ್ ನೀಡಿದ್ದವು.
ಅಂಬೇಡ್ಕರ್ ಅವರ ಪುತ್ರ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ‘ವಂಚಿತ ಬಹುಜನ ಅಘಾಡಿ’ ಪಕ್ಷಕ್ಕೆ ಅಸದುದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷದ ಜೊತೆಗೆ ಹೊಂದಾಣಿಕೆ ಕುದುರಿತ್ತಾದರೂ ಕೊನೇ ಹಂತದಲ್ಲಿ ಅದು ಮುರಿದು ಬಿತ್ತು. ಅಘಾಡಿ ಪಕ್ಷಕ್ಕೆ ಖಾತೆ ತೆರೆಯಲೂ ಆಗಲಿಲ್ಲ. ಬಿಎಸ್‌ಪಿಗೂ ಖಾತೆ ತೆರೆಯುವುದು ಸಾಧ್ಯವಾಗಿಲ್ಲ. ಚುನಾವಣೆಗೆ ಮೊದಲು ಪ್ರಕಾಶ್ ಅವರ ಜೊತೆ ಹೊಂದಾಣಿಕೆಗೆ ಕಾಂಗ್ರೆಸ್ ಪ್ರಯತ್ನಿಸಿತ್ತು. ಎನ್‌ಸಿಪಿಯನ್ನು ತೊರೆದು ಬರಬೇಕು, ಅರ್ಧದಷ್ಟು ಸೀಟು ಕೊಡಬೇಕೆಂಬ ದುಬಾರಿ ಬೇಡಿಕೆಯನ್ನು ಅವರು ಕಾಂಗ್ರೆಸ್ ಮುಂದೆ ಇಟ್ಟಿದ್ದರು. ಮಹಾರ್ ಸಮುದಾಯದ ನವಬೌದ್ಧರ ಗಣನೀಯ ಸಂಖ್ಯೆಯ ಮತಗಳನ್ನು ಅಘಾಡಿ ಪಕ್ಷ ಸೆಳೆಯುತ್ತಿದೆಯಾದರೂ ಸೀಟು ಮಾತ್ರ ದಕ್ಕುತ್ತಿಲ್ಲ. ಲೋಕಸಭಾ ಚುನಾವಣೆ ನಂತರ ಪಕ್ಷ ಸುಸ್ತಾದಂತಿದೆ.
ಲೋಕಸಭಾ ಚುನಾವಣೆಯಲ್ಲಿ ಸೊಲ್ಲಾಪುರ ಮೀಸಲು ಕ್ಷೇತ್ರದಲ್ಲಿ ಬೇಡ ಜಂಗಮರ ಹೆಸರಿನಲ್ಲಿ ದಲಿತರೆಂದು ನಕಲಿ ಜಾತಿ ಪ್ರಮಾಣಪತ್ರ ಪಡೆದ ಆರೋಪವಿದ್ದ ಲಿಂಗಾಯತ ಸ್ವಾಮೀಜಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಸ್ವಾಮೀಜಿಯು ಸುಶೀಲ್‌ಕುಮಾರ್ ಶಿಂಧೆ, ಪ್ರಕಾಶ್ ಅಂಬೇಡ್ಕರ್ ಅವರಂತಹ ಹಿರಿಯ ದಲಿತ ನಾಯಕರನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದ್ದರು. ಇಂತಹುದೇ ಆರೋಪವಿರುವ ಸಂಜಯ್ ರಾಯ್ ಮುಲ್ಕರ್ ಅವರ ಮೂಲಕ ಮೇಹ್ಕರ್ ಮೀಸಲು ಕ್ಷೇತ್ರದಲ್ಲಿ ಶಿವಸೇನೆಯಿಂದ ಅದೇ ರೀತಿಯ ಪ್ರಮಾದ ಈ ಸಲ ಆಗಿದೆ.
ಎನ್‌ಸಿಪಿ- ಕಾಂಗ್ರೆಸ್ ಗುಂಪಿಗೆ ಶೇ 36ರಷ್ಟು ದಲಿತ ಮತಗಳು ಬಂದರೆ, ಬಿಜೆಪಿ- ಶಿವಸೇನಾ ಗುಂಪಿಗೆ ಶೇ 41ರಷ್ಟು ಮತಗಳು ಬಂದಿವೆ ಎಂದು ವರದಿಯಾಗಿದೆ.
ಭೂ ಮಾಲೀಕರೆನಿಸಿದ ಮರಾಠಾ ಸಮುದಾಯಕ್ಕೆ ಶೇ 16ರ ಮೀಸಲಾತಿ ಒದಗಿಸುವ ಮೂಲಕ ಬಿಜೆಪಿಯು ಪ್ರಮುಖ ಒಬಿಸಿ ಸಮುದಾಯವೆನಿಸಿದ ಕುಣುಬಿಗಳ ವಿರೋಧ ಕಟ್ಟಿಕೊಳ್ಳಬೇಕಾಯಿತು. ಮರಾಠಾ ಸಮುದಾಯ ಮೀಸಲಾತಿ ವ್ಯಾಪ್ತಿಗೆ ಬರುವುದನ್ನು ಅನೇಕ ಒಬಿಸಿ ಜಾತಿಗಳು ಒಪ್ಪಲಿಲ್ಲ. ಬಿಜೆಪಿಗೆ ಈ ಅಂಶ ಒಳಏಟು ಕೊಟ್ಟಿದೆ.
‘ಜಡ್ಡುಗಟ್ಟಿದ ಕಾಂಗ್ರೆಸ್‌ಗಿಂತ ಬಿಜೆಪಿ ಹೆಚ್ಚು ಚುರುಕಾಗಿ ತಳವರ್ಗದ ಸಮಸ್ಯೆಗಳಿಗೆ ಸ್ಪಂದಿಸಿದೆ. ಆದರೂ ಎಲ್ಲ ದಲಿತರಿಗೆ ಇನ್ನೂ ಬಿಜೆಪಿಯವರು ‘ನಮ್ಮವರು’ ಅನ್ನಿಸುತ್ತಿಲ್ಲ, ನೀತಿ- ನಿರ್ಣಯಗಳ ಹಂತದಲ್ಲಿ ದಲಿತರ ಪಾಲ್ಗೊಳ್ಳುವಿಕೆಯ ಕೊರತೆ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಪಕ್ಷದಲ್ಲಿ ಎದ್ದು ಕಾಣುತ್ತದೆ’ ಎನ್ನುತ್ತಾರೆ ಮಹಾರಾಷ್ಟ್ರದ ದಲಿತ ಚಿಂತಕರು. ದಲಿತ ರಾಜಕಾರಣದಲ್ಲಿ ಬಿಜೆಪಿಯವರ ಗಟ್ಟಿ ಹೆಜ್ಜೆಯ ಪ್ರವೇಶ ಹಲವು ಮುಖದ ಪಲ್ಲಟಗಳಿಗೆ ಕಾರಣವಾಗಿರುವುದನ್ನು ಫಲಿತಾಂಶ ತೋರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.