ADVERTISEMENT

ಸಂಗತ: ಚೀಟಿಯೇ ಇಲ್ಲದ ಘಾತುಕ ‘ಔಷಧ’

ಕೃಷಿಕರಿಗೆಂದು ‘ಔಷಧ’ಗಳ ಹೆಸರಿನಲ್ಲಿ ಸಿಗುವ ನಾನಾ ಬಗೆಯ ವಿಷಗಳು ರೈತ ಮತ್ತು ಕೃಷಿ ಕಾರ್ಮಿಕರ ಸಮುದಾಯಕ್ಕೆ ಅಪಾಯಕಾರಿಯಾಗಿವೆ

ನಾಗೇಶ ಹೆಗಡೆ
Published 22 ಸೆಪ್ಟೆಂಬರ್ 2024, 23:46 IST
Last Updated 22 ಸೆಪ್ಟೆಂಬರ್ 2024, 23:46 IST
.
.   

ಡಾಕ್ಟರ್‌ಗಳು ಬರೆದುಕೊಡುವ ಔಷಧ ಚೀಟಿಗಳು ಕನ್ನಡದಲ್ಲಿ ಇರಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಹೇಳಿದ್ದಕ್ಕೆ ಒಮ್ಮತ ಮೂಡುತ್ತಿಲ್ಲ. ಆ ವಿಷಯವನ್ನು ಪಕ್ಕಕ್ಕಿಡೋಣ. ಚೀಟಿಗಳೇ ಇಲ್ಲದ ಇನ್ನೊಂದು ಬಗೆಯ ಅಪಾಯಕಾರಿ ‘ಔಷಧ’ಗಳು ಗೊತ್ತೆ? ಕೃಷಿಕರಿಗೆಂದು ಬೀಜ, ರಸಗೊಬ್ಬರ, ಸಾಧನ ಸಲಕರಣೆಗಳ ಜೊತೆ ‘ಔಷಧ’ಗಳ ಹೆಸರಿನಲ್ಲಿ ಅಂಗಡಿಗಳಲ್ಲಿ ಸಿಗುವ ನಾನಾ ಬಗೆಯ ವಿಷಗಳು ರೈತ ಮತ್ತು ಕೃಷಿ ಕಾರ್ಮಿಕರ ಸಮುದಾಯಕ್ಕೆ ವ್ಯಾಪಕ ಅಪಾಯಗಳನ್ನು ತಂದೊಡ್ಡುತ್ತಿವೆ. ಅಲ್ಲಿ ಕನ್ನಡದ ಹೇಳ ಹೆಸರೂ ಇರುವುದಿಲ್ಲ. ಅವುಗಳನ್ನು ಖರೀದಿಸಲು ಯಾವ ತಜ್ಞರ ಚೀಟಿಯೂ ಬೇಕಾಗಿಲ್ಲ.

ಕೀಟನಾಶಕ, ಕಳೆನಾಶಕ, ಶಿಲೀಂಧ್ರನಾಶಕ ಪಾಷಾಣಗಳ ಕತೆ ನಮಗೆಲ್ಲ ಗೊತ್ತೇ ಇದೆ. ಭೋಪಾಲ್‌ ಅನಿಲ ದುರಂತ, ಕಾಸರಗೋಡು- ಪಟ್ರಮೆಗಳ ಎಂಡೊಸಲ್ಫಾನ್‌ ಕರಾಳ ಮುಖಗಳು ಜಗಜ್ಜಾಹೀರಾಗಿವೆ.
ಅವೇನೋ ಸೀಮಿತ ಕ್ಷೇತ್ರದಲ್ಲಿ ಘಟಿಸಿದ್ದರಿಂದ ಭಾರಿ ಸುದ್ದಿಯಾಗಿ ಸ್ಫೋಟಗೊಂಡವು. ಆದರೆ ಅಂಗಡಿಗಳಿಂದ ದಿನವೂ ಒಂದರ್ಧ ಕಿಲೊಗ್ರಾಮ್‌, ಲೀಟರ್‌ಗಳ ಲೆಕ್ಕದಲ್ಲಿ ಅವು ರೈತರ ಮನೆ ಸೇರಿ, ಅಲ್ಲಿಂದ ಹೊಲಕ್ಕೆ ಹೋಗಿ ಸಣ್ಣಸಣ್ಣ ಪ್ರಮಾಣದಲ್ಲಿ ಬಳಕೆಗೆ ಬಂದು ಶ್ರಮಿಕರನ್ನು ದಾರುಣ ಸಂಕಷ್ಟಗಳಿಗೆ ನೂಕುತ್ತಿವೆ. ಈ ವಿಷಗಳ ಮಾರಾಟವೇನೋ ಎಲ್ಲ ಕಡೆ, ಎಲ್ಲ ಋತುಗಳಲ್ಲಿ ಭರ್ಜರಿ ನಡೆಯುತ್ತಲೇ ಇದೆ. ಆದರೆ ಆ ಅಪಾಯದ ಬಗ್ಗೆ ರೈತರನ್ನು ಎಚ್ಚರಿಸುವ ಕರಪತ್ರ ಗಳಾಗಲೀ ಕಿರುಫಲಕಗಳಾಗಲೀ ಇಂಗ್ಲಿಷ್‌ನಲ್ಲಂತೂ ಇರುವುದಿಲ್ಲ. ಕನ್ನಡದಲ್ಲಿ ಅವುಗಳ ಹೇಳ ಹೆಸರಿಲ್ಲ.

ಹಿಂದಿನ ವಾರವಷ್ಟೇ ತೆಲಂಗಾಣದ ರೈತರ ಆರೋಗ್ಯ ಕುರಿತ ಒಂದು ಆಘಾತಕಾರಿ ಅಂಶ ಇಂಗ್ಲಿಷ್‌ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ರಾಷ್ಟ್ರೀಯ ಪೋಷಕಾಂಶ ಸಂಸ್ಥೆ ಮತ್ತು ಉಸ್ಮಾನಿಯಾ
ವಿಶ್ವವಿದ್ಯಾಲಯ ಜಂಟಿಯಾಗಿ ಅಲ್ಲಿನ ರೈತರ ಆರೋಗ್ಯ ಸಮೀಕ್ಷೆ ನಡೆಸಿದವು. ಹೊಲ-ಗದ್ದೆ-ತೋಟಗಳಲ್ಲಿ ಕೆಲಸ ಮಾಡುತ್ತಿರುವ 341 ಶ್ರಮಿಕರ ರಕ್ತದ ತಪಾಸಣೆ ನಡೆಸಲಾಯಿತು. ಅವರ ರಕ್ತದಲ್ಲಿ ಒಟ್ಟು 28 ಬಗೆಯ ಕೃಷಿ ವಿಷಗಳು ಪತ್ತೆಯಾದವು. ಅವುಗಳಲ್ಲಿ 11 ಬಗೆಯ ವಿಷಗಳು ವಿಶ್ವ ಸ್ವಾಸ್ಥ್ಯ ಸಂಸ್ಥೆಯೇ (ಡಬ್ಲ್ಯುಎಚ್‌ಒ) ‘ಘೋರ ಅಪಾಯಕಾರಿ’ ಎಂದು ವರ್ಗೀಕರಿಸಿ ಇಟ್ಟ ವಾಗಿದ್ದವು. ಇವುಗಳನ್ನೆಲ್ಲ ಹೊಲಗಳಿಗೆ ಸಿಂಪಡಿಸು
ತ್ತಿದ್ದವರು ಆಸ್ತಮಾ, ಗೂರಲು ಕೆಮ್ಮು, ಚರ್ಮರೋಗ, ಕೆಲವರು ಕ್ಯಾನ್ಸರ್‌, ಮರೆಗುಳಿತನ ಮತ್ತು ಅನೇಕ ಬಗೆಯ ನರಸಂಬಂಧಿ ಕಾಯಿಲೆಗಳಿಂದ
ನರಳುತ್ತಿದ್ದಾರೆ.

ADVERTISEMENT

ಕರ್ನಾಟಕದಲ್ಲಿ ಇಂಥ ವೈದ್ಯಕೀಯ ಸಮೀಕ್ಷೆ ನಡೆದಂತಿಲ್ಲ. ನಡೆದರೂ ಕನ್ನಡ ಕೃಷಿಕರನ್ನಂತೂ ಅದು ತಲುಪಿಲ್ಲ. ಆದರೆ ನಮಗೆ ಕೃಷಿವಿಷಗಳ ಕರಾಳ ಕತೆಗಳು ಗೊತ್ತಿವೆ. ಪಂಜಾಬಿನ ಭಟಿಂಡಾದಿಂದ ರಾಜಸ್ಥಾನದ ಬಿಕಾನೇರ್‌ ಆಸ್ಪತ್ರೆಗೆ ಓಡಾಡುವ ರೈಲಿಗೆ ‘ಕ್ಯಾನ್ಸರ್‌ ಟ್ರೇನ್‌’ ಎಂತಲೇ ಹೆಸರು ಬಂದಿದೆ. ಚಾಮರಾಜನಗರ ಜಿಲ್ಲೆಯ ಒಂದು ದೇವಸ್ಥಾನದ ಪ್ರಸಾದದಲ್ಲಿ ಯಾರೋ ‘ಮೊನೊಕ್ರೊಟೊಫಾಸ್‌’ ಎಂಬ ಕೃಷಿವಿಷವನ್ನು ಬೆರೆಸಿದ್ದರಿಂದ 16 ಭಕ್ತರು ಪ್ರಾಣ ಬಿಟ್ಟಿದ್ದರು. ಹತ್ತಿ ಮತ್ತು ಸೆಣಬಿನಂಥ ಖಾದ್ಯೇತರ ಬೆಳೆಗಳಿಗೆ ಮಾತ್ರವೇ ಸಿಂಪಡಿಸಬೇಕಿದ್ದ ಈ ವಿಷವಸ್ತು ಆ ಜಿಲ್ಲೆಯಲ್ಲಿ ಹೇಗೆ ಹಾಸುಹೊಕ್ಕಾಗಿ ಬಳಕೆಯಾಗುತ್ತಿದೆ ಎಂಬುದನ್ನು ಯಾರೂ ತನಿಖೆ ಮಾಡಿದಂತಿಲ್ಲ.

ಅಂಥ ಘೋರ ವಿಷಗಳ ವ್ಯಾಪಕ ಬಳಕೆಯ ಬಗ್ಗೆ ಕೃಷಿ ಅಥವಾ ಆರೋಗ್ಯ ಇಲಾಖೆ ಕ್ಯಾರೇ ಅನ್ನದಿದ್ದರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತುರ್ತು ಗಮನ ಹರಿಸಬೇಕಿದೆ. ಏಕೆಂದರೆ ಯಾವ ವಿಷದ ಡಬ್ಬಿಯ ಮೇಲೂ ಕನ್ನಡದ ಹೇಳ ಹೆಸರಿಲ್ಲ. ಚಿಕ್ಕ ಡಬ್ಬಿಗಳ ಮೇಲೆ ಯಾವ ಭಾಷೆಯಲ್ಲಿ ಬರೆದರೂ ಭೂತಗನ್ನಡಿ ಇಲ್ಲದೆ ಓದಲೂ ಸಾಧ್ಯವಿಲ್ಲ ಬಿಡಿ. ಕಡೇ ಪಕ್ಷ ಒಂದು ಲೀಟರ್‌ ಅಥವಾ ಕಿಲೊಗ್ರಾಮ್‌ ಡಬ್ಬಿ ಅಥವಾ ಪ್ಯಾಕೆಟ್‌ ಮೇಲೆ ಕಡ್ಡಾಯವಾಗಿ ಕನ್ನಡದಲ್ಲಿ ಎಚ್ಚರಿಕೆಯ ಸೂಚನೆ ಇರಬೇಕು ಎಂದು ಪ್ರಾಧಿಕಾರ ಸೂಚಿಸಬಹುದು. ಆದರೆ ವಿಷ ತಯಾರಕರೆಲ್ಲ ಬಹುರಾಷ್ಟ್ರೀಯ ಕಂಪನಿಗಳ ಮುಷ್ಟಿಯಲ್ಲಿದ್ದಾರೆ. ಇಂಥ ಎಚ್ಚರಿಕೆ ಜಾರಿಗೆ ಬರದಂತೆ ತಡೆಹಿಡಿಯುವ ತಂತ್ರಸಿದ್ಧಿ ಅವರಿಗಿದೆ. ಮೇಲಾಗಿ ಬಹಳಷ್ಟು ವಿಷಗಳನ್ನು ಬೇನಾಮಿ ತಯಾರಕರು ಶೆಡ್‌ಗಳಲ್ಲಿ ಮಿಶ್ರಣ ಮಾಡಿ ಅಂಗಡಿಗಳಿಗೆ ರಿಯಾಯಿತಿ ದರದಲ್ಲಿ ತಲುಪಿಸುತ್ತಾರೆ. ಅವರು ಕನ್ನಡದಲ್ಲಿ ಲೇಬಲ್‌ ಹಚ್ಚುತ್ತಾರೊ ಇಲ್ಲವೊ ಎಂಬುದನ್ನು ಆಗಾಗ ಪರೀಕ್ಷಿಸು
ವಷ್ಟು ಸಿಬ್ಬಂದಿಯೂ ಪ್ರಾಧಿಕಾರದ ಬಳಿ ಇರಲಿಕ್ಕಿಲ್ಲ.

ಪ್ರಾಧಿಕಾರ ಒಂದು ಎಚ್ಚರಿಕೆಯ ಫಲಕವನ್ನು ಪ್ರತಿ ಕೃಷಿವಿಷ ಮಾರಾಟದ ಮಳಿಗೆಯಲ್ಲಿ ಕಡ್ಡಾಯವಾಗಿ ಹಾಕಿಸಬಹುದು. ‘ಎಚ್ಚರಿಕೆ! ಇಲ್ಲಿ ಮಾರಾಟವಾಗುವ ಅತ್ಯಲ್ಪ ವಿಷವೂ ನಾನಾ ಕಾಯಿಲೆಗಳಿಗೆ ಕಾರಣವಾಗು
ತ್ತದೆ. ಜೀವಕ್ಕೂ ಅಪಾಯ ತರಬಹುದು. ಆ ಕುರಿತ ಹೆಚ್ಚಿನ ಮಾಹಿತಿ ಅಥವಾ ಕಿರುಪುಸ್ತಕ ಈ ಅಂಗಡಿಯಲ್ಲಿ ಉಚಿತವಾಗಿ ಸಿಗುತ್ತದೆ- ಕೇಳಿ ಪಡೆಯಿರಿ’.

ಸರಳ ಭಾಷೆಯ ಅಂಥ ಕನ್ನಡ ಫಲಕ ಮತ್ತು ಕರಪತ್ರಗಳನ್ನು ಎಲ್ಲ ಕೃಷಿ ಅಂಗಡಿಗಳಿಗೆ ಪ್ರಾಧಿಕಾರವೇ ಪೂರೈಕೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.