ADVERTISEMENT

ಸಂಗತ: ಸ್ವಾಯತ್ತ ಸಂಸ್ಥೆ ಮತ್ತು ಹಂಗಿನ ಅರಮನೆ

ರಾಜಕೀಯ ಪಕ್ಷದ ಕಾರ್ಯಕರ್ತನಂತೆ ವರ್ತಿಸುವ ಸಾಹಿತ್ಯ ಸಂಸ್ಥೆಯ ಅಧ್ಯಕ್ಷ ಆ ಪಕ್ಷದ ಮೆಚ್ಚುಗೆ ಗಳಿಸಬಹುದೇ ವಿನಾ ಬರಹಗಾರರ ಮೆಚ್ಚುಗೆಯನ್ನಲ್ಲ

ಆರ್.ಲಕ್ಷ್ಮೀನಾರಾಯಣ
Published 23 ಜೂನ್ 2024, 23:40 IST
Last Updated 23 ಜೂನ್ 2024, 23:40 IST
<div class="paragraphs"><p>ಸಂಗತ: ಸ್ವಾಯತ್ತ ಸಂಸ್ಥೆ ಮತ್ತು ಹಂಗಿನ ಅರಮನೆ</p></div>

ಸಂಗತ: ಸ್ವಾಯತ್ತ ಸಂಸ್ಥೆ ಮತ್ತು ಹಂಗಿನ ಅರಮನೆ

   

‘ಸಾಹಿತಿ, ಕಲಾವಿದರು, ಸಂಸ್ಕೃತಿ ಚಿಂತಕರನ್ನು ಯಾವುದೇ ಪಕ್ಷದ ಅಡಿಯಾಳುಗಳಂತೆ ಕಾಣುವುದು ಸರಿಯಾದ ನಡವಳಿಕೆ ಅಲ್ಲ. ಇಂತಹ ಸಾಂಸ್ಕೃತಿಕ ಜೀತಗಾರಿಕೆಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಕೆಲವು ಲೇಖಕರು ಹೇಳಿದ್ದಾರೆ (ಪ್ರ.ವಾ., ಜೂನ್‌ 21). ‘ಸಾಹಿತಿಗಳೂ ರಾಜಕಾರಣಿಗಳೇ’ ಎಂಬ ಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಯನ್ನು ವಿರೋಧಿಸಿ ನೀಡಿರುವ ಈ ಹೇಳಿಕೆ ಅತ್ಯಂತ ಮಂಜಸವಾದುದೇ ಆಗಿದೆ‌‌‌‌. ಆದರೆ ಉಪಮುಖ್ಯಮಂತ್ರಿ ಹೇಳಿಕೆಯನ್ನು ಸಮರ್ಥಿಸುತ್ತ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್‌ ಬಾಬು ಅವರು ‘ಕೆಲವು ಸಾಹಿತಿ ಮತ್ತು ಚಿಂತಕರ ಟೀಕೆ ಅವರ ಅವಕಾಶವಾದದ ಪ್ರತೀಕ. ಉಪಮುಖ್ಯಮಂತ್ರಿಯವರನ್ನು ಟೀಕಿಸುವ ನೈತಿಕತೆಯನ್ನು ಈ ಲೇಖಕರು ಮತ್ತು ಸಾಹಿತಿಗಳು ಕಳೆದುಕೊಂಡಿದ್ದಾರೆ’ ಎಂದಿರುವುದು ಅತ್ಯಂತ ಧಾರ್ಷ್ಟ್ಯದ ಹೇಳಿಕೆಯಾಗಿದೆ‌.

ಉಪಮುಖ್ಯಮಂತ್ರಿ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥರಿಗೆ ಹೀಗೆ ಹೇಳುವ ಧಾರ್ಷ್ಟ್ಯ ಬರಲು ತಾವೂ ಕಾರಣರಲ್ಲವೇ ಎಂಬ ಬಗ್ಗೆ ಲೇಖಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ
ವನ್ನಂತೂ ಇದು ಸೃಷ್ಟಿಸಿದೆ.

ADVERTISEMENT

ಅಕಾಡೆಮಿಗಳು ಮತ್ತು ಪ್ರಾಧಿಕಾರಗಳನ್ನು ಸರ್ಕಾರ ಸ್ಥಾಪಿಸಿರುವುದು ಸಾಹಿತ್ಯ, ಕಲೆ, ಸಂಸ್ಕೃತಿಯ ಪುರೋಭಿವೃದ್ಧಿಗೆ. ಅವು ಇಲ್ಲದಿದ್ದರೂ ಸಾಹಿತ್ಯ, ಕಲೆಯನ್ನು ಸೃಷ್ಟಿಸುವವರು ತಮ್ಮ ಕೆಲಸ ಮಾಡುತ್ತಲೇ ಇರುತ್ತಾರೆ‌. ಮೊದಲಿಗೆ, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರು ಕ್ರಮವಾಗಿ ಪ್ರಧಾನಿ ಮತ್ತು ಶಿಕ್ಷಣ ಸಚಿವರೇ ಆಗಿದ್ದರು‌. ಜವಾಹರಲಾಲ್‌ ನೆಹರೂ ಅವರು ಲೇಖಕರೂ ಆಗಿದ್ದರಿಂದ ಅವರು ಅಧ್ಯಕ್ಷರಾಗಿದ್ದುದಕ್ಕೆ ಸಮರ್ಥನೆ ಇರಲು ಸಾಧ್ಯ. ನಂತರದಲ್ಲಿ ಲೇಖಕರೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರನ್ನು ಆರಿಸುವುದು ರೂಢಿಗೆ ಬಂತು. ಆದರೆ ನಮ್ಮ ರಾಜ್ಯದ ಶಿಕ್ಷಣ ಸಚಿವರು ರಾಜ್ಯ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರಾದುದಕ್ಕೆ ಏನೂ ಸಮರ್ಥನೆ ಇರಲಿಲ್ಲ‍. ಆಮೇಲೆ ಅದು ಸೂಕ್ತವಲ್ಲವೆಂದು ತಿಳಿದು, ಕೆಲಕಾಲದ ಮೇಲೆ ಅನಕೃ ಅವರನ್ನು ಅಧ್ಯಕ್ಷರಾಗಿರಲು ಸರ್ಕಾರ ಕೇಳಿಕೊಂಡಿತು‌‌. ಅನಕೃ ತಮಗೆ ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ರಾಶಿಯವರ‌ನ್ನು ಅಧ್ಯಕ್ಷರಾಗಿರಲು ಕೇಳಿಕೊಳ್ಳಲಾಯಿತು. ಹಾಗೆ ಸರ್ಕಾರ ಕೇಳಿಕೊಂಡು ಅಧ್ಯಕ್ಷರನ್ನಾಗಿ ಮಾಡುತ್ತಿದ್ದ ಕಾಲವೂ ಒಂದಿತ್ತು.

ಕುವೆಂಪು ಹಾಗೂ ಸರ್ ಬ್ರಜೇಂದ್ರನಾಥ ಸೀಲ್‌ ಅವರನ್ನು ಹೀಗೆ ಕೇಳಿಕೊಂಡೇ ಮೈ‌ಸೂರು ವಿಶ್ವ
ವಿದ್ಯಾಲಯದ ಕುಲಪತಿಗಳನ್ನಾಗಿ ನೇಮಿಸಲಾಗಿತ್ತು. ಅಕಾಡೆಮಿ, ಪ್ರಾಧಿಕಾರಗಳಿಗೆ ಸೂಕ್ತ ವ್ಯಕ್ತಿಗಳನ್ನು ಕೇಳಿಕೊಂಡು ನೇಮಿಸುವುದು ಸರ್ಕಾರದ ಜವಾಬ್ದಾರಿ. ಹಾಗೆ ಕಾರ್ಯನಿರ್ವಹಿಸುವುದು ಒಂದು ಜವಾಬ್ದಾರಿ ಅಷ್ಟೇ ಎಂದು ತಿಳಿಯುವುದು ಹೋಗಿ, ಅವು ಇಂದ್ರ ಪದವಿಯೆಂದೂ ಅಲ್ಲಿ ವಿರಾಜಮಾನರಾದರೆ ಮಾತ್ರ ತಮ್ಮ ಘನತೆ ಹೆಚ್ಚುತ್ತದೆಂದೂ ಕೆಲವರು ಭ್ರಮಿಸತೊಡಗುವ ಕಾಲ ಬಂದಾಗ, ಅದಕ್ಕೆ ಸರ್ಕಾರದ ಮಂತ್ರಿಮಹೋದಯರನ್ನು ಓಲೈಸುತ್ತ, ಅವರ ಸುತ್ತ ಸದಾ ಠಳಾಯಿಸುತ್ತ ಭಟ್ಟಂಗಿಗಳಂತೆ ನಡೆದುಕೊಳ್ಳತೊಡಗಿದ ಮೇಲೆ, ಅವು ಎಷ್ಟರಮಟ್ಟಿಗೆ ಸ್ವಾಯತ್ತ ಸಂಸ್ಥೆಗಳಾಗಿ ಉಳಿದಿವೆಯೋ ತಿಳಿಯದು‌. ಆದರೆ ಈಗ ಅವು ಹಂಗಿನ ಅರಮನೆಗಳಂತೆ ಆಗಿರುವುದಂತೂ ನಿಜ. ಅವು ಮಾತ್ರವಲ್ಲ, ಸಾಹಿತಿ, ಕಲಾವಿದರಿಗೆ ಮೀಸಲಾದ ವಿಧಾನಪರಿಷತ್ತಿನ ಸ್ಥಾನಗಳಿಗೂ ಓಲೈಸು ವುದು ಅತಿಯಾಗಿದೆ. ಸಾಹಿತಿಗಳು ಅಲಂಕರಿಸುತ್ತಿದ್ದ ಸ್ಥಾನಗಳಿಗೆ ಸಾಹಿತಿನಾಮಧಾರಕ ರಾಜಕಾರಣಿಗಳು ನಾಮಕರಣಗೊಳ್ಳತೊಡಗಿರುವುದಕ್ಕೆ ಇದೂ ಒಂದು ಕಾರಣ. ಹೀಗಾಗಿ ಅವೂ ಹಂಗಿನ ಅರಮನೆಗಳೇ ಆಗಲಾರಂಭಿಸಿವೆ. 

ಈಗ್ಗೆ ಹಲವಾರು ವರ್ಷಗಳಿಂದ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಲಾಬಿ ಮಾಡದೆ, ಮಂತ್ರಿಮಹೋದಯರನ್ನು ಓಲೈಸದೆ ಇಂಥ ಸ್ಥಾನಗಳನ್ನು ಪಡೆದುಕೊಂಡವರು ಇಲ್ಲವೇ ಇಲ್ಲ ಎಂಬಷ್ಟು ಶೂನ್ಯ. ಇದು ರಾಜಕೀಯಸ್ಥರಿಗೆ ಚೆನ್ನಾಗಿ ತಿಳಿದಿರುವು ದರಿಂದಲೇ ಈಗಿನಂತೆ ಲೇಖಕರ ಬಗ್ಗೆ ಕೇವಲವಾಗಿ ಮಾತನಾಡುವಷ್ಟು ಧಾರ್ಷ್ಟ್ಯ ಬಂದಿರುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಬುದ್ಧಿವಂತಿಕೆಯೇನೂ ಬೇಕಿಲ್ಲ.

ರಾಜಕೀಯ ಪಕ್ಷವೊಂದರ ಬಗ್ಗೆ ಬರಹಗಾರನಿಗೆ ಒಲವಿರುವುದೇನೂ ತಪ್ಪಲ್ಲ‌. ಆದರೆ ಸಾಹಿತ್ಯ ಸಂಸ್ಥೆಯೊಂದರ ಅಧ್ಯಕ್ಷನಾಗಿ ಇದ್ದುಕೊಂಡು ಪಕ್ಷವೊಂದರ ಕಾರ್ಯಕರ್ತನಂತೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವಷ್ಟು ಉತ್ಸಾಹವಿರುವ ಯಾರೇ ಆದರೂ ಪಕ್ಷದ ಮೆಚ್ಚುಗೆ ಗಳಿಸಬಹುದೇ ವಿನಾ ಬರಹಗಾರರ ಮೆಚ್ಚುಗೆ ಗಳಿಸಲಾರರು. ಅವರು ಆ ಅವಧಿಯುದ್ದಕ್ಕೂ ಪಕ್ಷಾತೀತ ವ್ಯಕ್ತಿಯಾಗಿರಬೇಕಾಗುತ್ತದೆ‌‌‌‌‌‌‌‌‌. ಇಲ್ಲವಾದರೆ ಆ ಸಂಸ್ಥೆಗಳು ಸ್ವಾಯತ್ತ ಸಂಸ್ಥೆಗಳಾಗಿ ಉಳಿಯದೆ ಹಂಗಿನ ಅರಮನೆಗಳಾಗುತ್ತವೆ. ಆಗ ಅಂಥ ಹಂಗಿನ ಅರಮನೆಯಲ್ಲಿ ಇರುವುದಕ್ಕಿಂತಲೂ‌ ವಿಂಗಡದ ಗುಡಿ ಲೇಸೆಂದೇ ನಿಜವಾದ ಸಾಹಿತಿಯೊಬ್ಬ ಭಾವಿಸುತ್ತಾನೆ‌.

ತಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವುದು ಬರಹಗಾರರ ಕೈಯಲ್ಲೇ ಇದೆ. ಅಕಾಡೆಮಿ, ಪ್ರಾಧಿಕಾರದ ಅಧ್ಯಕ್ಷ ಸ್ಥಾನಗಳ ಬಗ್ಗೆ ಕುವೆಂಪು ಮಾತಿನಲ್ಲಿ ಹೇಳುವುದಾದರೆ ‘ದಿವ್ಯ ನಿರ್ಲಕ್ಷ್ಯ’ ತೋರಿ, ತಾನಾಗಿ ಒಲಿದು ಬಂದಾಗ ಸ್ವೀಕರಿಸುವ ಮನೋಭಾವ ತಳೆದರೆ ಮಾತ್ರ ಸಾಹಿತಿಯೊಬ್ಬ ರಾಜಕಾರಣಿಗಳು ಧಾರ್ಷ್ಟ್ಯದಿಂದ ಕೇವಲವಾಗಿ ಆಡುವ ಮಾತುಗಳನ್ನು ಕೇಳುವ ಸಂದರ್ಭ ಬರುವುದಿಲ್ಲ ಮತ್ತು ಅವನೆಂದಿಗೂ ಸ್ವಾಭಿಮಾನಕ್ಕೆ ಎರವಾಗಬೇಕಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.