ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ಸಮರದಿಂದ ತೊಂದರೆಗೀಡಾದ ರೈತರಿಗೆ ಅಲ್ಲಿನ ಸರ್ಕಾರ ₹82 ಸಾವಿರ ಕೋಟಿ ತುರ್ತು ಪರಿಹಾರ ಘೋಷಿಸಿದೆ. ಟ್ರಂಪ್ ಅವರುಅನುಸರಿಸುತ್ತಿರುವ ಆರ್ಥಿಕ ನೀತಿಯಿಂದ ರಿಪಬ್ಲಿಕನ್ ಪಕ್ಷಕ್ಕಾಗಿರುವ ಹಿನ್ನಡೆ ಮತ್ತು ಅಮೆರಿಕದ ಕೃಷಿ ಕ್ಷೇತ್ರದ ಆರ್ಥಿಕತೆಗಾಗಿರುವ ಹಾನಿಯನ್ನು ಕಡಿಮೆ ಮಾಡಲು ಈ ಮೂಲಕ ಪ್ರಯತ್ನಿಸಲಾಗಿದೆ.
ಅಮೆರಿಕದಲ್ಲೇ ಅತಿ ಹೆಚ್ಚು ಸೋಯಾಬೀನ್ ಉತ್ಪಾದಿಸುವ ಹಾಗೂ ರಾಜಕೀಯವಾಗಿಯೂ ಮಹತ್ವದ್ದಾಗಿರುವ ಅಯೋವಾ ಪ್ರಾಂತ್ಯಕ್ಕೆ ಟ್ರಂಪ್ ಭೇಟಿ ನೀಡುವುದಕ್ಕೂ ಎರಡು ದಿನಗಳ ಮೊದಲು ಪರಿಹಾರ ಘೋಷಿಸಲಾಗಿದೆ. ವಾಣಿಜ್ಯ ಸಮರದಿಂದ ತೊಂದರೆಗೊಳಗಾದ ರೈತರ ಬಗ್ಗೆ ಟ್ರಂಪ್ ಕಾಳಜಿ ವಹಿಸುತ್ತಿದ್ದಾರೆ ಮತ್ತು ಅವರ ರಕ್ಷಣೆಗೆ ಬದ್ಧರಾಗಿದ್ದಾರೆ ಎಂಬುದನ್ನು ಬಿಂಬಿಸುವ ಲೆಕ್ಕಾಚಾರ ಪರಿಹಾರ ಘೋಷಣೆ ಹಿಂದಿದೆ.
ಆದರೆ, ರೈತರನ್ನು ಮತ್ತು ಕಾಂಗ್ರೆಸ್‌ನಲ್ಲಿರುವ ರೈತರ ಪ್ರತಿನಿಧಿಗಳನ್ನು, ಅಷ್ಟೇ ಏಕೆ ತಮ್ಮದೇ ಸಹವರ್ತಿಗಳನ್ನು ಟ್ರಂಪ್ ಕಡೆಗಣಿಸುತ್ತಿದ್ದಾರೆ. ತನ್ಮೂಲಕ ವಾಣಿಜ್ಯ ಸಮರವನ್ನು ವಿಸ್ತರಿಸಲು ಮುಂದಾಗಿದ್ದಾರೆ ಎಂಬುದರ ಸೂಚಕವಾಗಿದೆ ಪರಿಹಾರ ಘೋಷಣೆ.
‘ಇತರ ರಾಷ್ಟ್ರಗಳು ನಮ್ಮ ರೈತರ ಮೇಲೆ ಪ್ರಭಾವ ಬೀರಿ ಅಮೆರಿಕವು ದುರ್ಬಲಗೊಳ್ಳುವಂತೆ ಮಾಡಲಾಗದು ಎಂಬ ದೃಢ ಸಂದೇಶ ಈ ಕ್ರಮದ ಹಿಂದಿದೆ’ ಎಂಬುದು ಕೃಷಿ ಸಚಿವ ಸನ್ನಿ ಪರ್‌ಡ್ಯೂ ಅವರ ಹೇಳಿಕೆ.
ಸರ್ಕಾರದ ಈ ನಿರ್ಧಾರಕ್ಕೆ ಅನೇಕ ರೈತ ಸಂಘಟನೆಗಳಿಂದ, ಸಂಸದರಿಂದ, ಟ್ರಂಪ್ ಅವರದ್ದೇ ಪಕ್ಷದ ಕೆಲವು ಸಂಸದರಿಂದಲೂ ವಿರೋಧ ವ್ಯಕ್ತವಾಗಿದೆ. ಈಗ ಕೈಗೊಳ್ಳಲಾಗಿರುವ ಕ್ರಮ ಅನಪೇಕ್ಷಿತ ಪರಿಣಾಮಗಳ ಆರಂಭ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ರೈತರ ತಂಡವೊಂದು ಅಧ್ಯಯನ ನಡೆಸಿ ಅಂದಾಜಿಸಿದ ಪ್ರಕಾರ, ಅಮೆರಿಕದ ಗೋಧಿ ಮತ್ತು ಸೋಯಾಬೀನ್ ಬೆಳೆಗಾರರು ಈಗಾಗಲೇ ವಾಣಿಜ್ಯ ಸಮರದ ಪರಿಣಾಮವಾಗಿ ₹88 ಸಾವಿರ ಕೋಟಿ ನಷ್ಟ ಅನುಭವಿಸಿದ್ದಾರೆ. ಇದು ಪರಿಹಾರವಾಗಿ ಘೋಷಿಸಿರುವ ಮೊತ್ತಕ್ಕಿಂತಲೂ ಹೆಚ್ಚಿನದ್ದು. ಪ್ರತೀಕಾರವು ಸೋಯಾಬೀನ್, ಮಾಂಸ ಮತ್ತು ಇತರ ಅಮೆರಿಕದ ಕೃಷಿ ಉತ್ಪನ್ನಗಳ ರಫ್ತು ಮಾರುಕಟ್ಟೆಯನ್ನು ಬುಡಮೇಲಾಗಿಸಿದೆ. ಹಲವಾರು ವರ್ಷಗಳ ಪರಿಶ್ರಮದ ಫಲವಾಗಿ ರೂಪಿತಗೊಂಡಿರುವ ವಿದೇಶಿ ಮಾರುಕಟ್ಟೆ ಒಪ್ಪಂದಗಳು ಸುಂಕದಿಂದಾಗಿ ಕೈತಪ್ಪುವ ಭೀತಿ ಎದುರಾಗಿದೆ ಎಂದು ರೈತರು ಎಚ್ಚರಿಕೆ ನೀಡುತ್ತಿದ್ದಾರೆ.
‘ರೈತರನ್ನು ಬಡವರನ್ನಾಗಿ ಮಾಡುವ, ನಂತರ ಅವರ ಅಭಿವೃದ್ಧಿಗಾಗಿ ಶ್ರಮಿಸುವ ಮತ್ತು ಇತರೆ ರಾಷ್ಟ್ರಗಳಿಂದ ಹಣವನ್ನು ಎರವಲು ಪಡೆಯುವ ಭಯಾನಕ ನೀತಿಯನ್ನು ನೀವು ಹೊಂದಿದ್ದೀರಿ’ ಎಂದು ಟೆನ್ನೆಸ್ಸೀ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಿರಿಯ ರಿಪಬ್ಲಿಕನ್ ಸಂಸದ ಬಾಬ್ ಕಾರ್ಕರ್ ಅವರು ಸರ್ಕಾರವನ್ನು ಆಕ್ಷೇಪಿಸಿದ್ದಾರೆ. ‘ಕಾಂಗ್ರೆಸ್‌ನಲ್ಲೀಗ ವಿರೋಧದ ಕೂಗು ಕಾಣಿಸದಿರುವುದನ್ನು ನಂಬಲಾಗುತ್ತಿಲ್ಲ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ವಾಣಿಜ್ಯ ಸಮರದಿಂದಾಗಿ ಉತ್ಪಾದನಾ ವಲಯ ಮತ್ತು ಇಂಧನ ಕೈಗಾರಿಕೆಗಳೂ ನಷ್ಟ ಅನುಭವಿಸುತ್ತಿರುವಾಗ ಅಧ್ಯಕ್ಷರು ಕೃಷಿ ಕ್ಷೇತ್ರಕ್ಕೆ ಮಾತ್ರ ಪರಿಹಾರ ಘೋಷಿಸಿರುವುದನ್ನು ಅಲಾಸ್ಕಾದ ರಿಪಬ್ಲಿಕನ್ ಸಂಸದೆ ಲಿಸಾ ಮುರ್ಕೌಸ್ಕಿ ಪ್ರಶ್ನಿಸಿದ್ದಾರೆ.
ಪ್ರತೀಕಾರದ ಸುಂಕ ಹೇರಿಕೆಯ ಪರಿಣಾಮ ಅನುಭವಿಸುತ್ತಿರುವ ಆಟೊಮೊಬೈಲ್ ಉತ್ಪಾದನಾ ವಲಯ, ಮದ್ಯ ತಯಾರಕರು ಮತ್ತು ಇತರ ಕ್ಷೇತ್ರಗಳಿಗೂ ನೆರವು ನೀಡುವಂತೆ ಟ್ರಂಪ್ ಅವರ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಣಿಜ್ಯ ಸಮರದ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ರಿಪಬ್ಲಿಕನ್ ಪಕ್ಷದ ಬೆಂಬಲಿಗರು ಅಚ್ಚರಿಯಿಂದ ಗಮನಿಸುತ್ತಿದ್ದಾರೆ.
‘ತಾನೇ ಮಾಡಿಕೊಂಡ ಗಾಯಕ್ಕೆ ಪ್ರಥಮ ಚಿಕಿತ್ಸೆ ನೀಡಲು ಅಮೆರಿಕದ ಕೃಷಿ ಇಲಾಖೆ ಪ್ರಯತ್ನಿಸುತ್ತಿದೆ’ ಎಂದು ಪೆನ್ಸಿಲ್ವೇನಿಯಾದ ರಿಪಬ್ಲಿಕನ್ ಸಂಸದ ಪ್ಯಾಟ್ರಿಕ್ ಜೆ. ಟೂಮಿ ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಈ ಪರಿಹಾರ ಘೋಷಣೆಯು ಕೆಟ್ಟ ನೀತಿ’ ಎಂಬುದು ಅವರ ಅಭಿಪ್ರಾಯ.
ಸುಂಕ ಹೇರುವ ಟ್ರಂಪ್ ಅವರ ನಿರ್ಧಾರದಿಂದ ರೈತರಿಗೆ ಈಗಾಗಲೇ ಸಂಕಷ್ಟ ಎದುರಾಗಿದ್ದರೆ, ಅಮೆರಿಕದ ಉತ್ಪಾದನಾ ವಲಯ ನೂರಾರು ಕೋಟಿ ಡಾಲರ್ ನಷ್ಟ ಅನುಭವಿಸುವಂತಾಗಿದೆ. ಕೃಷಿಪ್ರಧಾನ ರಾಜ್ಯಗಳಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ರಿಪಬ್ಲಿಕ್ ಪಕ್ಷದವರಿಗೂ ಸಮಸ್ಯೆ ಎದುರಾಗಿದೆ.
‘ಸುಂಕಗಳ ಶಕ್ತಿ ದೊಡ್ಡದು. ವಾಣಿಜ್ಯ ವಹಿವಾಟಿಗೆ ಸಂಬಂಧಿಸಿ ನ್ಯಾಯೋಚಿತವಾದ ಮಾತುಕತೆಯಾದ ಮೇಲೆ ಅಮೆರಿಕವನ್ನು ಅನ್ಯಾಯವಾಗಿ ನಡೆಸಿಕೊಂಡರೆ ಅದಕ್ಕೆ ಸುಂಕದ ಮೂಲಕ ಪ್ರತ್ಯುತ್ತರ ದೊರೆಯಲಿದೆ. ಇದು ಸರಳ ಮತ್ತು ಎಲ್ಲರೂ ಮಾತನಾಡುತ್ತಿರುವ ವಿಷಯವೇ ಆಗಿದೆ! ನೆನಪಿಟ್ಟುಕೊಳ್ಳಿ, ನಾವು ಇಡೀ ಜಗತ್ತಿಗೆ ಹುಂಡಿಯಾಗಿದ್ದೆವು. ಆದರೆ ಈಗ ನಮ್ಮನ್ನು ದೋಚಲಾಗುತ್ತಿದೆ. ಮುಂದೆ ಎಲ್ಲವೂ ಒಳ್ಳೆಯದಾಗಲಿದೆ!’ ಎಂದು ವಾಣಿಜ್ಯ ಸಮರದ ಬಗ್ಗೆ ಇತ್ತೀಚೆಗೆ ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಟ್ರಂಪ್.
ಟ್ರಂಪ್ ಆಡಳಿತ ವಿಧಿಸಿರುವ ಸುಂಕಕ್ಕೆ ಪ್ರತಿಯಾಗಿ ಯುರೋಪಿಯನ್ ಒಕ್ಕೂಟದ ದೇಶಗಳು, ಮೆಕ್ಸಿಕೊ, ಚೀನಾ ಮತ್ತಿತರ ರಾಷ್ಟ್ರಗಳು ಅಮೆರಿಕದ ಉತ್ಪನ್ನಗಳಿಗೆ ಸುಂಕ ವಿಧಿಸಿವೆ. ಕೃಷಿ ಉತ್ಪನ್ನಗಳನ್ನೇ ಗುರಿಯಾಗಿಟ್ಟುಕೊಂಡು ಸುಂಕ ಹೇರಿವೆ. ಅದರಲ್ಲೂ, ರಾಜಕೀಯವಾಗಿ ಅಧ್ಯಕ್ಷ ಟ್ರಂಪ್ ಅವರ ಪ್ರಮುಖ ನೆಲೆಯಾಗಿರುವ ಪ್ರದೇಶಗಳಲ್ಲಿ ಬೆಳೆಯುವ ಉತ್ಪನ್ನಗಳನ್ನೇ ಗುರಿಯಾಗಿಸಿವೆ. ಅಮೆರಿಕದ ಸೋಯಾಬೀನ್, ಹಂದಿಮಾಂಸ, ಸಕ್ಕರೆ, ಕಿತ್ತಲೆಹಣ್ಣಿನ ಜ್ಯೂಸ್, ಚೆರ್ರಿ ಮತ್ತು ಇತರ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಗಳಲ್ಲಿ ಸುಂಕ ವಿಧಿಸಲಾಗುತ್ತಿದ್ದು, ಇದರಿಂದಾಗಿ ಅವು ಬೇಡಿಕೆ ಕಳೆದುಕೊಂಡಿವೆ. ಆಮದಾಗುವ ಉಕ್ಕು, ಅಲ್ಯೂಮಿನಿಯಂ ಮತ್ತು ಚೀನಾದ ₹2.31 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳ ಮೇಲೆ ಟ್ರಂಪ್ ಆಡಳಿತ ಸುಂಕ ವಿಧಿಸಿತ್ತು.
ವಾಣಿಜ್ಯ ಸಮರದಿಂದ ಕಷ್ಟವಾಗುತ್ತಿರಬಹುದಾದರೂ ಆ ವಿಚಾರದಲ್ಲಿ ಅಮೆರಿಕನ್ನರು ತುಸು ತಾಳ್ಮೆ ವಹಿಸಬೇಕು. ತಮ್ಮ ನಿರ್ಧಾರಗಳು ಇತರ ರಾಷ್ಟ್ರಗಳನ್ನು ಮಾತುಕತೆಗೆ ಮುಂದಾಗುವಂತೆ ಮಾಡಲಿವೆ. ದೀರ್ಘಾವಧಿಯಲ್ಲಿ ಒಳಿತಾಗಲಿದೆ ಎಂಬುದು ಕನ್ಸಾಸ್ ನಗರದಲ್ಲಿ ಇತ್ತೀಚೆಗೆ ಟ್ರಂಪ್ ವ್ಯಕ್ತಪಡಿಸಿದ್ದ ಅಭಿಪ್ರಾಯ.
‘ತಮ್ಮ ಉತ್ಪನ್ನಗಳ ಮೇಲೆ ವಿಧಿಸಿರುವ ಸುಂಕವನ್ನು ಮುಂದುವರಿಸುವುದನ್ನು ಅವರು (ವಿದೇಶಗಳನ್ನುದ್ದೇಶಿಸಿ) ಬಯಸಲಾರರು. ಅವರೆಲ್ಲ ನಮ್ಮನ್ನು ಕಾಣಲು ಬರುತ್ತಾರೆ. ಇದರ ಪ್ರಯೋಜನ ರೈತರಿಗಾಗಲಿದೆ. ನಾವು ಮಾರುಕಟ್ಟೆಗಳನ್ನು ಮುಕ್ತವಾಗಿಸಲಿದ್ದೇವೆ. ಮುಂದೇನಾಗಲಿದೆ ಎಂಬುದನ್ನು ನೋಡುತ್ತಿರಿ’ ಎಂಬುದು ಟ್ರಂಪ್ ಹೇಳಿಕೆ.
ಈ ಮಧ್ಯೆ, ಪರಿಹಾರ ಘೋಷಿಸಿರುವುದನ್ನು ಕೆಲವು ರೈತ ಸಂಘಟನೆಗಳು ಸ್ವಾಗತಿಸಿವೆ.
‘ರೈತರಿಗೆ ಒಳ್ಳೇ ಸುದ್ದಿ ನೀಡಬೇಕು ಎಂಬುದನ್ನು ಸರ್ಕಾರ ಗುರುತಿಸಿರುವುದಕ್ಕೆ ನಾವು ಕೃತಜ್ಞರಾಗಿದ್ದೇವೆ’ ಎಂದು ಅಮೆರಿಕದ ರೈತ ಒಕ್ಕೂಟದ ಅಧ್ಯಕ್ಷ ಜಿಪ್ಪಿ ದುವಾಲ್, ಟ್ರಂಪ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ‘ಇದು ಗಮನಾರ್ಹ ಘೊಷಣೆಯಾದರೂ ರೈತರು ಮತ್ತು ಹುಲ್ಲುಗಾವಲುಗಳ ಮಾಲೀಕರು ಎದುರಿಸುತ್ತಿರುವ ಘೋರ ಪರಿಣಾಮಗಳನ್ನು ನಿರಾಕರಿಸಲಾಗದು’ ಎಂಬುದು ಅವರ ಅಭಿಮತ.
ಆದರೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸಂಸದರು, ಕೆಲವು ಕೃಷಿ ವಹಿವಾಟು ಸಂಘಟನೆಗಳು ಪರಿಹಾರ ನೀಡುವ ಯೋಜನೆಯನ್ನು ಟೀಕಿಸಿವೆ. ತೆರಿಗೆದಾರರ ಹಣವನ್ನು ಅಧ್ಯಕ್ಷರ ಸ್ವಂತ ನೀತಿಯಿಂದ ಪೋಲುಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿವೆ. ಸುಂಕ ವಿಧಿಸುವಿಕೆಯಿಂದ ಸೃಷ್ಟಿಯಾದ ಸಮಸ್ಯೆಯ ನಿವಾರಣೆಗೆ ಇದು ಸೂಕ್ತ ಪರಿಹಾರವಾಗಲಾರದು ಎಂದು ರಿಪಬ್ಲಿಕನ್‌ನ ಮಿತ್ರಪಕ್ಷಗಳೇ ಸ್ಪಷ್ಟಪಡಿಸಿವೆ.
‘ಅಧ್ಯಕ್ಷರು ಘೋಷಿಸಿರುವ ನೂರಾರು ಕೋಟಿ ಡಾಲರ್ ಪರಿಹಾರ ವರ್ಷಾಂತ್ಯಕ್ಕೆ ರೈತರಿಗೆ ದೊರೆಯಲಿದೆ’ ಎಂದು ಅಯೋವಾದ ರಿಪಬ್ಲಿಕನ್ ಸಂಸದ ಚಾರ್ಲ್ಸ್ ಇ. ಗ್ರಾಸ್ಲೆ ತಿಳಿಸಿದ್ದಾರೆ. ಜತೆಗೆ, ಅಯೋವಾ ಮತ್ತು ಗ್ರಾಮೀಣ ಅಮೆರಿಕದ ರೈತರಿಗೆ ಮಾರುಕಟ್ಟೆಯಲ್ಲಿ ದೀರ್ಘಾವಧಿಯ ಅವಕಾಶಗಳು ದೊರೆಯಬೇಕು, ಸರ್ಕಾರದ ಕೊಡುಗೆಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಮಧ್ಯೆ, ಸೆಪ್ಟೆಂಬರ್‌ನಿಂದ ರೈತರು ಪರಿಹಾರದ ಮೊತ್ತ ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆ ಹೇಳಿದೆ. ಈ ವರ್ಷ ಬೆಳೆದ ಸೋಯಾಬೀನ್, ಸಿರಿಧಾನ್ಯ, ಜೋಳ, ಗೋಧಿ, ಹತ್ತಿ, ಹಾಲಿನ ಉತ್ಪನ್ನಗಳು ಮತ್ತು ಹಂದಿಮಾಂಸದ ಪ್ರಮಾಣದ ಆಧಾರದಲ್ಲಿ ರೈತರಿಗೆ ನೇರ ಪಾವತಿ ಮಾಡಲಾಗುತ್ತದೆ. ಹೆಚ್ಚುವರಿ ಉತ್ಪನ್ನಗಳಾದ ಹಣ್ಣು, ಬೀಜಗಳು, ಗೋಮಾಂಸ, ಅಕ್ಕಿ, ಹಂದಿಮಾಂಸ, ಹಾಲಿನ ಉತ್ಪನ್ನಗಳನ್ನು ಸರ್ಕಾರವೇ ಖರೀದಿ ಮಾಡುವ ಪ್ರಸ್ತಾಪವೂ ಪರಿಹಾರ ಯೋಜನೆಯಲ್ಲಿ ಸೇರಿದೆ. ಹೀಗೆ ಖರೀದಿಸಿದವುಗಳನ್ನು ಆಹಾರ ಬ್ಯಾಂಕ್‌ಗಳಿಗೆ ಅಥವಾ ಪೌಷ್ಟಿಕಾಹಾರ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಅಮೆರಿಕದ ಉತ್ಪನ್ನಗಳಿಗೆ ಹೊಸ ರಫ್ತು ಮಾರುಕಟ್ಟೆಯನ್ನು ಕಂಡುಕೊಳ್ಳುವ ಸಲುವಾಗಿ ಕಾರ್ಯನಿರ್ವಹಿಸುವ ಖಾಸಗಿ ಕಂಪೆನಿಗಳಿಗೂ ಅನುದಾನದಲ್ಲಿ ಪಾಲಿರಲಿದೆ.
ಇದರಿಂದ ಅಲ್ಪಾವಧಿಗೆ ಅಮೆರಿಕದ ಉತ್ಪಾದನಾ ವಲಯಕ್ಕೆ ತೊಂದರೆಯಾದರೂ ಭವಿಷ್ಯದಲ್ಲಿ ಇತರೆ ರಾಷ್ಟ್ರಗಳು ಅಮೆರಿಕದ ಉತ್ಪನ್ನಗಳ ಮಾರಾಟದ ಮೇಲಿನ ಅಡೆತಡೆಗಳನ್ನು ಕಡಿಮೆ ಮಾಡಬಹುದು ಎಂಬುದು ಟ್ರಂಪ್ ಅವರ ಬಲವಾದ ವಾದ.
ಮಹಾ ಆರ್ಥಿಕ ಕುಸಿತದ (ಗ್ರೇಟ್ ಡಿಪ್ರೆಶನ್–1929) ನಂತರ ಇದೇ ಮೊದಲು
ವ್ಯವಹಾರದಿಂದಾದ ನಷ್ಟಕ್ಕಾಗಿರೈತರಿಗೆ ಪರಿಹಾರ ನೀಡಲು ಯೋಜನೆ ಹಮ್ಮಿಕೊಂಡಿರುವುದುಗ್ರೇಟ್ ಡಿಪ್ರೆಶನ್ ನಂತರ ಇದೇ ಮೊದಲು ಎಂಬುದನ್ನು ಕೃಷಿ ಇಲಾಖೆಯ ವಕ್ತಾರರು ಬಹಿರಂಗಪಡಿಸಿದ್ದಾರೆ. ಬೆಳೆಗಳನ್ನು ಖರೀದಿಸುವ ಮೂಲಕ ರೈತರಿಗೆ ನೆರವಾಗುವ ‘ಕಮಾಡಿಟಿ ಕ್ರೆಡಿಟ್ ಕಾರ್ಪೊರೇಶನ್’ನಿಂದ ಯೋಜನೆಗೆ ಅನುದಾನ ಪಡೆಯಲಾಗುತ್ತದೆ. ಯೋಜನೆಗಾಗಿ ಯಾವುದೇ ಹೊಸ ಹಣವನ್ನು ಬಿಡುಗಡೆ ಮಾಡಬೇಕಾಗಿಲ್ಲ. ಹೀಗಾಗಿ ಕಾಂಗ್ರೆಸ್‌ನ ಅನುಮತಿ ಪಡೆಯುವುದೂ ಬೇಕಿಲ್ಲ. ಇದು ಟ್ರಂಪ್ ಆಡಳಿತ ಸದ್ಯಕ್ಕೆ ಸುಂಕ ತೆರವು ಮಾಡುವ ಸಾಧ್ಯತೆಯಿಲ್ಲ ಎಂಬುದನ್ನು ಸೂಚಿಸುತ್ತದೆ.
‘ಸರ್ಕಾರದ ಸುಂಕ ಮತ್ತು ಪರಿಹಾರಗಳು ಅಮೆರಿಕವನ್ನು ವೈಭವೋಪೇತ ದೇಶವನ್ನಾಗಿ ಮಾಡಲಾರವು. ಇವು 1929ರ ನೆನಪನ್ನು ಮರುಕಳಿಸುವಂತೆ ಮಾಡಲಿವೆ’ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ ನೆಬ್ರಸ್ಕಾದ ರಿಪಬ್ಲಿಕನ್ ಸಂಸದ ಬೆನ್ ಸಾಸ್ಸೆ.
‘ರೈತರಿಗೆ ಬೇಕಾಗಿರುವುದು ವ್ಯಾಪಾರವೇ ಹೊರತು ಪರಿಹಾರವಲ್ಲ’ ಎಂಬುದು ವಿಸ್ಕಾನ್ಸಿನ್‌ನ ರಿಪಬ್ಲಿಕನ್ ಸಂಸದ ರಾನ್ ಜಾನ್ಸನ್ ಅಭಿಪ್ರಾಯ.
‘ವಾಣಿಜ್ಯ ಸಮರವನ್ನು ಕೊನೆಗೊಳಿಸುವುದೇ ಉತ್ತಮ ಪರಿಹಾರ’ ಎಂಬುದು ಅಮೆರಿಕದ ‘ರೈತ ವಹಿವಾಟು ಸಂಘಟನೆ’ಯ ಕಾರ್ಯನಿರ್ವಾಹಕ ನಿರ್ದೇಶಕ ಬ್ರಿಯಾನ್ ಕುಹೆಲ್ ವಾದ.
‘ಸರ್ಕಾರದ ಯೋಜನೆಯನ್ನು ಅವಲಂಬಿತರಾಗಿರುವುದು ನಮಗೆ ಬೇಕಾಗಿಲ್ಲ’ ಎಂಬುದು ಮಿಸೌರಿಯ ರೈತ, ಅಮೆರಿಕದ ರೈತರ ಮತ್ತು ರೈತರ ಕುಟುಂಬಗಳ ಸಂಘಟನೆಯ ವಕ್ತಾರ ಕೇಸಿ ಗುರ್ನಸಿ ಹೇಳಿಕೆ.
ಇನ್ನು ಕೆಲವು ಸಂಸದರು, ‘ರೈತರಿಗೆ ನಿಜವಾಗಿಯೂ ನೆರವಾಗಬೇಕು ಎಂದು ಟ್ರಂಪ್ ಬಯಸಿದ್ದೇ ಆದಲ್ಲಿ ವಾಣಿಜ್ಯ ಸಮರವನ್ನು ಹಿಂತೆಗೆಯಲಿ’ ಎಂದು ಆಗ್ರಹಿಸಿದ್ದಾರೆ.
ಕೃಪೆ: ನ್ಯೂಯಾರ್ಕ್ ಟೈಮ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.