ಕೇಂದ್ರ ಬಜೆಟ್ ಮಂಡನೆಯಾಗುವ ಒಂದೇ ದಿನ ಮೊದಲು ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುವ ಆರ್ಥಿಕ ಸಮೀಕ್ಷೆಗೆ ಮಹತ್ವದ ದಾಖಲೆ ಎಂಬ ಖ್ಯಾತಿ ಇದೆ. ಆದರೂ ಇಷ್ಟು ದೊಡ್ಡ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಅದರ ಬಗ್ಗೆ ಸರಿಯಾದ ಚರ್ಚೆಗೂ ಅವಕಾಶವಿಲ್ಲ! ಬಜೆಟ್‌ಪೂರ್ವದ ಒಂದು ವರ್ಷದ ಅವಧಿಯಲ್ಲಿ ಆರ್ಥಿಕ ವಲಯದಲ್ಲಾದ ಬದಲಾವಣೆಗಳು ಹಾಗೂ ಜಾರಿಗೆ ಬಂದ ಸರ್ಕಾರಿ ಯೋಜನೆಗಳ ಬಗ್ಗೆ ಅದು ಮಾಹಿತಿ ನೀಡುತ್ತದೆ. ಸರ್ಕಾರದ ಅಭಿವೃದ್ಧಿಯ ಆಶಯಗಳನ್ನೂ ವ್ಯಕ್ತಪಡಿಸುತ್ತದೆ.
ನರೇಂದ್ರ ಮೋದಿ ಅವರ ಶಕೆ ಪ್ರಾರಂಭವಾದ ನಂತರ ಒಟ್ಟು 6 ಸಮೀಕ್ಷೆಗಳು ಹೊರಬಂದಿವೆ. ಈತನಕ ಸಮೀಕ್ಷೆಗಳ ಅನೇಕ ಆಶಯಗಳು ಸಾಧನೆಗಳಾಗಿ ಪರಿವರ್ತನೆಗೊಳ್ಳದ ಸತ್ಯವನ್ನು ಸರ್ಕಾರದ ಮತ್ತು ರಿಸರ್ವ್ ಬ್ಯಾಂಕಿನ ವರದಿಗಳೇ ಬಯಲು ಮಾಡಿವೆ.
ಮೋದಿ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ, 2014ರ ಜುಲೈ 9ರಂದು ಮಂಡಿಸಿದ 2013-14ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಕಾರ, ಮೂಲಸೌಕರ್ಯ, ಕಬ್ಬಿಣ ಮತ್ತು ಉಕ್ಕು, ಜವಳಿ, ನೌಕಾಯಾನ ಹಾಗೂ ಗಣಿಗಾರಿಕೆಯು ಸಂಕಷ್ಟದಲ್ಲಿದ್ದ ವಲಯಗಳಾಗಿದ್ದವು. ಈಗ ಈ ವಲಯಗಳು ಇನ್ನೂ ತೀವ್ರವಾದ ಸಂಕಷ್ಟದಲ್ಲಿವೆ.
2013-14ರಲ್ಲಿ ಕೃಷಿರಂಗವು ಶೇ 4.7ರಷ್ಟು ಬೆಳವಣಿಗೆ ದರ ದಾಖಲಿಸಿದ್ದು ವಿಶೇಷವಾಗಿತ್ತು. ಸರ್ಕಾರವು ಪ್ರಧಾನಮಂತ್ರಿ ಸಿಂಚಾಯಿ (ಹನಿ ನೀರಾವರಿ), ಫಸಲು ವಿಮೆ, ಬೆಂಬಲ ಬೆಲೆ ಹೆಚ್ಚಳದಂತಹ ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಲಾಭ ತೀರಾ ಸೀಮಿತವಾಗಿದ್ದರಿಂದ ಈಗ ಕೃಷಿರಂಗದಲ್ಲಿ ಶೇ 3ರಷ್ಟು ಬೆಳವಣಿಗೆಯನ್ನು ಸಾಧಿಸುವುದು ಕೂಡ ಕಷ್ಟ. 2022ರ ಹೊತ್ತಿಗೆ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವ ಕನಸು ಕಾಣುತ್ತಿರುವ ದೇಶ ಇದು. ಆದರೆ, ಇಲ್ಲಿ ಆದ್ಯತಾ ರಂಗವಾದ ಕೃಷಿ ಸೊರಗುತ್ತಿದೆ. ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಜೇಟ್ಲಿ ಅವರು ತಂತ್ರಜ್ಞಾನದ ಬಳಕೆಯಿಂದ ದ್ವಿತೀಯ ಹಸಿರುಕ್ರಾಂತಿ ಆಗಬೇಕೆಂದು ಬಯಸಿದ್ದರು. ಅದು ಸಾಧ್ಯವಾಗಿಲ್ಲವೆಂಬ ಸತ್ಯವನ್ನು ನಂತರದ ಆರ್ಥಿಕ ಸಮೀಕ್ಷೆಗಳೇ ತೋರಿಸುತ್ತಿವೆ.
2014-15ರ ದೊಡ್ಡ ಗಾತ್ರದ ಆರ್ಥಿಕ ಸಮೀಕ್ಷೆಯು ಮೇಕ್ ಇನ್ ಇಂಡಿಯಾ (ಭಾರತದಲ್ಲೇ ತಯಾರಿಸಿ), ಡಿಜಿಟಲ್ ಇಂಡಿಯಾ (ಡಿಜಿಟಲೀಕರಣ) ಮತ್ತು ಸ್ಕಿಲ್ ಇಂಡಿಯಾ (ಕೌಶಲಾಭಿವೃದ್ಧಿ ಯೋಜನೆ) ಕಾರ್ಯಕ್ರಮಗಳ ಮಹತ್ವವನ್ನು ಸಾರಿತ್ತು. ಈ ಯೋಜನೆಗಳು ಯಶಸ್ವಿಯಾಗಿವೆಯೆಂದು ನಿಖರವಾಗಿ ತೋರಿಸಲು ನಂತರದ ಯಾವ ಆರ್ಥಿಕ ಸಮೀಕ್ಷೆಗೂ ಸಾಧ್ಯವಾಗಿಲ್ಲ. ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ನೆರವಿಗೆ ಸರ್ಕಾರ ರೂಪಿಸಿದ ಯೋಜನೆಗಳ ಕಿರುಪರಿಚಯ ಈ ಸಮೀಕ್ಷೆಯಲ್ಲಿದೆ. ಈ ಕೈಗಾರಿಕೆಗಳಲ್ಲಿ ಈಗ 5 ಕೋಟಿ ಉದ್ಯೋಗ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಹಳೆಯ ಸಮಸ್ಯೆಗಳ ಜತೆಗೆ ನೋಟು ರದ್ದತಿ ಮತ್ತು ಜಿಎಸ್‌ಟಿಯಿಂದ ಎಂಎಸ್ಎಂಇ ರಂಗವು ನಲುಗಿಹೋಗಿದೆ. ಇನ್ನು, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕೂಡ ಎಂಎಸ್ಎಂಇಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿರುವಾಗ, ಉದ್ಯೋಗ ಸೃಷ್ಟಿಯ ಆಶಯ ಈಡೇರುವ ಸಾಧ್ಯತೆ ಕ್ಷೀಣಿಸುತ್ತಾ ಹೋಗುತ್ತಿದೆ.
ವಿತ್ತೀಯ ಕೊರತೆ ಮತ್ತು ಜಿಡಿಪಿ ನಡುವಣ ಪ್ರಮಾಣವನ್ನು ಶೇ 3ಕ್ಕೆ ಸೀಮಿತಗೊಳಿಸುವ ಅಗತ್ಯವನ್ನು 2014- 15ರ ಆರ್ಥಿಕ ಸಮೀಕ್ಷೆಯ ಐದಾರು ಅಧ್ಯಾಯಗಳಲ್ಲಿ ತಿಳಿಸಲಾಗಿತ್ತು. ತೀರಾ ಇತ್ತೀಚೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಆರ್ಥಿಕತಜ್ಞೆ ಗೀತಾ ಗೋಪಿನಾಥ್ ಮತ್ತು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ ಪನಗರಿಯಾ ಸಹ ಈ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಆದರೆ ಡಿ. 31ರಂದು ಅರ್ಥ ಸಚಿವಾಲಯದಿಂದ ಹೊರಬಿದ್ದ ಮಹತ್ವದ ಟಿಪ್ಪಣಿಯು ಗಣನೀಯವಾಗಿ ಕುಸಿದ ಕೇಂದ್ರ ಸರ್ಕಾರದ ಆದಾಯ ಮತ್ತು ಆರ್ಥಿಕ ಹಿನ್ನಡೆಯನ್ನು ತಡೆಗಟ್ಟಲು ಸರ್ಕಾರ ಮಾಡಿದ ವೆಚ್ಚಗಳಿಂದಾಗಿ ವಿತ್ತೀಯ ಕೊರತೆಯ ಪ್ರಮಾಣವು ಶೇ 3.3ಕ್ಕಿಂತ ಜಾಸ್ತಿಯಾಗುವ ಸಾಧ್ಯತೆಯನ್ನು ತೋರಿಸಿದೆ. ಆರ್ಥಿಕ ಸಮೀಕ್ಷೆಗಳ ಆಶಯವಾದ ವಿತ್ತೀಯ ಕ್ರೋಡೀಕರಣವು ಜೇಟ್ಲಿ ಅವರ ಪ್ರಯತ್ನಗಳ ಹೊರತಾಗಿಯೂ ಕಾಗದದ ಮೇಲೆ ಮಾತ್ರ ಶೋಭಿಸುವ ಲಕ್ಷಣ ಇದು!
ಜೇಟ್ಲಿ ಮಂಡಿಸಿದ ಮೊದಲ ಮೂರು ಸಮೀಕ್ಷೆಗಳು ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಸರ್ಕಾರದ ಜತೆಗೆ ಖಾಸಗಿರಂಗದ ಸಹಭಾಗಿತ್ವದ ಅಗತ್ಯವನ್ನೂ ತಿಳಿಸಿದ್ದವು. ಸಹಭಾಗಿತ್ವದ ಆಶಯ ಈಡೇರುತ್ತಿಲ್ಲ ಎಂದು ಜೇಟ್ಲಿಯವರೇ ನಂತರ ಹೇಳುವಂತಾಯಿತು. ಸರ್ಕಾರವು ವಿತ್ತೀಯ ಉತ್ತೇಜನಗಳನ್ನು ನೀಡಿದರೂ ಖಾಸಗಿರಂಗವು ಉದ್ಯೋಗ ಸೃಷ್ಟಿಸಲು ಆಸಕ್ತಿ ವಹಿಸುತ್ತಿಲ್ಲವೆಂದು, ನೀತಿ ಆಯೋಗದ ಉಪಾಧ್ಯಕ್ಷರಾಗಿ
ದ್ದಾಗಲೇ ಪನಗರಿಯಾ ಕಿಡಿ ಕಾರಿದ್ದರು.
ಹಿಂದಿನ ವರ್ಷದ ಜುಲೈ 4ರಂದು ಸಂಸತ್ತಿನಲ್ಲಿ ಮಂಡನೆಯಾಗಿದ್ದ 2018-19ರ ಸಮೀಕ್ಷೆಯು ವ್ಯಾಪಕವಾದ ಆರ್ಥಿಕ ಮಂದಗತಿ ಇದ್ದರೂ 2024- 25ರ ಹೊತ್ತಿಗೆ ₹ 350 ಲಕ್ಷ ಕೋಟಿ ಮೊತ್ತದ ಜಿಡಿಪಿ ಗಾತ್ರದ ಆರ್ಥಿಕತೆಯ ಚಿತ್ರಣ ನೀಡಿದೆ. ಇದನ್ನು ಸಾಧಿಸಲು ಖಾಸಗಿ ಹೂಡಿಕೆಯು ಪ್ರಧಾನ ಚಾಲಕ ಶಕ್ತಿಯಾಗಬೇಕೆಂದು ಆಶಿಸುತ್ತಿದೆ. ಈಡೇರಬಹುದೇ ಈ ಆಶಯ?
ಬಜೆಟ್ ಮಾಹಿತಿಗೆ:www.prajavani.net/budget-2020
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.