ದಾರಿಯಲ್ಲಿ ಸಿಕ್ಕ ಪರಿಚಿತರೊಬ್ಬರು ‘ಬೆಳಿಗ್ಗೆ ಆರೂವರೆಗೆ ಮಗನನ್ನು ಜೆಇಇ ಕೋಚಿಂಗ್ ಸೆಂಟರ್‌ಗೆ ಡ್ರಾಪ್ ಮಾಡಬೇಕು’ ಎಂದರು. ಹೈಸ್ಕೂಲ್ ಓದುವ ಹುಡುಗನಿಗೆ ಈಗೇಕೆ ಆ ಕೋಚಿಂಗ್ ಎಂದು ಪ್ರಶ್ನಿಸಿದೆ. ‘ಅಯ್ಯೋ! ಆರನೇ ತರಗತಿಯಿಂದಲೇ ಈ ಎಲ್ಲಾ ಕೋಚಿಂಗ್ ಶುರುವಾಗುತ್ತದೆ. ಈ ಸಲವಂತೂ ನೀಟ್ ಪರೀಕ್ಷೆಯಲ್ಲಿ ಕಟ್‍ಆಫ್ ಹೆಚ್ಚಾಗಿದೆ. ಹಾಗಾಗಿ ಮತ್ತೂ ಕಷ್ಟಪಡಬೇಕು’ ಎಂದರು. ಅದಕ್ಕೆ ಸರಿಯಾಗಿ ಈಗಷ್ಟೇ ಮೆಡಿಕಲ್, ಎಂಜಿನಿಯರಿಂಗ್ ಸೀಟು ಹಂಚಿಕೆಯ ಪ್ರಕ್ರಿಯೆ ಆರಂಭವಾಗಿದ್ದರೂ ಕೋಚಿಂಗ್ ಸೆಂಟರ್‌ಗಳ ಪ್ರವೇಶ ಪ್ರಕ್ರಿಯೆ ಮುಗಿದು ಮುಂದಿನ ವರ್ಷಕ್ಕೆ ಭರದಿಂದ ತಯಾರಿ ನಡೆದಿದೆ!
ಕೆಲ ವರ್ಷಗಳ ಹಿಂದೆ ಹತ್ತು-ಹನ್ನೆರಡನೇ ತರಗತಿಯಲ್ಲಿ, ಶೈಕ್ಷಣಿಕವಾಗಿ ದುರ್ಬಲವಾಗಿದ್ದ ವಿದ್ಯಾರ್ಥಿಗಳು ಟ್ಯೂಷನ್‌ಗೆ ಸೇರುವ ಪರಿಪಾಟವಿತ್ತು. ಈಗ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ, ನೀಟ್ ಮತ್ತು ನಾಗರಿಕ ಸೇವಾ ಪರೀಕ್ಷೆಗಳಿಗೆ ಎಲ್ಲಿಲ್ಲದ ಮಹತ್ವ. ಈ ಪರೀಕ್ಷೆಗಳಲ್ಲಿ ಪಠ್ಯಕ್ರಮದ ಆಳವಾದ ಅಧ್ಯಯನ ಮಾತ್ರವಲ್ಲ ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸಲು ನಿಖರತೆ, ವೇಗ ಮತ್ತು ಸಮಯ ನಿರ್ವಹಣೆ ಅಗತ್ಯ. ಶಾಲಾ ಕಾಲೇಜುಗಳ ಸೀಮಿತ ಅವಧಿಯಲ್ಲಿ ಇವೆಲ್ಲವನ್ನೂ ಪ್ರತಿ ವಿದ್ಯಾರ್ಥಿಗೂ ಕಲಿಸುವುದು ಶಿಕ್ಷಕರಿಗೆ ಕಷ್ಟಸಾಧ್ಯ. ಹಾಗಾಗಿ ಮೂಲ ಪಠ್ಯಕ್ರಮವನ್ನು ಕಾಲೇಜಿನಲ್ಲಿ ಕಲಿತರೂ ಈ ಎಲ್ಲ ಹೆಚ್ಚಿನ ತರಬೇತಿಯನ್ನು ನೀಡಿ ಆ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ ಉದ್ದೇಶದಿಂದ ಹುಟ್ಟಿಕೊಂಡಿದ್ದು ಕೋಚಿಂಗ್ ಸೆಂಟರ್‌ಗಳು.
ಆದರೆ ಕಾಲ ಕಳೆದಂತೆ ಈ ಸೆಂಟರ್‌ಗಳು ಸೀಟು ಗಳಿಕೆಯನ್ನೇ ಗುರಿಯಾಗಿಟ್ಟುಕೊಂಡ ಫ್ಯಾಕ್ಟರಿಗಳಾಗಿವೆ. ತಮ್ಮ ಮಗು ಚೆನ್ನಾಗಿ ಓದಲು ಎಲ್ಲ ರೀತಿಯ ಅನುಕೂಲ ಮಾಡಿಕೊಡಬೇಕು ಎಂಬ ಪೋಷಕರ ಸಹಜ ಬಯಕೆಯನ್ನೇ ಬಂಡವಾಳ ಮಾಡಿಕೊಂಡ ಕೋಚಿಂಗ್ ಸೆಂಟರ್‌ಗಳು ಭವಿಷ್ಯದ ಕನಸುಗಳನ್ನು ಮಾರಾಟಕ್ಕಿಡುತ್ತಿವೆ. ಅವನ್ನು ಕೊಂಡುಕೊಳ್ಳಲು ಪೋಷಕರು ಎಷ್ಟೇ ಖರ್ಚಾದರೂ ಪರವಾಗಿಲ್ಲ ಎಂದು ಇವುಗಳಿಗೆ ಸೇರಿಸುತ್ತಾರೆ. ಹೀಗಾಗಿ ಕೋಚಿಂಗ್ ಸೆಂಟರ್ ಈಗ ಲಾಭದಾಯಕ ಉದ್ಯಮವಾಗಿದೆ. ಈಗಂತೂ ಈ ರೀತಿಯ ಕೋಚಿಂಗ್ ಸೆಂಟರ್‌ಗಳಿಗೆ ಸೇರಿಸುವುದು ಸಮಾಜದಲ್ಲಿ ಪ್ರತಿಷ್ಠೆಯ ಸಂಕೇತವೂ ಹೌದು. ಎಲ್ಲಿ ನೋಡಿದರೂ ಜಾಹೀರಾತು, ಮಾಧ್ಯಮ
ಗಳಲ್ಲಿ ಯಶಸ್ಸಿನ ಕಥೆಗಳು, ಭರ್ಜರಿ ಪ್ರಚಾರದಿಂದ ವಿದ್ಯಾರ್ಥಿಗಳು ಇವುಗಳಿಗೆ ಮುಗಿಬೀಳುತ್ತಿದ್ದಾರೆ. ವಿಧಿಸುವ ಶುಲ್ಕ ದಿನೇ ದಿನೇ ಹೆಚ್ಚುತ್ತಿದೆ.
ಕೋಚಿಂಗ್ ಸೆಂಟರ್‌ಗಳಲ್ಲಿ ಪರೀಕ್ಷೆಯ ದೃಷ್ಟಿಯಿಂದ ಅನುಕೂಲವಾಗುವ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಸತತವಾಗಿ ನೂರಾರು ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ಅದನ್ನು ನೆನಪಿನಲ್ಲಿಟ್ಟು ಮತ್ತೆ ಬರೆಯುವ ವಿಧಾನಕ್ಕೆ ಪ್ರಾಶಸ್ತ್ಯ. ಇದರಿಂದ ವಿದ್ಯಾರ್ಥಿಗಳು ಏನಿದ್ದರೂ ಓದಿದ್ದನ್ನು ನೆನಪಿನಲ್ಲಿಟ್ಟು ಯಾಂತ್ರಿಕವಾಗಿ ಬರೆಯುವುದರಲ್ಲಿ ಮಾತ್ರ ತರಬೇತಿ ಪಡೆಯುತ್ತಾರೆ. ಸತತವಾಗಿ ನಾಲ್ಕೈದು ವರ್ಷಗಳಿಗೂ ಮೀರಿ ಈ ರೀತಿಯ ಶಿಕ್ಷಣ ಪಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ವಿಷಯ ಜ್ಞಾನ ಇವೆಲ್ಲವೂ ಕುಂಠಿತವಾಗುತ್ತವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರ್ದಿಷ್ಟ ಕಲಿಕೆಗೆ ಅವುಗಳಿಂದ ಹೆಚ್ಚಿನ ಸಹಾಯ ಸಿಗುತ್ತಿಲ್ಲ. ಒಟ್ಟಿನಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿದೆ. ಗಳಿಸುವ ಅಂಕದಲ್ಲಿ ಹೆಚ್ಚಳ ಕಂಡುಬಂದರೂ ಸೀಟುಗಳು ಸಿಗುತ್ತಿಲ್ಲ. ಕಲಿತಿದ್ದನ್ನು ನಿಜ ಜೀವನದಲ್ಲಿ ಬಳಸುವ ಕೌಶಲ ಮತ್ತು ವಿಷಯ ಜ್ಞಾನವನ್ನು ವಿದ್ಯಾರ್ಥಿಗಳು ಇಂದು ಪಡೆದಿಲ್ಲ. ಪರಿಣಾಮವಾಗಿ, ವೃತ್ತಿ ಜೀವನದಲ್ಲಿ ನಿರೀಕ್ಷಿಸಿದಷ್ಟು ಯಶಸ್ವಿಯಾಗುತ್ತಿಲ್ಲ.
ಆದರೂ ಕೋಚಿಂಗ್ ಸೆಂಟರ್‌ಗಳ ಜನಪ್ರಿಯತೆ ಕಡಿಮೆಯಾಗಿಲ್ಲ!
ಎಲ್ಲೆಡೆ ಹರಡಿರುವ ಈ ಕೋಚಿಂಗ್ ಸೆಂಟರ್‌ಗಳಲ್ಲಿ ಪರಸ್ಪರ ಪೈಪೋಟಿಯೂ ತೀವ್ರವಾಗಿದೆ. ಹೆಚ್ಚು ಸೀಟು ಗಳಿಸಲು ಆದಷ್ಟು ಬೇಗ ತರಬೇತಿ, ದಿನಕ್ಕೆ ಹನ್ನೆರಡು ತಾಸು ತರಗತಿ ಎಲ್ಲವೂ ನಡೆಯುತ್ತವೆ. ಅದರೊಂದಿಗೆ ಕನಿಷ್ಠ ಗಾಳಿ, ಬೆಳಕು, ಶೌಚಾಲಯ ವ್ಯವಸ್ಥೆಯೂ ಇಲ್ಲದ ಇಕ್ಕಟ್ಟಾದ ಜಾಗದಲ್ಲಿ ಬೆಳಗಿನಿಂದ ಸಂಜೆಯವರೆಗೆ ವಿದ್ಯಾರ್ಥಿಗಳು ತಮ್ಮ ದಿನದ ಬಹುಭಾಗವನ್ನು ಕಳೆಯುತ್ತಿದ್ದಾರೆ. ಆಟ, ಊಟ, ನಿದ್ದೆಯ ಜೊತೆಗೆ ಇದು ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮವನ್ನು ಬೀರುತ್ತಿದೆ. ಹೀಗಾಗಿಯೇ ದೆಹಲಿಯಲ್ಲಿ ಇತ್ತೀಚೆಗೆ ಕೋಚಿಂಗ್ ಕೇಂದ್ರದಲ್ಲಿ ನುಗ್ಗಿದ ಪ್ರವಾಹದ ನೀರಿನಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ಕೋಚಿಂಗ್ ಸೆಂಟರ್‌ಗಳು ಮೃತ್ಯುಕೂಪಗಳಂತಾಗಿವೆ. ವಿದ್ಯಾರ್ಥಿಗಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ’ ಎಂದು ಹೇಳಿರುವುದು ಗಮನಾರ್ಹ.
ಕೋಚಿಂಗ್ ಸೆಂಟರ್‌ಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯವಾಗಬಹುದು ನಿಜ. ವಿಷಯ ಪರಿಣತರಿಂದ, ಕೈಗೆಟಕುವ ದರದಲ್ಲಿ ಸರ್ಕಾರ ನೀಡಿರುವಂತಹ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಕೋಚಿಂಗ್ ಸೆಂಟರ್ ನಡೆಯಬೇಕು. ಆದರೆ ಅದಕ್ಕಿಂತ ಮೊದಲು ನಮ್ಮ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕು. ವಿಷಯಜ್ಞಾನದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕ್ರಮದ ಬಗ್ಗೆಯೂ ಮಕ್ಕಳಿಗೆ ತರಬೇತಿ ಸಿಗಬೇಕು. ಹಾಗೆಯೇ ಪ್ರತಿ ವಿದ್ಯಾರ್ಥಿಯ ಆಸಕ್ತಿ, ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮಿಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಬೇಕು. ಏಕೆಂದರೆ ಶಿಕ್ಷಣದ ಗುರಿಯು ಮಗುವಿನ ಸರ್ವಾಂಗೀಣ ಪ್ರಗತಿ ಮತ್ತು ವ್ಯಕ್ತಿತ್ವ ವಿಕಸನವೇ ವಿನಾ ಬರೀ ಅಂಕ-ಸೀಟು ಗಳಿಕೆಯಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.