ಉರ್ದು ಮುಸ್ಲಿಮರ ಭಾಷೆ, ಧಾರ್ಮಿಕ ಭಾಷೆ ಎಂಬ ತಪ್ಪುಕಲ್ಪನೆಯನ್ನು ಬಿತ್ತಲಾಗಿದೆ. ಕರ್ನಾಟಕದ ಮುಸ್ಲಿಮರು ಈ ಮಾತನ್ನು ಸಂಪೂರ್ಣವಾಗಿ ನಂಬಿಬಿಟ್ಟಿದ್ದಾರೆ. ಉರ್ದು ಕರ್ನಾಟಕದಲ್ಲಿ ಹುಟ್ಟಿಬೆಳೆದ ಒಂದು ಸುಮಧುರ ಭಾಷೆ.
ಉರ್ದು ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಶೈಕ್ಷಣಿಕ ಹಿನ್ನಡೆಯ ಕುರಿತಾದ ಮಲ್ಲಿಕಾರ್ಜುನ ಹೆಗ್ಗಳಗಿ ಹಾಗೂ ಎಂ.ಅಬ್ದುಲ್ ರೆಹಮಾನ್ ಪಾಷ ಅವರ ಅಭಿಪ್ರಾಯಗಳು (ಸಂಗತ, ಡಿ. 13 ಮತ್ತು 15) ಸಕಾಲಿಕವಾಗಿವೆ. ಉತ್ತರ ಕರ್ನಾಟಕದ ವಿಜಯಪುರ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಮಾತ್ರ ಬೆರಳೆಣಿಕೆ ಯಷ್ಟು ಮುಸ್ಲಿಮೇತರರು ಪ್ರಾಥಮಿಕ ಹಂತದ ಶಾಲಾ ಶಿಕ್ಷಣದಲ್ಲಿ ಉರ್ದುವನ್ನು ಕಲಿಯುತ್ತಿದ್ದಾರೆ. ಇನ್ನುಳಿದಂತೆ, ಉರ್ದು ಶಾಲೆಗಳೆಂದರೆ ಅವು ಮುಸ್ಲಿಂ ಸಮುದಾಯದ ಮಕ್ಕಳಷ್ಟೇ ವಿದ್ಯಾಭ್ಯಾಸ ಮಾಡುವ ತಾಣಗಳಾಗಿವೆ.
ಕಾಲೇಜಿಗೆ ಬಂದಾಗ ಈ ಮಕ್ಕಳು ಕಲಿಕಾ ಮಾಧ್ಯಮದ ವಿಷಯವಾಗಿ ದಿಕ್ಕು ತಪ್ಪುತ್ತಾರೆ. ಕಾಲೇಜು ಹಂತದಲ್ಲಿ ಉರ್ದು ಮಾಧ್ಯಮದ ಬದಲು ಕನ್ನಡ ಇಲ್ಲವೆ ಇಂಗ್ಲಿಷನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಆಗುತ್ತದೆ. ಇದಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿ, ಸಹಜವಾಗಿ ಅವರು ಕಲಿಕೆಯಲ್ಲಿ ಹಿಂದುಳಿ ಯುತ್ತಾರೆ. ಮುಸ್ಲಿಂ ಮಕ್ಕಳ ಶೈಕ್ಷಣಿಕ ಹಿಂದುಳಿದಿರು ವಿಕೆಗೆ ಉರ್ದು ಮಾಧ್ಯಮ ಕೂಡಾ ಒಂದು ಕಾರಣ ವಾಗಿದೆ.
ಉರ್ದು ಮುಸ್ಲಿಮರ ಭಾಷೆ, ಧಾರ್ಮಿಕ ಭಾಷೆ ಎಂಬ ತಪ್ಪುಕಲ್ಪನೆಯನ್ನು ಬಿತ್ತಲಾಗಿದೆ. ಕರ್ನಾಟಕದ ಮುಸ್ಲಿಮರು ಈ ಮಾತನ್ನು ಸಂಪೂರ್ಣವಾಗಿ ನಂಬಿಬಿಟ್ಟಿದ್ದಾರೆ. ಉರ್ದು ಕರ್ನಾಟಕದಲ್ಲಿ ಹುಟ್ಟಿಬೆಳೆದ ಒಂದು ಸುಮಧುರ ಭಾಷೆ. ಇದನ್ನು ಹಿಂದೂ ಮುಸ್ಲಿಮ ರಾದಿಯಾಗಿ ಅನೇಕರು ಕಟ್ಟಿ ಬೆಳೆಸಿದ್ದಾರೆ. ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಧರ್ಮಸಿಂಗ್ ಅವರಂತಹ ನಾಯಕರು ಉರ್ದುವಿನಲ್ಲಿ ಸೊಗಸಾಗಿ ಮಾತನಾಡುತ್ತಿದ್ದರು. ರಾಜೇಂದ್ರ ಸಿಂಗ್ ಬೇಡಿ, ಪ್ರೇಮ್‌ಚಂದ್ ಉರ್ದು ಸಾಹಿತ್ಯವನ್ನು ಬೆಳೆಸಿದ್ದಾರೆ. ಕನ್ನಡದ ಶಾಂತರಸ, ಪಂಚಾಕ್ಷರಿ ಹಿರೇಮಠ, ದೇವೇಂದ್ರಕುಮಾರ್ ಹಕಾರಿ... ಉರ್ದುವಿನಲ್ಲಿ ಸಾಹಿತ್ಯ ರಚಿಸಿದ್ದಾರೆ. ಹೀಗಿರುವಾಗ, ಉರ್ದು ಮುಸ್ಲಿಮರ ಭಾಷೆ ಎಂಬ ಮಾತಿಗೆ ಅರ್ಥ ಇದೆಯೇ?
ದಖನಿ ಉರ್ದು ಎಂದು ಕರೆಯಲಾಗುವ ಇಲ್ಲಿನ ಉರ್ದು ಹುಟ್ಟಿದ್ದು ನಮ್ಮ ರಾಜ್ಯದ ವಿಜಯಪುರ, ಬೀದರ್, ಕಲಬುರಗಿ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿ. ವಿಜಯಪುರದ ಆದಿಲ್‍ಶಾಹಿಗಳ ಕಾಲದಲ್ಲಿನ ಪರ್ಷಿಯನ್ನರು ಸ್ಥಳೀಯ ಸೈನಿಕರೊಂದಿಗೆ ಒಡನಾಡುವಾಗ ಹುಟ್ಟಿಕೊಂಡ ಭಾಷೆಯಿದು. ಉರ್ದು ಎಂಬುದಕ್ಕೆ ‘ಸೈನಿಕ ಶಿಬಿರ’ ಎಂಬ ಅರ್ಥವಿರುವುದನ್ನು ಗಮನಿಸಬಹುದು.
ಹಿಂದ್ವಿ ಎಂದು ಕರೆಯಲಾಗುವ ಇನ್ನೊಂದು ಬಗೆಯ ಉರ್ದು ಈಗಿನ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹುಟ್ಟಿತು. ಸರಿಸುಮಾರು ಇದೇ ಹೊತ್ತಿನಲ್ಲಿ ಭಾರತದಲ್ಲಿ ಹಿಂದಿ ಭಾಷೆ ಹುಟ್ಟಿತು ಎನ್ನಲಾಗಿದೆ. ಈ ಎರಡೂ ಸೋದರ ಭಾಷೆಗಳಾಗಿವೆ. ಹಿಂದಿ ತನ್ನ ಭಾಷಿಕ ಶರೀರಕ್ಕಾಗಿ ದೇವನಾಗರಿ ಲಿಪಿಯನ್ನೂ ಉರ್ದು ಪರ್ಷಿಯನ್ ಲಿಪಿಯನ್ನೂ ಅನುಸರಿಸಿದವು.ಹಿಂದಿಯಲ್ಲಿ ಸಂಸ್ಕೃತ ಮೂಲದ ಪದಗಳು ಹಾಗೂ ಉರ್ದುವಿನಲ್ಲಿ ಪರ್ಷಿಯನ್ ಪದಬಳಕೆಯು ಸಹಜವಾಗಿ ಸ್ವೀಕೃತವಾದವು. ಉರ್ದು, ಹಿಂದಿ ಮಾತ್ರವಲ್ಲದೆ ಈ ದೇಶದ ನೆಲದಲ್ಲಿ ಸಾವಿರಾರು ಭಾಷೆಗಳು ಹುಟ್ಟಿ ವಿಕಾಸಗೊಂಡಿವೆ. ಲೋಹಿಯಾ ಅಭಿಪ್ರಾಯಪಟ್ಟಿರುವಂತೆ ಇವುಗಳು ಜಾತ್ಯತೀತ ಸ್ವರೂಪವನ್ನು ಹೊಂದಿದ್ದು ಅತ್ಯಂತ ಸಮೃದ್ಧ ಭಾಷೆಗಳಾಗಿವೆ. ಉತ್ತರ ಕರ್ನಾಟಕದ ಮಣ್ಣಿನಲ್ಲಿ ಹುಟ್ಟಿದ ಉರ್ದುವನ್ನು ವಿಶೇಷವಾಗಿ ಮುಸ್ಲಿಮರಲ್ಲಿ ಸುನ್ನಿ ಸಮಾಜದವರು ಬಹುವಾಗಿ ಹಚ್ಚಿಕೊಂಡಿದ್ದಾರೆ. ಉಳಿದಂತೆ ಮಲಬಾರಿ, ಬ್ಯಾರಿ, ಪಿಂಜಾರ, ಶಿಯಾ ಸಮುದಾಯದವರು ಕನ್ನಡವನ್ನು ಶೈಕ್ಷಣಿಕ ಭಾಷೆಯಾಗಿ ಅನುಸರಿಸುತ್ತಿರುವುದನ್ನು ಗಮನಿಸಬೇಕು.
ಮಕ್ಕಳನ್ನು ಶಾಲೆಗೆ ಸೇರಿಸುವಾಗ ‘ನಮ್ಮ ಧರ್ಮದ ಭಾಷೆಯಾದ ಉರ್ದು ಶಾಲೆಗಳಿಗೆ ಸೇರಿಸಿ’ ಎನ್ನುವ ಮಾತು ಕೇಳಿಬರುತ್ತದೆ. ಮನೆಗೆ ಸಮೀಪದಲ್ಲಿ ಉರ್ದು ಶಾಲೆ ಲಭ್ಯವಿಲ್ಲದಿದ್ದಲ್ಲಿ ಆ ಮಕ್ಕಳು ಶಿಕ್ಷಣದಿಂದಲೇ ವಂಚಿತರಾಗಿರುವುದೂ ಇದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳದಲ್ಲಿನ
ಮುಸ್ಲಿಮರಿಗೆ ಉರ್ದು ಮಾಧ್ಯಮದ ಸಮಸ್ಯೆಯಿಲ್ಲ. ಪಶ್ಚಿಮ ಬಂಗಾಳದ ಮುಸ್ಲಿಮರು ಸ್ಥಳೀಯ ಬಂಗಾಳಿ ಭಾಷೆಯನ್ನು ಸುನೇರಿ ಬಂಗಾಳಿ (ಬಂಗಾರದ ಬಂಗಾಳಿ) ಎಂದು ಸಂಭ್ರಮಿಸುತ್ತಾರೆ.
ರಾಜ್ಯದಲ್ಲಿ ಉರ್ದು ಮಾಧ್ಯಮದ ಶಾಲೆಗಳು ಗಣನೀಯ ಸಂಖ್ಯೆಯಲ್ಲಿವೆ. ಆದರೆ ಹೆಚ್ಚಿನ ಶಾಲೆಗಳು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಶಿಕ್ಷಕರ ಕೊರತೆಯೂ ಬಹಳಷ್ಟಿದೆ. ಈ ಶಾಲೆಗಳಲ್ಲಿ
ಓದುತ್ತಿರುವವರು ಬಡಪಾಯಿ ಮುಸ್ಲಿಮರ ಮಕ್ಕಳು. ಉಳ್ಳವರ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದುತ್ತಿದ್ದಾರೆ. ಇನ್ನೂ ಕುಚೋದ್ಯದ ಸಂಗತಿಯೆಂದರೆ, ಮನೆಮನೆಗಳಿಗೆ ಹೋಗಿ, ನಮ್ಮವರ ಮಕ್ಕಳನ್ನು ಉರ್ದು ಶಾಲೆಗೇ ಸೇರಿಸಿ ಎನ್ನುವ ಉರ್ದು ಮಾಸ್ತರರ ಮಕ್ಕಳು ಯಾವ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದೂ ಕೇಳಬೇಕಾಗಿದೆ.
ಹೀಗೆ ಮುಸ್ಲಿಮರು ಭಾಷೆಯ ನೆಪದಲ್ಲಿಬಹುಸಂಖ್ಯಾತರಿಂದ ಬೇರ್ಪಟ್ಟು ‘ದ್ವೀಪಜೀವಿ’ಗಳಾಗುವುದು ಸರಿಯಾದ ನಡೆಯಾಗಲಾರದು. ಈ ನೆಲದ ಭಾಷೆಯಾದ ಕನ್ನಡಕ್ಕೆ ಯಾವ ಜಾತಿ, ಮತದ ಹಂಗಿಲ್ಲ. ಯಾವುದೇ ಸಮಾಜದ ಶಕ್ತಿಯು ಅವರ ಶೈಕ್ಷಣಿಕ ಅರ್ಹತೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ಮರೆಯಬಾರದು. ಈ ಕಾರಣದಿಂದ ಮುಸ್ಲಿಮರು ಕನ್ನಡ ಇಲ್ಲವೆ ವರ್ತಮಾನದ ಅಗತ್ಯವಾಗಿರುವ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದು ಜಾಣತನದ ನಡೆಯಾಗಿದೆ. ಉರ್ದುವನ್ನು ಮಾಧ್ಯಮವಾಗಿ
ಸ್ವೀಕರಿಸುವುದಕ್ಕಿಂತ ಒಂದು ಭಾಷೆಯಾಗಿ ಕಲಿಯುವು ದರಲ್ಲಿ ಮುಸ್ಲಿಮರ ಹಿತ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.