‘ಮಕ್ಕಳು ವಿಜ್ಞಾನ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಬೆಳೆಯಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವೊಂದರಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಗೆ ಬದಲಾಗಿ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಗಿರುವ ಈ ಸಂದರ್ಭದಲ್ಲಿ ಅವರ ಹೇಳಿಕೆಯನ್ನು ಮಹತ್ವದ್ದು ಎಂದು ಪರಿಗಣಿಸಬಹುದು.
ಉದ್ದೇಶಿತ ಹೊಸ ನೀತಿಯ ರಚನೆಗೆ ನೆರವಾಗಲು ಉನ್ನತ ಮಟ್ಟದ ತಜ್ಞರ ಸಮಿತಿಯೊಂದನ್ನು ನೇಮಕ ಮಾಡುವುದಾಗಿಯೂ ಮುಖ್ಯಮಂತ್ರಿ ಹೇಳಿದ್ದಾರೆ. ಶಿಕ್ಷಣ-ಆರೋಗ್ಯ ಮತ್ತು ಸಾಹಿತ್ಯಕ-ಸಾಂಸ್ಕೃತಿಕ ವಲಯದ ಯಾವುದೇ ಆಡಳಿತ ನೀತಿಯನ್ನು ರೂಪಿಸುವ ಮುನ್ನ ಈ ರೀತಿ ತಜ್ಞರ ಸಮಿತಿ ನೇಮಿಸುವುದು ವಿವೇಕಯುತ ಕ್ರಮ. ಆದರೆ ಈ ಸಮಿತಿಯ ಸ್ವರೂಪ ಹೇಗಿರಬೇಕು ಹಾಗೂ ಅದರ ಸಮಾಲೋಚನೆಗಳ ಮೂಲಕ ಹೊರಹೊಮ್ಮುವ ಹೊಸ ಶಿಕ್ಷಣ ನೀತಿ, ಪಠ್ಯಕ್ರಮ, ಕಲಿಕೆಯ ಮಾದರಿ ಹಾಗೂ ಬೋಧನೆಯ ವಿಧಾನ ಹೇಗಿರಬೇಕು ಎಂದು ನಿರ್ಧರಿಸುವ ಮುನ್ನ ಸರ್ಕಾರಕ್ಕೆ ತಾತ್ವಿಕವಾಗಿ ಸ್ಪಷ್ಟತೆ ಇರುವುದು ಅಷ್ಟೇ ಮುಖ್ಯ.
ಸಾಮಾನ್ಯವಾಗಿ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರದಿಂದ ನೇಮಕವಾಗುವ ತಜ್ಞರ ಸಮಿತಿಗಳು ಅಧಿಕಾರ ರಾಜಕಾರಣದ ಹಲವು ದಿಕ್ಕುಗಳಿಂದ ನಿರ್ಬಂಧ, ನಿಬಂಧನೆಗೆ ಒಳಪಟ್ಟಿರುತ್ತವೆ. ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ಸಂದರ್ಭದಲ್ಲೂ ಆಡಳಿತಾರೂಢ ಪಕ್ಷಗಳ ಸ್ವಜನಪಕ್ಷಪಾತ, ರಾಜಕೀಯ ಹಿತಾಸಕ್ತಿ, ನಾಯಕರ ಸ್ವಹಿತಾಸಕ್ತಿ ಹಾಗೂ ನಿಕಟವರ್ತಿಗಳ ಕೂಟ ಇವೆಲ್ಲವೂ ಮುನ್ನೆಲೆಗೆ ಬರುತ್ತವೆ. ಆದರೆ ಶಿಕ್ಷಣ ಎನ್ನುವುದು ಮೂಲತಃ ಭವಿಷ್ಯದ ಸಮಾಜವನ್ನು ನಿರ್ಮಿಸುವ ಒಂದು ದೀರ್ಘಕಾಲಿಕ ಪ್ರಕ್ರಿಯೆ ಆಗಿರುವುದರಿಂದ, ತಜ್ಞರ ಸಮಿತಿಗಳು ಈ ವೈಪರೀತ್ಯಗಳಿಂದ ಹೊರತಾಗಿರುವುದು ಅತ್ಯವಶ್ಯ.
ರಾಜಕೀಯ ಒಲವು ಅಥವಾ ನಿರ್ದಿಷ್ಟ ಸೈದ್ಧಾಂತಿಕ ಒಲವು ಪ್ರಧಾನವಾಗಿರದೆ, ಲೌಕಿಕ ಜಗತ್ತಿಗೆ ಕಣ್ತೆರೆಯುವ ಭವಿಷ್ಯದ ತಲೆಮಾರಿನ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಪೂರಕವಾದ ಪಠ್ಯಕ್ರಮಗಳನ್ನೂ ಬೋಧನಾ ವಿಧಾನಗಳನ್ನೂ ಕಲಿಕೆಯ ಮಾದರಿಗಳನ್ನೂ ಸಿದ್ಧಪಡಿಸುವ ವಿಶಾಲ ಮನೋಭಾವದ ಚಿಂತಕರು, ತಜ್ಞರು ಇಂತಹ ಉನ್ನತ ಮಟ್ಟದ ಸಮಿತಿಯನ್ನು ಪ್ರತಿನಿಧಿಸುವುದು ಮುಖ್ಯ. ಭಾರತವು ಚಂದ್ರಯಾನದ ಸಂಭ್ರಮದಲ್ಲಿ ಮುಳುಗಿದ್ದರೂ ನಮ್ಮ ಸುತ್ತಲಿನ ನೆಲದ ವಾಸ್ತವಗಳನ್ನು ಗಮನಿಸಿದಾಗ, ನಮ್ಮ ಸಮಾಜ ಈ ಹೊತ್ತಿನಲ್ಲೂ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕ ಪ್ರಜ್ಞೆಯಿಂದ ಬಹುದೂರ ಇರುವುದು ಢಾಳಾಗಿ ಗೋಚರಿಸುತ್ತದೆ. ಭಕ್ತಿಗೂ ಮೌಢ್ಯಕ್ಕೂ ಇರುವ ಅಂತರವನ್ನು ಮಕ್ಕಳಿಗೆ ತಿಳಿಸದೇಹೋದರೆ, ಮುಂದಿನ ತಲೆಮಾರಿನ ಮಕ್ಕಳೂ ಧರ್ಮ-ದೇವರು ಮತ್ತು ಮೌಢ್ಯದ ನಡುವಿನ ಅಂತರವನ್ನು ಗ್ರಹಿಸಲಾರದೆ ಹೋಗುವ ಸಾಧ್ಯತೆಗಳಿವೆ.
ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ವೈಚಾರಿಕತೆಯ ಬೀಜಗಳನ್ನು ಬಿತ್ತುವ ಪ್ರಕ್ರಿಯೆಗೆ ಶಾಲೆಗಳಲ್ಲಿನ ಬೋಧನಾ ವಿಧಾನ ಮತ್ತು ಕಲಿಕಾ ಮಾದರಿಗಳು ಪೂರಕವಾಗಿ ಇರಬೇಕಾಗುತ್ತದೆ. ವಿಜ್ಞಾನ ಜಗತ್ತು ತನ್ನ ಮೇರು ಶಿಖರವನ್ನು ತಲುಪಿರುವ ಹೊತ್ತಿನಲ್ಲಿ, ನಮ್ಮ ಶಾಲೆಯ ಅಂಗಳದಲ್ಲೇ ಯಾವುದೋ ಕಾಲದ ಮೌಢ್ಯ ಮತ್ತು ಅಂಧ ಅನುಸರಣೆಯ ಮಾದರಿಗಳನ್ನು ಅನುಸರಿಸುವ ಮೂಲಕ ಮಕ್ಕಳನ್ನು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದಿಂದ ವಂಚಿತರನ್ನಾಗಿ ಮಾಡುವ ಅಪಾಯ ನಮ್ಮೆದುರಿನಲ್ಲಿದೆ. ಹಾಗಾಗಿ, ಹೊಸ ಶಿಕ್ಷಣ ನೀತಿಯ ತಳಪಾಯವೇ ವೈಚಾರಿಕ ಮನೋಭಾವ ಮತ್ತು ವೈಜ್ಞಾನಿಕ ಚಿಂತನೆ ಆಗಬೇಕಿದೆ.
ವಿಜ್ಞಾನ ಮತ್ತು ವೈಜ್ಞಾನಿಕ ಜ್ಞಾನದ ನೆಲೆಗಳನ್ನು ಶಾಲಾ ಹಂತದಲ್ಲಿಯೇ ಮಕ್ಕಳಿಗೆ ತಲುಪಿಸುವುದರೊಂದಿಗೆ, ಅವರ ನಿತ್ಯ ಬದುಕಿನ ಅನುಸರಣೆಯಲ್ಲಿ ಅಂಧವಿಶ್ವಾಸ, ಮೂಢನಂಬಿಕೆ ಮತ್ತು ಮೌಢ್ಯಾಚರಣೆಗಳು ಇಲ್ಲದಂತಹ ಬೋಧನಾ ಸಾಮಗ್ರಿಗಳನ್ನು ಅಳವಡಿಸುವುದು ಬಹಳ ಮುಖ್ಯವಾಗುತ್ತದೆ.
ಉದ್ದೇಶಿತ ಸಮಿತಿಯಲ್ಲಿ ವಿಜ್ಞಾನಿಗಳು, ಮನೋವಿಜ್ಞಾನಿಗಳು, ಸಮಾಜವಿಜ್ಞಾನಿಗಳು ಹಾಗೂ ಲಿಂಗಭೇದವನ್ನು ಹೋಗಲಾಡಿಸಲು ನೆರವಾಗುವಂತಹ ಮಹಿಳಾ ಸಮಾಜಶಾಸ್ತ್ರಜ್ಞರು, ಶಿಕ್ಷಣ ತಜ್ಞರು ಇರಬೇಕಾಗುತ್ತದೆ. ಈ ಸಮಿತಿಯ ಮೂಲಧಾತು ವೈಚಾರಿಕ- ವೈಜ್ಞಾನಿಕ ಚಿಂತನೆ ಮತ್ತು ಸಮಾಜಮುಖಿ ಆಲೋಚನೆಯೇ ಆಗಿರಬೇಕಿದೆ. ಲೈಂಗಿಕ ದೌರ್ಜನ್ಯ, ಜಾತಿಯ ಹೆಸರಿನಲ್ಲಿ ಶೋಷಣೆ ಮತ್ತು ಪಿತೃಪ್ರಾಧಾನ್ಯ ಮನೋಧೋರಣೆಯನ್ನು ಹೋಗಲಾಡಿಸುವ ದಿಸೆಯಲ್ಲಿ ಸ್ತ್ರೀ ಸಂವೇದನೆ ಮತ್ತು ಮನುಜ ಸೂಕ್ಷ್ಮತೆಯನ್ನು ಸೃಜಿಸುವಂತಹ ಪಠ್ಯಕ್ರಮವನ್ನು ವಿವಿಧ ಹಂತಗಳಲ್ಲಿ ರೂಪಿಸುವ ಮೂಲಕ ನಮ್ಮ ಸಂವಿಧಾನ ಕರ್ತೃಗಳ ಸಮ ಸಮಾಜದ ಕನಸನ್ನು ನನಸು ಮಾಡಲು ಸಾಧ್ಯ. ರಾಜ್ಯ ಸರ್ಕಾರವು ಉನ್ನತ ತಜ್ಞರ ಸಮಿತಿಯನ್ನು ನೇಮಕ ಮಾಡುವ ಮುನ್ನ ಈ ದಿಸೆಯಲ್ಲಿ ಯೋಚನೆ ಮಾಡಬೇಕಾದುದು ಅಗತ್ಯ.
–ನಾ.ದಿವಾಕರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.