ಒಂದು ದೇಶದ ಶಿಸ್ತು- ಸ್ವಚ್ಛತೆಗೆ ಅಲ್ಲಿನ ಜನರ ಸಂಸ್ಕೃತಿಯೂ ಪ್ರಮುಖ ಕಾರಣವಾಗಿರುತ್ತದೆ. ನಮ್ಮ ದೇಶದಲ್ಲಿ ‘ಸ್ವಚ್ಛ ಭಾರತ ಅಭಿಯಾನ’ ಆರಂಭವಾಗಿ ವರ್ಷಗಳೇ ಉರುಳಿದ್ದರೂ ‘ಸ್ವಚ್ಛತೆ’ಯ ಕುರುಹುಗಳು ಕ್ವಚಿತ್ತಾಗಿ ಕಾಣುತ್ತಿವೆ. ‘ಅಸ್ವಚ್ಛತೆ’ಯನ್ನು ಖಂಡಿಸಿ ದವರನ್ನು ಕೀಳಾಗಿ ಕಾಣುವ ಪ್ರವೃತ್ತಿಯೇ ಎಲ್ಲೆಡೆ ಕಂಡುಬರುತ್ತಿದೆ. ‘ಸ್ವಚ್ಛತೆ’ಯನ್ನು ಕಾಪಾಡುವ ಜವಾಬ್ದಾರಿ ಕೇವಲ ಸ್ಥಳೀಯ ಆಡಳಿತಗಳದ್ದು ಎಂಬ ಭಾವ ಎದ್ದು ಕಾಣುತ್ತಿದೆ.
ಗ್ರಾಮೀಣ ಭಾಗವನ್ನೂ ಸೇರಿ, ಆಧುನಿಕ ಭಾರತದ ನಾಗರಿಕರಲ್ಲಿ ಹೆಚ್ಚಿನವರು, ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದಿಸಬೇಕೆಂಬ ಉಮೇದು ಹೊಂದಿದ್ದಾರೆ. ಸುಶಿಕ್ಷಿತರನ್ನಾಗಿಸಲೇಬೇಕೆಂಬ ಹಂಬಲದಿಂದ ಆರ್ಥಿಕವಾಗಿ ಹಿಂದುಳಿದವರು ಸಹ ಸರ್ಕಾರಿ ಶಾಲೆಗಳಿಗಾದರೂ ಮಕ್ಕಳನ್ನು ಕಳಿಸುತ್ತಿದ್ದಾರೆ. ಸರ್ವಶಿಕ್ಷಣ ಅಭಿಯಾನ, ನಲಿ– ಕಲಿ ಹೀಗೆ ಹತ್ತಾರು ನಾವೀನ್ಯಪೂರ್ಣ ಶೈಕ್ಷಣಿಕ ಯೋಜನೆಗಳನ್ನು ಜಾರಿಗೊಳಿಸಿ, ದೇಶದ ಸಮಸ್ತ ಮಕ್ಕಳು, ಶಿಸ್ತು-ಸ್ವಚ್ಛತೆಯ ಪ್ರಜ್ಞೆ ಹೊಂದಿದ ನಾಗರಿಕರಾಗಲಿ ಎಂಬ ಸದಾಶಯದಿಂದ ಸರ್ಕಾರಗಳು ಹಲವು ಉಪಕ್ರಮಗಳನ್ನು ಕೈಗೊಂಡಿವೆ. ಆದರೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದರೂ ಶಿಕ್ಷಣದಿಂದ ಹೊರಹೊಮ್ಮಬೇಕಾದ ಫಲಶ್ರುತಿ ಮಾತ್ರ ಅತ್ಯಲ್ಪ ಎಂದೇ ಹೇಳಬೇಕಾಗಿದೆ. ಬರೀ ಶಿಕ್ಷಣದಿಂದ ಸ್ವಚ್ಛತೆ ಸಾಧ್ಯವಿಲ್ಲ ಎಂಬ ಅಂಶವೂ ಇದರಿಂದ ಮನದಟ್ಟಾಗುತ್ತದೆ. ‘ಸ್ವಚ್ಛತೆ’ ಎನ್ನುವುದು ನಮ್ಮ ಸಂಸ್ಕೃತಿಯ ಭಾಗವೆಂಬ ಭಾವವನ್ನು ದೇಶದೆಲ್ಲೆಡೆ ಉದ್ದೀಪಿಸಬೇಕಾಗಿದೆ.
ಹಲವು ಗ್ರಾಮೀಣ ಸರ್ಕಾರಿ ಶಾಲೆ- ಕಾಲೇಜುಗಳು, ಆಸ್ಪತ್ರೆಗಳ ಆವರಣಗಳಲ್ಲಿ ಮದ್ಯದ ಬಾಟಲಿಗಳು, ಗುಟ್ಕಾ ಚೀಟಿಗಳು, ಸಿಗರೇಟು-ಬೀಡಿ ತುಂಡುಗಳು, ತಂಬಾಕು ಉಗಿದ ರಂಗು ಸರ್ವೇಸಾಮಾನ್ಯ. ಹಾಗೆಯೇ ಬೀದಿದೀಪಗಳಿಗೆ ಕಲ್ಲಿನಿಂದ ಹೊಡೆದು ಸಂತಸ ಪಡುವವರಿಗೇನೂ ಕೊರತೆ ಇಲ್ಲ. ಸುಶಿಕ್ಷಿತರು ಎಂದೇ ಪರಿಗಣಿಸಲಾಗುವ ಕೆಲವು ‘ನಾಗರಿಕ’ರು, ತಮ್ಮ ‘ವೀಕೆಂಡ್ ವಿಹಾರ’ಕ್ಕೆ ಪ್ರವಾಸಿ ತಾಣಗಳಿಗೆ ದಾಂಗುಡಿಯಿಡುವುದು ವಿರಳವೇನಲ್ಲ. ಇವರಾದರೂ ಒಂದು ಶಿಸ್ತು-ಸ್ವಚ್ಛತೆಗೆ ಬದ್ಧರೆಂದುಕೊಂಡರೆ ಇವರು ಭೇಟಿ ನೀಡುವ ಸ್ಥಳಗಳೆಲ್ಲವೂ ‘ಬಾಟಲಿಮಯ’! ಆದರೆ ತಮ್ಮ ಕಚೇರಿಗಳಲ್ಲಿ ಮಾತ್ರ ಇವರದು ಅತ್ಯಂತ ‘ಸ್ವಚ್ಛ’ ಪರಿಸರ! ಇಂತಹ ಮನೋಭಾವ ಏಕೆ? ಹಾಗಾದರೆ ಶಿಕ್ಷಣವು ಸಂಸ್ಕೃತಿಯನ್ನು ಕಲಿಸುವುದಿಲ್ಲವೇ?
ಕಾಂಕ್ರೀಟ್ ಕಾಡಿನಿಂದ ಹೊರಬಂದ ಇವರು ‘ಇಕೊ ಟೂರಿಸಂ’ ಹೆಸರಿನಲ್ಲಿ ಕಾಡುಮೇಡು ಅಲೆಯುತ್ತ, ಕಂಡಕಂಡಲ್ಲಿ ಮದ್ಯಸೇವನೆ ಮಾಡುವು ದನ್ನು ‘ಸಂಸ್ಕೃತಿ’ ಎನ್ನಬಹುದೇ? ಕುಡಿಯಲು ಕಾಡೇ ಬೇಕೆ? ಜೋಗ ಜಲಪಾತ, ಮುಳ್ಳಯ್ಯನಗಿರಿ, ದಾಂಡೇಲಿ, ನಂದಿಬೆಟ್ಟ, ಚಿಕ್ಕಮಗಳೂರಿನ ಗಿರಿಪರ್ವತ ಶ್ರೇಣಿಗಳ ರಸ್ತೆಗಳು... ಹೀಗೆ ಯಾವುದೇ ವಿಹಾರಧಾಮಗಳ ಆಸುಪಾಸು ನೋಡಿದರೂ ಇವರ ಹಾವಳಿ ಹೇಳಲಸದಳ!
ಸರ್ಕಾರಿ ಸಂಸ್ಥೆಗಳ ಕಟ್ಟಡಗಳ ಕಿಟಕಿ ಗಾಜುಗಳನ್ನು ಒಡೆಯುವ, ವಿದ್ಯುತ್ ದೀಪಗಳನ್ನು ಕದ್ದೊಯ್ಯುವ ಪ್ರವೃತ್ತಿ ಮಾಮೂಲು ಎಂಬಂತಾಗಿದೆ. ಬೇರೆಡೆ ಬಿಡಿ, ಪ್ರವೇಶಕ್ಕೆ ಪರದಾಡಬೇಕಾದ, ಬಹುತೇಕ ತಿಳಿವಳಿಕೆ ಉಳ್ಳವರೇ ಭೇಟಿ ನೀಡುವ ವಿಕಾಸಸೌಧ, ವಿಧಾನಸೌಧದ ಶೌಚಾಲಯಗಳಲ್ಲಿನ ನಲ್ಲಿಗಳನ್ನು ಕಿತ್ತುಹಾಕಿರುತ್ತಾರೆ, ಬಾಗಿಲುಗಳ ಚಿಲಕಗಳನ್ನು ಮುರಿದು ಹಾಕಿರುತ್ತಾರೆ. ಶೌಚಾಲಯಗಳ ಒಳಗೆ ಗುಟ್ಕಾ ತಿಂದು ಉಗಿದಿರುತ್ತಾರೆ, ಗುಟ್ಕಾಚೀಟಿಯನ್ನು ಬಾಗಿಲ ಸಂದಿನೊಳಗೆ ಪೇರಿಸಿಟ್ಟಿರುತ್ತಾರೆ. ಸಾಲದ್ದಕ್ಕೆ ಶೌಚಾಲಯವನ್ನು ‘ಸಿಗರೇಟು ಸೇವನಾ ತಾಣ’ವನ್ನಾಗಿಸಿಕೊಂಡಿರುತ್ತಾರೆ! ಸರ್ಕಾರದ ಯಾವುದೇ ಕಚೇರಿಯು ಒಂದೇ ಒಂದು ಸುಸಜ್ಜಿತ-ಸ್ವಚ್ಛ ಶೌಚಾಲಯವನ್ನು ಹೊಂದಿದ ನಿದರ್ಶನ ಇಲ್ಲವೇ ಇಲ್ಲವೆನ್ನಬಹುದು.
ಇವೆಲ್ಲಕ್ಕೂ ನಮ್ಮ ಶಿಕ್ಷಣ ನೀತಿಯಲ್ಲಿ ಇರುವ ನ್ಯೂನತೆಗಳು ಕಾರಣವಾಗಿರಬಹುದು. ನಮ್ಮ ಶಾಲಾ ಶಿಕ್ಷಣದ ಪಠ್ಯಕ್ರಮದಲ್ಲಿ ‘ಸರ್ಕಾರಿ ಸ್ವತ್ತು ಸ್ವಂತ ಸ್ವತ್ತು, ಅವುಗಳ ರಕ್ಷಣೆ-ನಿರ್ವಹಣೆ ನಮ್ಮೆಲ್ಲರ ಹೊಣೆ’ ಎಂಬ ಅಂಶವನ್ನು ಮನದಟ್ಟಾಗುವಂತೆ ವಿವರಿಸಿದ ಒಂದೂ ಪಾಠ ಇಲ್ಲ! ನಮ್ಮ ಬಡಾವಣೆಯಲ್ಲಿದ್ದ ಸರ್ಕಾರಿ ವಾಹನ ಚಾಲಕರೊಬ್ಬರು ಸರ್ಕಾರದ ವಾಹನವನ್ನು ನಿರ್ವಹಿಸುತ್ತಿದ್ದ ರೀತಿಯನ್ನು ಕಂಡು ಕೇಳಿದಾಗ ‘ಅಯ್ಯೋ ಬಿಡಿ ಸಾರ್, ಗವರ್ನಮೆಂಟ್ ವೆಹಿಕಲ್, ಏನಾದರೂ ಆದರೆ ಸರ್ಕಾರ ರಿಪೇರಿ ಮಾಡಿಸುತ್ತದೆ’ ಎನ್ನುತ್ತಿದ್ದರು! ಸರ್ಕಾರದ್ದು ಎಂದರೆ ಹಾಳು ಮಾಡುವುದಕ್ಕೆ ಇರುವ ಸ್ವತ್ತು ಎಂಬ ಭಾವ ಬಲವಾಗಿ ನಮ್ಮ ಮನದಲ್ಲಿ ಮನೆ ಮಾಡಿದೆ. ಏಕೆಂದರೆ ನಾವು ಸಮುದಾಯದ ಹಿತ ಕಾಯುವ, ಸಮಷ್ಟಿಪ್ರಜ್ಞೆಯ ಶಿಕ್ಷಣವನ್ನೇ ನೀಡುತ್ತಿಲ್ಲ.
ಸರ್ಕಾರಗಳು ನಡೆಯುವುದೇ ಸಾರ್ವಜನಿಕರ ತೆರಿಗೆ ಹಣದಿಂದ ಎಂಬ ಸ್ಪಷ್ಟ ಅರಿವು ತರಿಸುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ. ಹೀಗಿರುವಾಗ ಸ್ವಚ್ಛತೆ– ಶಿಸ್ತು– ಹೊಣೆಗಾರಿಕೆ ಹೇಗೆ ಮೂಡುತ್ತದೆ? ಮಕ್ಕಳಿಗೆ ಶಾಲಾ ಹಂತದಲ್ಲಿಯೇ ನೈತಿಕ ಶಿಕ್ಷಣ, ಸಾಮಾಜಿಕ ಹೊಣೆಗಾರಿಕೆ, ಬದ್ಧತೆಗಳ ಕುರಿತು ವಿಶಿಷ್ಟವಾಗಿ ತಿಳಿಸಿಕೊಡಬೇಕು. ಇಲ್ಲದಿದ್ದಲ್ಲಿ ಇದೇ ಪರಿಪಾಟ ಅನವರತವೂ ಮುಂದುವರಿಯುತ್ತದೆ. ಸ್ವಚ್ಛತೆ– ಶಿಸ್ತು ನಮ್ಮ ದೇಶದ ‘ಸಂಸ್ಕೃತಿ’ ಆಗಲು ಸಾಧ್ಯವಾಗುವುದಿಲ್ಲ. ಸ್ವಚ್ಛ ಭಾರತ ಅಭಿಯಾನ ಸಹ ಶತಮಾನೋತ್ಸವ ಸಂಭ್ರಮ ಆಚರಿಸಿದಲ್ಲಿ ಅಚ್ಚರಿಯೂ ಇಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.