ಪರೀಕ್ಷೆ ಮುಗಿಸಿ ಬಂದ ಮಗು ಪ್ರಶ್ನೆಪತ್ರಿಕೆಯನ್ನು ಒಮ್ಮೆ ನೋಡಿ, ಇಷ್ಟು ಅಂಕಗಳು ಬರಬಹುದು ಎಂದು ಅಂದಾಜಿಸಿ, ಅಷ್ಟೇ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚುಕಡಿಮೆ ಅಂಕಗಳನ್ನು ಗಳಿಸುತ್ತದೆ. ಆದರೆ, ಚುನಾವಣಾ ‘ಪರೀಕ್ಷೆ’ ಮುಗಿಸಿದ ರಾಜಕೀಯ ಪಕ್ಷಗಳು ಫಲಿತಾಂಶವನ್ನು ಅಂದಾಜಿಸುವುದು ಕಷ್ಟ. ಆಗ ಅವುಗಳ ಕಣ್ಣಿಗೆ ಆಶಾಕಿರಣಗಳಂತೆ ಗೋಚರಿಸುವ ಜೀವನಾಡಿಗಳೇ ಚುನಾವಣಾ ಸಮೀಕ್ಷೆಗಳು. ರಾಜಕೀಯ ಪಕ್ಷಗಳು ಇತ್ತೀಚೆಗೆ ಸಂಶೋಧನಾ ವಿಭಾಗಗಳನ್ನು ಹೊಂದಿವೆ. ನುರಿತ ವಿಶ್ಲೇಷಕರನ್ನು ನೇಮಿಸಿಕೊಂಡು ಕಾಲಕಾಲಕ್ಕೆ ಸಮೀಕ್ಷೆಗಳನ್ನು ನಡೆಸಿ, ಅವುಗಳ ವರದಿ ಆಧರಿಸಿ ಚುನಾವಣಾ ಕಾರ್ಯತಂತ್ರ ಗಳನ್ನು ಹೆಣೆಯುತ್ತಿವೆ. ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸಿ ಜನರ ನಾಡಿಮಿಡಿತ ಅರಿಯುವ ಪ್ರಯತ್ನ ಮಾಡುತ್ತಿವೆ. ಈ ದಿಸೆಯಲ್ಲಿ ನುರಿತ ವಿಶ್ಲೇಷಕರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಐಐಟಿ ಮತ್ತು ಐಐಎಂ ಪದವೀಧರರೂ ಇಂತಹ ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಗಮನಾರ್ಹ.
ಈಗ ದೇಶದಾದ್ಯಂತ 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿದೆ. ಇದೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆ, ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಈ ಹಿಂದಿನ ಚುನಾವಣೆಗಳಿಗೆ ಸಂಬಂಧಿಸಿದಂತೆ ಹಲವಾರು ಸಮೀಕ್ಷೆಗಳು ನಡೆದಿವೆ. ಅವುಗಳಲ್ಲಿ ಕೆಲವು, ಫಲಿತಾಂಶಕ್ಕೆ ಹತ್ತಿರವಾಗಿದ್ದವು. ಈ ಭವಿಷ್ಯವನ್ನು ನುಡಿಯಲು ಸಂಖ್ಯಾಶಾಸ್ತ್ರ ಅತ್ಯಂತ ಸಹಕಾರಿ.
ಸಂಖ್ಯಾಶಾಸ್ತ್ರದಲ್ಲಿ ಅಂಕಿಸಂಖ್ಯೆಗಳ ವಿಶ್ಲೇಷಣೆಗೆ ಅನೇಕ ವಿಧಾನಗಳಿವೆ. ಅವುಗಳಲ್ಲಿ ಹೈಪಾತಿಸಿಸ್ ಎಂಬ ಪರಿಕಲ್ಪನೆ ಒಂದು. ಕೆಲವು ಮಾನದಂಡಗಳ ಆಧಾರದಲ್ಲಿ ಈ ಪರಿಕಲ್ಪನೆಯನ್ನು ನಿರೂಪಿಸುತ್ತಾರೆ. ಒಂದು ನಿರ್ದಿಷ್ಟ ಜನಸಮೂಹದ ಗುಣಲಕ್ಷಣದ ಆಧಾರದಲ್ಲಿ ವಿಶ್ಲೇಷಣೆ ನಡೆಸಿ ಸಾಧ್ಯತೆಯನ್ನು ಮುಂದಿಡಲಾಗುತ್ತದೆ. ಫಲಿತಾಂಶ ಹೊರಬಿದ್ದಾಗ, ಇದು ನಿಜವೋ ಹುಸಿಯೋ ಎಂಬುದು ಸ್ಪಷ್ಟವಾಗುತ್ತದೆ. ಇದೇ ಮಾದರಿಯಲ್ಲಿ ನಮ್ಮಲ್ಲಿ ಚುನಾವಣಾ ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಪ್ರಸ್ತುತ ಜನಾಭಿಪ್ರಾಯದ ತಳಹದಿಯ ಮೇಲೆ ನಿರ್ದಿಷ್ಟ ಲೋಕಸಭಾ ಕ್ಷೇತ್ರದಲ್ಲಿ ಸಮೀಕ್ಷಾ ಕಾರ್ಯ ಪ್ರಾರಂಭ ಆಗುತ್ತದೆ.
ಉದಾಹರಣೆಗೆ, ಆ ಕ್ಷೇತ್ರದ ಮತದಾರರ ಜನಸಂಖ್ಯೆ 16 ಲಕ್ಷ ಇದ್ದು, ಅದರಲ್ಲಿ 9 ಲಕ್ಷ ಜನ ಮತ ಚಲಾಯಿಸಿದ್ದಾರೆ ಎಂದಿಟ್ಟುಕೊಳ್ಳೋಣ. ಆಗ ಆ ಎಲ್ಲಾ 9 ಲಕ್ಷ ಜನರ ಸಮೀಕ್ಷೆ ಅಸಾಧ್ಯ. ಅದಕ್ಕಾಗಿ ಹೈಪಾತಿಸಿಸ್ ಮಾದರಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಮಾದರಿಯು ಆ ಕ್ಷೇತ್ರದ ಎಲ್ಲ ಜನವರ್ಗಗಳ ಎಲ್ಲ ಬಗೆಯ ಮನೋಧರ್ಮಗಳನ್ನುಪ್ರತಿನಿಧಿಸುವಂತೆ ಇರಬೇಕಾಗಿರುವುದು ಕಡ್ಡಾಯ. ಸಮೀಕ್ಷೆಯಲ್ಲಿ ಈ ಎಲ್ಲ ಮನೋಧರ್ಮಗಳ ಪ್ರಾತಿನಿಧ್ಯ ಹದವಾಗಿ ಸಂಯೋಜನೆಗೊಂಡರೆ ಫಲಿತಾಂಶದ ನಿಖರತೆ ಹೆಚ್ಚಾಗುತ್ತದೆ. ಅನೇಕ ಸಮೀಕ್ಷೆಗಳು ಹೆಚ್ಚಾಗಿ ಎಡವುವುದು ಈ ಹಂತದಲ್ಲೇ. ನಂತರ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಬೇಕಾದ ಜನರ ಸಂಖ್ಯೆಯನ್ನು ವೈಜ್ಞಾನಿಕ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಇಲ್ಲಿ ಕಡಿಮೆ ಮತ್ತು ಹೆಚ್ಚಿನ ಸಂಖ್ಯೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆ ಮಾಂತ್ರಿಕ ಸಂಖ್ಯೆಯು ಲಿಂಗ, ವಯಸ್ಸು, ಗ್ರಾಮೀಣ ಮತ್ತು ನಗರ ಪ್ರದೇಶ, ಶಿಕ್ಷಿತ ಮತ್ತು ಅಶಿಕ್ಷಿತ, ಉದ್ಯೋಗ, ಜಾತಿ, ಧರ್ಮಗಳಂತಹ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅವುಗಳು ಸಮ ಅನುಪಾತದಲ್ಲಿ ಇರಬೇಕು. ಸಮೀಕ್ಷೆ ನಡೆಸುವ ಮಾಧ್ಯಮ ಅತ್ಯಂತ ಮಹತ್ವಪೂರ್ಣದ್ದು. ಟೆಲಿಫೋನ್ ಮತ್ತು ಇ– ಮೇಲ್‌ಗಿಂತ ಮುಖಾಮುಖಿ ಸಂದರ್ಶನದ ಜೊತೆಗೆ ಲಿಖಿತ ಪ್ರಶ್ನಾವಳಿಗಳು ಹೆಚ್ಚು ಪರಿಣಾಮಕಾರಿ. ಸಂದರ್ಶಕನ ಪರಿಣತಿ, ನಿಷ್ಪಕ್ಷಪಾತ ಧೋರಣೆ ಕೂಡ ಸಮೀಕ್ಷೆಯ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.
ಇಷ್ಟೆಲ್ಲಾ ಹರಸಾಹಸಪಟ್ಟ ಮೇಲೂ ಅನೇಕ ಬಾರಿ ಸಮೀಕ್ಷೆಗಳು ನೈಜ ಫಲಿತಾಂಶ ಬಿಂಬಿಸುವಲ್ಲಿ ವಿಫಲವಾಗುತ್ತವೆ. ಅದಕ್ಕೆ ಮೂಲ ಕಾರಣ ಮಾಹಿತಿಯ ವಿಶ್ವಾಸಾರ್ಹತೆ. ಎಷ್ಟೋ ಬಾರಿ ನಾವು ಭಾರತೀಯರು ಹೇಳಿದಂತೆ ಮಾಡುವುದಿಲ್ಲ ಮತ್ತು ಮಾಡಿದ್ದನ್ನು ಹೇಳುವುದಿಲ್ಲ. ಮರೆಮಾಚುವ ಸ್ವಭಾವ ಹೆಚ್ಚು. ಕೆಲವು ಸಂದರ್ಭಗಳಲ್ಲಿ ಮಾದರಿಗಳು ಮೇಲ್ನೋಟಕ್ಕೆ ಸಂಪೂರ್ಣ ದೋಷಮುಕ್ತವಾಗಿ ಕಂಡರೂ ಸಮೀಕ್ಷೆ ನಡೆಸುವವರ ನಿಯಂತ್ರಣದಲ್ಲಿ ಇಲ್ಲದ ಕೆಲವು ಅಂಶಗಳುಸಮೀಕ್ಷೆಯ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೆಲವೊಮ್ಮೆ ಮಾದರಿಗಳು ಮೇಲ್ನೋಟಕ್ಕೆ ಜನವರ್ಗಗಳನ್ನು ಸಮರ್ಪಕವಾಗಿ ಪ್ರತಿನಿಧಿಸುವಂತೆ ಕಂಡರೂ ವಾಸ್ತವದಲ್ಲಿ ಅವು ದೋಷಪೂರಿತ ಆಗಿರಲೂಬಹುದು. ಕೆಲವು ಸಲ, ವಿಶ್ಲೇಷಣಾ ಹಂತದಲ್ಲಿ ಉಪಯೋಗಿಸುವ ಮಾನದಂಡಗಳು ಅಸಮರ್ಪಕವಾಗಿಯೂ ಈ ನಿರ್ದಿಷ್ಟ ಕ್ಷೇತ್ರದ ಸಮೀಕ್ಷೆಗೆ ಸರಿಹೊಂದದೆಯೂ ಇರಬಹುದು.
ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ಕೆಲವು ಮಾಧ್ಯಮಗಳು ಹಾಗೂ ಸಂಶೋಧನಾ ಸಂಸ್ಥೆಗಳು ನೀಡುವ ಸಮೀಕ್ಷಾ ಫಲಿತಾಂಶಗಳು ಬೆರಗುಗೊಳಿಸುವ ಮಟ್ಟಿಗೆ ನಿಖರವಾಗಿದ್ದ ನಿದರ್ಶನಗಳೂ ಇವೆ.
ಲೇಖಕ: ಸಹಾಯಕ ಪ್ರಾಧ್ಯಾಪಕ, ಬಿ.ವಿ.ವಿ.ಎಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.