ಸರ್ಕಾರಿ ಶಾಲೆಯೊಂದರ ಸೈನ್ಸ್ ಕ್ಲಬ್ ಉದ್ಘಾಟನೆಗೆಂದು ಹೋದಾಗ ಕಾರಿಡಾರ್‌ನ ಒಂದು ಭಾಗದಲ್ಲಿ ಹಳೆಯ ಆ್ಯಸಿಡ್ ಬ್ಯಾಟರಿ, ಡೆಸ್ಕ್‌ಟಾಪ್ ಕಂಪ್ಯೂಟರ್, ಮಾನಿಟರ್, ಡೇಟಾ ಪವರ್ ಕೇಬಲ್‌ಗಳು, ಪ್ರೊಜೆಕ್ಟರ್, ಇಯರ್ ಫೋನ್, ಯುಪಿಎಸ್, ಕೀಬೋರ್ಡ್, ಮೈಕು, ಟೆಲಿವಿಷನ್, ರೇಡಿಯೊ ಸೆಟ್, ಜಂಕ್ಷನ್ ಬಾಕ್ಸ್‌ಗಳನ್ನು ರಾಶಿ ಹಾಕಲಾಗಿತ್ತು. ‘ಇದೇನು?’ ಎಂದು ಶಾಲೆಯವರನ್ನು ಕೇಳಿದಾಗ, ‘ಸಾರ್, ಇದು ನಮ್ಮ ಶಾಲೆಯಲ್ಲಿ ಶೇಖರಣೆಗೊಂಡಿರುವ ಇ– ತ್ಯಾಜ್ಯ. ಎಷ್ಟಿದೆ ಎಂದು ಲೆಕ್ಕ ಕೊಡಲು ಇಲಾಖೆ ಹೇಳಿದೆ, ಅದಕ್ಕಾಗಿ ಇಲ್ಲಿ ರಾಶಿ ಹಾಕಿದ್ದೇವೆ, ಇದರ ವಿಲೇವಾರಿ ದೊಡ್ಡ ತಲೆನೋವಾಗಿದೆ’ ಎಂದರು.
ಹೌದು, ರಾಜ್ಯದಲ್ಲಿ ಈಗ ಲೆಕ್ಕ ಸಿಕ್ಕಿರುವ ಐದು ಸಾವಿರ ಶಾಲೆಗಳಲ್ಲಿ ಬರೋಬ್ಬರಿ 1,387 ಟನ್ ಇ- ಕಸ ಸಂಗ್ರಹಗೊಂಡಿದ್ದು ಶಿಕ್ಷಣ ಇಲಾಖೆಯ ನಿದ್ದೆಗೆಡಿಸಿದೆ. ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಈ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ಸಂವಹನಕ್ಕೆ ಕಂಪ್ಯೂಟರ್, ಇಂಟರ್‌ನೆಟ್ ಬಳಕೆ ಅನಿವಾರ್ಯ ಎನ್ನುವಂತಾ ಗಿರುವುದರಿಂದ ಖಾಸಗಿ ಶಾಲೆಗಳು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಅತ್ಯಾಧುನಿಕ ಕಂಪ್ಯೂಟರ್, ಲ್ಯಾಪ್ ಸ್ಮಾರ್ಟ್ ಬೋರ್ಡ್‌ಗಳುಳ್ಳ ತರಗತಿ ನಿರ್ಮಿಸಿ, ಇಂಟಿಗ್ರೇಟೆಡ್ ಕಂಪ್ಯೂಟರ್ ಟೆಕ್ನಾಲಜಿ ಬಳಸಿಕೊಂಡುಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ವರ್ಷಗಳೇ ಕಳೆದಿವೆ. ಸರ್ಕಾರವೇ ಮುತುವರ್ಜಿ ವಹಿಸಿ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್, ಇಂಟರ್‌ನೆಟ್ ಮತ್ತು ಅವು ಕೆಲಸ ಮಾಡಲು ಬೇಕಾದ ಎಲ್ಲ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಂಡು ಜ್ಞಾನ, ಕೌಶಲ ಎರಡನ್ನೂ ಸಂಪಾದಿಸುತ್ತಿದ್ದಾರೆ.
ಇಪ್ಪತ್ತು ವರ್ಷಗಳಿಂದ ಕಂಪ್ಯೂಟರ್ ಶಿಕ್ಷಣವು ಶಾಲೆಗಳಲ್ಲಿ ಜಾರಿಯಲ್ಲಿದೆ. ಮೂಲ ವಿಧಾನಕ್ಕೆ ಪೂರಕ ಎಂಬಂತೆ ಇದರ ಬಳಕೆ ನಡೆಯುತ್ತಿತ್ತು. ಕೋವಿಡ್ ಸಾಂಕ್ರಾಮಿಕ ಉಲ್ಬಣಿಸಿ ವರ್ಷಗಳ ಕಾಲ ಶಾಲೆಗಳು ಬಾಗಿಲು ಮುಚ್ಚಿಕೊಂಡಾಗ ಕಂಪ್ಯೂಟರ್, ಇಂಟರ್‌ನೆಟ್ ಆಧಾರಿತ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಯಿತು. ಜೂಮ್ ಮೀಟಿಂಗುಗಳು, ಸಂವಾದ, ಪ್ರಶ್ನೋತ್ತರ ಕಾರ್ಯಕ್ರಮಗಳು ಸಾಮಾನ್ಯ ಎನಿಸಿಬಿಟ್ಟವು. ಶಿಕ್ಷಕರು ಬದಲಾದ ಸನ್ನಿವೇಶಕ್ಕೆ ಹೊಂದಿಕೊಂಡು ಪಾಠ ಮಾಡಬೇಕೆನ್ನುವಷ್ಟರಲ್ಲಿ ರಾಶಿ ರಾಶಿ ಕಂಪ್ಯೂಟರ್, ಕೀಬೋರ್ಡ್, ಮೌಸ್, ಪ್ರೊಜೆಕ್ಟರ್, ಇಯರ್ ಫೋನ್, ಯುಪಿಎಸ್, ಡೇಟಾ ಕೇಬಲ್, ಸಿ.ಡಿ., ಡಿವಿಡಿ ಪ್ಲೇಯರ್, ಮೋಡೆಮ್‌ಗಳೆಲ್ಲ ಕಪಾಟಿನಿಂದ ಹೊರಬಂದವು. ಅವುಗಳಲ್ಲಿ ಹೆಚ್ಚಿನವು ಕೆಲಸ ಮಾಡುತ್ತಿರಲಿಲ್ಲ. ವಿಷಯವನ್ನು ಇಲಾಖೆಯ ಗಮನಕ್ಕೆ ತಂದಾಗ, ಕೆಲಸ ಮಾಡದ ಸಾಮಾನುಗಳನ್ನು ಲೆಕ್ಕಹಾಕಿ ಪಟ್ಟಿ ನೀಡುವಂತೆ ಇಲಾಖೆ ತಾಕೀತು ಮಾಡಿತು. ಹಾಗೆ ಲೆಕ್ಕ ಹಾಕಿದಾಗ ಸಿಕ್ಕಿದ್ದೇ ಈ ಕಸದ ರಾಶಿ.
ಕಂಪ್ಯೂಟರ್ ಶಿಕ್ಷಣವನ್ನು ಶಾಲಾ ಹಂತದಲ್ಲಿ ಪ್ರಾರಂಭಿಸಿದ ಹೊಸದರಲ್ಲಿ ಸರ್ಕಾರ ಮತ್ತು ಅನೇಕ ಕಂಪ್ಯೂಟರ್ ಕಂಪನಿಗಳ ಸಹಾಯದಿಂದ ಶಾಲೆಗಳಿಗೆ ಸರಬರಾಜಾದ ಡೆಸ್ಕ್‌ಟಾಪ್ ಕಂಪ್ಯೂಟರ್, ಬ್ಯಾಟರಿ, ಯುಪಿಎಸ್, ಪ್ರೊಜೆಕ್ಟರ್, ಪ್ರಿಂಟರ್, ಮಲ್ಟಿ ಫಂಕ್ಷನ್ ಅಡಾಪ್ಟರ್ ಇಂದಿಗೆ ಹತ್ತು ಹದಿನೈದು ವರ್ಷ ಹಳೆಯವು. ಎಂಎಲ್ಎ, ಎಂಪಿಗಳ ಅನುದಾನದಲ್ಲಿ ಮತ್ತಷ್ಟು ಹೊಸ ಕಂಪ್ಯೂಟರ್ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಶಾಲಾ ಕೊಠಡಿಗಳಲ್ಲಿ ಜಮಾ ಆದವು. ಈಗ ಅವು ಕೆಲಸ ನಿಲ್ಲಿಸಿವೆ. ರಿಪೇರಿ ಈಗ ಸಾಧ್ಯವಿಲ್ಲ.
ಪ್ರತೀ ಶಾಲೆಯಲ್ಲಿ ಈಗ ಹತ್ತತ್ತಿರ 500 ಕಿಲೊ ತೂಕದ ಎಲೆಕ್ಟ್ರಾನಿಕ್ಸ್ ತ್ಯಾಜ್ಯ ವಸ್ತುಗಳಿವೆ. ಮಾಹಿತಿಯಂತೆ, 30 ಸಾವಿರ ಆ್ಯಸಿಡ್ ಬ್ಯಾಟರಿ ಕೋಶಗಳು, 14 ಸಾವಿರ ಡೆಸ್ಕ್‌ಟಾಪ್‌ಗಳು, 20 ಸಾವಿರ ಮಾನಿಟರ್‌ಗಳು, 18 ಸಾವಿರ ಡೇಟಾ ಪವರ್ ಕೇಬಲ್‌ಗಳು, 11 ಸಾವಿರ ಕೀಬೋರ್ಡ್‌ಗಳು, 10 ಸಾವಿರ ಮೈಕುಗಳು, 2,600 ಟೆಲಿವಿಷನ್‌ಗಳು, 9 ಸಾವಿರ ರೇಡಿಯೊ ಸೆಟ್‌ಗಳು, ಹಲವು ಸಾವಿರ ಜಂಕ್ಷನ್ ಬಾಕ್ಸ್‌ಗಳು, ಹೀಗೆ ಟನ್‌ಗಟ್ಟಲೆ ಕಸ ಶಾಲೆಗಳಲ್ಲಿ ಜಮೆಯಾಗಿದೆ. ಕೇವಲ 5 ಸಾವಿರ ಶಾಲೆಗಳಿಂದ ಇಷ್ಟೊಂದು ಕಸ ಸೃಷ್ಟಿಯಾಗಿದೆಯೆಂದರೆ, ಕರ್ನಾಟಕದಲ್ಲಿ ಒಟ್ಟು 50 ಸಾವಿರ ಸರ್ಕಾರಿ ಶಾಲೆಗಳಿವೆ. ಅವುಗಳಿಂದ ಇನ್ನೆಷ್ಟು ಕಸ ಹೊರಬರಬಹುದು?
ಟೆಂಡರ್ ಕರೆದು ಸಮಸ್ಯೆ ಬಗೆಹರಿಸುವು ದಾಗಿ ಶಿಕ್ಷಣ ಇಲಾಖೆ ಹೇಳುತ್ತಿದೆ. ಯಾವುದೇ ಗುತ್ತಿಗೆದಾರ 5 ಸಾವಿರ ಶಾಲೆಗಳನ್ನು ಸಂಪರ್ಕಿಸಿ ಕಸ ಸಂಗ್ರಹಿಸುವುದು ತೀರಾ ದೊಡ್ಡ ಖರ್ಚಿನ ಬಾಬತ್ತು. ರಾಜ್ಯದ ಮೂಲೆ ಮೂಲೆಯ ಶಾಲೆಗಳಿಗೆ ಹೋಗಿ ಅಲ್ಲಿನ ಕಸವನ್ನು ಹೊತ್ತು ತರಲು ಕಂಪನಿಗಳು ಸಾವಿರಾರು ಕಿಲೊಮೀಟರ್ ದೂರ ವಾಹನ ಓಡಿಸಿ ಹೊಗೆ ಎಬ್ಬಿಸಿ ಮಾಲಿನ್ಯ ಹಬ್ಬಿಸಿದರೆ ಏನು ಪ್ರಯೋಜನ? ಇದರ ಬದಲು ಪ್ರತೀ ಜಿಲ್ಲಾ ಕೇಂದ್ರದಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಬಳಸಿಕೊಂಡು ಶಾಲೆಯ ಕಸಕ್ಕೆ ಮುಕ್ತಿ ನೀಡಬಹುದು. ಊರಿನ ಆಯಕಟ್ಟಿನ ಸ್ಥಳದಲ್ಲಿ ಇ– ಕಸ ಸಂಗ್ರಹ ಕೇಂದ್ರ ತೆರೆದರೆ ಮನೆ, ಸಂಘ ಸಂಸ್ಥೆ, ಜನ ಬಳಸಿ ಬಿಸಾಡಿದ ಇ– ತ್ಯಾಜ್ಯಕ್ಕೆ ಮುಕ್ತಿ ನೀಡಬಹುದು.
ಮಾಲಿನ್ಯ ನಿಯಂತ್ರಣ ಮಂಡಳಿಗೆದೊಡ್ಡ ಅವಕಾಶ ಅನಾಯಾಸವಾಗಿ ಒದಗಿಬಂದಿದೆ. ರೀಸೈಕ್ಲಿಂಗ್ ಘಟಕಗಳಿಗೂ ಬಹಳಷ್ಟು ಕೆಲಸ ಸಿಗುತ್ತದೆ. ಅದನ್ನವರು ಬಳಸಿಕೊಳ್ಳಬೇಕು ಅಷ್ಟೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.