ADVERTISEMENT

ಸಂಗತ | ನಿದ್ರಾ ಸಮಯ: ಯಾವುದು ಹಿತ?

ಆಧುನಿಕ ಜೀವನಶೈಲಿಗೆ ತಕ್ಕಂತೆ ನಿದ್ರೆಯ ಸಮಯ ಬದಲಾಗಿದ್ದರೂ ಅದನ್ನು ಸೂಕ್ತವಾಗಿ ನಿರ್ವಹಿಸುವುದು ಒಳಿತು

ಡಾ.ಎಚ್.ಬಿ.ಚಂದ್ರಶೇಖರ್‌
Published 6 ನವೆಂಬರ್ 2024, 0:10 IST
Last Updated 6 ನವೆಂಬರ್ 2024, 0:10 IST
   

ಸರ್ಕಾರಿ ಪ್ರೌಢಶಾಲೆಯೊಂದಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ, ಹತ್ತನೇ ತರಗತಿಯಲ್ಲಿ ದೀರ್ಘಕಾಲದಿಂದ ಗೈರುಹಾಜರಾಗುತ್ತಿದ್ದ ಕೆಲವು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. ಆಗ ಕುತೂಹಲಕಾರಿ ಅಂಶವೊಂದು ಗಮನಕ್ಕೆ ಬಂದಿತು. ಮೂವರು ವಿದ್ಯಾರ್ಥಿಗಳು ರಾತ್ರಿ ತಡವಾಗಿ ಮಲಗುವ ಕಾರಣದಿಂದ ಬೆಳಿಗ್ಗೆ ತಡವಾಗಿ ಏಳುವುದರಿಂದ ಶಾಲೆ ತಪ್ಪಿಸುತ್ತಿರುವುದಾಗಿ ತಿಳಿಸಿದರು. ಬೆಳಿಗ್ಗೆ 8 ಗಂಟೆಯೊಳಗೆ ಎದ್ದರೂ ದಿನಪೂರ್ತಿ ಒಂದು ರೀತಿಯ ಅನಾರೋಗ್ಯ ತಮ್ಮನ್ನು ಆವರಿಸಿರುವಂತೆ ಅನ್ನಿಸುವುದಾಗಿ ತಿಳಿಸಿದರು.

ಪೋಷಕರು ಕಚೇರಿ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಬಂದು, ಅಡುಗೆ ಸಿದ್ಧಪಡಿಸಿ, ಎಲ್ಲರೂ ಊಟ ಮಾಡುವ ವೇಳೆಗೆ 11 ಗಂಟೆ ದಾಟುತ್ತದೆ. ಜೊತೆಗೆ ಮನೆಯವರೆಲ್ಲ ಸೇರಿ ಒಂದಷ್ಟು ಮಾತುಕತೆ ನಡೆಸುವ ವೇಳೆಗೆ ಮಧ್ಯರಾತ್ರಿ 12 ಗಂಟೆ ದಾಟುವುದರಿಂದ, ಬೆಳಿಗ್ಗೆ ಬೇಗ ಏಳಲು ಆಗುತ್ತಿಲ್ಲ ಎಂದು ಅಲವತ್ತುಕೊಂಡರು. ಹಿರಿಯರು ರಾತ್ರಿ ತಡವಾಗಿ ಮಲಗಿದರೂ ಅನಿವಾರ್ಯವಾಗಿ ಬೆಳಿಗ್ಗೆ ಬೇಗ ಎದ್ದು ತಮ್ಮ ಕೆಲಸಗಳಿಗೆ ತೆರಳುತ್ತಾರೆ. ಮಕ್ಕಳಿಗೆ ಸಿದ್ಧರಾಗಿ ಶಾಲೆಗೆ ತೆರಳಲು ತಿಳಿಸಿದರೂ ಅವರು ತಡವಾಗಿ ಏಳುವ ಕಾರಣದಿಂದ ಸಮಯಕ್ಕೆ ಸರಿಯಾಗಿ ಸಿದ್ಧರಾಗದೆ ಶಾಲೆ ತಪ್ಪಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಈ ಮಕ್ಕಳಿಗೆ ಅವರು ಈಗ ಏಳುತ್ತಿರುವ ಸಮಯಕ್ಕಿಂತ ಅರ್ಧ ಗಂಟೆ ಮುಂಚೆ ಏಳುವ ಅಭ್ಯಾಸ ಮಾಡಿಕೊಳ್ಳುತ್ತಾ ಕ್ರಮೇಣ ಏಳು ಗಂಟೆಯೊಳಗೆ ಏಳುವ ಅಭ್ಯಾಸ ರೂಢಿ ಮಾಡಿಕೊಳ್ಳಲು ತಿಳಿಹೇಳಿದೆ.

ಆಧುನಿಕ ಜೀವನಶೈಲಿ ಎಂದರೆ ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ನಿಧಾನವಾಗಿ ಏಳುವುದು ಎಂಬಂತಾಗಿದೆ. ಉದ್ಯೋಗ, ಓದು, ಪರೀಕ್ಷೆಗೆ ತಯಾರಿ ಎಂಬಂತಹ ಕಾರಣಗಳು ಇಲ್ಲದಿದ್ದಾಗ್ಯೂ ಮೊಬೈಲ್ ಫೋನ್‌ ನೋಡುತ್ತಾ ಅಥವಾ ಒಟಿಟಿಯಲ್ಲಿನ ಸಿನಿಮಾ ಅಥವಾ ಧಾರಾವಾಹಿಗಳನ್ನು ನೋಡುತ್ತಾ ಇಂದಿನ ಮಕ್ಕಳು ರಾತ್ರಿ 2-3 ಗಂಟೆಯವರೆಗೆ ಎದ್ದಿರುತ್ತಾರೆ. ಸಹಜವಾಗಿ ಬೆಳಿಗ್ಗೆ 10 ಗಂಟೆಯ ನಂತರ ಅವರ ರೂಮಿನ ಬಾಗಿಲುಗಳು ನಿಧಾನವಾಗಿ ತೆರೆದುಕೊಳ್ಳುತ್ತವೆ. ಈ ಸನ್ನಿವೇಶ ಕೆಲವರ ಮನೆಗಳಲ್ಲಿ ಸಾಮಾನ್ಯ ಎಂಬಂತೆ ಆಗಿದೆ ಎನ್ನಬಹುದು. ಬೆಳಿಗ್ಗೆ 5-6 ಗಂಟೆಗೆ ಎದ್ದು ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗುವ ಮನೆಯ ಹಿರಿಯರಿಗೆ ನಿಧಾನವಾಗಿ ನಿದ್ರೆಯಿಂದ ಏಳುವ ಕಿರಿಯರ ಜೊತೆ ತಾಕಲಾಟಗಳು ಆಗಿ, ಕೊನೆಗೆ ಹಿರಿಯರು ಅಸಹಾಯಕತೆಯಿಂದ ಸುಮ್ಮನಾಗುತ್ತಾರೆ.

ADVERTISEMENT

ಬೆಳಿಗ್ಗೆ ಬೇಗ ಎದ್ದು ಕೆಲಸಗಳಲ್ಲಿ ತೊಡಗಿ, ರಾತ್ರಿ ಬೇಗ ಮಲಗುವುದು ಒಳ್ಳೆಯ ಅಭ್ಯಾಸ ಎಂದು ವಿಜ್ಞಾನಿಗಳು, ಆರೋಗ್ಯ ತಜ್ಞರು ಹೇಳುತ್ತಾರೆ. ಸಮಾಜವು ಬೆಳಿಗ್ಗೆ ಬೇಗ ಏಳುವವರಿಗೆ ಸೂಕ್ತವಾಗುವಂತೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದೆ. ತುರ್ತು ಕೆಲಸಗಳು ಇರುವಾಗ ರಾತ್ರಿ ವೇಳೆ ಸಕ್ರಿಯವಾಗಿ ಇರುವವರಿಗೆ ಬೆಳಿಗ್ಗೆ ಬೇಗ ಎದ್ದು ಸಿದ್ಧವಾಗುವುದು ಕಷ್ಟವಾಗುತ್ತದೆ. ಬೆಳಿಗ್ಗೆ ಬೇಗ ಎದ್ದಾಗ ಶಕ್ತಿ, ಉತ್ಸಾಹ ಕಡಿಮೆಯಾದಂತೆ ಅನ್ನಿಸಿ, ಮೂಡ್ ಇಲ್ಲದಂತೆ ಆಗುವ ಸಾಧ್ಯತೆ ಇರುತ್ತದೆ. ನಿದ್ರೆಯ ಲಯ ತಪ್ಪಿದರೆ ದೇಹದ ಜೈವಿಕ ಗಡಿಯಾರವನ್ನು ಸರಿಪಡಿಸಿಕೊಳ್ಳಲು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.

ಇಂತಹ ಅಭ್ಯಾಸಗಳಲ್ಲಿ ವ್ಯಕ್ತಿಗಳ ನಡುವೆ ವ್ಯತ್ಯಾಸ ಇರುತ್ತದೆ. ಕೆಲವರಿಗೆ ಬೆಳಿಗ್ಗೆ ಬೇಗ ಎದ್ದು ಕೆಲಸದಲ್ಲಿ ತೊಡಗುವುದು ಉತ್ಸಾಹ, ಹಿತಕರ ಎನಿಸಿದರೆ ಅವರು ಮುಂಜಾವಿನವರು. ಇನ್ನು ಕೆಲವರಿಗೆ ಸಂಜೆ, ರಾತ್ರಿ ವೇಳೆ ಕೆಲಸದಲ್ಲಿ ತೊಡಗುವುದು ಖುಷಿ ಕೊಡುತ್ತದೆ. ಈ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡು, ಅದನ್ನು ಗೌರವಿಸುವ ಅಗತ್ಯ ಇದೆ. ಪ್ರಕೃತಿಸಹಜ ಸ್ವಭಾವಗಳನ್ನು ಬದಲಿಸಿಕೊಳ್ಳುವುದು ಕಠಿಣವಾಗುತ್ತದೆ. ಬೆಳಿಗ್ಗೆ ಬೇಗ ಏಳುವವರು ಹೆಚ್ಚು ಕ್ರಿಯಾಶೀಲರು, ಸೃಜನಶೀಲರು ಮತ್ತು ಆರೋಗ್ಯವಂತರು ಆಗಿರುತ್ತಾರೆ ಎಂಬ ಭಾವನೆ ಸಹಜವಾಗಿ ಇದೆ. ಆದಾಗ್ಯೂ ಸಮೀಕ್ಷೆಗಳಲ್ಲಿ ಕಂಡುಕೊಂಡಂತೆ, ರಾತ್ರಿ ಸಕ್ರಿಯವಾಗಿ ಇರುವವರು ಆದಾಯ ಗಳಿಕೆಯಲ್ಲಿ ಬೆಳಿಗ್ಗೆ ಸಕ್ರಿಯವಾಗಿ ಇರುವವರಿಗಿಂತ ಮುಂದಿದ್ದಾರೆ ಎನ್ನಲಾಗಿದೆ. ಎರಡೂ ರೀತಿಯ ವ್ಯಕ್ತಿಗಳಲ್ಲಿ ಕೆಲವು ಅಂಶಗಳು ಉತ್ತಮವಾಗಿ ಇರುವಂತೆ ಕಾಣುತ್ತದೆ.

ಅಂತಿಮವಾಗಿ ಶಿಕ್ಷಣ, ವೃತ್ತಿ, ಕುಟುಂಬ ಜೀವನವನ್ನು ಯಶಸ್ವಿಯಾಗಿ ನಿಭಾಯಿಸುವುದೇ ಮುಖ್ಯ ಅಂಶವಾಗುತ್ತದೆ. ಈ ದಿಸೆಯಲ್ಲಿ ವ್ಯಕ್ತಿ ಯಶಸ್ವಿಯಾದರೆ ಯಾವುದೇ ಹಾನಿ ಇರದು. ಜವಾಬ್ದಾರಿಗಳು ಹೆಚ್ಚಾದಂತೆ ವ್ಯಕ್ತಿಯು ರಾತ್ರಿ ವೇಳೆಯ ಸಕ್ರಿಯ ಜೀವನಶೈಲಿಯನ್ನು ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಂಡು ನಿರ್ವಹಿಸುವ ಉದಾಹರಣೆಗಳನ್ನು ಕಾಣುತ್ತೇವೆ. ಆದರೆ ವಿದ್ಯಾರ್ಥಿ ದೆಸೆಯಿಂದಲೇ ರಾತ್ರಿ ಬಹು ಹೊತ್ತಿನವರೆಗೆ ಸಕ್ರಿಯವಾಗಿದ್ದು, ಮುಂಜಾನೆಯ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸಲು ಸಮಸ್ಯೆ ಆಗದಂತೆ ಎಚ್ಚರ ವಹಿಸುವತ್ತ ಅವರನ್ನು ಸಜ್ಜುಗೊಳಿಸುವುದು ಮುಖ್ಯವಾಗಿದೆ. ಇದರ ಜೊತೆಗೆ ಪ್ರತಿಯೊಬ್ಬರೂ ಸೂಕ್ತ ನಿದ್ರೆಯ ಅಗತ್ಯವನ್ನು ಮನಗಂಡು, ಅದನ್ನು ಹೊಂದುವತ್ತ ಗಮನಹರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.