ADVERTISEMENT

ಸಂಗತ: ಹಾಜರಾತಿಯ ಕೊರತೆ– ತರಗತಿಯ ಮಹತ್ವ ಮನಗಾಣಿಸಬೇಕಿದೆ

ವಿದ್ಯಾರ್ಥಿಗಳ ಹಾಜರಾತಿಯ ಕೊರತೆ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ

ಬಿ.ಎಸ್.ಭಗವಾನ್
Published 6 ಸೆಪ್ಟೆಂಬರ್ 2024, 18:45 IST
Last Updated 6 ಸೆಪ್ಟೆಂಬರ್ 2024, 18:45 IST
ಸಂಗತ
ಸಂಗತ   

‘ಶಾಲೆಗೆ ಚಕ್ಕರ್‌, ಊಟಕೆ ಹಾಜರ್‌, ಲೆಕ್ಕದಿ ಬರಿ ಸೊನ್ನೆ....’ ಈ ಸಿನಿಮಾ ಹಾಡಿನಲ್ಲಿ ತರಗತಿಗಳಿಗೆ ಗೈರಾಗುವುದರ ದುಷ್ಪರಿಣಾಮಗಳು ಮಾರ್ಮಿಕವಾಗಿ ವ್ಯಕ್ತಗೊಂಡಿವೆ. ಒಂದಿಲ್ಲೊಂದು ಕಾರಣಕ್ಕೆ ತರಗತಿ
ಯಿಂದ ತಪ್ಪಿಸಿಕೊಳ್ಳಬಹುದು. ಆದರೆ ಮುಂದೆ ದೀರ್ಘಾವಧಿಗೆ ಎದುರಾಗುವ ಸಮಸ್ಯೆಗಳು ಬಹುಮುಖಿ.

ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ ದಿನ ಅದೆಷ್ಟು ಹಿಗ್ಗಿರುತ್ತಾರೆ, ಕಂಡಕಂಡವರ ಬಳಿ ಸಂತೋಷವನ್ನು ಹಂಚಿಕೊಂಡಿರುತ್ತಾರೆ. ತರಗತಿಗೆ ಕ್ರಮಬದ್ಧವಾಗಿ ಹಾಜರಾಗದಿದ್ದರೆ ಬೇರೆ ಬೇರೆ ನೆಲೆಯಲ್ಲಿ ಅದು ಅಪರಾಧಪ್ರಜ್ಞೆಯಾಗಿ ವಿದ್ಯಾರ್ಥಿಯನ್ನು ಕಾಡಬಹುದು. ಹೋಂ ವರ್ಕ್‌, ಅಸೈನ್‌ಮೆಂಟ್ ಏನು ನಿಯೋಜಿಸಿದ್ದಾರೊ, ಎತ್ತ ಮುಂದಿನ ಪಾಠವೊ ಎಂಬ ಆತಂಕ ತಲೆದೋರುವುದು. ಅಧ್ಯಾಯಗಳನ್ನು ಪೋಣಿಸುವ ದಾರಕ್ಕೆ ಕತ್ತರಿ ಬಿದ್ದಿರುತ್ತದೆ. ಸಾಲದ್ದಕ್ಕೆ ಬೋಧಿಸಿದ ವಿಷಯಗಳ ಕುರಿತ ಚರ್ಚೆಗಳಲ್ಲಿ
ಭಾಗಿಯಾಗಲಿಲ್ಲವಲ್ಲ ಎಂಬ ಕೊರಗು. ಅಧ್ಯಾಪಕರ ಬೋಧನೆಗಳನ್ನು ಮತ್ತೆ ಪಡೆಯಲಾಗದು.

ಎಂದೋ ‘ಹುಣ್ಣಿಮೆಗೊಮ್ಮೆ’ ಕಾಣಿಸಿಕೊಳ್ಳುವ ವಿದ್ಯಾರ್ಥಿಗಳೆಂದರೆ ಶಿಕ್ಷಕರಿಗೂ ಅಷ್ಟಕ್ಕಷ್ಟೆ. ಅಪರೂಪಕ್ಕೆ ಹಾಜರಾಗುವ ವಿದ್ಯಾರ್ಥಿಗಳು ಪಾಠದಲ್ಲಿನ ಸಂದೇಹಗಳನ್ನು ಬಗೆಹರಿಸಲು ಕೋರಿದಾಗ ಶಿಕ್ಷಕರಲ್ಲಿ ಏನು ತಾನೆ ಉತ್ಸಾಹವಿದ್ದೀತು? ತರಗತಿಗಳನ್ನು ಉಪೇಕ್ಷಿಸಿದರೆ ಅಂಕ, ಗ್ರೇಡ್‌ಗಳಲ್ಲೂ ಹಿನ್ನಡೆ ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗೆ ತನಗೂ ಮತ್ತು ಶಾಲೆಗೂ ಶೈಕ್ಷಣಿಕ ಸಂಪರ್ಕವೇ ಕಡಿದುಹೋದಂತಹ ಅನಾಥಪ್ರಜ್ಞೆ ಆವರಿಸುತ್ತದೆ. ಕೇವಲ ಹಾಜರಾತಿಗಾಗಿ ತರಗತಿಗೆ ಬರುವವರೂ ಉಂಟು! ಅಂತಹವರು ಬೇಸರಕ್ಕೆ ಪರಿಹಾರ ಕಂಡುಕೊಳ್ಳವುದು ನಿದ್ರೆ, ಪಿಸುಮಾತು, ಚುಕ್ಕಿ ಆಟ, ಮೊಬೈಲಿನಲ್ಲಿ... ಪರಿಣಾಮ ಇತರರ ಏಕಾಗ್ರತೆಗೂ ಭಂಗ.

ADVERTISEMENT

ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿಯ ಕೊರತೆ ಜಾಗತಿಕ ಸವಾಲು. ಸತತ 30 ದಿನಗಳಲ್ಲಿ 6ರಿಂದ 7 ದಿನಗಳು ಮಾತ್ರ ತರಗತಿಗೆ ಹಾಜರಾದರೆ ಅದನ್ನು ‘ದೀರ್ಘಕಾಲದ ಗೈರುಹಾಜರಿ’ ಎಂದು ಗುರುತಿಸಲಾಗುತ್ತದೆ. ಕೆಲವು ಮಕ್ಕಳು ಶಾಲೆಯಿಂದ ವಿಮುಖರಾಗಲು ಸಕಾರಣಗಳು ಇದ್ದಿರಬಹುದು. ಕ್ರಮಿಸಬೇಕಾದ ಅಂತರ, ಪೌಷ್ಟಿಕ ಆಹಾರದ ಕೊರತೆ, ಮನೆಯ ವಾತಾವರಣ, ಕನಿಷ್ಠ ಸೌಲಭ್ಯಗಳನ್ನೂ ಒದಗಿಸಲಾಗದ ಪಾಲಕರ ಅಸಹಾಯಕತೆಯು ಅಡೆತಡೆ ಒಡ್ಡುವುದುಂಟು. ವಿದ್ಯಾಲಯದ ಆಡಳಿತ ವರ್ಗವು ವಿದ್ಯಾರ್ಥಿಗಳನ್ನು ಅವರ ಪೋಷಕರ ಸಮೇತ ಆಪ್ತ ಸಮಾಲೋಚನೆಗೆ ಒಳಪಡಿಸಿದರೆ ನ್ಯೂನತೆ ತಕ್ಕಮಟ್ಟಿಗೆ ತಿಳಿಯಾಗುತ್ತದೆ. ಪಠ್ಯಕ್ರಮವನ್ನಲ್ಲದೆ ಮಕ್ಕಳು ಶಾಲೆಯಿಂದ ಆಟೋಟ, ಕಲೆ, ಕೌಶಲ, ಅಭಿನಯ, ಕೃಷಿ, ಅಡುಗೆ, ಕಸೂತಿ, ಸಾಹಸ ಚಟುವಟಿಕೆಯಂತಹ ಪಠ್ಯೇತರ ಚಟುವಟಿಕೆಗಳನ್ನೂ ನಿರೀಕ್ಷಿಸುತ್ತಾರೆ. ಅವು ಶಾಲಾ ಆವರಣದಲ್ಲಿ ಮೆರೆದರೆ ತರಗತಿ ತಾನೇತಾನಾಗಿ ತುಂಬುವುದು. 

ಯಾವುದೇ ಒಂದು ತರಗತಿ ಸಾವಯವವಾಗಿರಲು ಗುರು ಮತ್ತು ಶಿಷ್ಯರು ಈ ಅಂಶವನ್ನಂತೂ ಅಲಕ್ಷಿಸುವಂತಿಲ್ಲ. ಅದುವೇ ತರಗತಿಗೆ ಬರುವ ಮುನ್ನ ತಯಾರಿ. ಬೋಧಕರಿಗೆ ಅಂದಿನ ಪಾಠ ಬೋಧಿಸಲು ಹಾಗೂ ಶಿಷ್ಯರಿಗೆ ಗಮನವಹಿಸಿ ಅಂದಿನ ಪಾಠ ಆಲಿಸಲು ಇದು ಅಗತ್ಯ. ಶಿಕ್ಷಕರು ತಮ್ಮಲ್ಲಿನ ಶೈಕ್ಷಣಿಕ ಅನುಭವಗಳ ಭಂಡಾರವನ್ನು ಮಕ್ಕಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಾರೆ. ತರಗತಿ ಒಲ್ಲೆನೆಂದರೆ ಅಂಥ ಅನುಭಾವ ಬೇರೆಲ್ಲಿ ಲಭ್ಯ? ಪ್ರತಿಭಾಶಾಲಿ ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತು ಆಸಕ್ತಿಯಿಂದ ಪಾಠ ಕೇಳಿ ಗ್ರಹಿಸುವ ರಹಸ್ಯವೆಂದರೆ ಅವರು ತದನಂತರ ಅಭ್ಯಸಿಸುವ ಅಗತ್ಯವಿರದೆಂದು. ಅದೇ ಸಮಯದಲ್ಲಿ ಇನ್ನೊಂದು ಅಧ್ಯಾಯ ಪರಿಚಯಿಸಿಕೊಳ್ಳಬಹುದುಎಂಬ ಜಾಣತನ ಅವರದೆನ್ನೋಣ. ಪಠ್ಯದಲ್ಲಿನ ಪರಿಕಲ್ಪನೆಗಳನ್ನು ವೈವಿಧ್ಯಮಯವಾಗಿ ತರಗತಿಯ ಬೋಧನೆಗಳು ಬಿಂಬಿಸಬಲ್ಲವು. ಆ ಮೂಲಕ ಹೊಸ ಚರ್ಚೆ, ವಿಸ್ತೃತ ಚಿಂತನೆಗಳಿಗೆ ಆಸ್ಪದವಾಗುತ್ತದೆ.

ಯಾವುದೇ ಪಠ್ಯವು ಸಂಪನ್ಮೂಲ ವ್ಯಕ್ತಿಗಿಂತ ಸಮರ್ಥವಾಗಿ ವ್ಯಾಖ್ಯಾನಿಸದು. ನುರಿತ ಮತ್ತು ಅರಿತ ಶಿಕ್ಷಕರು ಮಾತ್ರ ಸಮಕಾಲೀನ ಪೂರಕ ಸಂಗತಿಗಳನ್ನು ಪಠ್ಯದ ಅಂಶಗಳ ಜೊತೆಗೆ ವಿವರಿಸಬಲ್ಲರು. ತರಗತಿಗೆ ಹಾಜರಾಗಿ ಸ್ಫುಟವಾದ ನೋಟ್ಸ್‌ ತಯಾರಿಸಿಕೊಂಡರೆ ಅದು ಪರೀಕ್ಷೆಗೆ ಮುಖ್ಯ ಸಿದ್ಧತೆಗಳಲ್ಲೊಂದು. ಅಂದಹಾಗೆ ವಿದ್ಯಾರ್ಥಿಗಳದ್ದೇ ನೋಟ್ಸ್‌ ಸಹಪಾಠಿಯ ನೋಟ್ಸ್‌ಗಿಂತ ಹೆಚ್ಚು ಪ್ರಯೋಜನಕಾರಿ. 

ತರಗತಿಗೆ ವೇಳಾಪಟ್ಟಿಯಂತೆ ತಪ್ಪದೇ ಹಾಜರಾಗುವುದು ಕ್ರೀಡೆ ಅಥವಾ ಸಂಗೀತದ ಅಭ್ಯಾಸದಂತೆ. ಅದು ಬದ್ಧತೆ ಮತ್ತು ಶಿಸ್ತಿನ ಪ್ರತಿರೂಪ. ತರಗತಿಗೆ ತಡವಾಗಿ ಬರುವುದೂ ಗೈರುಹಾಜರಿಯ ಒಂದು ರೂಪ. ಬಹುಮಟ್ಟಿಗೆ ನಿಯತವಾಗಿ ತರಗತಿಗೆ ಹಾಜರಾಗದ ಪರಿಣಾಮವೇ ಪರೀಕ್ಷೆಗಳಲ್ಲಿ ಅಕ್ರಮವೆಸಗಲು ಪ್ರೇರಣೆ. ವಿದ್ಯಾಲಯಕ್ಕೆ ಬಂದೂ ತರಗತಿಗಳಿಗೆ ಬಾರದಿರುವ ಪ್ರವೃತ್ತಿಯೂ ಇದೆ. ಪರೀಕ್ಷೆಗಳು ಸಮೀಪಿಸುತ್ತಿರುವಾಗ ತರಗತಿಗಳಿಗೆ ಹಾಜರಾದರೆ ಪಾಠದ ಹಿಂದು, ಮುಂದು ತಿಳಿಯದೆ ತಳಮಳ, ತಬ್ಬಿಬ್ಬು. ಇದರಿಂದಾಗಿ ತರಗತಿ ಹಾಗೂ ಪರೀಕ್ಷೆ ಎರಡೂ ವಿಫಲ. 

ಪಾಠ ಒಮ್ಮೆಗೇ ಅರ್ಥವಾಗದಿರಬಹುದು. ಆದರೆ, ಒಂದೂ ತರಗತಿಯನ್ನು ಬಿಡದೆ ನಿಯಮಿತವಾಗಿ ಹಾಜರಾದರೆ ಮಂದಗತಿಯಲ್ಲಾದರೂ ಗ್ರಹಿಕೆ ನಿಶ್ಚಿತ. ಬೋಧನೆಯ ತನ್ಮಯ ಆಲಿಕೆಯಿಂದ ಯಶಸ್ಸು ಸಾಧ್ಯವಷ್ಟೆ ಅಲ್ಲ, ಸಂಭಾವ್ಯವೆಂಬ ನಂಬಿಕೆ ಬಲಗೊಳ್ಳುತ್ತದೆ. ಶೈಕ್ಷಣಿಕ ಸಾಫಲ್ಯದ ದೃಷ್ಟಿಯಲ್ಲಿ ತರಗತಿಯನ್ನು ಎದೆಹಾಲಿಗೆ ಹೋಲಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.