ADVERTISEMENT

ಸಂಗತ: ನಗರ ಜನರ ಮಾಲ್‌ ಎಂಬ ಮಾಯಾಬಜಾರ್‌!

ನಗರವಾಸಿಗಳ ಬದುಕಿನ ಅವಿಭಾಜ್ಯ ಅಂಗವಾಗಿರುವ ಮಾಲ್‌ಗಳಿಂದ ಅನುಕೂಲಗಳಷ್ಟೇ ಅನನುಕೂಲಗಳೂ ಇವೆ

ಡಾ .ಕೆ.ಎಸ್.ಚೈತ್ರಾ
Published 7 ಜನವರಿ 2024, 19:08 IST
Last Updated 7 ಜನವರಿ 2024, 19:08 IST
<div class="paragraphs"><p>ಸಂಗತ: ನಗರ ಜನರ ಮಾಲ್‌ ಎಂಬ ಮಾಯಾಬಜಾರ್‌! </p></div>

ಸಂಗತ: ನಗರ ಜನರ ಮಾಲ್‌ ಎಂಬ ಮಾಯಾಬಜಾರ್‌!

   

‘ಇಲ್ಲಿಂದ ಮನೆಯನ್ನು ಬೇರೆ ಕಡೆ ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದೇವೆ’ ಎಂದು ಪರಿಚಿತರೊಬ್ಬರು ಹೇಳಿದಾಗ ಆಶ್ಚರ್ಯ ಆಗಿತ್ತು. ಎರಡು ವರ್ಷದ ಹಿಂದಷ್ಟೇ ಮಕ್ಕಳ ಶಾಲೆಗೆ, ಹಿರಿಯರಾದ ಅಪ್ಪ ಅಮ್ಮನ ಆಸ್ಪತ್ರೆಗೆ, ಬಿಸಿನೆಸ್‍ ಸಲುವಾಗಿ ಓಡಾಡಲು ಏರ್‌ಪೋರ್ಟ್ ಎಲ್ಲವೂ ಹತ್ತಿರವಿರುವ ಅನುಕೂಲಕರ ಮನೆ ಎನ್ನುವ ಉದ್ದೇಶದಿಂದ ಇಲ್ಲಿಗೆ ಬಂದವರು ಅವರು. ಹೀಗಿರುವಾಗ, ಈ ನಿರ್ಧಾರಕ್ಕೆ ಕಾರಣವೇನು ಎಂದು ಯೋಚಿಸುವಷ್ಟರಲ್ಲಿ ಉತ್ತರವೂ ಬಂದಿತ್ತು ‘ಮಾಲ್’!

ಒಂದುಕಾಲಕ್ಕೆ ಪೇಟೆಗೆ ಹೋಗಿ ಹತ್ತಾರು ಅಂಗಡಿಗಳನ್ನು ಸುತ್ತಿ ಅಗತ್ಯ ವಸ್ತುಗಳನ್ನು ಖರೀದಿಸಿ ಬರುತ್ತಿದ್ದ ಕಾಲ ಇದಲ್ಲ. ಈಗ ಸೂಜಿಯಿಂದ ಕಂಪ್ಯೂಟರ್‌ ತನಕ ಸಕಲವನ್ನೂ ಒಂದೇ ಜಾಗದಲ್ಲಿ ನೋಡುತ್ತಾ, ಖರೀದಿಸುತ್ತಾ, ಜತೆಗೇ ಬಾಯಿಗೆ ರುಚಿಸುವ ಆಹಾರ ತಿಂದು, ಖುಷಿ ಕೊಡುವ ಸಿನಿಮಾ ನೋಡಿ, ಮಕ್ಕಳಿಗೆ ಬೇಕಾದ ಆಟವನ್ನು ಆಡಿಸಿ... ಹೀಗೆ ದಿನವಿಡೀ ಸಮಯ ಕಳೆಯಬಹುದಾದ ಮಾಲ್‍ಗಳಲ್ಲಿ ಶಾಪಿಂಗ್ ಎಂಬುದು ಜೀವನದ ಅವಿಭಾಜ್ಯ ಅಂಗವೇ ಆಗಿದೆ.

ADVERTISEMENT

ದುಡ್ಡು ಅಥವಾ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಮಕ್ಕಳು, ಹದಿಹರೆಯದವರು, ವಯಸ್ಕರು, ವೃದ್ಧರು ಹೀಗೆ ಎಲ್ಲ ವಯಸ್ಸು, ಜಾತಿ, ಧರ್ಮದವರಿಗೂ ಬೇಕಾದುದನ್ನೆಲ್ಲ ಹೊಂದಿರುವ ಮಾಯಾಬಜಾರ್ ಇದು. ಕಡಿಮೆ ಸಮಯದಲ್ಲಿ, ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಿಸುವ ಒತ್ತಡವಿಲ್ಲದೆ, ಎಲ್ಲರೂ ಒಟ್ಟಾಗಿ ಸೇರಿ ಖರೀದಿಸಲು ಸುರಕ್ಷಿತವಾದ ಸ್ಥಳಗಳು ಮಾಲ್‍ಗಳು. ಹಾಗೆಯೇ ಮಾಲ್ ಬರುತ್ತದೆ ಎಂದರೆ ಸುತ್ತಮುತ್ತಲಿನ ಭೂಮಿಯ ದರ, ಮನೆಗಳ ಬಾಡಿಗೆ ದರ ಹೆಚ್ಚುತ್ತದೆ. ಸ್ಥಳೀಯರಿಗೆ ಕೆಲಸ ಸಿಗುವುದರ ಜತೆಗೆ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ, ಆ ಪ್ರದೇಶ ಅಭಿವೃದ್ಧಿಯಾಗುತ್ತದೆ ಎನ್ನುವುದೂ ಸತ್ಯ.

ಆದರೆ ಅನುಕೂಲಗಳಷ್ಟೇ ಅನನುಕೂಲಗಳೂ ಇವೆ! ನಗರದ ಪ್ರಮುಖ ಭಾಗಗಳಲ್ಲಿ ಮಾಲ್‌ಗಳ ಬೃಹತ್ ಕಟ್ಟಡಗಳು ಏಳುತ್ತಿವೆ. ಮಾಲ್‌ಗಳಿಗೆ ಹೋಗಲು ಜನರೂ ಮುಗಿಬೀಳುತ್ತಿದ್ದಾರೆ. ಆದರೆ ಹೆಚ್ಚಿನ ಕಡೆ ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿ ಇರುವುದಿಲ್ಲ. ಹೀಗಾಗಿ, ರಸ್ತೆ ಮಾತ್ರವಲ್ಲ ಫುಟ್‌ಪಾತ್‌ಗಳೂ ವಾಹನ ನಿಲುಗಡೆ ಪ್ರದೇಶಗಳಾಗಿವೆ. ವಾರಾಂತ್ಯದ ದಿನ, ರಜಾದಿವಸ, ಹಬ್ಬಹರಿದಿನ ಬಂದರೆ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವವರ ಕಷ್ಟ ಹೇಳತೀರದು. ವಿಶೇಷವಾಗಿ ವಾರಾಂತ್ಯದಲ್ಲಿ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆ. ಹತ್ತಿರವಿರುವ ಆಸ್ಪತ್ರೆಗಳಿಗೆ ಮತ್ತು ಕೆಲಸಕ್ಕೆ ಹೋಗುವ ಉದ್ಯೋಗಿಗಳಿಗೂ ದಿನನಿತ್ಯದ ಸಂಚಾರ ದುಸ್ತರ. ಮಾಲ್ ಇರುವ ರಸ್ತೆಯಲ್ಲಿ ಸಂಚರಿಸುವ ಸರ್ಕಾರಿ ಬಸ್ಸುಗಳು, ಶಾಲಾವಾಹನಗಳು, ಕಡೆಗೆ ರೋಗಿಗಳನ್ನು ತುರ್ತು ಚಿಕಿತ್ಸೆಗಾಗಿ ಕರೆದೊಯ್ಯುವ ಆಂಬುಲೆನ್ಸ್ ಕೂಡ ಅಲ್ಲಲ್ಲೇ ಕಾಯಬೇಕಾದ ಅನಿವಾರ್ಯ!

ಇದರೊಂದಿಗೇ ಮಾಲ್‍ಗಳ ಕುರಿತು ಜನರ ಅಸಹನೆಗೆ ಕಾರಣವಾಗಿರುವುದು, ಹೆಚ್ಚಾಗಿರುವ ಶಬ್ದ ಮಾಲಿನ್ಯ. ಕಟ್ಟಡದ ಕಲುಷಿತವಾದ ಗಾಳಿಯನ್ನು ಹೊರದೂಡಿ ಶುದ್ಧೀಕರಿಸುವ ಎಕ್ಸಾಸ್ಟ್ ಬ್ಲೋವರ್ಸ್‍ (ಗಾಳಿಯಂತ್ರಗಳು) ಜೋರಾಗಿ ಸದ್ದು ಮಾಡುತ್ತವೆ. ಮಾಲ್ ದೊಡ್ಡದಾದಷ್ಟೂ ಜನ ಹೆಚ್ಚಿದಷ್ಟೂ ಇವುಗಳ ಸದ್ದು ಹೆಚ್ಚು. ತಡರಾತ್ರಿಯವರೆಗೆ ಮಾಲ್ ತೆರೆದಿರುವುದರಿಂದ ಇವು ವಿದ್ಯಾರ್ಥಿಗಳಿಗೆ ಓದಲು, ರೋಗಿಗಳಿಗೆ ವಿಶ್ರಾಂತಿ ಪಡೆಯಲು ಮತ್ತು ಜನರ ನಿದ್ದೆಗೆ ಭಂಗ ತರುತ್ತವೆ!

ಮಾಲ್ ಸಂಸ್ಕೃತಿ ನಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮವನ್ನು ಬೀರಿದೆ. ಆಕರ್ಷಕವಾಗಿ ವಸ್ತುಗಳನ್ನು ಜೋಡಿಸಿ, ಸೇಲ್ ಎನ್ನುವ ಪ್ರಲೋಭನೆಯನ್ನು ಒಡ್ಡಿ ಜನರಲ್ಲಿ ಕೊಳ್ಳುಬಾಕತನವನ್ನು ಇದು ಪ್ರಚೋದಿಸುತ್ತದೆ. ಹೀಗಾಗಿ, ಬೇಕಾಗಲಿ ಬೇಡದಿರಲಿ ಒಮ್ಮೆ ಕಾಲಿಟ್ಟರೆ ಏನನ್ನೂ ಖರೀದಿಸದೆ ಹೊರಬರುವ ಸಾಧ್ಯತೆಯೇ ಇಲ್ಲ. ಮಾಲ್‍ನಲ್ಲಿ ದುಬಾರಿ ಬಾಡಿಗೆ ತೆತ್ತು ಮಳಿಗೆ ಇಟ್ಟಮೇಲೆ ವ್ಯಾಪಾರದಿಂದ ಲಾಭ ಗಳಿಸಬೇಕಾದರೆ ವಸ್ತುಗಳಿಗೂ ಹೆಚ್ಚಿನ ದರ ಇಡುವುದು ಅನಿವಾರ್ಯ. ಡಿಸ್ಕೌಂಟ್ ಎಂದು ಮರುಳಾಗಿ ಒಂದಕ್ಕೆರಡು ಬೆಲೆ ತೆತ್ತುಬರುವುದು ಸಾಮಾನ್ಯ. ಮಾಲ್ ಬಂದ ನಂತರ ಚೌಕಾಸಿ ಮಾಡುವ ಅವಕಾಶವೇ ಇಲ್ಲದೆ, ಕೇಳಿದಷ್ಟು ಬೆಲೆ ಕೊಟ್ಟು ಬ್ರ್ಯಾಂಡೆಡ್ ಐಟಂ ಕೊಳ್ಳುವ ಪರಿಸ್ಥಿತಿಗೆ ಒಗ್ಗಿದ್ದೇವೆ. ಪ್ರೀತಿಯಿಂದ ಗ್ರಾಹಕರ ಇಷ್ಟ ಅರಿತು ಕಷ್ಟ-ಸುಖ ವಿಚಾರಿಸಿ ಮಾತನಾಡುವ ಪರಿಚಿತರ ಅದೆಷ್ಟೋ ಸಣ್ಣ ಪುಟ್ಟ ಅಂಗಡಿಗಳು ಕಣ್ಮರೆಯಾಗಿವೆ. ಹಾಗೆಯೇ ಹೆಸರಿಡಲಾಗದ ಹಲವು ಭಾವನಾತ್ಮಕವಾದ ಸಂಬಂಧಗಳು ಅಳಿದಿವೆ!

ಟ್ರಾಫಿಕ್ ಸಮಸ್ಯೆ ಮಿತಿಮೀರಿ, ಜನಜಂಗುಳಿ ನಿಯಂತ್ರಿಸಲು ಸಾಧ್ಯವಾಗದೆ ಇತ್ತೀಚೆಗಷ್ಟೇ ಬೆಂಗಳೂರಿನ ಉತ್ತರಭಾಗದ ಮಾಲೊಂದರ ಕುರಿತು ಬಹಳಷ್ಟು ಗಲಾಟೆ, ವಾದ-ವಿವಾದ ನಡೆಯಿತು.

ಮಾಲ್‍ಗಳನ್ನು ಕಟ್ಟಿಸುವ ಮೊದಲು ಕಟ್ಟಡದ ಸೂಕ್ತ ನಕ್ಷೆ ತಯಾರಿಸಿ ಅನುಮತಿ ಪಡೆಯಬೇಕು. ಭೇಟಿ ನೀಡುವ ಜನರ ಅಗತ್ಯಕ್ಕೆ ತಕ್ಕಂತೆ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು. ಇದರೊಂದಿಗೆ ಮಾಲ್‍ನ ಒಳಗಡೆಯೇ ಪ್ರಯಾಣಿಕರಿಗೆ ಇಳಿಯುವ ಮತ್ತು ಹತ್ತುವ ನಿಗದಿತ ಸ್ಥಳ ಮೀಸಲಿಡಬೇಕು. ಹಾಗೆಯೇ ಉಂಟಾಗುವಂತಹ ಶಬ್ದಮಾಲಿನ್ಯ ನಿಯಂತ್ರಣಕ್ಕೂ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕು. ಈಗಂತೂ ಪ್ರತಿ ಬಡಾವಣೆಯಲ್ಲಿಯೂ ಮಾಲ್‍ಗಳು ತಲೆ ಎತ್ತುತ್ತಿವೆ. ಪ್ರಸ್ತುತ ವಿದ್ಯಮಾನವನ್ನು ಗಮನದಲ್ಲಿಟ್ಟು ಮಾಲೀಕರು ಎಚ್ಚರ ವಹಿಸಬೇಕು. ಹಾಗೆಯೇ, ಕಟ್ಟುವ ಸ್ಥಳ, ಸೌಲಭ್ಯಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದವರಿಗೆ ಮಾತ್ರ ಸಂಬಂಧಿಸಿದವರು ಸ್ವಾಧೀನ ಪ್ರಮಾಣಪತ್ರ ನೀಡಬೇಕು. ಇಲ್ಲದಿದ್ದಲ್ಲಿ ಈ ಮಾಲ್‍ಗಳು ದೊಡ್ಡ ತಲೆನೋವಾಗುವುದರಲ್ಲಿ ಸಂಶಯವೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.