ADVERTISEMENT

ಸಂಗತ: ಸುದ್ದಿಯಲ್ಲದ ‘ಸುಳ್ಳುಸುದ್ದಿ’

ಸುದ್ದಿಗೂ ತಪ್ಪು ಮಾಹಿತಿಗೂ ನಡುವಿನ ವ್ಯತ್ಯಾಸ ಅರಿಯಬೇಕಿದೆ

ಗೀತಾ ವಸಂತ
Published 20 ಆಗಸ್ಟ್ 2020, 20:41 IST
Last Updated 20 ಆಗಸ್ಟ್ 2020, 20:41 IST
.
.   

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೋದ್ಯಮ ಶಿಕ್ಷಣ ವಲಯದಲ್ಲಿ ಇತ್ತೀಚೆಗೆ ನಡೆಯವ ಚರ್ಚೆಗಳಲ್ಲಿ ಆಗಾಗ್ಗೆ ಕೇಳಿಬರುವ ಎರಡು ಪದಗಳು: ‘ಸುಳ್ಳುಸುದ್ದಿ’ (ಫೇಕ್ ನ್ಯೂಸ್) ಹಾಗೂ ‘ಸತ್ಯಶೋಧನೆ’ (ಫ್ಯಾಕ್ಟ್ ಚೆಕ್). ಇಲ್ಲಿ ಎರಡು ವಿಚಾರಗಳನ್ನು ಗಮನಿಸಲೇಬೇಕು. ಮೊದಲನೆಯದು, ಯುವಕನೊಬ್ಬ ಅಪರೂಪದ ವೈಜ್ಞಾನಿಕ ಆವಿಷ್ಕಾರ ಮಾಡಿದ್ದಾನೆ ಎನ್ನುವ ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಸುದ್ದಿಮೂಲವಾಗಿ ತೆಗೆದುಕೊಂಡ ಕೆಲವು ಮಾಧ್ಯಮಗಳು ಹಾಗೂ ಪತ್ರಕರ್ತರೂ ಹೇಗೆ ಮೂರ್ಖರಾಗಬಲ್ಲರು ಎಂದು ತೋರಿಸಿಕೊಟ್ಟ ವಿದ್ಯಮಾನ. ತಮ್ಮ ವೃತ್ತಿಪರತೆಯ ಪ್ರಮುಖ ಕರ್ತವ್ಯವಾದ ವಸ್ತುನಿಷ್ಠತೆಯ ಪರಿಶೀಲನೆ ಮಾಡುವುದರಲ್ಲಿ ಎಡವಿದ ಮಾಧ್ಯಮಗಳ ಬಗೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಾಪ್ರಹಾರ ನಡೆಯಿತು. ‘ಸುಳ್ಳುಸುದ್ದಿ’ಯ ಕುರಿತಂತೆ ಗಂಭೀರ ಚರ್ಚೆಗಳು ನಡೆದವು.

ಇನ್ನೊಂದು ವಿಚಾರ, ಭಾರತೀಯ ಸಮೂಹ ಸಂವಹನ ಸಂಸ್ಥೆಯ (ಐಐಎಮ್‍ಸಿ) ಮಾಜಿ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಪ್ರೊ. ಕೆ.ಜಿ.ಸುರೇಶ್ ಅವರು ಇತ್ತೀಚೆಗೆ ಭಾಷಣವೊಂದರಲ್ಲಿ ಉಲ್ಲೇಖಿಸಿದ ವಿಷಯ. ಅವರ ಪ್ರಕಾರ ‘ಸುಳ್ಳುಸುದ್ದಿ ಎಂಬ ಪದಬಳಕೆಯೇ ವಿರೋಧಾಭಾಸದ್ದು. ಸುಳ್ಳನ್ನು ಎಂದಿಗೂ ಸುದ್ದಿ ಎನ್ನಲು ಸಾಧ್ಯವಿಲ್ಲ, ಯಾವುದೇ ಪ್ರಸಂಗ ಅಥವಾ ವಿಚಾರ ಸುಳ್ಳಾದರೆ ಅದು
ಸುದ್ದಿಯೆನಿಸಿಕೊಳ್ಳಲು ಅರ್ಹವಲ್ಲ. ಹಾಗಾಗಿ ಸುಳ್ಳುಸುದ್ದಿ ಎಂಬ ಪದಬಳಕೆಯ ಬದಲಾಗಿ ಅದನ್ನು ತಪ್ಪುಮಾಹಿತಿ ಎಂದು ಕರೆಯಬಹುದು’.

‘ಸುದ್ದಿ’ ಎನ್ನುವ ಪದವು ಸಾಮಾನ್ಯವಾಗಿ ವಸ್ತುನಿಷ್ಠ ಪತ್ರಿಕೋದ್ಯಮದ ಅವಿಭಾಜ್ಯ ಅಂಗವಾಗಿಯೇ ವ್ಯಾಖ್ಯಾನಿಸಲ್ಪಡುತ್ತದೆ. ಪತ್ರಿಕೋದ್ಯಮ ಶಿಕ್ಷಣದಲ್ಲಿರಲೀ ಅಥವಾ ಅನುಭವಿ ಪತ್ರಕರ್ತರಿರಲೀ ತರಬೇತಿಯ ಹಂತದಲ್ಲಿರುವವರಿಗೆ ಹೇಳಿಕೊಡುವುದೇ ಮಾಹಿತಿಯು ನಿಖರ ಹಾಗೂ ವಸ್ತುನಿಷ್ಠವಾಗಿದ್ದರೆ ಮಾತ್ರ ಅದನ್ನು ಸುದ್ದಿ ಎನ್ನುವ ವ್ಯಾಪ್ತಿಯೊಳಗೆ ತರಬಹುದು ಹಾಗೂ ಅದು ಪ್ರಕಟಣೆಗೆ ಯೋಗ್ಯವಾಗಿರುತ್ತದೆ ಎಂಬುದು. ಇದರ ಹೊರತಾಗಿಯೂ ಸುಳ್ಳು ಮಾಹಿತಿಯು ಸುದ್ದಿಯಾದರೆ ಅದನ್ನು ಸುದ್ದಿ ಎಂದು ಕರೆಯಲು ಸಾಧ್ಯವಿಲ್ಲ ಹಾಗೂ ಅದನ್ನು ವರದಿ ಮಾಡಿದ ವರದಿಗಾರನು ಪತ್ರಕರ್ತನಾಗಲು ಸಾಧ್ಯವಿಲ್ಲ. ಆತ ಮಾಹಿತಿ ಉತ್ಪಾದಕ (ಕಂಟೆಂಟ್ ಕ್ರಿಯೇಟರ್) ಮಾತ್ರ ಆಗುತ್ತಾನೆ. ಆದಕಾರಣ ಸುದ್ದಿಗೊಂದು ನೈತಿಕ ಚೌಕಟ್ಟು ಇದ್ದೇ ಇದೆ.

ADVERTISEMENT

ಮುಖ್ಯವಾಹಿನಿಯಲ್ಲಿರುವ ಹೆಚ್ಚಿನ ಮಾಧ್ಯಮಗಳು ಈಗಲೂ ಇದನ್ನು ಪಾಲಿಸುತ್ತಿವೆ. ಆದರೆ, ಡಿಜಿಟಲ್ ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ನಾಯಿಕೊಡೆಗಳಂತೆ ಸೃಷ್ಟಿಯಾಗಿರುವ ಕೆಲವು ಸುದ್ದಿ ತಾಣಗಳಲ್ಲಿ ಪ್ರಕಟವಾಗುತ್ತಿರುವ ಮಾಹಿತಿಗಳು ಸುದ್ದಿ ಮೌಲ್ಯಕ್ಕೆ ದೂರವಾಗಿವೆ ಎನ್ನುವುದು ಒಪ್ಪಲೇಬೇಕಾದ ವಿಚಾರ.

‘ಯಾರು ಬೇಕಾದರೂ ಪತ್ರಕರ್ತರಾಗಬಹುದು’ ಎಂಬ ವಿಲಕ್ಷಣ ವ್ಯಾಖ್ಯಾನದೊಂದಿಗೆ ಉದ್ಯೋಗ ವಲಯವನ್ನೂ ತನಗೆ ಬೇಕಾದ ಮಾರುಕಟ್ಟೆಯನ್ನೂ ಸೃಷ್ಟಿಸಿದ ಕೀರ್ತಿ ಡಿಜಿಟಲ್ ಮಾಧ್ಯಮಕ್ಕೆ ಸಲ್ಲಲೇಬೇಕು. ಲೈಕ್-ಶೇರ್-ವ್ಯೂ ಎನ್ನುವ ಗುಣಾತ್ಮಕವಲ್ಲದ ತ್ರಿವಳಿ ಸೂತ್ರದೊಂದಿಗೆ ಮಾಹಿತಿಯನ್ನು ತಮಗೆ ಬೇಕಾದ ರೀತಿಯಲ್ಲಿ ಬರೆದು, ತಿರುಚಿ, ಕೂಡಿ-ಕಳೆಯುವ ಲೆಕ್ಕಾಚಾರದಲ್ಲಿರುವ ಡಿಜಿಟಲ್ ಮೀಡಿಯಾ, ಬಹುಶಃ ಸುಳ್ಳು ಮಾಹಿತಿಗೆ ಸುದ್ದಿಯ ರೂಪ ಕೊಡಲಾರಂಭಿಸಿತು.

ಡಿಜಿಟಲ್ ಮೀಡಿಯಾದ ಎದುರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು, ಅವು ಓಡುವ ವೇಗಕ್ಕೆ ತಾಳೆಯಾಗಬೇಕಾದರೆ ಶೀಘ್ರವಾಗಿ ಸುದ್ದಿ ಕೊಡಬೇಕು, ನಿಧಾನವಾಗಿ ಡಿಜಿಟಲ್ ಮೀಡಿಯಾದತ್ತ ಮುಖ ಮಾಡುತ್ತಿರುವ ಜಾಹೀರಾತುದಾರರನ್ನು ಸೆರೆಹಿಡಿಯಬೇಕು ಎನ್ನುವ ಕಾರಣಕ್ಕೆ ಅಂತರ್ಜಾಲದಲ್ಲೂ ತಮ್ಮ ಹಾಜರಿ ಕಡ್ಡಾಯ ಮಾಡಿಕೊಂಡ ಕೆಲ ಮಾಧ್ಯಮಗಳು, ಸುದ್ದಿ ಮೌಲ್ಯದೊಂದಿಗೆ ರಾಜಿ ಮಾಡಿಕೊಳ್ಳಲು ಆರಂಭಿಸಿದವು. ಸಣ್ಣ ಸುದ್ದಿಯನ್ನೂ ಅತಿರೋಚಕವಾಗಿಸಿ, ಮನರಂಜನೆಯ ರೂಪ ನೀಡಿ ಪ್ರಸ್ತುತಪಡಿಸಲಾರಂಭಿಸಿದವು. ಸಾಮಾಜಿಕ ಜಾಲತಾಣಗಳು ಪ್ರಮುಖ ಸುದ್ದಿಮೂಲಗಳಾದವು. ಜಾಲತಾಣಪ್ರಿಯರು ಯಾವುದೇ ನೈತಿಕ ಚೌಕಟ್ಟಿಲ್ಲದೆ ಹಾಕಿದ ವಸ್ತುವಿಷಯಗಳೇ ಮುನ್ನೆಲೆಗೆ ಬರಲಾರಂಭಿಸಿದವು. ಜನರೇ ಮಾಧ್ಯಮಕ್ಕೆ ವಿಷಯವನ್ನು ಕೊಡಲಾರಂಭಿಸಿದರು. ಈ ಬೆಳವಣಿಗೆಯು ಸುದ್ದಿ ಮೌಲ್ಯದ ಕುಸಿತಕ್ಕೂ ಪರೋಕ್ಷವಾಗಿ ಕಾರಣವಾಯಿತು.

ವಿಪರ್ಯಾಸ ಎಂದರೆ, ಈ ಸೂಕ್ಷ್ಮ ಸಂಗತಿಯನ್ನು ಅರ್ಥ ಮಾಡಿಕೊಳ್ಳದ ಜನಸಾಮಾನ್ಯರು, ಪತ್ರಿಕೋದ್ಯಮವನ್ನೇ ಹಳಿಯಲು ಆರಂಭಿಸಿದರು. ಇವೆಲ್ಲದರ ಪರಿಣಾಮ ಇಡೀ ಪತ್ರಿಕೋದ್ಯಮಕ್ಕೇ ಹಣೆಪಟ್ಟಿ ಕಟ್ಟಲಾಯಿತು. ಆದರೆ ಈ ಎಲ್ಲಾ ನಕಾರಾತ್ಮಕ ಬೆಳವಣಿಗೆಯ ನಡುವೆಯೂ ಮಾಹಿತಿಯ ವಾಸ್ತವಾಂಶವನ್ನು ತಿಳಿಯಲು, ಸುಳ್ಳು ಮಾಹಿತಿಯ ಪ್ರಸಾರ ತಡೆಯಲು ಹಲವಾರು ಪ್ರಯತ್ನಗಳು ನಡೆಯುತ್ತಿವೆ. ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ರವಾನೆಗೆ ಹಾಕಿರುವ ಕಡಿವಾಣ, ಸಂಶಯಾತ್ಮಕ ಫೇಸ್‌ಬುಕ್‌ ಪೋಸ್ಟ್‌ಗಳ ಬಗೆಗಿನ ಕ್ರಮಗಳು ಹಾಗೂ ಗೂಗಲ್ ವ್ಯಾಪಕವಾಗಿ ನಡೆಸುತ್ತಿರುವ ‘ಸತ್ಯಶೋಧನೆ’ ತರಬೇತಿ ಕಾರ್ಯಕ್ರಮಗಳು ಅಂತಹ ಕೆಲವು ಪ್ರಯತ್ನಗಳು. ಬಹುಶಃ ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮಗಳೇ ವಾಸ್ತವಾಂಶವಿಲ್ಲದ ಮಾಹಿತಿ ರವಾನೆಗೆ ಕಡಿವಾಣವಾಗಬಹುದೇನೋ ಎಂಬುದು ಆಶಾಭಾವನೆ.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಎಸ್‍ಡಿಎಂ ಕಾಲೇಜು, ಉಜಿರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.