ಆಲ್ಸೇಶಿಯನ್ ತಳಿಯ ಆ ಶ್ವಾನವನ್ನು ಆಸ್ಪತ್ರೆಗೆ ಕರೆತಂದ ಯುವತಿಯ ಮುಖ ಬಾಡಿತ್ತು. ಹಿಂದಿನ ದಿನ ಅದಕ್ಕೆ ಗರ್ಭಪಾತವಾಗಿತ್ತು. ದಿನ ತುಂಬದ ನಾಲ್ಕು ಮರಿಗಳೂ ಹುಟ್ಟುವಾಗಲೇ ಅಸುನೀಗಿದ್ದವು!
‘ಮೂರು ದಿನದಿಂದ ಸರಿಯಾಗಿ ಊಟ ಮಾಡ್ತಿಲ್ಲ. ಒತ್ತಾಯದಿಂದಲೇ ತಿನ್ನಿಸಬೇಕು. ತುಂಬಾ ಮಂಕಾಗಿದೆ. ಸ್ವಲ್ಪ ಶಬ್ದ ಆದ್ರೂ ಸಾಕು ನಡುಗಕ್ಕೆ ಶುರುಮಾಡುತ್ತೆ’ ತನ್ನ ಮುದ್ದು ಪ್ರಾಣಿಯ ಪರಿಸ್ಥಿತಿ ವಿವರಿಸುವಾಗ ಒಡತಿಯ ಕಂಗಳು ತುಂಬಿಕೊಂಡಿದ್ದವು. ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಂತೆಯೇ ಆ ಶ್ವಾನಕ್ಕೆ ಮಾನಸಿಕ ಆಘಾತವಾಗಿರುವುದು ಖಚಿತವಾಗಿತ್ತು. ಯಾವುದೋ ಸಂಭ್ರಮಕ್ಕೆ ಪಕ್ಕದ ಮನೆಯವರು ಹಚ್ಚಿದ ಪಟಾಕಿಗಳ ಪರಿಣಾಮವಿದು. ಕಿವಿಗಪ್ಪಳಿಸಿದ ಭಾರಿ ಸದ್ದಿಗೆ ಬೆದರಿದ ನಾಯಿಯ ಸೂಕ್ಷ್ಮ ಮನಸ್ಸಿಗೆ ಗಾಸಿಯಾಗುವುದರ ಜೊತೆಗೆ ರಸದೂತಗಳು ಏರುಪೇರಾಗಿ ಗರ್ಭ ಜಾರಿತ್ತು. ಪ್ರಾಣಿಗಳಲ್ಲಿ ಆಪ್ತಸಮಾಲೋಚನೆಗೆ ಮಿತಿಗಳಿವೆ. ಶೀಘ್ರ ಚೇತರಿಕೆಗೆ ಮತ್ತಷ್ಟು ನಿಕಟ ಸಾಂಗತ್ಯದ ಅಗತ್ಯವನ್ನು ಆ ಯುವತಿಗೆ ವಿವರಿಸಿದೆ.
ನಮ್ಮ ಪಕ್ಕದ ಮನೆಯ ನಾಯಿಯೂ ಶಬ್ದದ ಅಬ್ಬರಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಸೌಮ್ಯ ಸ್ವಭಾವದ ಅದು ಸಿಡಿಮದ್ದಿನ ಸದ್ದಿಗೆ ಬೆಚ್ಚಿಬಿದ್ದು ಕೂಗಲು ಆರಂಭಿಸುತ್ತದೆ. ಪಟಾಕಿ ಶಬ್ದ ಸಂಪೂರ್ಣ ನಿಲ್ಲುವವರೆಗೂ ಬಾಯಿ ಮುಚ್ಚದು. ಇದನ್ನು ಕಂಡಾಗಲೆಲ್ಲಾ ಸಂಕಟವಾಗುತ್ತದೆ! ಚಿಕಿತ್ಸೆಗೆಂದು ಕರೆತಂದ ಮತ್ತೊಂದು ನಾಯಿಯ ದೇಹದಲ್ಲೆಲ್ಲಾ ದೊಡ್ಡ ದೊಡ್ಡ ಗುಳ್ಳೆಗಳು. ಕೆಲವು ಒಡೆದು ವ್ರಣಗಳಾಗಿದ್ದವು. ಇದಕ್ಕೆ ಕಾರಣ ಸಹ ಪಟಾಕಿ ಸದ್ದೇ. ಸರಣಿ ಸ್ಫೋಟಕ್ಕೆ ಬೆದರಿ ಕುತ್ತಿಗೆಯ ಬೆಲ್ಟ್ ತುಂಡರಿಸಿಕೊಂಡು ಹೊರಗೋಡಿದ್ದು, ಮೂರು ದಿನಗಳ ನಂತರವಷ್ಟೇ ಮರಳಿತ್ತು. ಕಾಡಿನಲ್ಲಿ ಕೀಟಗಳಿಂದ ಕಚ್ಚಿಸಿಕೊಂಡು ನಂಜೇರಿ ಪರಿಸ್ಥಿತಿ ವಿಷಮಿಸಿತ್ತು!
ಮಾನವ ತನ್ನ ಮೋಜಿಗಾಗಿ ಸುಡುವ ಸಿಡಿಮದ್ದುಗಳ ಕಾರಣ ಪ್ರತಿವರ್ಷವೂ ಇಂತಹದ್ದೇ ಸಾಲು ಸಾಲು ಅವಗಡಗಳು. ಹೌದು, ಖಗ-ಮೃಗಗಳಲ್ಲಿ ಪಟಾಕಿಯ ದುಷ್ಪರಿಣಾಮಗಳು ಜಾಸ್ತಿ. ಇದಕ್ಕೆ ಪ್ರಮುಖ ಕಾರಣ ಅವುಗಳ ಸೂಕ್ಷ್ಮ ಶ್ರವಣೇಂದ್ರಿಯ. ಮಾನವನಿಗೆ ಹೋಲಿಸಿದರೆ ಇವುಗಳ ಶಬ್ದಗ್ರಹಣ ಸಾಮರ್ಥ್ಯ ಹಲವು ಪಟ್ಟು ಹೆಚ್ಚು. ನಮ್ಮ ಕಿವಿಗೆ ಬೀಳದ ಅತಿ ಸಣ್ಣ ಶಬ್ದ ತರಂಗಗಳನ್ನೂ ಇವು ಗ್ರಹಿಸಬಲ್ಲವು. ಪಶುಗಳು ತಮ್ಮ ಅಗಲವಾದ ಹೊರಗಿವಿಗಳನ್ನು ನಿಮಿರಿಸಿ ಆ್ಯಂಟೆನಾದ ರೂಪದಲ್ಲಿ ಬೇಕಾದೆಡೆ ತಿರುಗಿಸಿ ಸ್ಪಷ್ಟವಾಗಿ ಸದ್ದು ಕೇಳಬಲ್ಲವು. ಬೇಟೆಯಾಡಲು, ಶತ್ರುಗಳಿಂದ ರಕ್ಷಿಸಿಕೊಳ್ಳಲು ಪ್ರಕೃತಿ ನೀಡಿದ ವಿಶಿಷ್ಟ ವರದಾನವಿದು. ಆದರೆ ಮಾನವನ ವಿಕೃತಾನಂದದಿಂದ ಈ ವರವೇ ಅವುಗಳಿಗೆ ಶಾಪ ಆಗುತ್ತಿರುವುದು ನಿಜಕ್ಕೂ ದುರಂತ.
ಅಧಿಕ ತೀವ್ರತೆಯಲ್ಲಿ ಕಿವಿಗಪ್ಪಳಿಸುವ ಶಬ್ದದಿಂದ ಪಶುಗಳು ದಿಕ್ಕಾಪಾಲಾಗಿ ಓಡುತ್ತವೆ. ಭಯದಿಂದ ಆಕ್ರಮಣಕ್ಕೆ ಮುಂದಾಗುವುದೂ ಉಂಟು. ಓಡುವಾಗ ಗಾಯಗೊಂಡ, ಕಾಲು ಮುರಿದುಕೊಂಡ, ವಾಹನಗಳಿಗೆ ಸಿಲುಕಿ ಸಾವನ್ನಪ್ಪಿರುವ ಪ್ರಕರಣಗಳು ಹಲವು. ಬೆದರಿದ ಹಸುಗಳಲ್ಲಿ ಅಧಿಕ ಪ್ರಮಾಣದಲ್ಲಿ ಸ್ರವಿಸುವ ಅಡ್ರಿನಲಿನ್ ರಸದೂತ, ಹಾಲು ಸ್ರವಿಸಲು ಅಗತ್ಯವಾದ ಆಕ್ಸಿಟೋಸಿನ್ ಹಾರ್ಮೋನಿಗೆ ತಡೆಯೊ ಡ್ಡುವುದರಿಂದ ಹಾಲಿನ ಇಳುವರಿಯೂ ಕುಸಿಯುತ್ತದೆ. ಪದೇಪದೇ ಭಾರಿ ಸದ್ದು ಅಪ್ಪಳಿಸುತ್ತಿದ್ದರೆ ಪಶು,
ಪಕ್ಷಿಗಳು ಹೃದಯಾಘಾತದಿಂದ ಸಾವನ್ನಪ್ಪುವುದೂ ಉಂಟು. ಅಬ್ಬರದ ಸಂಗೀತವೂ ಸಿಡಿಮದ್ದುಗಳಂತೆ ಕೆಡುಕು ತರುತ್ತಿರುವುದು ಮತ್ತೊಂದು ಆತಂಕಕಾರಿ ಬೆಳವಣಿಗೆ. ಮೆರವಣಿಗೆ, ಜಾತ್ರೆ, ಮನರಂಜನಾ ಕಾರ್ಯಕ್ರಮಗಳಲ್ಲಿ ಡಿ.ಜೆಯಂತಹ ಕಿವಿಗಪ್ಪಳಿಸುವ ಸಂಗೀತ ಮೊಳಗಿಸುತ್ತಾ ಹುಚ್ಚೆದ್ದು ಕುಣಿಯುವುದು ಈಗೆಲ್ಲಾ ಸಾಮಾನ್ಯ ದೃಶ್ಯ. ಸಾಮಾನ್ಯವಾಗಿ 90 ಡೆಸಿಬಲ್‌ಗಿಂತ ಹೆಚ್ಚಿನ ಸಪ್ಪಳ ಕಿವಿಯ ಮೇಲೆ ಬಿದ್ದರೆ ಅದು ಅಪಾಯಕಾರಿ ಎಂದು ಪರಿಗಣಿತವಾಗಿದೆ. ಪಟಾಕಿ, ಡಿ.ಜೆ. ಸಿಸ್ಟಂಗಳಿಂದ ಹೊರಹೊಮ್ಮುವ ಶಬ್ದ 140 ಡೆಸಿಬಲ್‌ಗಿಂತಲೂ ಅಧಿಕ. ಈ ತೀವ್ರತೆಯ ಸದ್ದು ಅತೀವ ಒತ್ತಡಕಾರಿ.
60 ಡೆಸಿಬಲ್‌ಗಿಂತಲೂ ಹೆಚ್ಚಿನ ಸಂಗೀತ ಅಥವಾ ಶಬ್ದವನ್ನು ನಿರಂತರವಾಗಿ ಕೇಳಿದವರಲ್ಲಿ ಅಮಿಗ್ಡಾಲಾ ಸಕ್ರಿಯವಾಗಿರುವುದು ಪತ್ತೆಯಾಗಿದೆ. ಇಂತಹ ಒತ್ತಡವನ್ನು ನಿಭಾಯಿಸಲು ದೇಹವು ಕೆಲವು ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಪರಿಣಾಮವಾಗಿ ರಕ್ತದೊತ್ತಡ ಏರುತ್ತದೆ. ಹೃದಯಬಡಿತ, ರಕ್ತಪರಿಚಲನೆಯಲ್ಲಿ ಏರುಪೇರಾಗು ತ್ತದೆ. ಇದು ಪಾರ್ಶ್ವವಾಯು, ಹೃದಯಾಘಾತ
ದಂತಹ ಅಪಾಯಕ್ಕೆ ತಳ್ಳಬಹುದು ಎನ್ನುತ್ತದೆ ವೈಜ್ಞಾನಿಕ ಅಧ್ಯಯನ.
ಮಾನವನಿಗೆ ಹೋಲಿಸಿದರೆ ಪಶು-ಪಕ್ಷಿಗಳ ಸ್ಥಿತಿ ಮತ್ತಷ್ಟು ಶೋಚನೀಯ. ಸದ್ದು, ಅಬ್ಬರದ ಮೂಲ ಹಾಗೂ ಕಾರಣ ಅವುಗಳ ಅರಿವಿನ ಪರಿಧಿಗೆ ನಿಲುಕದಿರುವುದರಿಂದ ಭೀತಿಯ ಮಟ್ಟ ಜಾಸ್ತಿ. ಹಾಗಾಗಿಯೇ ಅವುಗಳಲ್ಲಿ ಹಠಾತ್ ಸಾವುಗಳೂ ಹೆಚ್ಚು!
ಹಬ್ಬ, ಜಾತ್ರೆ, ವಿಜಯೋತ್ಸವ, ಹೊಸ ವರ್ಷಾಚರಣೆ ಎಂದೆಲ್ಲಾ ಪಟಾಕಿಗಳ ಸದ್ದು ಮೊಳಗುತ್ತಲೇ ಇರುತ್ತದೆ. ಉತ್ಪಾದನೆ, ದಾಸ್ತಾನು, ಬಳಕೆಯ ಹಂತದಲ್ಲಿ ಹಠಾತ್ ಸ್ಫೋಟಗೊಂಡು ಜೀವಹಾನಿ, ಅಂಗವೈಕಲ್ಯಕ್ಕೆ ಕಾರಣವಾಗುವ, ಪರಿಸರವನ್ನು ಮಲಿನಗೊಳಿಸಿ ಸ್ವಾಸ್ಥ್ಯವನ್ನು ಹದಗೆಡಿಸುವ, ಸಿಡಿಸಿದಾಗ ಹೊರಹೊಮ್ಮುವ ಭಾರಿ ಕಂಪನಗಳಿಂದ ಕಟ್ಟಡಗಳಿಗೆ ಹಾನಿ ಉಂಟುಮಾಡುವ ಈ ಮೋಜು ನಿಜಕ್ಕೂ ಬೇಕೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದಾಗಲಷ್ಟೇ ಸದ್ದಿಗೆ ಕಡಿವಾಣ ಬೀಳಬಹುದು.
ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಸರ್ಕಾರಿ ಪಶುಆಸ್ಪತ್ರೆ, ತೀರ್ಥಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.