ADVERTISEMENT

ಗಂಗೆ: ಸಾಧ್ಯವೇ ಸ್ವಾಭಾವಿಕ ಹರಿವು?

ಖಾಸಗಿ ಒಡೆತನದ ಅಣೆಕಟ್ಟುಗಳಿಂದ ಗಂಗಾ ನದಿಯನ್ನು ಕಾಪಾಡಬೇಕಾಗಿದೆ

ಗುರುರಾಜ್ ಎಸ್.ದಾವಣಗೆರೆ
Published 26 ಜನವರಿ 2020, 19:45 IST
Last Updated 26 ಜನವರಿ 2020, 19:45 IST
   

ನದಿಯ ನೀರು ಶುದ್ಧವಾಗಿರಲು ಮತ್ತು ಮಾಲಿನ್ಯಮುಕ್ತವಾಗಿರಲು ಅದು ಹರಿಯುತ್ತಲೇ ಇರಬೇಕು. ತಮ್ಮ ಸ್ವಾಭಾವಿಕ ಹರಿವನ್ನು ಕಳೆದುಕೊಂಡಿರುವ ವಿಶ್ವದ ಅರ್ಧಕ್ಕರ್ಧ ನದಿಗಳು ಮಾಲಿನ್ಯದ ಮಡುಗಳಾಗಿ ನಿಂತಿವೆ. ಅಭಿವೃದ್ಧಿಯ ಅಗತ್ಯಗಳಿಗೆಂದು ನಿರ್ಮಿಸಲಾದ ಅಣೆಕಟ್ಟು, ಉದ್ಯಮಗಳಿಂದಾಗಿ ನಮ್ಮ ಬಹುತೇಕ ನದಿಗಳ ಆರೋಗ್ಯ ಹದಗೆಟ್ಟಿದೆ. ಉತ್ತರ ಭಾರತದ ಜೀವನದಿ ಗಂಗೆ, ಖಾಸಗಿ ಒಡೆತನದ ಅಣೆಕಟ್ಟುಗಳ ಮಾಲೀಕರ ಹಟಮಾರಿ ಧೋರಣೆಯಿಂದ ತನ್ನ ಸ್ವಾಭಾವಿಕ ಹರಿವನ್ನು ಕಳೆದುಕೊಂಡು, ಅಣೆಕಟ್ಟಿನ ಕೆಳಪಾತಳಿಯಲ್ಲಿ ಜೀವಿಸುವ ಅಪರೂಪದ ಜೀವಿಪ್ರಭೇದಗಳನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ.

ಗಂಗಾ ನದಿ ಮೇಲ್ದಂಡೆ ಜಲಾನಯನ ವ್ಯಾಪ್ತಿಗೆ ಬರುವ ಉತ್ತರಾಖಂಡದ ಪೌರಿ– ಘರ್‍ವಾಲ್‍ನ ಅಲಕ್‌ನಂದಾ ಹೈಡ್ರೋಪವರ್ ಕಂಪನಿಯ ಶ್ರೀನಗರಡ್ಯಾಂ, ಚಮೋಲಿ ಜಿಲ್ಲೆಯ ಜಯಪ್ರಕಾಶ್ ಪವರ್ ವೆಂಚರ್ಸ್‌ನ ವಿಷ್ಣುಪ್ರಯಾಗ ಡ್ಯಾಂ ಮತ್ತು ಉತ್ತರ ಕಾಶಿಯ, ರಾಜ್ಯ ಸರ್ಕಾರಿ ಅಧೀನದ ಮನೇರಿಭಾಲಿ ಎರಡನೇ ಹಂತದ ಡ್ಯಾಂಗಳ ಆಡಳಿತ ಮಂಡಳಿಗಳು ತಮ್ಮ ವರಮಾನದ ಸ್ವಾರ್ಥವನ್ನೇ ಮುಂದು ಮಾಡಿ, ಕೇಂದ್ರೀಯ ಜಲ ಆಯೋಗ ಆದೇಶಿಸಿದಷ್ಟು ನೀರನ್ನು ಅಣೆಕಟ್ಟೆಯಿಂದ ಹೊರಬಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿವೆ. ಕಂಪನಿಗಳು ಈ ರೀತಿ ಮಾಡಿದರೆ ಗಂಗಾ ನದಿ ಮತ್ತದರ ಪರಿಸರ ವ್ಯವಸ್ಥೆ ತೀವ್ರವಾಗಿ ಹದಗೆಡಲಿದೆ ಎಂದಿರುವ ‘ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ’ (ಎನ್‌ಎಂಸಿಜಿ), ಆಯೋಗ ಹೇಳಿದಷ್ಟು ನೀರನ್ನು ಅಣೆಕಟ್ಟೆಯಿಂದ ಹೊರಬಿಡಲೇಬೇಕು ಎಂದು ಕೋರ್ಟ್‌ ಮುಂದೆ ವಿವರಿಸಿದೆ.

ಮಳೆಗಾಲ ಹಾಗೂ ಇತರ ದಿನಗಳಲ್ಲಿ ಅಣೆಕಟ್ಟು ಮತ್ತು ಜಲಾಶಯಗಳಿಂದ ಇಂತಿಷ್ಟು ನೀರು ಬಿಡಬೇಕೆನ್ನುವುದನ್ನು ಕೇಂದ್ರೀಯ ಜಲ ಆಯೋಗ ನಿರ್ಧರಿಸುತ್ತದೆ. ವಾರ್ಷಿಕ ಮಳೆ ಪ್ರಮಾಣ, ಅಣೆಕಟ್ಟಿನ ಸಂಗ್ರಹಣಾ ಸಾಮರ್ಥ್ಯ, ವಿದ್ಯುತ್ ಉತ್ಪಾದನೆ, ವ್ಯವಸಾಯ, ಕುಡಿಯುವ ನೀರು ಮತ್ತು ಉದ್ಯಮಗಳ ಬೇಡಿಕೆಗೆ ಬೇಕಾದ ನೀರಿನ ಪ್ರಮಾಣದ ಕುರಿತು ತಜ್ಞರು ತಯಾರಿಸಿರುವ ವರದಿ ಮತ್ತು ಶಿಫಾರಸಿನ ಮೇಲೆ ಹೊರಹರಿವಿನ ಪ್ರಮಾಣ ನಿರ್ಧರಿಸಲಾಗುತ್ತದೆ. ಗಂಗಾ ನದಿಯ ವಿಷಯದಲ್ಲಿ ಇದನ್ನು ಪಾಲಿಸಿದರೆ ತಮಗೆ ಹೆಚ್ಚಿನ ಆರ್ಥಿಕ ನಷ್ಟ ಸಂಭವಿಸುತ್ತದೆ ಎಂದಿರುವ ಅಣೆಕಟ್ಟೆಗಳ ಅಧಿಕಾರಿಗಳು, ಆಯೋಗದ ಶಿಫಾರಸನ್ನು ತಿರಸ್ಕರಿಸಿದ್ದಾರೆ.

ADVERTISEMENT

2,525 ಕಿ.ಮೀ. ಉದ್ದ ಹರಿಯುವ ಗಂಗಾ ನದಿಗೆ ಆರು ಬೃಹತ್ ಅಣೆಕಟ್ಟು ಮತ್ತು ನಾಲ್ಕು ಜಲಾಶಯಗಳನ್ನು ನಿರ್ಮಿಸಲಾಗಿದೆ. ಅಲಕ್‌ನಂದಾ ಕಂಪನಿಯು ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ 330 ಮೆ.ವಾ. ಶಕ್ತಿಯನ್ನು ರಾಯಧನದ ರೂಪದಲ್ಲಿ ಉಚಿತವಾಗಿ ನೀಡುತ್ತಿದೆ. ಆಯೋಗದ ನಿಬಂಧನೆ ಅವೈಜ್ಞಾನಿಕ ಮತ್ತು ತಾನು ಈಗಾಗಲೇ ಉತ್ತರಾಖಂಡ ಹೈಕೋರ್ಟ್‌ನ ಆದೇಶದಂತೆ ಶೇ 15 ರಷ್ಟು ಹೊರಹರಿವನ್ನು ಕಾಪಾಡಿಕೊಂಡಿರುವುದರಿಂದ ಆಯೋಗದ ಶಿಫಾರಸನ್ನು ಪಾಲಿಸಲು ಸಾಧ್ಯವೇ ಇಲ್ಲ ಎಂದು ಹಟ ಹಿಡಿದಿದೆ. ಅಣೆಕಟ್ಟು ಮತ್ತು ಜಲಾಶಯ ಗಳ ದಿನನಿತ್ಯದ ಹೊರಹರಿವಿನ ಮಾಹಿತಿ ಪಡೆದಿರುವ ಆಯೋಗವು ಅಲಕ್‌ನಂದಾ ಕಂಪನಿ ಹೇಳಿರುವುದು ಸುಳ್ಳು ಎಂದಿದೆ. ಅಣೆಕಟ್ಟುಗಳು ಆಯೋಗದ ಆದೇಶ ಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಮಾಲೀಕರಿಗೆ ಆಜ್ಞೆ ವಿಧಿಸಬೇಕೆಂದು ಒತ್ತಾಯಿಸಿದೆ.

ಅವರು ಕೇಳಿದಷ್ಟು ನೀರು ಹರಿಸಿದ ಮೇಲೆ ನಾವು ಯಾವುದರಿಂದ ವಿದ್ಯುತ್ ತೆಗೆಯಬೇಕು ಎಂದು ವ್ಯಂಗ್ಯ ವಾಡಿರುವ ಖಾಸಗಿ ಡ್ಯಾಂನ ಮಾಲೀಕರು, ನಮಗಾಗುವ ಆರ್ಥಿಕ ನಷ್ಟವನ್ನು ಯಾರು ಭರಿಸುತ್ತಾರೆ ಎಂದು ನ್ಯಾಯಾಲಯದಲ್ಲಿ ಪಾಟೀ ಸವಾಲು ಹಾಕಿದ್ದಾರೆ. ರಾಷ್ಟ್ರೀಯ ಸಂಪತ್ತೆನಿಸಿರುವ ನದಿಯ ಸ್ವಾಭಾವಿಕ ಹರಿವನ್ನೇ ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಅಪರಾಧವಾಗುತ್ತದೆ ಎಂದಿರುವ ಎನ್‍ಎಂಸಿಜಿಯ ನಿರ್ದೇಶಕ ರಾಜೀವ್ ರಂಜನ್ ಮಿಶ್ರಾ, ಆಗಲಿರುವ ನಷ್ಟಕ್ಕೆ ಪರಿಹಾರ ಪಡೆಯಲು ಸರ್ಕಾರವನ್ನು ಸಂಪರ್ಕಿಸುವ ಎಲ್ಲ ಅವಕಾಶಗಳೂ ಕಂಪನಿಗಳಿಗಿವೆ ಎಂದು ತಿರುಗೇಟು ನೀಡಿದ್ದಾರೆ. ಆದೇಶ ಪಾಲನೆ ಯಾಗದಿದ್ದರೆ ಅಣೆಕಟ್ಟಿನ ಎಲ್ಲ ಚಟುವಟಿಕೆಗಳನ್ನೂ ನಿಲ್ಲಿಸಿ ದಂಡ ವಿಧಿಸಲಾಗುವುದು ಎಂದಿರುವ ಮತ್ತೊಬ್ಬ ನಿರ್ದೇಶಕ ಮಥುರಿಯಾ, ಯಾವ ಕಾರಣಕ್ಕೂ ಷರತ್ತು ಸಡಿಲಿಸುವುದಿಲ್ಲ ಎಂದಿದ್ದಾರೆ.

ವಿಶ್ವದ ಬೇರೆಲ್ಲೂ ಸಿಗದ ಘರಿಯಾಲ್ ಮೊಸಳೆಗಳು ಗಂಗಾ ನದಿಯಲ್ಲಿ ಮಾತ್ರ ಇವೆ. ಎರಡು ದಶಕಗಳ ಹಿಂದೆ ಸಾವಿರಗಳಲ್ಲಿದ್ದ ಅವುಗಳ ಸಂಖ್ಯೆ ಈಗ ನದಿಯ ಅತಿಯಾದ ಮಾಲಿನ್ಯ ಮತ್ತು ಹರಿವಿನ ಕೊರತೆಯಿಂದ ಐದುನೂರಕ್ಕಿಳಿದಿದೆ. ಕುಡಿಯಲು, ವ್ಯವಸಾಯ, ಉದ್ಯಮ, ವಿದ್ಯುತ್ ಉತ್ಪಾದನೆಗೆ ನೀರು ಕೊಡುವುದರ ಜೊತೆಗೆ 2020ರ ಅಂತ್ಯಕ್ಕೆ ಗಂಗಾ ನದಿಯ ಪುನಶ್ಚೇತನ ಮುಗಿಯಬೇಕಿದೆ. ಕಂಪನಿಗಳಿಗಾಗುವ ಆರ್ಥಿಕ ನಷ್ಟವನ್ನು ಇಂದಲ್ಲ ನಾಳೆ ತುಂಬಿಕೊಡಬಹುದು. ಆದರೆ ನದಿಯಲ್ಲಿನ ಅಪರೂಪದ ಜೀವಿಪ್ರಭೇದ ಶಾಶ್ವತವಾಗಿ ಕಣ್ಮರೆ ಯಾದರೆ ಅದನ್ನೆಲ್ಲಿಂದ ತರುವುದು ಎಂದು ಪ್ರಶ್ನಿಸಿರುವ ಪರಿಸರವಾದಿಗಳು, ಹೊರಹರಿವಿನ ಪ್ರಮಾಣ ಏರಿಸಿ ನದಿಯನ್ನು ಕಾಪಾಡಿ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.