ಭಾರತೀಯ ಸೇನೆಗೆ ಇದೇ ಮೊದಲ ಬಾರಿಗೆ ಸದ್ಯದಲ್ಲೇ ಮಹಿಳಾ ಯೋಧರು ಸೇರ್ಪಡೆಯಾಗಲಿರುವುದು ಹಾಗೂ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆ ಗ್ರಾಮದ ಹೊರವಲಯದ ಗುಡಿಸಲಿನಲ್ಲಿ ವಾಸಿಸುವ ಅಲೆಮಾರಿ ಸಮುದಾಯದ ಮಹಿಳೆ ಗುತ್ತೆವ್ವ ದುರಗಮುರಗಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಸುದ್ದಿಗಳು (ಪ್ರ.ವಾ., ಏ. 2) ಮಹಿಳೆಯರ ಸಬಲೀಕರಣದಲ್ಲಿ ಸಾಧಿಸಿರುವ ಯಶಸ್ಸಿನ ಸಂಕೇತಗಳಂತೆ ಗೋಚರಿಸುತ್ತಿವೆ. ಶಿಕ್ಷಣ, ಉದ್ಯೋಗ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಒದಗಿಸಲಾಗಿರುವ ಮೀಸಲಾತಿಯ ಕಾರಣದಿಂದ ನಮ್ಮ ಸಮಾಜವು ಲಿಂಗತ್ವ ಸಮಾನತೆ ಯನ್ನು ಸಾಧಿಸುವ ದಿಸೆಯಲ್ಲಿ ಪ್ರಯತ್ನ ನಡೆಸಿದೆ. ಆದರೂ ಲಿಂಗತ್ವ ಸಮಾನತೆಯನ್ನು ಸಾಧಿಸುವ ಹಾದಿ ಇನ್ನೂ ದೀರ್ಘವಾಗಿಯೇ ಇದೆ.
ಬಾಹ್ಯ ನೋಟಕ್ಕೆ ಲಿಂಗತ್ವ ಸಮಾನತೆಯ ಅಸ್ತಿತ್ವ ಗೋಚರವಾದರೂ ಆಳದಲ್ಲಿ ವಿವಿಧ ರೀತಿಯ ಅಸಮಾನತೆಗಳು ಹುದುಗಿರುತ್ತವೆ. ಅವುಗಳನ್ನು ಗುರುತಿಸಲು ಲಿಂಗತ್ವದ ಮಸೂರವನ್ನು ಹಾಕಿಕೊಂಡು ಚಿಕಿತ್ಸಾತ್ಮಕವಾಗಿ ನೋಡಬೇಕಾಗು ತ್ತದೆ. ಉದಾಹರಣೆಗೆ, ಶಿಕ್ಷಣ ಇಲಾಖೆಯ 2019- 20ನೇ ಸಾಲಿನ ಅಧಿಕೃತ ಅಂಕಿ-ಅಂಶದ ಪ್ರಕಾರ, ರಾಜ್ಯದಲ್ಲಿ 1ರಿಂದ 10ನೇ ತರಗತಿಯಲ್ಲಿ ಒಟ್ಟು 54.10 ಲಕ್ಷ ಬಾಲಕರು ದಾಖಲಾಗಿದ್ದರೆ, 50.24 ಲಕ್ಷ ಬಾಲಕಿಯರು ದಾಖಲಾಗಿದ್ದಾರೆ. ಬಾಲಕರಿಗಿಂತ ಒಟ್ಟು 3.86 ಲಕ್ಷದಷ್ಟು ಬಾಲಕಿಯರ ಸಂಖ್ಯೆ ಕಡಿಮೆ ಇರುವುದನ್ನು ಗುರುತಿಸಬಹುದು.
ಯಾವುದೇ ಡೊನೇಶನ್ ಹಾಗೂ ಪ್ರವೇಶಾತಿ ಶುಲ್ಕವಿಲ್ಲದೇ ಮಕ್ಕಳನ್ನು ದಾಖಲು ಮಾಡಬಹುದಾದ ಸರ್ಕಾರಿ ಹಾಗೂ ಅನುದಾನಿತ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಬಾಲಕಿಯರ ಸಂಖ್ಯೆಯು ಬಾಲಕರ ಸಂಖ್ಯೆಗಿಂತ ಹೆಚ್ಚಿದೆ. ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಗಳಲ್ಲಿ ಒಟ್ಟು 80,633 ಬಾಲಕರು ದಾಖಲಾಗಿದ್ದರೆ, ಬಾಲಕಿಯರ ಸಂಖ್ಯೆ 88,417 ಇದೆ. ಅನುದಾನಿತ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 53,146 ಬಾಲಕರು ಹಾಗೂ 68,285 ಬಾಲಕಿಯರು ದಾಖಲಾಗಿದ್ದಾರೆ.
ಡೊನೇಶನ್, ಪ್ರವೇಶಾತಿ ಶುಲ್ಕ ಪಾವತಿ ಮಾಡಬೇಕಾದ ಇಂಗ್ಲಿಷ್ ಮಾಧ್ಯಮ ಅನುದಾನರಹಿತ ಶಾಲೆಗಳಿಗೆ ಪೋಷಕರು ಬಾಲಕಿಯರಿಗಿಂತ ಬಾಲಕರನ್ನು ಹೆಚ್ಚಾಗಿ ದಾಖಲು ಮಾಡುವುದನ್ನು ಗಮನಿಸಬಹುದಾಗಿದೆ. ಅನುದಾನರಹಿತ ಶಾಲೆಗಳ ಇಂಗ್ಲಿಷ್ ಮಾಧ್ಯಮದ 1ರಿಂದ 10ನೇ ತರಗತಿಗಳಲ್ಲಿ 20.37 ಲಕ್ಷ ಬಾಲಕರು, 16.75 ಲಕ್ಷ ಬಾಲಕಿಯರು ದಾಖಲಾಗಿದ್ದಾರೆ. ಇಲ್ಲಿ ಬಾಲಕರ ಸಂಖ್ಯೆಯು 3.62 ಲಕ್ಷದಷ್ಟು ಹೆಚ್ಚಿರುವುದನ್ನು ಗಮನಿಸಬಹುದು.
ಇದರಿಂದ ಪೋಷಕರು ಮಗಳನ್ನು ಸರ್ಕಾರಿ ಅಥವಾ ಅನುದಾನಿತ ಶಾಲೆಗಳ ಇಂಗ್ಲಿಷ್ ಮಾಧ್ಯಮ ಶಾಲೆಗೆ ಕಳುಹಿಸಿದರೆ ಮಗನನ್ನು ಇಂಗ್ಲಿಷ್ ಮಾಧ್ಯಮದ ಅನುದಾನರಹಿತ ಶಾಲೆಗಳಲ್ಲಿ ಕಲಿಯಲು ಹಣ ತೆತ್ತು ಕಳುಹಿಸುತ್ತಾರೆ ಎಂಬುದು ತಿಳಿಯುತ್ತದೆ. ಈ ಕುರಿತಂತೆ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ನಮ್ಮ ಮನೆಯ ಹತ್ತಿರದ ಸಾಮಾನ್ಯ ವರ್ಗದ ಕುಟುಂಬದಲ್ಲಿನ ಪೋಷಕರು ತಮ್ಮ ನಾಲ್ವರು ಹೆಣ್ಣುಮಕ್ಕಳನ್ನು ಸರ್ಕಾರಿ ಶಾಲೆಗೆ ಹಾಗೂ ಮಗನನ್ನು ಪ್ರತಿಷ್ಠಿತ ಖಾಸಗಿ ಶಾಲೆಗೆ ದಾಖಲಿಸಿದ್ದರು. ಈ ಕುರಿತು ಅವರನ್ನು ಪ್ರಶ್ನಿಸಿದಾಗ, ಹೆಣ್ಣುಮಕ್ಕಳಿಗೆ ಸರ್ಕಾರಿ ಶಾಲೆಯೇ ಸಾಕು ಹಾಗೂ ಮಗನು ಖಾಸಗಿ ಶಾಲೆಯಲ್ಲಿ ಓದುವುದು ಅಗತ್ಯವೆಂದೇ ಪ್ರತಿಪಾದಿಸಿದ್ದರು.
ಪಠ್ಯಪುಸ್ತಕಗಳಲ್ಲಿ ಲಿಂಗತ್ವ ಸಮಾನತೆ ಸಾಧಿಸಲು ಪ್ರಜ್ಞಾಪೂರ್ವಕ ಪ್ರಯತ್ನಗಳು ಆಗಿವೆ. ತರಗತಿಯ ಬೋಧನಾ ಪ್ರಕ್ರಿಯೆ, ಆಟದ ಬಯಲಿನಲ್ಲಿ, ಶಾಲೆಯ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಬಾಲಕಿಯರ ಪಾಲ್ಗೊಳ್ಳುವಿಕೆಯಲ್ಲಿ ಲಿಂಗತ್ವ ಅಸಮಾನತೆಗಳು ಇನ್ನೂ ಅನೇಕ ಕಡೆ ಜೀವಂತವಾಗಿರುವುದನ್ನು ಪತ್ತೆಹಚ್ಚಬಹುದಾಗಿದೆ.
ಉದ್ಯೋಗಸ್ಥ ಮಹಿಳೆಯರು ಸ್ತ್ರೀ ಸಬಲೀಕರಣದ ಗುರುತುಗಳಾಗಿ ಗೋಚರಿಸಿದರೂ ಕುಟುಂಬ, ಉದ್ಯೋಗ ಹೀಗೆ ಎರಡೂ ಕಡೆ ಮಹಿಳೆ ದುಡಿದು ಹೈರಾಣಾಗುವ ಪರಿಸ್ಥಿತಿ ಹೆಚ್ಚಿನ ಕುಟುಂಬಗಳಲ್ಲಿದೆ. ಚಿಕ್ಕ ವಯಸ್ಸಿನಿಂದಲೂ ಬಾಲಕರನ್ನು ಮನೆಗೆಲಸದ ಕೌಶಲಕ್ಕೆ ತರಬೇತಿ ನೀಡದೇ ಬೆಳೆಸುವುದು ಇದಕ್ಕೆ ಪ್ರಮುಖ ಕಾರಣವೆನ್ನಬಹುದು. ಸಂಸಾರ ರಥದ ಜೋಡಿ ಚಕ್ರಗಳಾದ ಪುರುಷ, ಸ್ತ್ರೀ ಇಬ್ಬರೂ ಸಮಾನವಾಗಿ ಕೆಲಸಗಳನ್ನು ಹಂಚಿಕೊಂಡು ದುಡಿದಲ್ಲಿ ತಾರತಮ್ಯ ನಿವಾರಣೆ ಸಾಧ್ಯವಾಗುತ್ತದೆ. ಇದನ್ನು ಸಾಧ್ಯವಾಗಿಸಲು ಗಂಡುಮಕ್ಕಳನ್ನು ಕೌಟುಂಬಿಕ ಕೆಲಸ ಕಾರ್ಯಗಳಲ್ಲಿ ಚಿಕ್ಕಂದಿನಿಂದಲೇ ತೊಡಗಿಸಿಕೊಳ್ಳಲು ತಾಯಿ-ತಂದೆಯರು ಮನಸ್ಸು ಮಾಡಬೇಕು.
ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಮಹಿಳೆಯರು ಹೊಂದುವುದು ಲಿಂಗತ್ವ ಸಮಾನತೆಯ ಪ್ರಮುಖ ಸೂಚಕವಾಗಿದೆ. ಕುಟುಂಬ, ಉದ್ಯೋಗ, ಸಮಾಜದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನ ಹಾಗೂ ಸ್ವಾತಂತ್ರ್ಯವನ್ನು ಮಹಿಳೆಯರು ಹೊಂದುವಂತೆ ಮಾಡುವುದು ಪ್ರಮುಖವಾಗಿದೆ.
ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದೆ. ಸಮಾನ ಪ್ರಾತಿನಿಧ್ಯ ನೀಡುವ ದಿಸೆಯಲ್ಲಿ ಪ್ರಮುಖ ಪ್ರಯತ್ನಗಳಾಗಬೇಕು. ಒಟ್ಟಿನಲ್ಲಿ ಸಮಾಜದಲ್ಲಿ ಬೇರೂರಿರುವ ಲಿಂಗತ್ವ ಅಸಮಾನತೆ ಗಳನ್ನು ತೊಡೆದುಹಾಕಲು ಇನ್ನಷ್ಟು ಶ್ರಮವಹಿಸಬೇಕಾದ ಅಗತ್ಯ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.