ರಾಜ್ಯದಲ್ಲಿ ಮಂತ್ರಿಯಾಗಿದ್ದ, ಮುಖ್ಯಮಂತ್ರಿಯಾಗಿದ್ದ ಎಸ್.ಆರ್.ಕಂಠಿ ಅವರು ಶಿಕ್ಷಣ ಪ್ರೇಮಿ
ಯಾಗಿದ್ದರು. ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಸಮಾರಂಭಗಳಲ್ಲಿ ಅವರನ್ನು ಸನ್ಮಾನಿಸಿದಾಗ ಕೊರಳಿಗೆ ಹಾಕಿದ ಹೂವಿನ ಮಾಲೆ ಹಾಗೂ ಶಾಲುಗಳನ್ನು ಹರಾಜಿನಲ್ಲಿ ಮಾರಾಟ ಮಾಡುತ್ತಿದ್ದರು. ಹೀಗೆ ಹರಾಜಿನ ಮೂಲಕ ಬಂದ ದುಡ್ಡನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೀಡುತ್ತಿದ್ದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಣ ಸಂಗ್ರಹಕ್ಕೆ ಅವರು ಈ ವಿಶಿಷ್ಟ ಮಾರ್ಗವನ್ನು ಅನುಸರಿಸುತ್ತಿದ್ದರು. ಇದನ್ನು ‘ಕಂಠಿ ಹರಾಜ್’ ಎಂದು ಜನ ಪ್ರೀತಿಯಿಂದ ಕರೆಯುತ್ತಿದ್ದರು. ಕಂಠಿ ದಂಪತಿ ತಮಗೆ ಬಂದ ಪಿಂಚಣಿ ಹಣವನ್ನೆಲ್ಲ ಶಾಲೆಗಳಿಗೆ ಧಾರೆ ಎರೆದಿದ್ದಾರೆ.
ರಾಜ್ಯ ಸರ್ಕಾರವು ಪಂಚ ಗ್ಯಾರಂಟಿಗಳನ್ನು ಮುನ್ನಡೆಸಲು ಹಣ ಕ್ರೋಡೀಕರಣಕ್ಕೆ ಪರದಾಡು
ತ್ತಿರುವ ಈ ಹೊತ್ತಿನಲ್ಲಿ ಕಂಠಿ ಅವರ ಜನಪರ ನಡೆ ನೆನಪಾಯಿತು.
ರಾಜ್ಯ ಸರ್ಕಾರದ ವರಮಾನ ಹೆಚ್ಚಿಸಲು ಸಲಹೆ ನೀಡಲು ಅರ್ಥಶಾಸ್ತ್ರಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಒಳ್ಳೆಯ ನಿರ್ಧಾರ. ದೊಡ್ಡ ದೊಡ್ಡ ಸಂಸ್ಥೆಗಳು, ಕೈಗಾರಿಕೆಗಳು ವರಮಾನ ವೃದ್ಧಿಗೆ ದಾರಿ ತೋರುವ ತಜ್ಞರ ಪಡೆಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಅನವಶ್ಯಕ ಖರ್ಚುಗಳ ನಿಯಂತ್ರಣ, ಸೋರಿಕೆ ತಡೆಯುವುದು, ಬಡವರಿಗಾಗಿ ಮೀಸಲಾಗಿರುವ ಸೌಲಭ್ಯಗಳನ್ನು ಉಳ್ಳವರು ನಕಲಿ ದಾಖಲೆ ಸೃಷ್ಟಿಸಿ ಪಡೆದುಕೊಳ್ಳುವುದನ್ನು ಪೂರ್ಣ ನಿಲ್ಲಿಸುವುದು ಆರ್ಥಿಕ ಬಿಕ್ಕಟ್ಟು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ನನ್ನ ಸ್ನೇಹಿತರೊಬ್ಬರು ರಸ್ತೆಯ ಬದಿಯಲ್ಲಿರುವ ತಮ್ಮ ಹೊಲದಲ್ಲಿ ಒಂದು ಕಲ್ಯಾಣ ಮಂಟಪವನ್ನು ಕಡಿಮೆ ಖರ್ಚಿನಲ್ಲಿ ಆಕರ್ಷಕವಾಗಿ ನಿರ್ಮಿಸಿದ್ದಾರೆ. ಇದನ್ನು ಮದುವೆ ಸಮಾರಂಭ, ವಸ್ತು ಪ್ರದರ್ಶನ, ಮಾರಾಟ ಮೇಳಗಳಿಗೆ ಬಾಡಿಗೆ ಆಧಾರದಲ್ಲಿ ಕೊಡುತ್ತಾರೆ. ಇದರಿಂದ ಅವರ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ. ಇಂಥ ಸಣ್ಣ ಕ್ರಮಗಳು ಬಹುದೊಡ್ಡ ಬದಲಾವಣೆ ತರಬಲ್ಲವು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳಿಂದ ಬಡ ಕುಟುಂಬಗಳ ಆರ್ಥಿಕ ಭದ್ರತೆಗೆ ನೆರವು ಸಿಕ್ಕಿದೆ. ಮಹಿಳಾ ಸಬಲೀಕರಣಕ್ಕೆ ಒಂದಿಷ್ಟು ಸಹಾಯವಾಗಿದೆ. ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ವರ್ಷದ ಅವಧಿಯಲ್ಲಿ ಸಾಮಾಜಿಕವಾಗಿ ಒಳಿತಾಗಿರುವ ಹಲವು ವರದಿಗಳು ಪ್ರಕಟವಾಗಿವೆ. ಭಾರತದಂತಹ ಸಮಾಜದಲ್ಲಿ ಇಂತಹ ಜನಪರ ಯೋಜನೆಗಳನ್ನು ಸರ್ಕಾರ ಮುಂದುವರಿಸಿಕೊಂಡು ಹೋಗುವುದು ಬಹಳ ಮುಖ್ಯವಾಗುತ್ತದೆ.
ಸಿಬ್ಬಂದಿಯ ಸಂಬಳಕ್ಕೆ ಮಾತ್ರ ಸರ್ಕಾರ ಕರ ಸಂಗ್ರಹ ಮಾಡಬೇಕು, ಅಭಿವೃದ್ಧಿ ಕಾರ್ಯಕ್ಕೆ ವರಮಾನದ ಮೂಲಗಳನ್ನು ಸೃಷ್ಟಿಸಬೇಕು ಎಂದು ಜರ್ಮನ್ ಚಿಂತಕ ಫ್ರೆಡೆರಿಕ್ ಏಂಗೆಲ್ಸ್ ಹೇಳುತ್ತಾರೆ. ಸರ್ಕಾರದ ವರಮಾನ ಹಾಗೂ ಖರ್ಚು ಬಜೆಟ್‌ನಲ್ಲಿ ವಿವರವಾಗಿ ಉಲ್ಲೇಖವಾಗಿರುತ್ತದೆ. ವರಮಾನ ಕ್ರೋಡೀಕರಣ ಸರ್ಕಾರದ ಮಹತ್ವದ ಕಾರ್ಯ. ಎಲ್ಲ ಯೋಜನೆಗಳ ಅನುಷ್ಠಾನ ಇದನ್ನೇ ಅವಲಂಬಿಸಿದೆ. ಸರ್ಕಾರ ಹೊಂದಿದ ಜಮೀನು, ಕಟ್ಟಡಗಳು, ಕೈಗಾರಿಕೆಗಳು, ಸೇವಾ ವಲಯಗಳ ಕಂಪನಿಗಳ ಮೂಲಕ ವರಮಾನ ಗಳಿಸಬಹುದು. ಪರಿಸರಕ್ಕೆ ಧಕ್ಕೆಯಾಗದಂತೆ ಖನಿಜ ಸಂಪತ್ತನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಸರ್ಕಾರವೇ ದಕ್ಷತೆಯಿಂದ ನಿರ್ವಹಿಸಬೇಕು. ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ರಷ್ಯಾ ದೇಶದ ಮುಖ್ಯ ಆದಾಯ ಮೂಲ. ಸರ್ಕಾರವೇ ಇವುಗಳ ಉತ್ಪಾದನೆ ಮತ್ತು ಮಾರಾಟವನ್ನು ನಿರ್ವಹಿಸುತ್ತದೆ.
ರಾಜ್ಯದ ಉದ್ದಗಲಕ್ಕೂ ಇರುವ ಸರ್ಕಾರಿ ಜಮೀನಿನಲ್ಲಿ ಬಹಳಷ್ಟು ಪಾಲನ್ನು ಪ್ರಭಾವಿಗಳು ಆಕ್ರಮಿಸಿಕೊಂಡಿದ್ದಾರೆ. ಗ್ರಾಮೀಣ ಭಾಗಗಳಲ್ಲಿರುವ ಗೋಮಾಳಗಳನ್ನು, ಕೆರೆಗಳ ಸುತ್ತಮುತ್ತಲಿನ ಜಮೀನನ್ನು ಕೂಡ ಇಂಥವರೇ ಕಬಳಿಸಿಕೊಂಡಿದ್ದಾರೆ. ಅಳಿದುಳಿದ ಜಮೀನಿನಲ್ಲಿನ ಕಲ್ಲು, ಮಣ್ಣು ಅಕ್ರಮವಾಗಿ ಸಾಗಣೆ ಆಗುತ್ತಿದೆ. ಐತಿಹಾಸಿಕ ಸ್ಮಾರಕಗಳ ಸುತ್ತಮುತ್ತಲ ಪ್ರದೇಶಗಳನ್ನು ಕೂಡ ಅಲ್ಲಿನ ಕೆಲವರು ಅತಿಕ್ರಮಿಸಿದ ವರದಿಗಳು ಇವೆ. ಈ ಎಲ್ಲ ಜಮೀನುಗಳನ್ನು ರಕ್ಷಿಸುವ ಕೆಲಸ ತುರ್ತಾಗಿ ನಡೆದು, ಇವುಗಳನ್ನು ವರಮಾನದ ಮೂಲಗಳನ್ನಾಗಿ ಪರಿವರ್ತಿಸಬೇಕು.
ಸಂಪನ್ಮೂಲಗಳ ಕ್ರೋಡೀಕರಣದ ಸಂದರ್ಭದಲ್ಲಿ ಕೆಲವು ಎಚ್ಚರಿಕೆಯ ನಡೆ ಅನುಸರಿಸಬೇಕಿದೆ. ಜಮೀನು ಮಾರಾಟ ಮಾಡದೆ, ಆಸ್ತಿ ಉಳಿಸಿಕೊಂಡು ವರಮಾನ ಪಡೆಯುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಆಸ್ತಿ ಮಾರಾಟದಿಂದ ಬಂದ ಹಣವನ್ನು ವರಮಾನವೆಂದು ಪರಿಗಣಿಸಲಾಗದು. ಹಿಂದೆ ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳು ಲಾಟರಿ ಯೋಜನೆ ಜಾರಿಗೆ ತಂದಿದ್ದವು. ವರಮಾನ ಮೂಲವಾಗಿ ಇಂಥ ಋಣಾತ್ಮಕ ಯೋಜನೆಗಳನ್ನು ರೂಪಿಸುವುದು ಸರಿಯಲ್ಲ.
ಕೊರತೆಯೇ ಹೊಸದರ ಆವಿಷ್ಕಾರಕ್ಕೆ ಮೂಲ ಎನ್ನುವ ಮಾತೊಂದಿದೆ. ಗ್ಯಾರಂಟಿ ಯೋಜನೆಗಳಿಗೆ ಭಾರಿ ಪ್ರಮಾಣದಲ್ಲಿ ಹಣದ ಅವಶ್ಯಕತೆ ಇದೆ. ಇದು ಸಮಸ್ಯೆ ಅಲ್ಲ; ಇದೊಂದು ಅವಕಾಶ. ಸರ್ಕಾರದ ಜಮೀನುಗಳ ಸಮಗ್ರ ದಾಖಲೀಕರಣ ಆಗಬೇಕು. ತಜ್ಞರ ಸೇವೆ ಪಡೆದು ಅದನ್ನು ವರಮಾನದ ಮೂಲವಾಗಿ ಅಭಿವೃದ್ಧಿಪಡಿಸಬೇಕು. ವ್ಯಕ್ತಿಯಾಗಲೀ ರಾಜ್ಯವಾಗಲೀ ಹೆಚ್ಚು ಸಂಪನ್ಮೂಲಗಳನ್ನು ಹೊಂದಿ, ಹೆಚ್ಚು ವರಮಾನ ಪಡೆಯಬೇಕು ಎಂಬ ಗುರಿ ಇಟ್ಟುಕೊಳ್ಳುವುದು ಸಕಾರಾತ್ಮಕ ಧೋರಣೆ. ಇದನ್ನು ಸದಾ ಕಾಪಾಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.