ADVERTISEMENT

ಸಂಗತ: ನಡೆಯಲಿ ಸಸ್ಯ ಕ್ವಾರಂಟೈನ್‌!

ಸದ್ದಿಲ್ಲದೇ ನಮ್ಮ ಹೊಲಗಳಿಗೆ ದಾಳಿ ಇಟ್ಟು, ಬೆಳೆ ಇಳುವರಿ ಕುಂಠಿತಗೊಳಿಸುವ ಹೊಸ ವಿದೇಶಿ ಕಳೆಯ ಬಗ್ಗೆ ಸರ್ಕಾರಗಳು ತುರ್ತು ಗಮನಹರಿಸಬೇಕಿದೆ

ಗುರುರಾಜ್ ಎಸ್.ದಾವಣಗೆರೆ
Published 20 ಅಕ್ಟೋಬರ್ 2020, 19:30 IST
Last Updated 20 ಅಕ್ಟೋಬರ್ 2020, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಿಶ್ವ ಹಸಿವು ಸೂಚ್ಯಂಕದ ಪಟ್ಟಿಯಲ್ಲಿ ನಾವು 94ನೇ ಸ್ಥಾನದಲ್ಲಿದ್ದೇವೆ ಎಂಬ ಆತಂಕಕಾರಿ ಸುದ್ದಿಯ ಜೊತೆ ಅಪೌಷ್ಟಿಕತೆ ನಿರ್ಮೂಲನೆಯಲ್ಲೂ ನಮ್ಮ ಸಾಧನೆ ತೃಪ್ತಿಕರವಾಗಿಲ್ಲ, ಅದು ಸರಿ ಹೋಗಲು ಹೆಚ್ಚಿನ ಜನಸಂಖ್ಯೆಯ ರಾಜ್ಯಗಳಲ್ಲಿ ಅಪೌಷ್ಟಿಕತೆ ನಿವಾರಣೆಯ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಸಿವಿನ ಪಟ್ಟಿಯಲ್ಲಿ ನಿರಾಶಾದಾಯಕ ಸ್ಥಾನ ಸಿಗಲು ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳ ಸಾಧನೆ ಕಳಪೆಯಾಗಿರುವುದೂ ಮುಖ್ಯ ಕಾರಣ ಎನ್ನಲಾಗಿದೆ.

ಹಸಿವು ನಿವಾರಿಸಲು ಇಳುವರಿ, ದಾಸ್ತಾನು, ಹಂಚಿಕೆ ಮತ್ತು ಆಹಾರ ಸಾರವರ್ಧನೆಯ ಕೆಲಸಗಳತ್ತ ಹೆಚ್ಚಿನ ಗಮನ ಹರಿಸುತ್ತಿರುವ ಸರ್ಕಾರಗಳು, ಸದ್ದಿಲ್ಲದೇ ನಮ್ಮ ದೇಶದ ಹೊಲಗಳಿಗೆ ದಾಳಿ ಇಟ್ಟು ಬೆಳೆ ಇಳುವರಿ ಕುಂಠಿತಗೊಳಿಸುವ ‘ಇಮೆಕ್ಸ್ ಆಸ್ಟ್ರಾಲಿಸ್’ ಎಂಬ ವಿದೇಶಿ ಕಳೆಯ ಬಗ್ಗೆ ಅಷ್ಟಾಗಿ ಗಮನ ಹರಿಸದಿರುವುದು ಕೃಷಿ ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆಹಾರ ಉತ್ಪಾದನೆಯಲ್ಲಿ ವಿಶ್ವದಲ್ಲಿ ಎರಡನೆಯ ಸ್ಥಾನದಲ್ಲಿರುವ ನಾವು, ಹಸಿವು ನೀಗಿಸುವ ಪಟ್ಟಿಯಲ್ಲಿ ನಿಕೃಷ್ಟ ಸ್ಥಾನದಲ್ಲಿರುವುದು ವಿಪರ್ಯಾಸವೇ ಸರಿ.

ನೋಡಲು ಪಾಲಕ್ ಸೊಪ್ಪಿನಂತೆಯೇ ಕಾಣಿಸುವ, ದಕ್ಷಿಣ ಆಫ್ರಿಕಾ ಮೂಲದ ಎಮೆಕ್ಸ್ ಆಸ್ಟ್ರಾಲಿಸ್ ಸ್ಟೈನ್ ಎಂಬ ವೈಜ್ಞಾನಿಕ ಹೆಸರಿನ ಕಳೆ ಗಿಡಕ್ಕೆ ಬುಲ್ಸ್ ಹೆಡ್, ಡೆವಿಲ್ಸ್ ಥಾರ್ನ್, ಗೋಟ್ ಹೆಡ್, ಟ್ಯಾನರ್ಸ್ ಕರ್ಸ್ ಎಂಬ ಲೋಕಲ್ ಹೆಸರುಗಳಿವೆ. ಮೂರು ಮೊನೆಗಳುಳ್ಳ ಮುಳ್ಳನ್ನು ಹೊಂದಿರುವ ಇದರ ಅಚೆನೆ ಎಂಬ ಹಣ್ಣಿನ ಬೀಜಗಳು ಚಪ್ಪಲಿ, ಟ್ರ್ಯಾಕ್ಟರ್‌ ಟೈರ್, ಮೇಯಲು ಬರುವ ಪ್ರಾಣಿಗಳ ಪಾದ ಮತ್ತು ವಿಮಾನದ ಗಾಲಿಯ ಟೈರುಗಳಿಗೆ ಅಂಟಿಕೊಂಡು ದೇಶ – ದೇಶಗಳಿಗೆ ಪ್ರಯಾಣಿಸಿ, ಸುಮಾರು ಎಂಟು ವರ್ಷಗಳ ಕಾಲ ಮಣ್ಣಿನಲ್ಲೇ ಇದ್ದುಕೊಂಡು ಸಿಕ್ಕ ಸಿಕ್ಕ ಜಾಗದಲ್ಲೆಲ್ಲಾ ಹಬ್ಬಿ ಬೆಳೆದು, ಮಣ್ಣಿನ ಸಾರವನ್ನೆಲ್ಲಾ ಹೀರಿಕೊಳ್ಳುತ್ತವೆ. ಹುಲ್ಲುಗಾವಲುಗಳನ್ನು ನಾಶಪಡಿಸುತ್ತವೆ. ನೀರಿನಲ್ಲಿ ತೇಲುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಸರಣಗೊಳ್ಳುತ್ತವೆ. ಈಗಾಗಲೇ ಆಸ್ಟ್ರೇಲಿಯಾದ ಇಪ್ಪತ್ತು ಲಕ್ಷ ಹೆಕ್ಟೇರ್ ಹುಲ್ಲುಗಾವಲು ಮತ್ತು ಹತ್ತು ಲಕ್ಷ ಹೆಕ್ಟೇರ್‌ನಷ್ಟು ಕೃಷಿ ಭೂಮಿಗೆ ಲಗ್ಗೆ ಹಾಕಿರುವ ಕಳೆಗಿಡ, ಅಲ್ಲಿನ ಗೋಧಿ ಬೆಳೆಗೆ ಕಂಟಕಪ್ರಾಯವಾಗಿದೆ. ಕಳೆಗಿಡದ ಅವಾಂತರವನ್ನು ಆರಂಭದಲ್ಲೇ ಗ್ರಹಿಸಿರುವ ಅಮೆರಿಕ, ಜಪಾನ್, ನ್ಯೂಜಿಲೆಂಡ್, ಆಸ್ಟ್ರೇಲಿಯಾದಲ್ಲಿ ಇದನ್ನು ಹಾನಿಕಾರಕ ಗಿಡ ಎಂದು ಘೋಷಿಸಿ ನಿಯಂತ್ರಣ ಕ್ರಮಗಳತ್ತ ಗಮನ ಹರಿಸಿದ್ದಾರೆ.

ADVERTISEMENT

ಯಾವುದೇ ರೀತಿಯ ವಾತಾವರಣದಲ್ಲಿ ಬೆಳೆಯುವ ಸಾಮರ್ಥ್ಯದ ಈ ಕಳೆಗಿಡ ಭಾರತಕ್ಕೆ 2015ರಷ್ಟು ಹಿಂದೆಯೇ ಪ್ರವೇಶಿಸಿದೆ ಎಂದಿರುವ ಶಿವ ನಾಡಾರ್ ವಿಶ್ವವಿದ್ಯಾಲಯದ ಕೃಷಿ ಕೋರ್ಸ್‌ನ ವಿದ್ಯಾರ್ಥಿಗಳು, ಗ್ರೇಟರ್ ನೊಯ್ಡಾದ ವಿಶ್ವವಿದ್ಯಾಲಯದ ಸುತ್ತಲಿನ ಸಸ್ಯ ವೈವಿಧ್ಯದ ದಾಖಲಾತಿ ಸಮಯದಲ್ಲಿ ಇದನ್ನು ಕಂಡಿದ್ದಾಗಿ ವರದಿ ಮಾಡಿದ್ದಾರೆ. ವಿಶ್ವವಿದ್ಯಾಲಯದ ಸಸ್ಯೋದ್ಯಾನದಲ್ಲೂ ಈ ಗಿಡ ಕಂಡುಬಂದಾಗ ಚಿಂತಿತರಾದ ಅಧ್ಯಾಪಕರು, ಉದ್ಯಾನದ ಸಸಿಗಳಿಗಾಗಿ ಮಣ್ಣು ತಂದ ಪಕ್ಕದ ಹಳ್ಳಿ ಚಿತಾರದಲ್ಲಿ ಸರ್ವೆ ಮಾಡಿದಾಗ, ಅಲ್ಲಿ ಕಳೆಗಿಡದ ಸಮೂಹವೇ ಕಣ್ಣಿಗೆ ಬಿದ್ದಿದೆ.

ವಾಸ್ತವವಾಗಿ 1980ರಷ್ಟು ಹಿಂದೆಯೇ ಇದು ಬಿಹಾರ ಮತ್ತು ಜಮ್ಮು ಕಾಶ್ಮೀರದಲ್ಲಿ ಇದ್ದದ್ದಕ್ಕೆ ದಾಖಲೆ ಇದೆ. ತನ್ನ ಜೀವಿತಾವಧಿಯಲ್ಲಿ ಸುಮಾರು ಸಾವಿರದ ಒಂದು ನೂರು ಬೀಜಗಳನ್ನು ಉತ್ಪಾದಿಸುವ ಸಾಮರ್ಥ್ಯದ ಆಸ್ಟ್ರಾಲಿಸ್ ಉತ್ತರ ಭಾರತದ ರಾಜ್ಯಗಳಿಗೆ ಹಬ್ಬಿದ್ದು, ಇದನ್ನು ಹೀಗೇ ಬಿಟ್ಟರೆ, ದೇಶದ ಶೇ 60ರಷ್ಟು ಕೃಷಿ ಉತ್ಪನ್ನವನ್ನು ಹಾಳುಮಾಡಬಲ್ಲದು ಎಂಬ ಆತಂಕ ಶುರುವಾಗಿದೆ.

ವಿದೇಶಗಳಿಂದ ಬಂದಿರುವ ಪಾರ್ಥೇನಿಯಂ, ಲಂಟಾನಾ, ವಾಟರ್ ಹಯಸಿಂಥ್, ಯೂಪಟೋರಿಯಂ ಮತ್ತು ಬಳ್ಳಾರಿ ಜಾಲಿ ಕಳೆಗಿಡಗಳು ನಮ್ಮ ಹೊಲ, ಗದ್ದೆ, ಬಯಲು, ಕಾಡು, ಕೆರೆಗಳನ್ನೆಲ್ಲಾ ಈಗಾಗಲೇ ಆವರಿಸಿಕೊಂಡು ಪರಿಸರ ವ್ಯವಸ್ಥೆಯನ್ನು ಹಾಳುಮಾಡಿ ಜನ – ಜಾನುವಾರುಗಳ ಆರೋಗ್ಯವನ್ನೂ ಕೆಡಿಸಿವೆ. ಹೊಸದಾಗಿ ಸೇರ್ಪಡೆಗೊಂಡಿರುವ ಆಸ್ಟ್ರಾಲಿಸ್ ಕಳೆಯನ್ನು ನಿಯಂತ್ರಿಸಲು ಯುದ್ಧದೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದಿರುವ ಕೃಷಿ ತಜ್ಞರು, ವಿದೇಶಗಳಲ್ಲಿರುವಂತೆ ಸಸ್ಯ ಕ್ವಾರಂಟೈನ್ ಕ್ರಮವನ್ನು ನಮ್ಮಲ್ಲೂ ಅನುಸರಿಸಬೇಕು, ಆಮದಾಗುವ ಸಸ್ಯ - ಬೀಜಗಳನ್ನು ವಿಮಾನ ನಿಲ್ದಾಣ ಗಳಲ್ಲಿಯೇ ಕ್ವಾರಂಟೈನ್ ಮಾಡಿ ಕಳೆಗಿಡ, ಅದರ ಬೀಜ, ಕ್ರಿಮಿ ಅಥವಾ ರೋಗಕಾರಕಗಳಿವೆಯೇ ಎಂದು ಕೂಲಂಕಷವಾಗಿ ಪರೀಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಆಸ್ಟ್ರೇಲಿಯಾದವರು ಈ ವಿಷಯದಲ್ಲಿ ಎಷ್ಟು ಜಾಗರೂಕರಾಗಿದ್ದಾರೆ ಎಂದರೆ, ಏರ್‌ಪೋರ್ಟಿಗೆ ಬಂದಿಳಿಯುವ ಪ್ರತಿಯೊಬ್ಬ ಪ್ರಯಾಣಿಕನ ಶೂ- ಚಪ್ಪಲಿ ಗಳನ್ನೂ ಪರೀಕ್ಷಿಸುತ್ತಾರೆ. ಏಕೆಂದರೆ, ಕಳೆ ಬೀಜಗಳು ಒಂದು ದೇಶದಿಂದ ಇನ್ನೊಂದಕ್ಕೆ ಸುಲಭವಾಗಿ ಪ್ರಯಾಣಿಸುವುದು ಚಪ್ಪಲಿಯಿಂದಲೇ!

ಅಕಾಲಿಕ ಮಳೆ, ಅತಿವೃಷ್ಟಿ, ಬರಗಾಲ, ಮಣ್ಣಿನ ಸವಕಳಿ, ನಕಲಿ ಬೀಜ, ಸಾರ ಕೆಡಿಸುವ ರಾಸಾಯನಿಕ ಗೊಬ್ಬರ, ಬೆಳೆಸಾಲ, ಕಡಿಮೆಯಾಗುತ್ತಿರುವ ಕೃಷಿಭೂಮಿ, ಕೃಷಿಯಿಂದ ವಿಮುಖನಾಗುತ್ತಿರುವ ರೈತ, ಸಿಗದ ಬೆಂಬಲ ಬೆಲೆಯ ಸಂಕ್ರಮಣ ಕಾಲದಲ್ಲಿ ರಾಕ್ಷಸ ಕಳೆಗಿಡ ವಕ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.