ADVERTISEMENT

ಸಂಗತ: ಪಡಿತರ ವಲಯಕ್ಕಿರಲಿ ‘ರಾಗಿ ಭಾಗ್ಯ’

ಪಡಿತರ ಚೀಟಿದಾರರಿಗೆ ಬಹೂಪಯೋಗಿ ರಾಗಿಯ ಬದಲು ಪೂರ್ತಿ ಅಕ್ಕಿಯನ್ನೇ ಕೊಡಿ ಎನ್ನುವ ಬೇಡಿಕೆ ಎಷ್ಟು ಸರಿ?

ಹೊರೆಯಾಲ ದೊರೆಸ್ವಾಮಿಮೈಸೂರು
Published 5 ಮೇ 2021, 19:40 IST
Last Updated 5 ಮೇ 2021, 19:40 IST
Sangat 06-05-21
Sangat 06-05-21   

ರಾಜ್ಯ ಸರ್ಕಾರವು ಬಿಪಿಎಲ್ ಪ‍ಡಿತರ ಚೀಟಿದಾರರಿಗೆ ಘಟಕ ಒಂದಕ್ಕೆ 5 ಕೆ.ಜಿ. ಅಕ್ಕಿಗೆ ಬದಲಾಗಿ 2 ಕೆ.ಜಿ. ಅಕ್ಕಿ ಮತ್ತು 3 ಕೆ.ಜಿ. ರಾಗಿ, ಉತ್ತರ ಕರ್ನಾಟಕ ಭಾಗಕ್ಕೆ ರಾಗಿಯ ಬದಲು ಜೋಳ ಕೊಡಲು ತೀರ್ಮಾನಿಸಿದೆ. ಈ ಬಗ್ಗೆ ತಕರಾರು ಎತ್ತಿರುವ ಕೆಲವರು, ಮೊದಲಿನಂತೆ 5 ಕೆ.ಜಿ. ಅಕ್ಕಿಯನ್ನೇ ಕೊಡಬೇಕು ಎಂದಿದ್ದಾರೆ.

ರಾಗಿ ನಮ್ಮ ನಾಡಿನ, ವಿಶೇಷವಾಗಿ ದಕ್ಷಿಣ ಕರ್ನಾಟಕದ ಮುಖ್ಯ ಆಹಾರ. ರಾಗಿ ಮಾತ್ರವಲ್ಲ ನವಣೆ, ಸಾಮೆ, ಕಂಬು, ಅರ್ಕ ಈ ಕೆಲವಾರು ‘ಚಿಕ್ಕುಚಿಲವಾನ’ ಕುಟುಂಬ ವರ್ಗಕ್ಕೆ ಸೇರಿದ ಧಾನ್ಯಗಳು (ಈಗ ನಗರೀಕರಣಗೊಂಡು ‘ಸಿರಿಧಾನ್ಯ’ ಎಂಬ ಅಪಭ್ರಂಶ ಪದವಾಗಿದೆ) ನಮ್ಮ ನಾಡಿನ ಬೇಸಾಯ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ರಾಗಿ ಅಂಬಲಿ, ರಾಗಿ ರೊಟ್ಟಿ, ರಾಗಿ ದೋಸೆ, ರಾಗಿ ಕಡಬು, ರಾಗಿ ಹುರಿಟ್ಟು, ರಾಗಿ ಹಲ್ವ, ರಾಗಿ ಬಿಸ್ಕತ್ತು, ರಾಗಿ ಪೇಯ (ರಾಗಿ ಮಾಲ್ಟ್), ರಾಗಿ ಮುದ್ದೆ ಹೀಗೆ ನಾನಾ ಪ್ರಕಾರಗಳಲ್ಲಿ ಆಹಾರವಾಗಿ ಅದನ್ನು ಬಳಸುವ ಪದ್ಧತಿ ಸಮಾಜದಲ್ಲಿ ಇದೆ. ಅಷ್ಟೇ ಅಲ್ಲ, ಹಣೆಗೆ ಬೊಟ್ಟು ಇಡುವ ಸಾದು ತಯಾರಿಕೆಗೂ ಅದು ಈ ಹಿಂದೆ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ‘ಕಾಡಿಗೆ’ ತಯಾರಿಸುವಲ್ಲೂ ಅದು ಮೂಲ ಕಚ್ಚಾ ಪದಾರ್ಥವಾಗುತ್ತಿತ್ತು.

ಹೀಗೆ ಬಹೂಪಯೋಗಿಯಾದ ರಾಗಿ ನಮ್ಮ ದೇಶದ ಹವಾಮಾನಕ್ಕೆ ಅನುಗುಣವಾಗಿ ಬೆಳೆದು ಜನರ ಬದುಕಿಗೆ ಬೆನ್ನೆಲುಬಾಗಿದೆ. ರಾಗಿಯು ತಂಪಿನ ಧಾನ್ಯವಾಗಿದ್ದು, ದೇಶದ ಮತ್ತು ದೇಹದ ಉಷ್ಣತೆಗೆ ಎದುರಾಗಿ ನಿಲ್ಲುವ ಗುಣವನ್ನು ಸಹಜಸ್ವಭಾವವಾಗಿ ಹೊಂದಿದೆ. ಈ ಇಂಡೊ- ಆಫ್ರಿಕ ಚಿಕ್ಕುಚಿಲವಾನವನ್ನು ಮತ್ತಷ್ಟು ಉತ್ಕೃಷ್ಟ ಮಾಡಿ ‘ಅನ್ನಪೂರ್ಣ’ ಎಂಬ ಹೊಸ ತಳಿಯನ್ನು ಕಂಡುಹಿಡಿದವರು ನಮ್ಮವರೇ ಆದ ದಿವಂಗತ ರಾಗಿ ಲಕ್ಷ್ಮಣಯ್ಯನವರು. ಬಡವರ ಆಹಾರದ ಮೌಲ್ಯವರ್ಧಿತ ತಳಿಯನ್ನು ಸಂಶೋಧಿಸಿದ ಪ್ರಾಂಜಲ ಮನಸ್ಸಿನ ದಲಿತ ವಿಜ್ಞಾನಿ.

ADVERTISEMENT

ರಾಗಿ ನಮ್ಮ ಜನಜೀವನದಲ್ಲಿ ಬೆರೆತುಹೋಗಿರುವುದನ್ನು, ನಾನಾ ಜನಪದೀಯ ಹೇಳಿಕೆಗಳು ಸಮರ್ಥಿಸುತ್ತವೆ. ‘ರಾಗಿ ಉಂಡೋನು ನಿರೋಗಿ’, ‘ರಾಗಿ ಮುದ್ದೆ ಹೊಂಗೆ ನೆಳ್ಳಿನ ನಿದ್ದೆ’, ‘ರಾಗಿ ಮುದ್ದೆ ಕಣ್ತುಂಬ ನಿದ್ದೆ’, ‘ಹಿಟ್ಟಂ ಉಂಡಂ ಬೆಟ್ಟಂ ಕಿತ್ತಿಟ್ಟಂ’... ಈ ಎಲ್ಲ ಮಾತುಗಳು ರಾಗಿಯೊಂದಿಗಿರುವ ನಮ್ಮ ಜನಪದರ ತಾದಾತ್ಮ್ಯ ಭಾವವನ್ನು ಹೇಳುತ್ತವೆ.

ರಾಗಿಯು ಸಾಮಾನ್ಯವಾಗಿ ಕಪ್ಪಾಗಿರುವುದರಿಂದಲೊ ಏನೊ (ಕೆಂಪು ರಾಗಿಯೂ ಇದೆ) ಅದನ್ನು ಕೀಳಾಗಿ ಪರಿಗಣಿಸಿರಬಹುದೆಂದು ತೋರುತ್ತದೆ. ಆದುದರಿಂದಲೇ, ತನ್ನ ಸಮಕಾಲೀನ ಸಮಾಜವನ್ನು ಚಿಕಿತ್ಸಕ ದೃಷ್ಟಿಕೋನದಿಂದ ನೋಡಿದ ಹರಿದಾಸರಲ್ಲಿ ಪ್ರಮುಖರಲ್ಲೊಬ್ಬರಾದ ಕನಕದಾಸರು ಜಾತಿ ಮೇಲುಕೀಳುಗಳ ತರತಮ ಭೇದವನ್ನು ಅಕ್ಕಿ (ವ್ರೀಹಿ) ಮತ್ತು ರಾಗಿಯ (ರಾಘವ) ಕಲಹದ ಒಂದು ರೂಪಕ ಕಾವ್ಯವಾಗಿ ‘ರಾಮಧಾನ್ಯ’ ಎಂಬ ವಿಶಿಷ್ಟ ಕಾವ್ಯವನ್ನು ರಚಿಸಿರುವರು. ‘ರಾಮಧಾನ್ಯ’ ಎಂಬ ಹೆಸರಿನ ಈ ಕೃತಿಯ ಮೂಲಕ, ಕೀಳೆಂಬ ಕುಲದ ಪ್ರತಿನಿಧಿಯಾದ ರಾಗಿಯ ಮಹತ್ವವನ್ನು ಸಾರುವುದರೊಂದಿಗೆ ಕನಕದಾಸರು ಅದರ ಶ್ರೇಷ್ಠತೆಯನ್ನು ಎತ್ತಿ ಹಿಡಿದು, ಕೀಳೆಂಬ ಜಾತಿ ಮತ್ತು ದುರ್ಬಲ ವರ್ಗಸಮುದಾಯಗಳ ಆತ್ಮವಿಶ್ವಾಸಕ್ಕೆ ಕಾರಣರಾಗಿದ್ದಾರೆ.

ಇಂಥ ಬಡಜನರ ಪ್ರತಿನಿಧಿಯಾದ ರಾಗಿಯ ಬದಲು ಪಡಿತರ ಚೀಟಿಯುಳ್ಳವರಿಗೆ ಪೂರ್ತಿ ಅಕ್ಕಿಯನ್ನೇ ಕೊಡಿ ಎನ್ನುವವರ ಒಲವು ಯಾರ ಪರವಾಗಿದೆ ಎಂದು ಯಾರಿಗಾದರೂ ಅನುಮಾನ ಬರುತ್ತದೆ. ಅವರೇನು ಬಿಳಿ ಬಣ್ಣದ ಶ್ರೇಷ್ಠತೆಯನ್ನು ಅಪ್ಪಿಕೊಂಡಿರುವರೋ? ಅಥವಾ ಈ ಬಗ್ಗೆ ಯಾವ ಚಿಂತನೆಯೂ ಇಲ್ಲದೆ ಸುಮ್ಮನೆ ಮಕ್ಕೀಕಮಕ್ಕಿಯಾಗಿ
ಹೇಳಿರುವರೋ? ಶ್ರೇಷ್ಠತೆಯ ವ್ಯಸನ ಇವರಿಗೇಕೆ ಬಂತು? ಅದು ಸಾಹಿತ್ಯ ವಲಯದಲ್ಲಿ ಒಂದು ಕಾಲದಲ್ಲಿ ಮೆರೆದಾಡಿ ನಾಪತ್ತೆಯಾಯಿತು. ಈಗ ಅದರ ಮುಂದುವರಿಕೆ ಪಡಿತರ ವಲಯಕ್ಕೇಕೆ ಕಾಲಿಟ್ಟಿತು? ರಾಗಿ ಬೆಳೆಯುವುದನ್ನು ಕೀಳೆಂದು ಪರಿಗಣಿಸುತ್ತ ಭತ್ತ ಬೆಳೆಗಾರರತ್ತ ತಮ್ಮ ಚಿತ್ತ ಹರಿಸಿರುವರೊ? ಹಳೆ ಮೈಸೂರು ಜಿಲ್ಲೆಯ (ಇಡೀ ಮಂಡ್ಯ ಜಿಲ್ಲೆ +ಚಾಮರಾಜನಗರ ಜಿಲ್ಲೆ+ ಇಂದಿನ ಮೈಸೂರು ಜಿಲ್ಲೆ) ಪ್ರಮುಖ ಆಹಾರ ರಾಗಿ, ಜೋಳ, ಹುರುಳಿ, ತಡಗುಣಿ ಇಂಥವೇ ಆಗಿದ್ದವು ಎಂಬುದು ನಮಗೆ ನೆನಪಿದ್ದರೆ ಸಾಕು.

ಈ ಎಲ್ಲ ಕಾರಣಗಳಿಂದ ಸರ್ಕಾರವು ಪ್ರತಿಯೊಂದು ಜಿಲ್ಲೆಗೂ ಆಯಾ ಪ್ರದೇಶದ ಮೂಲ ಧಾನ್ಯವನ್ನೇ ಚೀಟಿದಾರರಿಗೆ ಅಧಿಕವಾಗಿ ಕೊಡಲಿ. ಅಕ್ಕಿಯನ್ನು ತಿನ್ನುವ ನಾಲಿಗೆ ರುಚಿ, ಅದನ್ನು ಅಪೇಕ್ಷಿಸಿದರೆ ಒಂದಿಷ್ಟು ಅದನ್ನೂ ಕೊಡಲಿ. ಯಾಕೆಂದರೆ ‘ಊಟ ತನ್ನಿಚ್ಛೆ, ನೋಟ ಪರರಿಚ್ಛೆ’. ಅಂತಿಮವಾಗಿ ಸರ್ಕಾರವು ಸ್ಥಳೀಯ ಬೆಳೆಗಳನ್ನು ಪ್ರೋತ್ಸಾಹಿಸಲಿ. ಇದನ್ನು ವಿರೋಧಿಸುವವರು ಈ ಬಗ್ಗೆ ಸಕಾರಾತ್ಮಕವಾಗಿ ಆಲೋಚಿಸಲಿ.

ಈ ‘ಅನ್ನ ಭಾಗ್ಯ’ ಎಂಬ ಪದಗುಚ್ಛವೇ ಶ್ರೇಷ್ಠತೆಯ ಸಂಕೇತವಲ್ಲವೇ? ಯಾಕೆ ‘ರಾಗಿ ಭಾಗ್ಯ’, ‘ಜೋಳ ಭಾಗ್ಯ’ ಅಲ್ಲ? ಕೀಳರಿಮೆಯೆಂದೋ? ನೇರವಾಗಿ ಕೇಳುವುದಾದರೆ, ದೇಶದಲ್ಲಿ ದುಡಿಮೆಯ ಅವಕಾಶ ಹೆಚ್ಚಾಗಿ ಇಲ್ಲದ್ದರಿಂದ, ರಾಜ್ಯದಲ್ಲಿರುವ ಎಲ್ಲ ಭಾಗ್ಯಗಳು ‘ದೌರ್ಭಾಗ್ಯ’ದ ಕುರುಹಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.